* ಪಾಕಿಸ್ತಾನದ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಅವಿಶ್ವಾಸ ನಿರ್ಣಯ ಸೋಲು* ನವಾಜ್ ಸೋದರ ಶೆಹಬಾಜ್ ಷರೀಫ್ ನೂತನ ಪ್ರಧಾನಿ?* ಏ.11ಕ್ಕೆ ಪ್ರಮಾಣವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.
ಇಸ್ಲಾಮಾಬಾದ್(ಏ.10): ಪಾಕಿಸ್ತಾನದ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಅವಿಶ್ವಾಸ ನಿರ್ಣಯ ಸೋಲುತ್ತಿದ್ದಂತೆಯೇ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಅಧ್ಯಕ್ಷ ಮತ್ತು ನ್ಯಾಷನಲ್ ಅಸೆಂಬ್ಲಿ ವಿಪಕ್ಷ ನಾಯಕ ಶೆಹಬಾಜ್ ಷರೀಫ್ ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ. ಏ.11ಕ್ಕೆ ಪ್ರಮಾಣವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.
ಶೆಹಬಾಜ್ ಷರೀಫ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸೋದರ. ಇನ್ನು ಪಿಪಿಪಿ ನೇತಾರ ಬಿಲಾವಲ್ ಭುಟ್ಟೊವಿದೇಶಾಂಗ ಸಚಿವ ಆಗುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಇದೇ ವೇಳೆ ಅಧ್ಯಕ್ಷ ಆರಿಫ್ ಆಲ್ವಿ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಬ್ರಿಟನ್ನಿನಿಂದ ವಾಪಸ್ ಕರೆಸುವ ಬಗ್ಗೆ ಸಹ ಮಾತುಕತೆ ನಡೆಯುತ್ತಿವೆ ಎನ್ನಲಾಗಿದೆ. 2017ರಲ್ಲಿ ಪನಾಮಾ ಪೇಪರ್ ಹಗರಣದಲ್ಲಿ ಬಂಧಿತರಾಗಿರುವ ನವಾಜ್ ಷರೀಫ್ ವೈದ್ಯಕೀಯ ಚಿಕಿತ್ಸೆ ಉದ್ದೇಶದಿಂದ ಜಾಮೀನಿನ ಮೇಲೆ ಲಂಡನ್ನಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಜಾಮೀನಿನ ಅವಧಿ ಸದ್ಯ ಮುಕ್ತಾಯವಾಗಿದೆ.
ಹೊಸ ಸಂಭಾವ್ಯ ಸರ್ಕಾರದಲ್ಲಿ ಎಲ್ಲಾ ವಿರೋಧ ಪಕ್ಷಗಳಿಗೆ ಪ್ರಮಾಣಕ್ಕೆ ಅನುಸಾರ ಪ್ರಾತಿನಿಧ್ಯ ನೀಡುವ ನಿರೀಕ್ಷೆ ಇದ್ದು, ಇಮ್ರಾನ್ ಖಾನ್ ಸರ್ಕಾರದ ಎಲ್ಲಾ ನಿರ್ಧಾರಗಳನ್ನು ಪರಿಶೀಲಿಸಿ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಬಗ್ಗೆ ಈಗಾಗಲೇ ವಿಪಕ್ಷಗಳು ಆರಂಭಿಕ ಮಾತುಕತೆಯನ್ನು ಪೂರ್ಣಗೊಳಿಸಿವೆ.
