ಸೇನಾ ಮುಖ್ಯಸ್ಥ ಖಮರ್ ಬಜ್ವಾ ವಜಾಕ್ಕೆ ನಿರ್ಣಯ ಇದರ ಬೆನ್ನಲ್ಲೇ ಇಮ್ರಾನ್ ಮನೆಗೆ 36 ವಾಹನ ಜತೆ ಬಂದ ಬಜ್ವಾ ಅವಿಶ್ವಾಸಮತ ಎದುರಿಸದಿದ್ದರೆ ಬಂಧಿಸುವ ಬೆದರಿಕೆ ಬಹುಮತ ಸಾಬೀತಿಂದ ಹಿಂದೆ ಸರಿದ ಪ್ರಧಾನಿ ಇಮ್ರಾನ್
ಇಸ್ಲಾಮಾಬಾದ್: ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ಮತಕ್ಕೆ ಪಾಕಿಸ್ತಾನ ಸಂಸತ್ತಿನಲ್ಲಿ ಶನಿವಾರ ತಡರಾತ್ರಿ ಗೆಲುವಾದ ಬೆನ್ನಲ್ಲೇ, ಅದಕ್ಕೆ ನಾಲ್ಕು ತಾಸುಗಳ ಮುನ್ನ ಪಾಕಿಸ್ತಾನ ರಾಜಧಾನಿಯಲ್ಲಿ (Pakistan capital) ಹಲವು ನಾಟಕೀಯ ಬೆಳವಣಿಗೆಗಳು ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಅಧಿಕಾರ ಉಳಿಸಿಕೊಳ್ಳಲು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಬಜ್ವಾ (Pakistani army chief General Qamar Bajwa) ಅವರನ್ನೇ ವಜಾಗೊಳಿಸಲು ಇಮ್ರಾನ್ ಸರ್ಕಾರ ಕೈಗೊಂಡ ನಿರ್ಣಯ ಕೊನೆಗೆ ಅವರ ಇಡೀ ಸಂಪುಟದ ಬಂಧನದತ್ತ ತಿರುಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಕೊನೆಗೆ ಇಮ್ರಾನ್‌ರ ಪಿಟಿಐ ಪಕ್ಷ ಕ್ಷಮೆ ಯಾಚಿಸಿದ್ದರಿಂದ ಅವಿಶ್ವಾಸ ನಿರ್ಣಯದ ಕುರಿತು ಮತದಾನವಾಗಿ ಇಮ್ರಾನ್ ಅವರು ಸೋಲೊಪ್ಪಿಕೊಳ್ಳಬೇಕಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಜನರಲ್ ಬಜ್ವಾ ಅವರನ್ನು ವಜಾಗೊಳಿಸಿ ಆ ಸ್ಥಾನಕ್ಕೆ ಲೆಫ್ಟಿನಂಟ್ ಜನರಲ್ ಫಯಾಜ್ ಹಮೀದ್ ಅವರನ್ನು ತಂದರೆ ಎಂಕ್ಯೂಎಂ, ಬಲೂಚಿಸ್ತಾನ್ ಅವಾಮಿ ಪಕ್ಷ (Balochistan Awami Party) ಹಾಗೂ ಅಖ್ತರ್ ಮಂಗಲ್ ಗ್ರೂಪ್ ಪಕ್ಷದ (Akhtar Mangal Group)ಸದಸ್ಯರು ತಮ್ಮನ್ನು ಬೆಂಬಲಿಸುವುದು ಇಮ್ರಾನ್‌ಗೆ ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ತಂತ್ರಗಾರಿಕೆ ಮೆರೆದ ಇಮ್ರಾನ್, ಜನರಲ್ ಬಜ್ವಾ ಅವರನ್ನು ವಜಾಗೊಳಿಸುವ ಹಾಗೂ ಲೆ.ಜ.ಫಯಾಜ್ ಹಮೀದ್ (Lt General Fayaz Hamid) ಅವರನ್ನು ನೇಮಕ ಮಾಡುವ ಕುರಿತು ಎರಡು ಪ್ರತ್ಯೇಕ ಅಧಿಸೂಚನೆ ಹೊರಡಿಸುವಂತೆ ರಕ್ಷಣಾ ಇಲಾಖೆಗೆ ಸೂಚಿಸಿದ್ದರು ಎನ್ನಲಾಗಿದೆ. ರಕ್ಷಣಾ ಇಲಾಖೆಯ ಅಧಿಸೂಚನೆಗಳು ಕಾನೂನು ಸಚಿವಾಲಯಕ್ಕೆ ತಲುಪಿ, ಅಲ್ಲಿಂದ ಪ್ರಧಾನಿ ಹಾಗೂ ಅಧ್ಯಕ್ಷರ ಬಳಿಗೆ ಹೋಗಬೇಕು. ಆದರೆ ಅಧಿಸೂಚನೆ ವಿಷಯ ತಿಳಿದ ಜನರಲ್ ಬಜ್ವಾ ಅವರು, ಅವು ಕಾನೂನು ಸಚಿವಾಲಯದಲ್ಲೇ ಇರುವಂತೆ ನೋಡಿಕೊಂಡರು ಎಂದು ಹೇಳಲಾಗಿದೆ.
ನವಾಜ್ ಸೋದರ ಶೆಹಬಾಜ್ ಷರೀಫ್ ನೂತನ ಪ್ರಧಾನಿ?
ರಾತ್ರಿ 9ರ ವೇಳೆಗೆ ಐಎಸ್‌ಐ ಮುಖ್ಯಸ್ಥ ನದೀಮ್ ಅಂಜುಮ್ (ISI chief Nadeem Anjum) ಅವರ ಜತೆ ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನ ಪ್ರಧಾನಿ ನಿವಾಸಕ್ಕೆ ಬಜ್ವಾ ಧಾವಿಸಿ ಬಂದರು. ಆಗ ಇಸ್ಲಾಮಾಬಾದ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. 36 ಸೇನಾ ವಾಹನಗಳು ಇಮ್ರಾನ್ ಮನೆಯತ್ತ ಬಂದವು. ಚುನಾವಣಾ ಆಯೋಗ (Election Commission) ಹಾಗೂ ಹೈಕೋರ್ಚ್ (High Court) ಕಚೇರಿಯನ್ನೂ ತೆರೆಯಲಾಯಿತು. ಇಮ್ರಾನ್ ಪಕ್ಷ ವಿದೇಶದಿಂದ ದೇಣಿಗೆ ಪಡೆದು ಮುಚ್ಚಿಟ್ಟಪ್ರಕರಣದ ಕುರಿತು ಆದೇಶ ನೀಡುವುದಾಗಿ ಆಯೋಗ ಹೇಳಿತು. ತಕ್ಷಣವೇ ಅವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕದಿದ್ದರೆ ವಿದೇಶಿ ದೇಣಿಗೆ ಕೇಸಿನಲ್ಲಿ ಇಡೀ ಸಂಪುಟವನ್ನು ಬಂಧಿಸಬೇಕಾಗುತ್ತದೆ ಎಂದು ಬಜ್ವಾ ಎಚ್ಚರಿಕೆ ನೀಡಿದರು. ಆಗ ಸ್ಪೀಕರ್ ಅಸಾದ್ ಖೈಸರ್ ಅವರು ಮತದಾನ ನಡೆಸಲು ನಿರಾಕರಿಸಿದರು. ಹೀಗಾಗಿ ಅವರ ರಾಜೀನಾಮೆ ಕೊಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಇಮ್ರಾನ್ ಸರ್ಕಾರ ಉರುಳಿಸಿದ 4 ಪ್ರಮುಖರು
ಇದೇ ವೇಳೆ, ಕೈದಿಗಳನ್ನು ಕರೆದೊಯ್ಯುವ ವಾಹನ ಕೂಡ ಇಮ್ರಾನ್ ಮನೆಗೆ ಬಂತು. ಚುನಾವಣಾ ಆಯೋಗ ಕೂಡ ತನ್ನ ಆದೇಶ ಹೊರಡಿಸಲು ಮುಂದಾಯಿತು. ಅದಾದ ನಂತರ ಪ್ರಕರಣ ಹೈಕೋರ್ಚ್ ಮೆಟ್ಟಿಲೇರಿ ರಾಷ್ಟ್ರದ್ರೋಹ ಕೇಸಿನಲ್ಲಿ ಇಮ್ರಾನ್ ಬಂಧನವಾಗುವ ಸಾಧ್ಯತೆ ಇತ್ತು. ಈ ಅಪಾಯ ಅರಿತ ಇಮ್ರಾನ್‌ರ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷ ಸೇನೆಯ ಕ್ಷಮೆ ಕೇಳಿ ಪ್ರಕರಣಕ್ಕೆ ಸುಖಾಂತ್ಯ ಹಾಡಿತು. ಅವಿಶ್ವಾಸಮತದಿಂದ ಪಿಟಿಐ ದೂರ ಉಳಿಯಿತು ಎಂದು ವರದಿಗಳು ಹೇಳಿವೆ.
