ಅಮೆರಿಕದ ಮಿಯಾಮಿ ವಿಮಾನ ನಿಲ್ದಾಣದಲ್ಲಿ ಎರಡು ಬೋಯಿಂಗ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಈ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ, ಆದರೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಫ್‌ಎಎ ಈ ಕುರಿತು ತನಿಖೆ ನಡೆಸುತ್ತಿದೆ.

ವಾಷಿಂಗ್ಟನ್‌: ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ಎರಡು ಬೋಯಿಂಗ್ ವಿಮಾನಗಳು ಟ್ಯಾಕ್ಸಿವೇಯಲ್ಲಿ ಪರಸ್ಪರ ಡಿಕ್ಕಿ ಹೊಡೆದಿವೆ. ಸುದೈವವಶಾತ್‌ ಯಾವುದೇ ಸಾವು ಸಂಭವಿಸದೇ ದೊಡ್ಡ ದುರಂತವೊಂದು ತಪ್ಪಿದೆ. ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿವೆ.

ಪರಸ್ಪರ ಡಿಕ್ಕಿ ಹೊಡೆದ ವಿಮಾನಗಳು

ಪನಾಮ ಸಿಟಿಯಿಂದ ಬಂದಿದ್ದ ಕೋಪಾ ಏರ್‌ಲೈನ್ಸ್‌ನ ಬೋಯಿಂಗ್ 737 ಪ್ರಯಾಣಿಕರ ವಿಮಾನ ಮತ್ತು ಮಿಯಾಮಿಯಿಂದ ಬೊಗೊಟಾಗೆ ಹೊರಟಿದ್ದ ಯುಪಿಎಸ್ ಕಂಪನಿಯ ಬೋಯಿಂಗ್ 767 ಸರಕು ವಿಮಾನಗಳೇ ಪರಸ್ಪರ ಡಿಕ್ಕಿ ಹೊಡೆದ ವಿಮಾನಗಳು.

ಕೋಪಾ ಏರ್‌ಲೈನ್ಸ್ ವಿಮಾನವು ಟ್ಯಾಕ್ಸಿವೇಯಲ್ಲಿ ಚಲಿಸುತ್ತಿದ್ದಾಗ, ಅದರ ಎಡಭಾಗದ ರೆಕ್ಕೆ ಯುಪಿಎಸ್ ಕಾರ್ಗೋ ವಿಮಾನದ ಮುಂಭಾಗಕ್ಕೆ (ನೋಸ್‌) ತಗುಲಿದೆ. ಆಗ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕೋಪಾ ಏರ್‌ಲೈನ್ಸ್ ವಿಮಾನದಲ್ಲಿದ್ದ 166 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

ಕಾರ್ಗೋ ವಿಮಾನವು ಜಂಕ್ಷನ್‌ನಲ್ಲಿ ಸ್ವಲ್ಪ ಮುಂದೆ ಸಾಗಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಈ ಬಗ್ಗೆ ತನಿಖೆ ನಡೆಸುತ್ತಿದೆ.

ಅಮೆರಿಕದಲ್ಲಿ 11000 ವಿಮಾನ ಸ್ಥಗಿತ, 15 ಲಕ್ಷ ಜನಕ್ಕೆ ಸಮಸ್ಯೆ

ವಿಮಾನಗಳು ಸಂಚಾರಕ್ಕೆ ಸಿದ್ಧವಾಗಿದ್ದರೂ, ಅನುಮತಿ ಸಿಗುತ್ತಿಲ್ಲ. 15 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲೇ ಯಾವುದೇ ಮಾಹಿತಿ ಗಂಟೆಗಟ್ಟಲೆ ಕಾಯುವಂಥ ಪರಿಸ್ಥಿತಿ ಶುಕ್ರವಾರ ಅಮೆರಿಕದಾದ್ಯಂತ ನಿರ್ಮಾಣವಾಗಿತ್ತು. ಸಂವಹನ ವ್ಯವಸ್ಥೆಯಲ್ಲಿ ಉಂಟಾದ ದೋಷದ ಪರಿಣಾಮ ಈ ವ್ಯತ್ಯಯ ದೇಶದ ವೈಮಾನಿಕ ವ್ಯವಸ್ಥೆ ಪೂರ್ಣ ಸ್ಥಗಿತಗೊಳ್ಳುವಂತೆ ಮಾಡಿತು. ಶುಕ್ರವಾರ ರಾತ್ರಿ ವೇಳೆಗೆ ಸ್ವಲ್ಪ ಮಟ್ಟಿಗೆ ಸರಿಹೋಯಿತಾದರೂ ಶನಿವಾರ ಕೂಡಾ 2000ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿ ಪ್ರಯಾಣಿಕರು ಭಾರೀ ಸಮಸ್ಯೆ ಎದುರಿಸಬೇಕಾಗಿ ಬಂದಿತು.

ಆಗಿದ್ದೇನು?:

ದೇಶದ ವಾಯುನಿಯಂತ್ರಣಾ ವ್ಯವಸ್ಥೆಗೆ ಹೊಸ ತಂತ್ರಜ್ಞಾನದ ಅಳವಡಿಕೆ ಮಾಡಲಾಗುತ್ತಿದೆ. ಆದರೆ ಇಡೀ ವ್ಯವಸ್ಥೆ ಹಳೆಯದಾಗಿದ್ದು, ಅದರ ಮೇಲೆ ಹೆಚ್ಚಿನ ಡಾಟಾದ ಓವರ್‌ಲೋಡ್‌ ಬಿದ್ದ ಕಾರಣ ಇಡೀ ವ್ಯವಸ್ಥೆ ಕುಸಿದುಬಿದ್ದಿದೆ. ವಿಮಾನಗಳ ಸಂಚಾರದ ಮಾಹಿತಿ ನೀಡುವ ರಾಡಾರ್‌ ಕೂಡಾ ಕಾರ್ಯನಿರ್ವಹಣೆ ಮಾಡದೇ ಸ್ಥಗಿತಗೊಂಡಿದೆ. ಹೀಗಾಗಿ ಇಡೀ ದೇಶಾದ್ಯಂತ 11000ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಲಾಯ್ತು. ಸುಮಾರು 4 ಗಂಟೆಗಳ ಬಳಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದು ಮರಳಿ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಇದರಿಂದ ಸುಮಾರು 15 ಲಕ್ಷ ಜನರು ಭಾರೀ ತೊಂದರೆ ಅನುಭವಿಸುವಂತಾಯಿತು.

2001ರ ಸೆ.11ರಂದು ಅಮೆರಿಕದ ವಿಶ್ವವಾಣಿಜ್ಯ ಕಟ್ಟಡದ ಮೇಲೆ ಅಲ್‌ಖೈದಾ ಉಗ್ರರು ವಿಮಾನ ಬಳಸಿ ದಾಳಿ ನಡೆಸಿದ ಬಳಿಕ ದೇಶಾದ್ಯಂತ 10000ಕ್ಕೂ ಹೆಚ್ಚು ವಿಮಾನಗಳ ಸಂಚಾರ ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಅದು ಬಿಟ್ಟರೆ ಇಡೀ ದೇಶಾದ್ಯಂತ ಹೀಗೆ ಏಕಾಏಕಿ ಸೇವೆ ಸ್ಥಗಿತ ಇದೇ ಮೊದಲು.

ಅಮೆರಿಕದಲ್ಲಿ ನಿತ್ಯ 45000ಕ್ಕೂ ಹೆಚ್ಚು ವಿಮಾನ ಸಂಚಾರ ನಡೆಯುತ್ತದೆ. ಇದರ ಮೂಲಕ 27 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣ ಕೈಗೊಳ್ಳುತ್ತಾರೆ.