ಭಾರತೀಯ ಯೂಟ್ಯೂಬರ್ ಡಾ. ನವಂಕುರ್ ಚೌಧರಿ ಪಾಕಿಸ್ತಾನದ ಐಷಾರಾಮಿ 'ಗ್ರೀನ್ ಲೈನ್' ರೈಲಿನಲ್ಲಿ ಪ್ರಯಾಣಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಚೀನಾ ನಿರ್ಮಿತ ಈ ರೈಲಿನಲ್ಲಿ ಆಧುನಿಕ ಸೌಕರ್ಯಗಳಿದ್ದರೂ, ಆನ್ಲೈನ್ ಬುಕಿಂಗ್ ವೈಫಲ್ಯ ಮತ್ತು ತೀವ್ರ ವಿಳಂಬದಿಂದಾಗಿ ಅವರು ನಿರಾಶೆಗೊಂಡರು.
ಹೊಸದೆಹಲಿ: ಭಾರತೀಯ ಪ್ರವಾಸೋದ್ಯಮ ಯೂಟ್ಯೂಬರ್ಗಳು (Travel Youtubers) ಜಗತ್ತಿನ ಮೂಲೆ ಮೂಲೆಗೆ ಪ್ರಯಾಣಿಸಿ ತಮ್ಮ ವಿಭಿನ್ನ ಅನುಭವಗಳನ್ನು ವೀಡಿಯೋಗಳ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಭಾರತೀಯ ಯೂಟ್ಯೂಬರ್ ಡಾ. ನವಂಕುರ್ ಚೌಧರಿ (Navankur Chaudhary) ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಅಲ್ಲಿನ ಅತ್ಯಂತ ಐಷಾರಾಮಿ ಮತ್ತು ವಿಐಪಿ ರೈಲು ಎನಿಸಿರುವ 'ಗ್ರೀನ್ ಲೈನ್' (Green Line) ರೈಲಿನಲ್ಲಿ ಪ್ರಯಾಣಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಚೀನಾದಿಂದ ಆಮದು ಮಾಡಿಕೊಂಡಿರುವ ಈ ಅತ್ಯಾಧುನಿಕ ರೈಲಿನ ಸೌಕರ್ಯಗಳನ್ನು ಮೆಚ್ಚಿಕೊಂಡರೂ, ಪಾಕಿಸ್ತಾನದ ಹಳ್ಳ ಹಿಡಿದ ರೈಲ್ವೆ ವ್ಯವಸ್ಥೆಯನ್ನು ಬಿಚ್ಚಿಟ್ಟಿದ್ದಾರೆ.
ಯೂಟ್ಯೂಬರ್ ಅನುಭವ ಮತ್ತು ವಿಡಿಯೋ ವೈರಲ್:
'Luxury Train of Pakistan' ಎಂಬ ಶೀರ್ಷಿಕೆಯಡಿಯಲ್ಲಿ ಡಾ. ನವಂಕುರ್ ತಮ್ಮ 'Yatri Doctor' ಯೂಟ್ಯೂಬ್ ಚಾನಲ್ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral Video) ಆಗಿದ್ದು, 27 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಪಾಕಿಸ್ತಾನದ 'ರಾಜಧಾನಿ ಎಕ್ಸ್ಪ್ರೆಸ್' ಎಂದೇ ಕರೆಯಲ್ಪಡುವ ಈ ರೈಲು ಮುಲ್ತಾನಿನಿಂದ ಲಾಹೋರ್ವರೆಗೆ ಸಂಚರಿಸುತ್ತದೆ. ಈ ರೈಲಿನ ಟಿಕೆಟ್ ದರ ಸುಮಾರು 2950 ಪಾಕಿಸ್ತಾನಿ ರೂ. (ಭಾರತೀಯ ಮೌಲ್ಯದಲ್ಲಿ ಸುಮಾರು 850 ರೂ.) ಇದೆ.
ಗ್ರೀನ್ ಲೈನ್ ರೈಲಿನ ವಿಶೇಷತೆಗಳೇನು?:
ರೈಲಿನ ಒಳಗೆ ಕಾಲಿಟ್ಟ ಯೂಟ್ಯೂಬರ್ಗೆ ಅಚ್ಚರಿಯಾಗಿದೆ. ಚೀನಾ ನಿರ್ಮಿತ ಈ ರೇಕುಗಳಲ್ಲಿ ಪ್ರತಿ ಸೀಟಿನ ಹಿಂದೆ ಎಲ್ಸಿಡಿ ಸ್ಕ್ರೀನ್ಗಳನ್ನು ಅಳವಡಿಸಲಾಗಿದೆ (ಚೀನೀ ಭಾಷೆಯ ಆಯ್ಕೆಯೂ ಇದೆ). ಜಪಾನಿ ರೈಲುಗಳ ಮಾದರಿಯಲ್ಲಿ ಇದರ ಸೀಟುಗಳು ಸಂಪೂರ್ಣವಾಗಿ ತಿರುಗಿಕೊಳ್ಳುವ (Rotating seats) ವ್ಯವಸ್ಥೆ ಹೊಂದಿವೆ. ಟಿಕೆಟ್ ದರದಲ್ಲೇ ಮಧ್ಯಾಹ್ನದ ಊಟ (ಬಿರಿಯಾನಿ, ಚಿಕನ್, ರೋಟಿ ಮತ್ತು ಸಿಹಿ ತಿಂಡಿ) ಕೂಡ ಸೇರಿದೆ. ಆದರೆ ಸಸ್ಯಾಹಾರಿಗಳಿಗೆ ಕೇವಲ ದಾಲ್ ಮಾತ್ರ ಲಭ್ಯವಿರುತ್ತದೆ ಎಂದು ವಿವರಿಸಿದ್ದಾರೆ.
ಪಾಕಿಸ್ತಾನದ ರೈಲ್ವೆ ವ್ಯವಸ್ಥೆ ಬಗ್ಗೆ ನಿರಾಶೆ:
ಹೊರನೋಟಕ್ಕೆ ಅತ್ಯಂತ ಮಾಡರ್ನ್ ಆಗಿ ಕಾಣುವ ಈ ರೈಲು, ಆಡಳಿತಾತ್ಮಕ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ತುಂಬಾನೇ ಸುಮಾರಾಗಿದೆ ಎಂದು ಯೂಟ್ಯೂಬರ್ ಬೇಸರ ವ್ಯಕ್ತಪಡಿಸಿದ್ದಾರೆ.
ಆನ್ಲೈನ್ ಬುಕಿಂಗ್ ಸಿಸ್ಟಮ್ ವಿಫಲ: ಭಾರತದಲ್ಲಿ ಕೆಲವೇ ನಿಮಿಷಗಳಲ್ಲಿ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಆದರೆ ಪಾಕಿಸ್ತಾನದಲ್ಲಿ ಆಪ್ಗಳು ಇದ್ದರೂ ಪೇಮೆಂಟ್ ಗೇಟ್ವೇಗಳು ಪದೇ ಪದೇ ಕೈಕೊಡುವುದರಿಂದ ಕೊನೆಗೆ ಸ್ಟೇಷನ್ ಕೌಂಟರ್ಗೆ ಹೋಗಿ ಕ್ಯೂ ನಿಂತು ಟಿಕೆಟ್ ಪಡೆಯಬೇಕಾಯಿತು.
ತೀವ್ರ ವಿಳಂಬ (Delay): ಮುಲ್ತಾನ್ ಮತ್ತು ಖಾನೆವಾಲ್ ನಡುವೆ ಕೇವಲ ನೀರು ತುಂಬಿಸುವುದಕ್ಕಾಗಿಯೇ ರೈಲನ್ನು ಸುಮಾರು 40 ನಿಮಿಷಗಳ ಕಾಲ ನಿಲ್ಲಿಸಲಾಯಿತು. ಸಿಂಗಲ್ ಟ್ರ್ಯಾಕ್ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಈ ಸೂಪರ್ಫಾಸ್ಟ್ ರೈಲು ಸಹ ಪ್ರತಿ ಸಣ್ಣ-ದೊಡ್ಡ ನಿಲ್ದಾಣಗಳಲ್ಲಿ ನಿಲ್ಲಬೇಕಾಯಿತು.
ಸುಮಾರು ಮೂರುವರೆ ಗಂಟೆಗಳಲ್ಲಿ ಮುಗಿಯಬೇಕಿದ್ದ ಪ್ರಯಾಣವು ವಿಳಂಬವಾಗಿ ಅನೇಕ 6 ಗಂಟೆಗಳನ್ನು ತೆಗೆದುಕೊಂಡಿತು. ಪಾಕಿಸ್ತಾನದಲ್ಲಿ ರೈಲುಗಳು ಸರಿಯಾದ ಸಮಯಕ್ಕೆ ತಲುಪದ ಕಾರಣ ಅಲ್ಲಿನ ಜನರಿಗೆ ರೈಲುಗಳಿಗಿಂತ ರಸ್ತೆ ಮಾರ್ಗದ ಪ್ರಯಾಣವೇ ಹೆಚ್ಚು ವಿಶ್ವಾಸಾರ್ಹ ಎನಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಪಾಕಿಸ್ತಾನದ ಐಷಾರಾಮಿ ರೈಲಿನಲ್ಲಿ ಪ್ರಯಾಣಿಸಿದ ಅನುಭವವನ್ನು ಹಂಚಿಕೊಂಡಿರುವ ಯೂಟ್ಯೂಬರ್, ನಮ್ಮ ಭಾರತೀಯ ರೈಲ್ವೆ ವ್ಯವಸ್ಥೆಯೇ ಕೋಟಿ ಪಟ್ಟು ಉತ್ತಮ ಎಂದು ಹೇಳುವ ಮೂಲಕ ಭಾರತೀಯರ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ.


