ಚಿಂಪಾಂಜಿಯೊಂದು ತನ್ನನ್ನು ಬಾಲ್ಯದಲ್ಲಿ ಸಾಕಿದ ದಂಪತಿಗಳನ್ನು ಮತ್ತೆ ಭೇಟಿಯಾದಾಗ ಹೇಗೆ ವರ್ತಿಸಿತು ನೋಡಿ. ಈ ಭಾವುಕ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಮನುಷ್ಯರಂತೆ ಪ್ರಾಣಿಗಳು ಬಹಳ ಭಾವಜೀವಿಗಳು, ಇದನ್ನು ಹಲವು ಘಟನೆಗಳು ಸಾಬೀತುಪಡಿಸಿವೆ. ಅದೇ ರೀತಿ ಇಲ್ಲೊಂದು ಕಡೆ ಪ್ರಾಣಿಗಳು ಎಷ್ಟೊಂದು ಭಾವುಕ ಎಂಬುದನ್ನು ಸಾಬೀತುಪಡಿಸುವ ವೀಡಿಯೋವೊಂದು ವೈರಲ್ ಆಗಿದ್ದು, ನೋಡುಗರನ್ನು ಭಾವುಕರನ್ನಾಗಿಸಿದ್ದಾರೆ.
ಮನುಷ್ಯರೇ ಆಗಿರಲಿ ಇತರ ಪ್ರಾಣಿಗಳೇ ಆಗಲಿ, ತಮ್ಮ ಬಾಲ್ಯದಲ್ಲಿ ನಾವು ಯಾರ ಜೊತೆಗೆ ಹೆಚ್ಚಾಗಿ ಪ್ರೀತಿಯಿಂದ ಇರುತ್ತೇವೆ. ಯಾರು ನಮ್ಮನ್ನು ಬಹಳ ಪ್ರೀತಿಯಿಂದ ಮುದ್ದಾಗಿ ಸಾಕಿರುತ್ತಾರೆ. ಅವರ ಮೇಲೆ ನಮಗೆ ಇನ್ನಿಲ್ಲದ ಅಕ್ಕರೆ ಇರುತ್ತದೆ. ಅವರನ್ನು ಅಗಲಿ ಒಂದುಕ್ಷಣವೂ ಇರಲಾಗದು ಎಂಬಷ್ಟು ಭಾವುಕರಾಗಿರುತ್ತಾರೆ ಕೆಲವರು. ಇದೇ ಕಾರಣಕ್ಕೆ ಪ್ರೀತಿಪಾತ್ರರಲ್ಲಿ ಯಾರಾದರು ಸಾವನ್ನಪ್ಪಿದರೆ ಅದನ್ನು ಸಹಿಸಿಕೊಳ್ಳಲಾಗದೆ ಕೆಲವರು ಖಿನ್ನತೆಗೆ ಜಾರುವುದಿದೆ. ಅದೇ ರೀತಿ ಇಲ್ಲೊಂದು ಚಿಂಪಾಂಜಿ ತನ್ನನ್ನು ಸಲಹಿದವರಿಂದ ದೂರಾದ ನಂತರ ತೀವ್ರವಾಗಿ ಖಿನ್ನತೆಗೆ ಜಾರಿಕೊಂಡಿದೆ. ಹೀಗಾಗಿ ಇದರ ನೋವು ಕಡಿಮೆ ಮಾಡಿಕೊಳ್ಳಲು ಮೃಗಾಲಯದ ಸಿಬ್ಬಂದಿ ಅದನ್ನು ವಾಪಸ್ ಅದನ್ನು ಸಾಕಿದವರ ಬಳಿ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅದು ಖುಷಿಯಿಂದ ಭಾವುಕವಾಗಿ ವರ್ತಿಸಿದ ರೀತಿ ಎಂತಹವರನ್ನು ಕಣ್ಣೀರು ಹಾಕುವಂತೆ ಮಾಡುತ್ತಿದೆ.
ಅಂದಹಾಗೆ ಈ ಚಿಂಪಾಂಜಿಗೆ ಈಗ 9 ವರ್ಷ. ಇದಕ್ಕೆ ಹುಟ್ಟಿದ ಕೆಲ ದಿನಗಳಲ್ಲಿ ನ್ಯುಮೋನಿಯಾ ಕಾಣಿಸಿಕೊಂಡ ಕಾರಣ ಅದನ್ನು ತಾಯಿಯಿಂದ ದೂರ ಮಾಡಲಾಗಿತ್ತು. ಇದಾದ ನಂತರ ಈ ವೀಡಿಯೋದಲ್ಲಿರುವ ದಂಪತಿ ಆ ಕೋತಿಯನ್ನು ಒಂದೂವರೆ ವರ್ಷಗಳ ಕಾಲ ಸಾಕಿದ್ದರು. ಇದಾದ ನಂತರ ಅದನ್ನು ವನ್ಯಜೀವಿಗಳ ಸಂಘಟನೆಗೆ ನೀಡಿದ್ದರು. ಆದರೆ ದುರಾದೃಷ್ಟವಶಾತ್ ಅವರು ಈ ಕೋತಿ ಮರಿಯನ್ನು ಮುದ್ದಾಗಿ ಸಾಕುವ ಬದಲು ಶೋಷಣೆ ಮಾಡಿದರು. ಆ ಕೋತಿಯನ್ನು ಪ್ರತ್ಯೇಕವಾಗಿ ಪಂಜರದಲ್ಲಿ ಇರಿಸಿದರು. ಪ್ರದರ್ಶನಕ್ಕಿಡುವ ಮೂಲಕ ಕಿರುಕುಳ ನೀಡಿದ್ದರು. ಈ ನಕಲಿ ವನ್ಯಜೀವಿ ಸಂಘಟಕರ ಕೈಯಿಂದ ಈ ಕೋತಿಯನ್ನು ಕಳೆದ ವರ್ಷ ರಕ್ಷಣೆ ಮಾಡಲಾಯ್ತು. ಅಲ್ಲದೇ ವನ್ಯಜೀವಿಗಳನ್ನು ನಿಜವಾಗಿ ರಕ್ಷಿಸುವ ವನ್ಯಜೀವಿಗಳ ರಕ್ಷಣಾ ಸ್ಥಳಕ್ಕೆ ಈ ಕೋತಿಯನ್ನು ಸ್ಥಳಾಂತರ ಮಾಡಲಾಯ್ತು. ಮತ್ತು ಅದು ಈಗ ಖಿನ್ನತೆಯಿಂದ ಹೊರಬಂದು ಎಲ್ಲರೊಂದಿಗೆ ಚೆನ್ನಾಗಿ ವರ್ತಿಸುತ್ತಾ ಖುಷಿಯಾಗಿದೆ.
ಈ ಕೋತಿಯನ್ನು ರಕ್ಷಿಸಿದ ವನ್ಯಜೀವಿ ಸಂರಕ್ಷಕರು ಮೊದಲ ಬಾರಿ ಅದನ್ನು ಚಿಕ್ಕದಿರುವಾಗಿನಿಂದಲೂ ಸಲಹಿದ್ದ ದಂಪತಿಗಳ ಬಳಿ ಕರೆದುಕೊಂಡು ಬಂದಿದ್ದರು. ಈ ವೇಳೆ ಅದು ವರ್ತಿಸಿದ ರೀತಿ ಎಂತಹವರನ್ನೂ ಕೂಡ ಭಾವುಕರನ್ನಾಗಿಸುತ್ತಿದೆ. ತನ್ನ ಸಾಕಿದ ದಂಪತಿಯನ್ನು ನೋಡಿದ ಕೂಡಲೇ ಓಡಿ ಓಡಿ ಬರುವ ಈ ಚಿಂಪಾಂಜಿ ಅವರನ್ನು ತಬ್ಬಿ ಭಾವುಕವಾಗಿದೆ. ತನ್ನ ಸಾಕಿದ ಇಬ್ಬರ ಮೇಲೇರಿ ಗಟ್ಟಿಯಾಗಿ ತಬ್ಬಿಕೊಂಡು ಅದು ಖುಷಿಯ ಜೊತೆ ಭಾವುಕವಾಗಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿ. ಬಹಳ ಹೊತ್ತು ಅದು ಆ ದಂಪತಿಯನ್ನು ಗಟ್ಟಿಯಾಗಿ ತಬ್ಬಿಕೊಂಡಿದೆ.
ವೀಡಿಯೋ ನೋಡಿದ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ. ಅನೇಕರು ಇದು ಕೋತಿಯಲ್ಲ, ಇದು ತನ್ನ ಪೋಷಕರ ಬಳಿ ವಾಪಾಸಾದ ಮಗು ಎಂದು ವೀಡಿಯೋ ನೋಡಿದವರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅದರ ಕಣ್ಣುಗಳೇ ಹೇಳುತ್ತವೆ. ಅದು ಅವರಿಗಾಗಿ ಎಷ್ಟು ಹಂಬಲಿಸಿತು ಎಂಬುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೋ ದೇವರೆ ಅದು ನಿಜವಾಗಿಯೂ ಅವರನ್ನು ಎಷ್ಟು ಪ್ರೀತಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನನ್ನ ಕಣ್ಣಲ್ಲಿ ನೀರು ತರಿಸಿತು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ದೃಶ್ಯ ನಿಮ್ಮ ಕಣ್ಣಲ್ಲಿ ನೀರು ತರಿಸದಿದ್ದರೆ ಬೇರೆನೂ ತರಿಸುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕೋತಿ ಅವರ ಜೊತೆ ಬದುಕುವುದಕ್ಕೆ ಅರ್ಹನಾಗಿದ್ದಾನೆ. ಪ್ರೀತಿ ಎಂದರೆ ಇದುವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
