ಖಗೋಳಶಾಸ್ತ್ರಜ್ಞರು 'ಸ್ವಿಫ್ಟ್ J1727.8-1613' ಎಂಬ ಕಪ್ಪು ಕುಳಿಯು ನಕ್ಷತ್ರವನ್ನು ಭಕ್ಷಿಸುವ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದ್ದಾರೆ. ಈ ಅವಲೋಕನದ ಪ್ರಕಾರ, ಕಪ್ಪು ಕುಳಿಗಳು ತಮ್ಮತ್ತ ಸೆಳೆಯುವ ವಸ್ತುವಿನ ಬಹುಭಾಗವನ್ನು ಬಾಹ್ಯಾಕಾಶಕ್ಕೆ ವಾಪಸ್ ಎಸೆಯುತ್ತವೆ ಎಂಬುದು ತಿಳಿದುಬಂದಿದೆ. ಈ ಸಂಶೋಧನೆಯು ಕಪ್ಪು ಕುಳಿಗಳು ಅಂದುಕೊಂಡಷ್ಟು ಸಮರ್ಥ 'ಭಕ್ಷಕ'ಗಳಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಖಗೋಳಶಾಸ್ತ್ರಜ್ಞರು ಯೂರೋಪಿಯನ್ ಸದರ್ನ್ ಅಬ್ಸರ್ವೇಟರಿಯ ‘ವೆರಿ ಲಾರ್ಜ್ ಟೆಲಿಸ್ಕೋಪ್’ (VLT) ಬಳಸಿ, ನಕ್ಷತ್ರವೊಂದನ್ನು ಭಕ್ಷಿಸುತ್ತಿರುವ ದೂರದ ಕಪ್ಪು ಕುಳಿಯೊಂದನ್ನು ಸುದೀರ್ಘವಾಗಿ ಅಧ್ಯಯನ ಮಾಡಿದ್ದಾರೆ. ಈ ಅವಲೋಕನದಿಂದ ಕಪ್ಪು ಕುಳಿಗಳು ತಮ್ಮತ್ತ ಸೆಳೆಯುವ ಪ್ರತಿಯೊಂದನ್ನೂ ಸಂಪೂರ್ಣವಾಗಿ ನುಂಗುವುದಿಲ್ಲ; ಬದಲಾಗಿ, ಆ ಪ್ರಕ್ರಿಯೆಯಲ್ಲಿ ಸಿಂಹಪಾಲನ್ನು ಬಾಹ್ಯಾಕಾಶಕ್ಕೆ ವಾಪಸ್ ಎಸೆಯುತ್ತವೆ ಎಂಬ ಅಪರೂಪದ ಸತ್ಯ ಬಯಲಾಗಿದೆ ಎಂದು Space.com ವರದಿ ಮಾಡಿದೆ.

ಸ್ವಿಫ್ಟ್ J1727.8-1613 ಕಪ್ಪು ಕುಳಿ ವ್ಯವಸ್ಥೆ

ಈ ಸಂಶೋಧನೆಯು ಭೂಮಿಯಿಂದ ಸುಮಾರು 8,800 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ‘ಸ್ವಿಫ್ಟ್ J1727.8-1613’ (Swift J1727.8-1613) ಎಂಬ ಕಪ್ಪು ಕುಳಿ ವ್ಯವಸ್ಥೆಯ ಮೇಲೆ ಕೇಂದ್ರೀಕೃತವಾಗಿದೆ. 2023ರಲ್ಲಿ ಸಂಭವಿಸಿದ ಪ್ರಬಲ ಸ್ಫೋಟದ ನಂತರ, ಈ ವ್ಯವಸ್ಥೆಯು ಭೂಮಿಯಿಂದ ಕಾಣಿಸುವ ಅತ್ಯಂತ ಪ್ರಕಾಶಮಾನವಾದ ಎಕ್ಸ್-ರೇ (X-ray) ಮೂಲಗಳಲ್ಲಿ ಒಂದಾಗಿ ಗುರುತಿಸಿಕೊಂಡು ವಿಜ್ಞಾನಿಗಳ ಗಮನ ಸೆಳೆದಿತ್ತು.

ಕಪ್ಪು ಕುಳಿಯ ಆಹಾರ ಶೈಲಿ ಮತ್ತು ವಸ್ತುವಿನ ಹೊರಹರಿವು

ಕಪ್ಪು ಕುಳಿಯು ತನಗೆ ಹತ್ತಿರವಿರುವ ಸಹವರ್ತಿ ನಕ್ಷತ್ರದ ಭಾಗಗಳನ್ನು ತನ್ನತ್ತ ಎಳೆದಾಗ, ಅದರಲ್ಲಿ ಕೆಲವನ್ನು ಮಾತ್ರ ಅದು ಸೇವಿಸುತ್ತದೆ. ಉಳಿದ ಭಾಗವನ್ನು ಅತಿ ವೇಗದ 'ಜೆಟ್‌ಗಳು' (Jets) ಮತ್ತು ಶಕ್ತಿಯುತ 'ಕಪ್ಪು ಕುಳಿ ಮಾರುತಗಳ' (Black Hole Winds) ರೂಪದಲ್ಲಿ ಬಾಹ್ಯಾಕಾಶಕ್ಕೆ ಮತ್ತೆ ಚಿಮ್ಮಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ವಿಶೇಷವೆಂದರೆ, ಕಪ್ಪು ಕುಳಿಯ ಆಹಾರ ಸೇವನೆಯ ಚಟುವಟಿಕೆ ಕಡಿಮೆಯಾದಷ್ಟೂ, ಅದರಿಂದ ಹೊರಗೆಸೆಯಲ್ಪಡುವ ವಸ್ತುವಿನ ಪ್ರಮಾಣ ಹೆಚ್ಚಿರುತ್ತದೆ ಎಂಬುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ವಾರ್ವಿಕ್ ವಿಶ್ವವಿದ್ಯಾನಿಲಯದ ತಂಡದ ನಾಯಕ ನೋಯೆಲ್ ಕ್ಯಾಸ್ಟ್ರೋ ಸೆಗುರಾ ಮಾತನಾಡಿ, "ಸಾಮಾನ್ಯವಾಗಿ ಜನರು ಕಪ್ಪು ಕುಳಿಗಳು ತಮ್ಮ ಸುತ್ತಲಿನ ಪ್ರತಿಯೊಂದನ್ನೂ ನುಂಗಿ ಹಾಕುತ್ತವೆ ಎಂದು ಭಾವಿಸುತ್ತಾರೆ. ಆದರೆ ನಮ್ಮ ವೀಕ್ಷಣೆಗಳು ಹೆಚ್ಚು ಸಂಕೀರ್ಣವಾದ ವ್ಯವಸ್ಥೆಯನ್ನು ತೋರಿಸಿವೆ. ವಸ್ತುವು ಕಪ್ಪು ಕುಳಿಯ ಸನಿಹಕ್ಕೆ ಬರುತ್ತದೆ, ವ್ಯವಸ್ಥೆಯು ಅದನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ಆಶ್ಚರ್ಯಕರ ಪ್ರಮಾಣದ ವಸ್ತುವನ್ನು ಮತ್ತೆ ಬಾಹ್ಯಾಕಾಶಕ್ಕೆ ಹೊರಹಾಕುತ್ತದೆ," ಎಂದು ವಿವರಿಸಿದ್ದಾರೆ.

VLT ಮೂಲಕ ಸೆರೆಯಾದ 'ಆಹಾರ ಪ್ರಕ್ರಿಯೆಯ ಚಲನಚಿತ್ರ'

ಸ್ವಿಫ್ಟ್ J1727.8-1613 ವ್ಯವಸ್ಥೆಯಲ್ಲಿ, ಸಹವರ್ತಿ ನಕ್ಷತ್ರದಿಂದ ಎಳೆಯಲ್ಪಟ್ಟ ವಸ್ತುಗಳಿಂದ ರೂಪುಗೊಂಡ ಸುರುಳಿಯಾಕಾರದ ‘ಅಕ್ರಿಶನ್ ಡಿಸ್ಕ್’ (Accretion Disk) ಕಪ್ಪು ಕುಳಿಯ ಸುತ್ತಲಿದೆ. ಕಪ್ಪು ಕುಳಿಯ ಪ್ರಚಂಡ ಗುರುತ್ವಾಕರ್ಷಣೆಯು ಈ ತಿರುಗುವ ಡಿಸ್ಕ್ ಅನ್ನು ತೀವ್ರವಾಗಿ ಕಾಯಿಸುವುದರಿಂದ ಅದು ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತದೆ.

ತಂಡವು VLT ಟೆಲಿಸ್ಕೋಪ್ ಬಳಸಿ ಈ ಪ್ರಕ್ರಿಯೆಯನ್ನು ಕಾಲಕ್ರಮೇಣ ಟ್ರ್ಯಾಕ್ ಮಾಡಿದೆ. ಕಪ್ಪು ಕುಳಿಯು ಬಾಹ್ಯಾಕಾಶಕ್ಕೆ ಶಕ್ತಿಯುತ ಜೆಟ್‌ಗಳನ್ನು ಚಿಮ್ಮಿಸುವಾಗ ಪ್ರಕಾಶಮಾನವಾದ ಡಿಸ್ಕ್‌ನಲ್ಲಿ ಉಂಟಾಗುವ ಬದಲಾವಣೆಗಳನ್ನು ಸಂಶೋಧಕರು ‘ಚಲನಚಿತ್ರದಂತೆ’ ರೆಕಾರ್ಡ್ ಮಾಡಿದ್ದಾರೆ. ಈ ಭಕ್ಷಣೆ ನಿಧಾನಗೊಂಡ ನಂತರವೂ, ಕಪ್ಪು ಕುಳಿಯು ದಟ್ಟವಾದ ಅನಿಲ ಮಾರುತಗಳನ್ನು ಉತ್ಪಾದಿಸುವುದನ್ನು ಮುಂದುವರಿಸಿತ್ತು.

ಕಪ್ಪು ಕುಳಿಗಳ ಬಗ್ಗೆ ಬದಲಾದ ದೃಷ್ಟಿಕೋನ

ಹೊರಗೆಸೆಯಲ್ಪಟ್ಟ ಒಟ್ಟು ವಸ್ತುವಿನ ಪ್ರಮಾಣವು ಕಪ್ಪು ಕುಳಿ ನಿಜವಾಗಿ ಸೇವಿಸಿದ ಪ್ರಮಾಣಕ್ಕೆ ಸಮನಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಅಂದರೆ, ನಕ್ಷತ್ರದ ಒಟ್ಟು ರಾಶಿಯ ಸುಮಾರು ಅರ್ಧದಷ್ಟು ಭಾಗ ಬಾಹ್ಯಾಕಾಶದಲ್ಲಿಯೇ ನಷ್ಟವಾಗುತ್ತದೆ.

"ತಮ್ಮ ದೊಡ್ಡ ಸ್ಫೋಟಗಳ ನಂತರವೂ ಕಪ್ಪು ಕುಳಿಗಳು ವಸ್ತುಗಳನ್ನು ಹೀಗೆ ಹೊರಹಾಕುವುದನ್ನು ಮುಂದುವರಿಸಿದರೆ, ನಾವು ಭಾವಿಸಿದ್ದಕ್ಕಿಂತ ಅವು ಕಡಿಮೆ ಸಾಮರ್ಥ್ಯದ 'ಭಕ್ಷಕಗಳು' (Inefficient Eaters) ಎಂದರ್ಥ," ಎಂದು ಸೆಗುರಾ ಹೇಳಿದ್ದಾರೆ. ಈ ರೀತಿ ನಕ್ಷತ್ರದ ಗಮನಾರ್ಹ ಭಾಗವು ಕಪ್ಪು ಕುಳಿಯನ್ನು ತಲುಪದೇ ಇರುವುದು, ಗ್ಯಾಲಕ್ಸಿಗಳಲ್ಲಿನ ಬೈನರಿ ನಕ್ಷತ್ರ ವ್ಯವಸ್ಥೆಗಳ (Binary Star Systems) ವಿಕಸನದ ಬಗ್ಗೆ ವಿಜ್ಞಾನಿಗಳಿಗಿದ್ದ ತಿಳುವಳಿಕೆಯನ್ನೇ ಬದಲಾಯಿಸಲಿದೆ.

ಕೇಪ್ ಟೌನ್ ವಿಶ್ವವಿದ್ಯಾಲಯದ ಡಾಕ್ಟರೇಟ್ ಸಂಶೋಧಕ ಕೈಲ್ ಸೊಲೊಮನ್ಸ್ ಮಾತನಾಡಿ, "ವಿಜ್ಞಾನಿಗಳು ಸಾಮಾನ್ಯವಾಗಿ ಕಪ್ಪು ಕುಳಿಯ ಸ್ಫೋಟದ ಆರಂಭಿಕ ರೌದ್ರಾವತಾರಕ್ಕಷ್ಟೇ ಗಮನ ಕೊಡುತ್ತಾರೆ. ಆದರೆ, ಈ ಪ್ರಕ್ರಿಯೆಯ ಅಂತಿಮ ಹಂತಗಳೂ ಸಹ ಅಷ್ಟೇ ತೀವ್ರ ಮತ್ತು ನಾಟಕೀಯವಾಗಿರುತ್ತವೆ ಎಂಬುದನ್ನು ಈ ಅಧ್ಯಯನ ಸಾಬೀತುಪಡಿಸಿದೆ," ಎಂದಿದ್ದಾರೆ.