ಇರಾನ್‌ ಮೇಲಿನ ಯುದ್ಧ 6ನೇ ದಿನಕ್ಕೆ ಕಾಲಿಟ್ಟಿರುವ ಹೊತ್ತಿನಲ್ಲೇ, ಇನ್ನೂ 10 ದಿನಕ್ಕಿಂತ ಹೆಚ್ಚು ಕಾಲ ಯುದ್ಧ ನಡೆದರೆ ಕ್ಷಿಪಣಿಗಳ ಕೊರತೆ ಎದುರಾಗಬಹುದು ಎಂದು ಅಮೆರಿಕದ ರಕ್ಷಣಾ ಇಲಾಖೆಯಾದ ಪೆಂಟಗನ್‌, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಎಚ್ಚರಿಸಿದೆ ಎನ್ನಲಾಗಿದೆ.

ವಾಷಿಂಗ್ಟನ್‌: ಇರಾನ್‌ ಮೇಲಿನ ಯುದ್ಧ 6ನೇ ದಿನಕ್ಕೆ ಕಾಲಿಟ್ಟಿರುವ ಹೊತ್ತಿನಲ್ಲೇ, ಇನ್ನೂ 10 ದಿನಕ್ಕಿಂತ ಹೆಚ್ಚು ಕಾಲ ಯುದ್ಧ ನಡೆದರೆ ಕ್ಷಿಪಣಿಗಳ ಕೊರತೆ ಎದುರಾಗಬಹುದು ಎಂದು ಅಮೆರಿಕದ ರಕ್ಷಣಾ ಇಲಾಖೆಯಾದ ಪೆಂಟಗನ್‌, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಎಚ್ಚರಿಸಿದೆ ಎನ್ನಲಾಗಿದೆ.

ಯುದ್ಧ ವಿಸ್ತರಣೆಗೊಂಡರೆ ಕ್ಷಿಪಣಿಗಳ ಕೊರತೆ ಎದುರಾಗಬಹುದು, ಜೊತೆಗೆ ಅವುಗಳ ಮರುಸೇರ್ಪಡೆಗೆ ಭಾರೀ ಪ್ರಮಾಣದ ವೆಚ್ಚ ಆಗಬಹುದು ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಟ್ರಂಪ್‌ಗೆ ರಹಸ್ಯ ವರದಿ ರವಾನಿಸಿದ್ದಾರೆ ಎಂದು ಪೆಂಟಗನ್‌ ಮೂಲಗಳನ್ನು ಉಲ್ಲೇಖಿಸಿ ಅಲ್‌ ಜಝೀರಾ ಸುದ್ದಿವಾಹಿನಿ ವರದಿ ಮಾಡಿದೆ.

ಆದರೆ ಇಂಥದ್ದೊಂದು ವರದಿಯನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಳ್ಳಿಹಾಕಿದ್ದಾರೆ. ಈ ಕುರಿತು ಟ್ರುತ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, ‘ನಮ್ಮ ಬಳಿ ಮಧ್ಯಮ ಮತ್ತು ಅದಕ್ಕಿಂತ ಉನ್ನತ ಸ್ತರದ ಶಸ್ತ್ರಾಸ್ತ್ರಗಳ ಸಂಗ್ರಹ ಸಾಕಷ್ಟು ಪ್ರಮಾಣದಲ್ಲಿದೆ. ಇದಕ್ಕಿಂತ ಉತ್ತಮ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಎಂದಿಗೂ ನಮ್ಮ ಬಳಿ ಸಂಗ್ರಹ ಇರಲಿಲ್ಲ. ರಕ್ಷಣಾ ಇಲಾಖೆ ನನಗೆ ನೀಡಿರುವ ಮಾಹಿತಿ ಪ್ರಕಾರ, ಇಂಥ ಶಸ್ತ್ರಾಸ್ತ್ರಗಳ ಅನಿಯಮಿತ ಪೂರೈಕೆ ನಮಗೆ ಲಭ್ಯವಿದೆ. ಇವುಗಳ ಮೂಲಕ ನಾವು ಅತ್ಯಂತ ಯಶಸ್ವಿಯಾಗಿ ಸುದೀರ್ಘ ಯುದ್ಧ ಮಾಡಬಹುದು ಎಂದು ಹೇಳಿದ್ದಾರೆ.

ಕೊರತೆ ಏಕೆ?:

ತನ್ನ ಸಂಗ್ರಹದಲ್ಲಿದ್ದ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಅಮೆರಿಕ ಸೇನೆಯು ಇತ್ತೀಚೆಗೆ ಉಕ್ರೇನ್‌, ಇಸ್ರೇಲ್‌ ಸೇರಿದಂತೆ ಹಲವು ಮಿತ್ರದೇಶಗಳಿಗೆ ನೀಡಿದೆ. ಹೀಗಾಗಿ ಹಲವು ರೀತಿಯ ಶಸ್ತ್ರಾಸ್ತ್ರಗಳ ಕೊರತೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅದರಲ್ಲೂ ಇಂಟರ್‌ಸೆಪ್ಟರ್‌ ಮಿಸೈಲ್‌, ಅಂದರೆ ಶತ್ರುಗಳ ಕ್ಷಿಪಣಿಯನ್ನು ಹೊಡೆದುರುಳಿಸುವ ಕ್ಷಿಪಣಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕ್ಷೀಣಿಸಿದೆ.

ಕಳೆದ ವರ್ಷ ಇರಾನ್‌ ಮೇಲೆ ನಡೆದ ಯುದ್ಧದ ವೇಳೆ ಅಮೆರಿಕ 150ಕ್ಕೂ ಹೆಚ್ಚು ಥಾಡ್‌ ಇಂಟರ್‌ಸೆಪ್ಟರ್‌ಗಳನ್ನು ಬಳಸಿತ್ತು. ಇದು ಅಮೆರಿಕದ ಸಂಗ್ರಹದ ಶೇ.25ರಷ್ಟಿತ್ತು. ಜೊತೆಗೆ ಕಳೆದ ವರ್ಷವೇ ಯುದ್ಧನೌಕೆಗಳಲ್ಲಿ ಬಳಸುವ ಇಂಟರ್‌ಸೆಪ್ಟರ್‌ಗಳ ಕೊರತೆಯನ್ನು ಅಮೆರಿಕ ನೌಕಾಪಡೆ ಎದುರಿಸಿತ್ತು ಎನ್ನಲಾಗಿದೆ.

ಇರಾನ್ ಹೊಡೆದುರುಳಿಸಿದ್ದು ಅಮೆರಿಕದ ₹10000 ಕೋಟಿ ಮೌಲ್ಯದ ರಾಡಾರ್‌!

ಟೆಹ್ರಾನ್‌: ಇರಾನ್‌ನ ಕ್ಷಿಪಣಿಗಳು ಮಂಗಳವಾರ ಕತಾರ್‌ನಲ್ಲಿ ಧ್ವಂಸಗೊಳಿಸಿದ ಅಮೆರಿಕದ ಅತ್ಯಾಧುನಿಕ ರಾಡಾರ್‌ನ ಮೌಲ್ಯ ₹10000 ಕೋಟಿಗೂ ಹೆಚ್ಚು ಎಂದು ವರದಿಗಳು ತಿಳಿಸಿವೆ.ಮಹತ್ವದ ರೇಡಾರ್‌:

ಕತಾರ್‌ನ ಅಲ್‌ ಉದೈದ್‌ ವಾಯುನೆಲೆಯಲ್ಲಿ 2013ರಲ್ಲಿ ಸ್ಥಾಪಿಸಲಾಗಿದ್ದ ಈ ಎನ್‌/ಎಫ್‌ಪಿಎಸ್‌-132(ಬ್ಲಾಕ್‌ 5) ರೇಡಾರ್‌ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಗುರುತಿಸಿ ಅಮೆರಿಕ ಸೇನೆಗೆ ಮಹತ್ವದ ಮಾಹಿತಿ ರವಾನಿಸುತ್ತಿತ್ತು. ಕತಾರ್‌ ಸೇರಿ ವಿಶ್ವದ ಆರು ಕಡೆ ಇಂಥ ಆರು ಕ್ಷಿಪಣಿಗಳನ್ನು ಅಮೆರಿಕ ಅಳವಡಿಸಿದ್ದು, ಈ ರೇಡಾರ್‌ ನಷ್ಟದಿಂದಾಗಿ ಮಧ್ಯಪ್ರಾಚ್ಯದಲ್ಲಿನ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕ ಸೇನೆಗೆ ತೀವ್ರ ಹೊಡೆತ ಬಿದ್ದಂತಾಗಿದೆ.

ಸುಮಾರು 5 ಸಾವಿರ ಕಿ.ಮೀ. ವ್ಯಾಪ್ತಿಯನ್ನು ಈ ರೇಡಾರ್‌ ಹೊಂದಿದ್ದು, ದೀರ್ಘ ವ್ಯಾಪ್ತಿಯ ಕ್ಷಿಪಣಿಯನ್ನು ಗುರುತಿಸಿ ತಕ್ಷಣ ಥಾಡ್‌, ಪ್ಯಾಟ್ರಿಯಾಟ್‌ನಂಥ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಕ್ಷಿಪಣಿ ವ್ಯವಸ್ಥೆಗೆ ಎಚ್ಚರಿಕೆ ಸಂದೇಶ ರವಾನಿಸುತ್ತಿತ್ತು. ಕ್ಷಿಪಣಿಗಳು ಮಾತ್ರವಲ್ಲದೆ ಬಾಹ್ಯಾಕಾಶದ ಮೇಲೂ ನಿಗಾ ಇಡಲು ಈ ರೇಡಾರ್‌ ನೆರವಾಗುತ್ತಿತ್ತು. ಹೊಸದಾಗಿ ಉಡ್ಡಯನ ಮಾಡಿದ ಉಪಗ್ರಹಗಳು ಹಾಗೂ ಭೂಕಕ್ಷೆಯ ಸುತ್ತಸುತ್ತುತ್ತಿರುವ ಬಾಹ್ಯಾಕಾಶಅವಶೇಷಗಳ ಮೇಲೆ ಈ ರೇಡಾರ್‌ ಕಣ್ಣಿಡುತ್ತಿತ್ತು.