Gurugram student shooting: ಗುರುಗ್ರಾಮದಲ್ಲಿ, 17 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಪರವಾನಗಿ ಪಡೆದ ಪಿಸ್ತೂಲಿನಿಂದ ತನ್ನ ಸಹಪಾಠಿಗೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿ ಬದುಕುಳಿದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ತಂದೆಯ ಪಿಸ್ತೂಲ್ ತಂದು ಕ್ಲಾಸ್‌ಮೇಟ್‌ಗೆ ಗುಂಡಿಕ್ಕಿದ ವಿದ್ಯಾರ್ಥಿ

ತಂದೆಯ ಪಿಸ್ತೂಲ್ ತೆಗೆದುಕೊಂಡು ಬಂದು ವಿದ್ಯಾರ್ಥಿಯೋರ್ವ ತನ್ನ ಕ್ಲಾಸ್‌ಮೇಟ್‌ಗೆ ಗುಂಡಿಕ್ಕಿದಂತಹ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಗೆ ಸಮೀಪದ ಗುರುಗ್ರಾಮದಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ 17ವರ್ಷದ ಬಾಲಕನೋರ್ವ ತನ್ನ ತಂದೆಯ ಪರವಾನಗಿ ಪಡೆದ ಪಿಸ್ತೂಲ್ ತಂದು ತನ್ನ ಕ್ಲಾಸ್‌ಮೇಟ್‌ಗೆ ಗುಂಡಿಕ್ಕಿದ್ದಾನೆ. ಘಟನೆಯಲ್ಲಿ ಕ್ಲಾಸ್‌ಮೇಟ್‌ಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಬದುಕುಳಿದಿದ್ದಾನೆ. ಘಟನೆ ನಡೆದ ಕೆಲ ಗಂಟೆಗಳಲ್ಲಿ ಆರೋಪಿ ವಿದ್ಯಾರ್ಥಿ ಹಾಗೂ ಆತನ ಅಪ್ರಾಪ್ತ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹಳೆಯ ದ್ವೇಷಕ್ಕೆ ಗುಂಡೇಟು: ಬಾಲಕನ ಸ್ಥಿತಿ ಗಂಭೀರ

ಶುಕ್ರವಾರ ಮಧ್ಯರಾತ್ರಿ ಸುಮಾರಿಗೆ ಗುರುಗ್ರಾಮದ ಸೆಕ್ಟರ್ 48ರ ಸಮೀಪ ಬಾಲಕನೋರ್ವನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ನಂತರ ಸದರ್ ಪೊಲೀಸ್ ಠಾಣೆಯ ಪೊಲೀಸರು ಕೂಡಲೇ ಸ್ಥಳಕ್ಕೆ ಹೋಗಿದ್ದು, ಈ ವೇಳೆ ಸಹಪಾಠಿಯ ಗುಂಡೇಟಿನಿಂದ ಗಾಯಗೊಂಡ ವಿದ್ಯಾರ್ಥಿಯನ್ನು ಆಗಲೇ ಆತನ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಬಾಲಕನನ್ನು ಕುಟುಂಬದವರು ಮೇದಾಂತ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳದಿಂ ಪೊಲೀಸರು ಒಂದು ಪಿಸ್ತೂಲ್, ಒಂದು ಮ್ಯಾಗಜೀನ್ ಹಾಗೂ 5 ಜೀವಂತ ಗುಂಡುಗಳನ್ನು ಹಾಗೂ ಒಂದು ಖಾಲಿ ಶೆಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಆಘಾತಕಾರಿ ವಿಚಾರವೆಂದರೆ ಆರೋಪಿ ವಿದ್ಯಾರ್ಥಿ ವಾಸವಿದ್ದ ಬಾಡಿಗೆ ಮನೆಯಲ್ಲಿ ಪೆಟ್ಟಿಗೆಯೊಂದರಲ್ಲಿ ಮತ್ತೊಂದು ಪಿಸ್ತೂಲ್ ಹಾಗೂ 65 ಜೀವಂತ ಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಮಗ 11ನೇ ಕ್ಲಾಸ್‌ನಲ್ಲಿ ಓದುತ್ತಿದ್ದು, ಶುಕ್ರವಾರ ಸಂಜೆ ಆತನ ಶಾಲಾ ಸ್ನೇಹಿತನೋರ್ವ ಕರೆ ಮಾಡಿ ಆತನನ್ನು ಭೇಟಿಯಾಗುವುದಕ್ಕೆ ಅವಕಾಶ ಕೇಳಿದರು. ಆದರೆ ಆರಂಭದಲ್ಲಿ ನನ್ನ ಮಗ ಹೋಗುವುದಕ್ಕೆ ನಿರಾಕರಿಸಿದನು. ಆದರೆ ಆತ ಮತ್ತೆ ಒತ್ತಾಯ ಮಾಡಿದ್ದಾನೆ. ಹೀಗಾಗಿ ಆತ ಖೇರ್ಕಿ ದೌಲಾ ಟೋಲ್ ಪ್ಲಾಜಾದ ಬಳಿ ಹೋಗಿದ್ದಾನೆ. ಅಲ್ಲಿ ಆರೋಪಿ ಅವನನ್ನು ಭೇಟಿಯಾಗಿದ್ದಾನೆ. ಅಲ್ಲಿನ ಸೆಕ್ಟರ್ 48ರ ಬಳಿ ಇನ್ನೋರ್ವ ಸ್ನೇಹಿತನ ಜೊತೆ ಬಂದಿದ್ದ ಆರೋಪಿ ತನ್ನ ತಂದೆಯ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಕ್ಲಾಸ್‌ಮೇಟ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಆತನ ತಾಯಿ ಆರೋಪಿಸಿದ್ದಾರೆ.

ಎರಡು ತಿಂಗಳ ಹಿಂದಿನಿಂದ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಅಂದಿನಿಂದಲೂ ಆರೋಪಿ ವಿದ್ಯಾರ್ಥಿ ದ್ವೇಷ ಸಾಧಿಸುತ್ತಾ ಬಂದಿದ್ದ. ಘಟನೆಯಲ್ಲಿ ಬಳಸಲಾದ ಪಿಸ್ತೂಲ್ ಆರೋಪಿಯ ತಂದೆಗೆ ಸೇರಿದ್ದಾಗಿದ್ದು, ಅವರು ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದಾರೆ. ಆ ಪಿಸ್ತೂಲ್ ಮನೆಯಲ್ಲೇ ಇದ್ದು, ಅವರ ಮಗ ಈಗ ಸ್ನೇಹಿತನ ಮೇಲೆ ಅದರ ಪ್ರಯೋಗ ಮಾಡಿದ್ದಾನೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಅಪ್ರಾಪ್ತ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್‌ಗಳಡಿ ಆತನ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ರೈಲಿನ ಉದ್ಘಾಟನೆ ವೇಳೆ ಆರ್‌ಎಸ್ಎಸ್ ಗೀತೆ ಹಾಡಿದ ಮಕ್ಕಳು: ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಪೈಶಾಚಿಕ ಕೃತ್ಯ: ಅಜ್ಜಿ ಪಕ್ಕ ಮಲಗಿದ್ದ 4 ವರ್ಷದ ಕಂದನ ಅಪಹರಿಸಿ ಅತ್ಯಾ*ಚಾರ