ಭಾರತ-ಪಾಕ್ ಯುದ್ಧದಲ್ಲಿ ಭಾರತೀಯ ಸೇನೆಯ ಯಶಸ್ಸಿಗಾಗಿ ಮಂಗಳೂರಿನ ವಿದ್ಯಾರ್ಥಿಗಳು ೪೮,೦೦೦ ಗಾಯತ್ರಿ ಮಂತ್ರ ಮತ್ತು ದುರ್ಗಾ ಸೂಕ್ತ ಪಠಿಸಿದ್ದಾರೆ. ದೇಶರಕ್ಷಣೆಗೆ ಮಂತ್ರಶಕ್ತಿಯ ಬಲ ಕೊಡಲೆಂದು ಈ ಜಪ ಮಾಡಲಾಗಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಶಾಂತಿ ಬಯಸುತ್ತಲೇ ಪ್ರತಿದಾಳಿ ಅನಿವಾರ್ಯ ಎಂದಿದ್ದಾರೆ.
ಮಂಗಳೂರು: ಭಾರತೀಯ ಸೇನೆ ಮತ್ತು ಭಾರತೀಯ ಸೇನೆಯ ಪ್ರತಿಯೊಬ್ಬ ಹೆಮ್ಮೆಯ ಅಧಿಕಾರಿಗೂ ಶುಭವಾಗಲಿ. ಪಾಕ್ ಮತ್ತು ಭಾರತ ನಡುವಿನ ಯುದ್ಧದಲ್ಲಿ ಭಾರತೀಯ ಸೇನೆಗೆ ಜಯ ಸಿಗಲಿ ಎಂಬ ಉದ್ದೇಶದಿಂದ ಮಂಗಳೂರಿನ ಭಾರತೀಯ ಎಜುಕೇಶನ್ ಟ್ರಸ್ಟ್, ಶಂಕರ ಶ್ರೀ ವೇದಪಾಠಶಾಲಾ ವಿದ್ಯಾರ್ಥಿಗಳಿಂದ ಗಾಯತ್ರಿ ಮಂತ್ರ, ದುರ್ಗಾಸೂಕ್ತವನ್ನು ಪಠಣ ಮಾಡಲಾಗಿದೆ. Ritam Janadhwani ಎನ್ನುವ ಯುಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು ಅಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
“ಭಾರತದಲ್ಲಿ ಯುದ್ಧದ ಕಾರ್ಮೋಡ ಸೃಷ್ಟಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳನ್ನೆಲ್ಲ ಸೇರಿಸಿಕೊಂಡು 48,000 ಸಂಖ್ಯೆಯಲ್ಲಿ ಗಾಯತ್ರಿ ಮಂತ್ರ ಜಪ ಮಾಡಿ ಭಾರತೀಯ ಸೈನಿಕರಿಗೆ ಶಕ್ತಿ ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. ನಮ್ಮ ಕಡೆಯಿಂದ ಏನು ಮಾಡಬಹುದು ಅದನ್ನು ಆಲೋಚನೆ ಮಾಡಿ, ನಾವು ಇಲ್ಲಿ 48000 ಗಾಯತ್ರಿ ಮಂತ್ರ ಮಾಡುತ್ತಿದ್ದೇವೆ. ಅಷ್ಟೇ ಅಲ್ಲದೆ ದುರ್ಗಾಸೂಕ್ತ ಹೇಳಿದ್ದೇವೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿಯಾಗಿದೆ” ಎಂದು ಜಪ ಪಠಣ ಮಾಡಿದವರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ದಕ್ಷಿಣ ಕನ್ನಡದ ವಿಶ್ವಪ್ರಸಾದ್ ಭಟ್ಟ ಮಾತನಾಡಿ, “ನಮ್ಮ ದೇಶದ ರಕ್ಷಣೆಗೋಸ್ಕರ ನಮ್ಮ ಕೈಯಿಂದ ಆಗುವಂತಹ ಕೆಲಸ ಮಾಡುತ್ತಿದ್ದೇವೆ. ನಾವು ಅಧ್ಯಯನ ಮಾಡಿದಂತಹ ನಾವು ಅನುಷ್ಠಾನ ಮಾಡಿದಂತಹ ಮಂತ್ರ ಶಕ್ತಿಯ ಮೂಲಕವಾಗಿ ಅವರಿಗೆ ಒಂದು ರಕ್ಷಣೆಯನ್ನು ಕೊಡುವಂತಹ ಪ್ರಯತ್ನ ಮಾಡುತ್ತಿದ್ದೇವೆ. ನಾವು ಮತ್ತು ನಮ್ಮ ಎಲ್ಲ ವಿದ್ಯಾರ್ಥಿಗಳು, ನಮ್ಮ ಸಂಗಡಿಗರು ಸೇರಿಕೊಂಡು ಒಂದು ದಿನ 24ಸಾವಿರ ಸಂಖ್ಯೆಯ ಗಾಯತ್ರಿ ಜಪವನ್ನು ಮಾಡಿದ್ದೇವೆ, ಮತ್ತೊಂದು ದಿನ ಸಹ ಅದೇ ಪ್ರಮಾಣದಲ್ಲಿ 24ಸಾವಿರ ಗಾಯತ್ರಿ ಜಪಗಳನ್ನು ಮಾಡಿ ಒಂದು ಪೂರ್ಣ 48,000 ಗಾಯತ್ರಿ ಜಪಗಳನ್ನು ಮಾಡಿದ್ದೇವೆ. 108 ಕ್ಕೂ ಅಧಿಕ ದುರ್ಗಾಸೂಕ್ತ ಪಾರಾಯಣಗಳನ್ನು ಮಾಡಿದ್ದೇವೆ. ಈ ಮಂತ್ರ ಪಠಣದ ಶಕ್ತಿಯಿಂದ ಆ ಎಲ್ಲ ಸೈನಿಕರಿಗೂ, ನಮ್ಮ ದೇಶಕ್ಕೂ ಭದ್ರತೆಯು ಸಿಕ್ಕಿ, ರಕ್ಷಣೆಗೆ ಒದಗಿ ಬಂದು ಇನ್ನು ಮುಂದೆ ಈ ಥರದ ಯಾವುದೇ ರೀತಿಯ ದುರಂತಗಳು ಮತ್ತು ನಮ್ಮ ದೇಶದ ಮೇಲೆ ಯಾವುದೇ ರೀತಿಯ ಭಯೋತ್ಪಾದಕ ದಾಳಿಗಳು ಸಂಭವಿಸಬಾರದು ಎಂಬುದಂತಹ ಪ್ರಾರ್ಥನೆಯನ್ನು ನಮ್ಮ ದೇವರಲ್ಲಿ, ನಮ್ಮ ಆರಾಧನಾ ದೇವತೆಗಳಲ್ಲಿ ನಾವು ಪ್ರಾರ್ಥನೆಯನ್ನು ಮಾಡಿದ್ದೇವೆ” ಎಂದು ಹೇಳಿದ್ದಾರೆ,
“ನಾವು ಈ ಹಿಂದೆ ನಡೆದಂತಹ ಭಯೋತ್ಪಾದಕ ದಾಳಿಗಳ ಸಂದರ್ಭದಲ್ಲಿ ಸಹ ನಾವು ನಮ್ಮ ಊರಿನಲ್ಲಿ ಅಲ್ಲಿ ರುದ್ರ ಅಧ್ಯಯನ ಮಾಡಿದವರೆಲ್ಲ ಸೇರಿಕೊಂಡು ಈ ರೀತಿಯ ಚಟುವಟಿಗಳನ್ನು ಮಾಡಿದ್ದೆವು. ಅದೇ ಪ್ರಭಾವದಿಂದ ಹಾಗೆ ನಮ್ಮ ಹಿರಿಯರು, ನಮ್ಮ ಗುರುಗಳು ಇದಕ್ಕೆ ನಮಗೆ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ನಮಗೆ ಪ್ರೇರಣೆಯನ್ನು ಕೊಟ್ಟಿದ್ದಾರೆ. ಹಾಗೆ ನಮ್ಮ ತಂಡದ ಮೂಲಕವಾಗಿ ನಾವು ಗುರುಗಳ ಮಾರ್ಗದರ್ಶನ ಮಾಡಿ ಜಪಾನುಷ್ಠಾನ ಮಾಡಿದ್ದೇವೆ. ನಾವು ಮಾಡುವಂತಹ ಅನುಷ್ಠಾನಗಳಿಂದ ದೇವತೆಗಳು ಸಂತೋಷಪಟ್ಟು, ನಮಗೆ ಮಾತ್ರ ಅಲ್ಲ, ನಮಗೆಲ್ಲರಿಗೂ ಸುಖವನ್ನು ಸಮೃದ್ಧಿಯನ್ನು ರಕ್ಷಣೆಯನ್ನು ಒದಗಿಸಿಕೊಡಬೇಕು ಎಂದು ಪ್ರಾರ್ಥಿಸಿದ್ದೇವೆ” ಎಂದು ಹೇಳಿದ್ದಾರೆ.
“ನಮ್ಮ ಮೇಲೆ ದಾಳಿಯಾದ ಸಂದರ್ಭದಲ್ಲಿ ತದ್ವಿರುದ್ಧವಾದಂತ ದಾಳಿಯನ್ನ ಮಾಡಲೇಬೇಕು, ನಮ್ಮ ಕ್ಷಾತ್ರ ತೇಜಸ್ಸನ್ನು ನಾನು ಬಿಡುವಾಗಿಲ್ಲ, ನಾವು ಯಾವ ಪ್ರಮಾಣದಲ್ಲಿ ನಾವು ಶಾಂತಿಯನ್ನು ಬಯಸಿಕೊಳ್ಳುತ್ತಾ ಇದ್ದೇವೋ ಒಂದು ಹಂತದಿಂದ ಮತ್ತೆ ನಾವು ಪ್ರತಿದಾಳಿಯನ್ನು ಮಾಡಿ ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬೇಕಾದಿದು ನಮ್ಮ ಕರ್ತವ್ಯವಾಗಿದೆ. ಆ ನಿಟ್ಟಿನಿಂದ ನಮ್ಮ ದೇಶದ ಪ್ರಧಾನಿಗಳು, ಎಲ್ಲ ಸೇನಾ ದಳದ ಮುಖ್ಯಸ್ಥರು ತೆಗೆದುಕೊಂಡ ತೀರ್ಮಾನದ ಬಗ್ಗೆ ನಾವು ಅತ್ಯಂತ ಸಂತೋಷಪಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ಇನ್ನು ಕೆಲವು ಕಡೆ ವಿವಿಧ ರೀತಿಯ ಮಂತ್ರ ಪಠಣ ಮಾಡಲಾಗಿದೆ. ಅಂದಹಾಗೆ ಜಮ್ಮು & ಕಾಶ್ಮೀರದ ಬಳಿ ಪಹಲ್ಗಾಮ್‌ನಲ್ಲಿದ್ದ ಪ್ರವಾಸಿಗರ ಮೇಲೆ ಪಾಕ್ ಉಗ್ರರು ದಾಳಿ ಮಾಡಿ 26 ಜನರನ್ನು ಕೊಂದಿದ್ದರು. ಇದಾದ ಬಳಿಕ ಭಾರತವು ಪಾಕ್ ಮೇಲೆ ʼಆಪರೇಶನ್ ಸಿಂದೂರʼ ಹೆಸರಿನಲ್ಲಿ ದಾಳಿ ಮಾಡಿದೆ.


