ಹಣ ಗಳಿಸೋಕೆ ಸೋಶಿಯಲ್ ಮೀಡಿಯಾ ಒಳ್ಳೆ ಮೂಲವಾಗಿದೆ. ಮಕ್ಕಳಿಂದ ವೃದ್ದರವರೆಗೆ ಎಲ್ಲರೂ ಹಣ ಮಾಡ್ತಿದ್ದಾರೆ. ಈ ಮಕ್ಕಳು ಗಳಿಸೋ ಆದಾಯಕ್ಕೆ ತೆರಿಗೆ ಇಲ್ವಾ? 

ಸೋಶಿಯಲ್ ಮೀಡಿಯಾ ಓಪನ್ ಮಾಡ್ತಿದ್ದಂತೆ ಒಂದಿಷ್ಟು ಮಕ್ಕಳ ವಿಡಿಯೋಗಳು ಕಣ್ಣಿಗೆ ಬೀಳುತ್ವೆ. ರೀಲ್ಸ್, ಯುಟ್ಯೂಬ್ ವಿಡಿಯೋ ಅಂತ ಮಕ್ಕಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ಮಕ್ಕಳು ಇದ್ರ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. 18 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಹೊಟೇಲ್ ನಲ್ಲಿ ಕೆಲ್ಸ ಮಾಡೋದು, ಕೂಲಿ ಕೆಲಸ ಮಾಡೋದು ಅಪರಾಧ. ಅವರನ್ನು ಬಾಲ ಕಾರ್ಮಿಕರೆಂದು ಪರಿಗಣಿಸಲಾಗುತ್ತೆ. ಅದ್ರೆ ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಗಳಿಕೆಗೆ ಯಾವುದೇ ನಿರ್ಬಂಧವಿಲ್ಲ. ವಿಡಿಯೋ, ಪೋಸ್ಟ್ ಮೂಲಕ ಹಣ ಸಂಪಾದನೆ ಮಾಡುವ ಮಕ್ಕಳು ಯಾವುದೇ ತೆರಿಗೆ ಪಾವತಿ ಮಾಡೋದಿಲ್ವಾ? ಮಕ್ಕಳ ಗಳಿಕೆಗೆ ಸಂಬಂಧಿಸಿದಂತೆ ತೆರಿಗೆ ರೂಲ್ಸ್ ಏನಿದೆ ಗೊತ್ತಾ?

ಮಕ್ಕಳ ಗಳಿಕೆಯ 2 ವರ್ಗಗಳು ಯಾವುದು? : ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ, ಮಕ್ಕಳ ಗಳಿಕೆಯನ್ನು 2 ವರ್ಗಗಳಾಗಿ ವಿಂಗಡಿಸಲಾಗಿದೆ. ಗಳಿಸಿದ ಮತ್ತು ಗಳಿಸದ ಆದಾಯ. ಮಗುವು ಸೋಶಿಯಲ್ ಸೈಟ್ಗಳು ಅಥವಾ ಯಾವುದೇ ಬ್ಯುಸಿನೆಸ್ ಮೂಲಕ ಗಳಿಸಿದ್ದರೆ ಅದು ಗಳಿಸಿದ ಆದಾಯವಾಗುತ್ತದೆ. ಅದೇ ಅವರ ಹೆಸರಿನಲ್ಲಿರುವ ಮನೆ, ಆಸ್ತಿ ಇದ್ದು, ಅದ್ರಿಂದ ಆದಾಯ ಬರ್ತಿದ್ದರೆ ಅದು ಗಳಿಸದ ಆದಾಯದ ಪಟ್ಟಿ ಸೇರುತ್ತದೆ.

ಯಾರು ತೆರಿಗೆ ಪಾವತಿಸಬೇಕು? : ಆದಾಯ ತೆರಿಗೆಯ ಸೆಕ್ಷನ್ 10(32) ರ ಪ್ರಕಾರ, ಮಗು ಪ್ರತಿ ವರ್ಷ 1500 ರೂಪಾಯಿವರೆಗೆ ಹಣ ಸಂಪಾದನೆ ಮಾಡಿದ್ರೆ ಅದು ತೆರಿಗೆ ಮುಕ್ತ. ಅದೇ 1500 ರೂಪಾಯಿಗಿಂತ ಹೆಚ್ಚು ಆದಾಯ ಗಳಿಸಿದ್ರೆ ಐಟಿ ಕಾಯ್ದೆಯ ಸೆಕ್ಷನ್ 64(1A) ಅಡಿಯಲ್ಲಿ ತೆರಿಗೆ ಪಾವತಿ ಮಾಡ್ಬೇಕು. ಮಗುವಿನ ಆದಾಯವನ್ನು ಅವರ ಹೆತ್ತವರ ಆದಾಯಕ್ಕೆ ಸೇರಿಸುವ ಮೂಲಕ ತೆರಿಗೆ ವಿಧಿಸಲಾಗುತ್ತದೆ. ತಾಯಿ ಮತ್ತು ತಂದೆ ಇಬ್ಬರೂ ಕೆಲ್ಸ ಮಾಡ್ತಿದ್ದರೆ, ಯಾರ ಸಂಪಾದನೆ ಹೆಚ್ಚಿದೆಯೋ ಅವರ ಆದಾಯಕ್ಕೆ ಮಕ್ಕಳ ಆದಾಯ ಸೇರಿಸಿ ತೆರಿಗೆ ವಿಧಿಸಲಾಗುತ್ತದೆ.

ಡಿವೋರ್ಸ್ ಸಂದರ್ಭದಲ್ಲಿ ಯಾರು ತೆರಿಗೆ ಪಾವತಿಸಬೇಕು? : ಮಗುವಿನ ಪೋಷಕರು ವಿಚ್ಛೇದನ ಪಡೆದಿದ್ದರೆ, ಮಗುವಿನ ಪಾಲನೆ ಹೊಣೆ ಹೊತ್ತಿರುವ ವ್ಯಕ್ತಿ ತೆರಿಗೆ ಪಾವತಿಸಬೇಕಾಗುತ್ತದೆ. ಮಗು ಅನಾಥವಾಗಿದ್ದರೆ, ಮಗುವಿನ ಹೆಸರಿನಲ್ಲಿ ಐಟಿಆರ್ ಸಲ್ಲಿಸಬಹುದು. ಮಗು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಅಂಗವೈಕಲ್ಯದಿಂದ ಬಳಲುತ್ತಿದ್ದರೆ ಮತ್ತು ಅಂಗವೈಕಲ್ಯ ಶೇಕಡಾ 40 ಕ್ಕಿಂತ ಹೆಚ್ಚಿದ್ದರೆ, ಮಗುವಿನ ಆದಾಯವನ್ನು ಪೋಷಕರ ಆದಾಯದೊಂದಿಗೆ ಸೇರಿಸಲಾಗುವುದಿಲ್ಲ.

ಸೋಶಿಯಲ್ ಮೀಡಿಯಾ ಗಳಿಕೆಗೆ ಎಷ್ಟು ತೆರಿಗೆ? : ಸೋಶಿಯಲ್ ಮೀಡಿಯಾದ ಗಳಿಕೆಯನ್ನು ಸ್ವಂತ ಬ್ಯುಸಿನೆಸ್ ಎಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಸೋಷಿಯಲ್ ಮಿಡಿಯಾ ಇನ್ಫ್ಲುಯೆನ್ಸರ್, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು. ಪ್ರಸ್ತುತ, ಭಾರತದಲ್ಲಿ 2.5 ಮಿಲಿಯನ್ ಇನ್ಫ್ಲುಯೆನ್ಸರ್ ಇದ್ದು, ತಿಂಗಳಿಗೆ 20,000 ರೂಪಾಯಿಯಿಂದ 200,000 ದವರೆಗೆ ಗಳಿಸುವವರಿದ್ದಾರೆ. ಸೆಪ್ಟೆಂಬರ್ 15 ರವರೆಗೆ ಆದಾಯ ತೆರಿಗೆ ರಿಟರ್ನ್ ಗೆ ಅವಕಾಶವಿದೆ. ಇನ್ಫ್ಲುಯೆನ್ಸರ್ ITR-3 ಅಥವಾ ITR-4 ಫಾರ್ಮ್ ಮೂಲಕ ರಿಟರ್ನ್ಸ್ ಸಲ್ಲಿಸಬೇಕು. ಹಳೆಯ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಂಡಿದ್ದರೆ, 2.5 ಲಕ್ಷ ರೂಪಾಯಿವರೆಗಿನ ಆದಾಯವು ತೆರಿಗೆ ಮುಕ್ತವಾಗಿರುತ್ತದೆ. ಹೊಸ ತೆರಿಗೆ ಸ್ಲ್ಯಾಬ್ ಆಯ್ಕೆ ಮಾಡುವವರಿಗೆ, 7 ಲಕ್ಷ ರೂಪಾಯಿವರೆಗಿನ ವಾರ್ಷಿಕ ಆದಾಯದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಮನೆಯಲ್ಲೇ ಕುಳಿತು ತೆರಿಗೆ ಪಾವತಿ ಮಾಡ್ಬಹುದು. ಆದ್ರೆ ಆದಾಯ ಕೋಟಿ ಮೀರಿದ್ದರೆ ಚಾರ್ಟರ್ಡ್ ಅಕೌಂಟೆಂಟ್ ಸಹಾಯ ಪಡೆಯುವುದು ಸೂಕ್ತ.