1950ರಿಂದ 25 ಬಾರಿ ಐಎಂಎಫ್‌ನಿಂದ ಸಾಲ ಪಡೆದಿರುವ ಪಾಕಿಸ್ತಾನವು 2027ರಲ್ಲಿ ಅದೇ ಸಂಸ್ಥೆ ಮತ್ತು ವಿಶ್ವಬ್ಯಾಂಕ್‌ ಆಡಳಿತ ಮಂಡಳಿಗಳ ಅಧ್ಯಕ್ಷತೆ ವಹಿಸಲಿದೆ. ಆದರೆ, ಈ ಅಧ್ಯಕ್ಷ ಸ್ಥಾನದಿಂದ ಸಾಲ ನೀಡುವ ನಿರ್ಧಾರಗಳ ಮೇಲೆ ಪಾಕಿಸ್ತಾನ ಯಾವುದೇ ಹಿಡಿತ ಸಾಧಿಸಲು ಸಾಧ್ಯವಿಲ್ಲ.

ಇಸ್ಲಾಮಾಬಾದ್‌: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌ನ) ಖಾಯಂ ಗಿರಾಕಿ ಪಾಕಿಸ್ತಾನವು 2027ರಲ್ಲಿ ಅದೇ ಸಂಸ್ಥೆ ಮತ್ತು ವಿಶ್ವಬ್ಯಾಂಕ್‌ ಸಮೂಹದ ಆಡಳಿತ ಮಂಡಳಿಗಳ ಅಧ್ಯಕ್ಷತೆಯನ್ನು ವಹಿಸಲಿದೆ. 1953ರ ನಂತರ ಇದೇ ಮೊದಲ ಬಾರಿಗೆ ತಮಗೆ ಈ ಸೌಭಾಗ್ಯ ಒದಗಿದೆ ಎಂದು ಪಾಕ್‌ನ ಆರ್ಥಿಕ ವ್ಯವಹಾರಗಳ ಸಚಿವಾಲಯವು ಶುಕ್ರವಾರ ತಿಳಿಸಿದೆ.

ಪಾಕಿಸ್ತಾನದ ಗವರ್ನರ್ ಅಹದ್ ಖಾನ್ ಚೀಮಾ

ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವ ಬ್ಯಾಂಕ್-ಐಎಂಎಫ್ ವಾರ್ಷಿಕ ಸಭೆಯಲ್ಲಿ, ಪಾಕ್‌ನ ಆರ್ಥಿಕ ವ್ಯವಹಾರಗಳ ಸಚಿವ ಹಾಗೂ ವಿಶ್ವ ಬ್ಯಾಂಕ್‌ನಲ್ಲಿ ಪಾಕಿಸ್ತಾನದ ಗವರ್ನರ್ ಆಗಿರುವ ಅಹದ್ ಖಾನ್ ಚೀಮಾರನ್ನು 2027ನೇ ಸಾಲಿನ ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ಈ ಮೂಲಕ, ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳು ಭಾಗವಹಿಸುವ ಕಾರ್ಯಕಲಾಪಗಳ ಉಸ್ತುವಾರಿಯನ್ನು ಒಂದು ವರ್ಷದ ಮಟ್ಟಿಗೆ ಪಾಕಿಸ್ತಾನಕ್ಕೆ ಒಪ್ಪಿಸಲಾಗಿದೆ.

25 ಬಾರಿ ಸಾಲ ಪಡೆದಿರುವ ಪಾಕಿಸ್ತಾನ

1950ರಿಂದ ಐಎಂಎಫ್‌ನಿಂದ 25 ಬಾರಿ ಸಾಲ ಪಡೆದಿರುವ ಪಾಕಿಸ್ತಾನವು ಇದೀಗ 18,939.6 ಕೋಟಿ ರು.ಗಾಗಿ ಕೈಚಾಚಿ ನಿಂತಿರುವ ಹೊತ್ತಿನಲ್ಲಿ ಈ ಬೆಳವಣಿಗೆಯಾಗಿದೆ. ಆದರೆ ಅಧ್ಯಕ್ಷನಾದ ಮಾತ್ರಕ್ಕೆ ಸಾಲ ನೀಡುವ ನಿರ್ಧಾರಗಳ ಮೇಲೆ ಪಾಕ್‌ ಹಿಡಿತ ಸಾಧಿಸಲಾಗದು ಎಂಬುದು ಗಮನಾರ್ಹ.