Denmark social media ban for kids: ಸ್ಮಾರ್ಟ್‌ಫೋನ್ ಮತ್ತು ಸೋಶಿಯಲ್ ಮೀಡಿಯಾದಿಂದ ಯುವ ಸಮುದಾಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು, ಡೆನ್ಮಾರ್ಕ್ ಸರ್ಕಾರ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ನಿರ್ಧರಿಸಿದೆ.

ಸೋಶಿಯಲ್ ಮೀಡಿಯಾದ ಪ್ರಭಾವದಿಂದ ದಾರಿ ತಪ್ಪುತ್ತಿರುವ ಯುವ ಸಮುದಾಯ

ಸ್ಮಾರ್ಟ್ ಫೋನ್ ಹಾಗೂ ಸೋಶಿಯಲ್ ಮೀಡಿಯಾದ ಪ್ರಭಾವದಿಂದ ಯುವ ಸಮುದಾಯ ದಾರಿ ತಪ್ಪುತ್ತಿದ್ದು, ಈ ಹಿನ್ನೆಲೆ ಡೆನ್ಮಾರ್ಕ್‌ನಲ್ಲಿ ಸರ್ಕಾರವು 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವುದಕ್ಕೆ ತೀರ್ಮಾನ ಮಾಡಿದೆ. ಮಕ್ಕಳು ಮಾನಸಿಕವಾಗಿ ಹಾಳು ಮಾಡುವ ಡಿಜಿಟಲ್ ವಿಚಾರಗಳತ್ತ ಹೆಚ್ಚು ಹೆಚ್ಚು ವಾಲುತ್ತಿದ್ದು, ಇದು ಅವರ ಮೇಲೆ ಮಾನಸಿಕ ಆರೋಗ್ಯದ ಜೊತೆಗೆ ಸಾಮಾಜದ ಸ್ವಾಸ್ಥ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಕಳವಳದ ನಡುವೆ ಡೆನ್ಮಾರ್ಕ್ ಸರ್ಕಾರವೂ ಈ ನಿರ್ಧಾರಕ್ಕೆ ಬಂದಿದೆ.

ಮೌಲ್ಯಮಾಪನದ ನಂತರ 13ನೇ ವಯಸ್ಸಿಗೆ ಸೋಶಿಯಲ್ ಮೀಡಿಯಾ ಬಳಸುವುದಕ್ಕೆ ಅನುಮತಿ

ಈ ಕ್ರಮದಿಂದಾಗಿ ಪೋಷಕರು ನಿರ್ದಿಷ್ಟ ಮೌಲ್ಯಮಾಪನದ ನಂತರ 13ನೇ ವಯಸ್ಸಿಗೆ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ಬಳಸುವುದಕ್ಕೆ ಅವಕಾಶ ನೀಡುತ್ತದೆ. ಆದರೆ ಈ ನಿಷೇಧವನ್ನು ಯಾವ ರೀತಿ ಜಾರಿಗೊಳಿಸಲಾಗುತ್ತದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಅನೇಕ ತಾಂತ್ರಿಕ ಅಪ್ಲಿಕೇಷನ್‌ಗಳು ಈಗಾಗಲೇ ಪುಟ್ಟ ಮಕ್ಕಳು ಸೋಶಿಯಲ್ ಮೀಡಿಯಾ ಸೈನ್ ಅಪ್ ಮಾಡುವುದನ್ನು ನಿರ್ಬಂಧಿಸಿವೆ. ಆದರೆ ಅಧಿಕಾರಿಗಳು ಮತ್ತು ತಜ್ಞರು ಕೆಲ ಅಪ್ಲಿಕೇಷನ್‌ಗಳು ಜಾರಿಯಲ್ಲಿಟ್ಟಿರುವ ಅಂತಹ ನಿರ್ಬಂಧಗಳು ಯಾವಾಗಲೂ ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಾರೆ.

ಹದಿಹರೆಯದವರು ಮತ್ತು ಕಿರಿಯ ಮಕ್ಕಳಲ್ಲಿ ಸಾಮಾಜಿಕ ಮಾಧ್ಯಮದ ಬಳಕೆಯನ್ನು ಮಿತಿಗೊಳಿಸಲು ಯುರೋಪಿಯನ್ ಯೂನಿಯನ್ ಸರ್ಕಾರವು ತೆಗೆದುಕೊಂಡಿರುವ ಅತ್ಯಂತ ಕಠಿಣ ಕ್ರಮಗಳಲ್ಲಿ ಈ ಕ್ರಮವು ಒಂದಾಗಲಿದೆ.

ಸೋಶಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿರುವ ಡೆನ್ಮಾರ್ಕ್‌ನ ಶೇ.94 ಮಕ್ಕಳು

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡೆನ್ಮಾರ್ಕ್‌ನ ಡಿಜಿಟಲ್ ವ್ಯವಹಾರಗಳ ಸಚಿವೆ ಕ್ಯಾರೋಲಿನ್ ಸ್ಟೇಜ್, 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಡ್ಯಾನಿಶ್ ಮಕ್ಕಳಲ್ಲಿ 94% ರಷ್ಟು ಕನಿಷ್ಠ ಒಂದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರೊಫೈಲ್‌ಗಳನ್ನು ಹೊಂದಿದ್ದಾರೆ ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಸೋಶಿಯಲ್ ಮೀಡಿಯಾ ಖಾತೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಅವರು ಆನ್‌ಲೈನ್‌ನಲ್ಲಿ ಕಳೆಯುವ ಸಮಯ, ಅವರು ಆನ್‌ಲೈನ್‌ನಲ್ಲಿ ಒಡ್ಡಿಕೊಳ್ಳುವ ಹಿಂಸೆ, ಸ್ವಯಂ ಹಾನಿಗೆ ಒಡ್ಡಿಕೊಳ್ಳುವ ಪ್ರಮಾಣ - ನಮ್ಮ ಮಕ್ಕಳಿಗೆ ತುಂಬಾ ದೊಡ್ಡ ಅಪಾಯವಾಗಿದೆ ಎಂದು ಅವರು ಹೇಳಿದರು. ಸೋಶೀಯಲ್ ಮೀಡಿಯಾ ಹೊರ ತಂದ ತಂತ್ರಜ್ಞಾನ ದೈತ್ಯರನ್ನು ನಮ್ಮಲ್ಲಿರುವ ಶ್ರೇಷ್ಠ ಕಂಪನಿಗಳು ಎಂದು ಕರೆದ ಸಚಿವರು ಅವರ ಬಳಿ ಭಾರಿ ಪ್ರಮಾಣದ ಸಂಪತ್ತು ಲಭ್ಯವಿದೆ, ಆದರೆ ಅವರು ನಮ್ಮ ಮಕ್ಕಳ ಸುರಕ್ಷತೆಯಲ್ಲಿ ಹೂಡಿಕೆ ಮಾಡಲು, ನಮ್ಮೆಲ್ಲರ ಸುರಕ್ಷತೆಯಲ್ಲಿ ಹೂಡಿಕೆ ಮಾಡಲು ಸಿದ್ಧರಿಲ್ಲ ಎಂದರು.

ಈ ನಿಷೇಧವು ತಕ್ಷಣ ಜಾರಿಗೆ ಬರುವುದಿಲ್ಲ ಎಂದು ಸಚಿವೆ ಹೇಳಿದ್ದಾರೆ ಸಂಸತ್ತಿನಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷಗಳು, ಮಿತ್ರಪಕ್ಷದ ಶಾಸಕರು ಸಂಬಂಧಿತ ಕಾನೂನನ್ನು ಅಂಗೀಕರಿಸಲು ತಿಂಗಳುಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಡೆನ್ಮಾರ್ಕ್ ಆತುರಪಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ, ಆದರೆ ನಾವು ಅದನ್ನು ಬೇಗನೆ ಮಾಡುವುದಿಲ್ಲ ಏಕೆಂದರೆ ನಿಯಂತ್ರಣ ಸರಿಯಾಗಿದೆಯೇ ಮತ್ತು ತಂತ್ರಜ್ಞಾನ ದೈತ್ಯರು ಹಾದುಹೋಗಲು ಯಾವುದೇ ಲೋಪದೋಷಗಳಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳಬೇಕು ತಂತ್ರಜ್ಞಾನ ದೈತ್ಯರ ವ್ಯವಹಾರ ಮಾದರಿಗಳಿಂದ ಒತ್ತಡವು ತುಂಬಾ ದೊಡ್ಡದಾಗಿದೆ ಎಂದು ಡೆನ್ಮಾರ್ಕ್‌ನ ಡಿಜಿಟಲ್ ವ್ಯವಹಾರಗಳ ಸಚಿವೆ ಕ್ಯಾರೋಲಿನ್ ಸ್ಟೇಜ್ ಅವರ ಸಚಿವಾಲಯ ಹೇಳಿದೆ.

ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಒಂದು ಕ್ರಮದ ನಂತರ ಈಗ ಡೆನ್ಮಾರ್ಕ್ ಕೂಡ ಪುಟ್ಟ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡುವುದಕ್ಕೆ ಮುಂದಾಗಿದೆ. ಆಸ್ಟ್ರೇಲಿಯಾ ಸಂಸತ್ತು ಮಕ್ಕಳಿಗಾಗಿ ಸಾಮಾಜಿಕ ಮಾಧ್ಯಮದ ಮೇಲೆ ವಿಶ್ವದ ಮೊದಲ ನಿಷೇಧವನ್ನು ಜಾರಿಗೆ ತಂದಿದೆ. ಅಲ್ಲಿ ಸೋಶಿಯಲ್ ಮೀಡಿಯಾದ ಬಳಕೆಗೆ ಕನಿಷ್ಠ ವಯಸ್ಸು ನಿಗದಿಯಾಗಿದೆ. ಅಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಖಾತೆಗಳನ್ನು ಹೊಂದಿರುವುದನ್ನು ತಡೆಯುವಲ್ಲಿ ವ್ಯವಸ್ಥಿತ ವಿಫಲವಾದ ಟಿಕ್‌ಟಾಕ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೇಲೆ ಆಸ್ಟ್ರೇಲಿಯಾ ಸರ್ಕಾರವು 50 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗಳವರೆಗೆ ($33 ಮಿಲಿಯನ್) ದಂಡ ವಿಧಿಸಿದೆ.

ಆದರೆ ಲಕ್ಷಾಂತರ ಮಕ್ಕಳಿಗೆ ಸುಲಭವಾಗಿ ಸ್ಮಾರ್ಟ್‌ಫೋನ್‌ಗಳು ಲಭ್ಯವಾಗುವ ಈ ಜಗತ್ತಿನಲ್ಲಿ ಇಂತಹ ನಿಷೇಧವನ್ನು ಹೇಗೆ ಜಾರಿಗೊಳಿಸಲಾಗುತ್ತದೆ ಎಂದು ಡೆನ್ಮಾರ್ಕ್‌ನ ಅಧಿಕಾರಿಗಳು ಹೇಳಲಿಲ್ಲ. ಆದರೆ ಡೆನ್ಮಾರ್ಕ್ ರಾಷ್ಟ್ರೀಯ ಎಲೆಕ್ಟ್ರಾನಿಕ್ ಐಡಿ ವ್ಯವಸ್ಥೆಯನ್ನು ಹೊಂದಿದೆ. 13 ವರ್ಷಕ್ಕಿಂತ ಮೇಲ್ಪಟ್ಟ ಬಹುತೇಕ ಎಲ್ಲಾ ಡ್ಯಾನಿಶ್ ನಾಗರಿಕರು ಅಂತಹ ಐಡಿಯನ್ನು ಹೊಂದಿದ್ದಾರೆ. ಮತ್ತು ಅದನ್ನೇ ಬಳಸಿ ಸೋಶಿಯಲ್ ಮೀಡಿಯಾಗೆ ಪ್ರವೇಶ ಪಡೆಯುವಂತಹ ಯೋಜನೆಯನ್ನು ಅದು ರೂಪಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ತಿಂಗಳ ಹಿಂದಿನ ಜಗಳಕ್ಕೆ ದ್ವೇಷ: ತಂದೆಯ ಪಿಸ್ತೂಲ್ ತಂದು ಕ್ಲಾಸ್‌ಮೇಟ್‌ಗೆ ಗುಂಡಿಕ್ಕಿದ್ದ ಪಿಯುಸಿ ವಿದ್ಯಾರ್ಥಿ

ಇದನ್ನೂ ಓದಿ: ವಂದೇ ಭಾರತ್ ರೈಲಿನ ಉದ್ಘಾಟನೆ ವೇಳೆ ಆರ್‌ಎಸ್ಎಸ್ ಗೀತೆ ಹಾಡಿದ ಮಕ್ಕಳು: ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ