ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡದಿದ್ದರೆ ಇರಾನ್‌ನ ಪ್ರಮುಖ ಮೂಲಸೌಕರ್ಯಗಳ ಮೇಲೆ ಭೀಕರ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ಒಂದು ಕಡೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಹೇಳುತ್ತಲೇ, ಮತ್ತೊಂದೆಡೆ ಸೇಡು ತೀರಿಸಿಕೊಳ್ಳುವ ಮಾತನಾಡಿದ್ದಾರೆ.

ವಾಷಿಂಗ್ಟನ್ (ಮಾ.30): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಮತ್ತೆ ಗುಡುಗಿದ್ದಾರೆ. ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯನ್ನು (Strait of Hormuz) ಕೂಡಲೇ ಮುಕ್ತ ಮಾಡದೇ ಇದ್ದರೆ, ಇರಾನ್‌ನ ಪ್ರಮುಖ ಮೂಲಸೌಕರ್ಯಗಳ ಮೇಲೆ ಅಮೆರಿಕ ಭೀಕರ ದಾಳಿ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ತಮ್ಮ 'ಟ್ರೂತ್ ಸೋಶಿಯಲ್' (Truth Social) ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್‌ನ ಹೊಸ ಮತ್ತು "ಹೆಚ್ಚು ತರ್ಕಬದ್ಧ" ಆಡಳಿತದೊಂದಿಗೆ ವಾಷಿಂಗ್ಟನ್ ಮಾತುಕತೆ ನಡೆಸುತ್ತಿದೆ ಮತ್ತು ಇದರಲ್ಲಿ ಗಣನೀಯ ಪ್ರಗತಿ ಕಾಣುತ್ತಿದೆ ಎಂದು ಹೇಳಿದ್ದಾರೆ. ಆದರೆ, ಒಂದು ವೇಳೆ ಒಪ್ಪಂದವು ಶೀಘ್ರವೇ ಏರ್ಪಡದಿದ್ದರೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡದಿದ್ದರೆ ಇರಾನ್ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಗುಡುಗಿದ್ದಾರೆ.

ಅಮೆರಿಕದ ಸಂಭಾವ್ಯ ಗುರಿಗಳು

ಒಪ್ಪಂದಕ್ಕೆ ಬಾರದಿದ್ದರೆ ಇರಾನ್‌ನ ತೈಲಬಾವಿ, ವಿದ್ಯುತ್‌ ಉತ್ಪಾದನಾ ಘಟಕ, ಶುದ್ದೀಕರಣ ಘಟಕಗಳನ್ನು ಸಿಡಿಸಿ ಹಾಕುವುದಾಗಿ (Blow up) ಟ್ರಂಪ್ ಎಚ್ಚರಿಸಿದ್ದಾರೆ: ತೈಲ ಬಾವಿಗಳು ಇರಾನ್‌ನ ಪ್ರಮುಖ ಆದಾಯದ ಮೂಲವಾಗಿದ್ದರೆ, ಪವರ್‌ ಪ್ಲ್ಯಾಂಟ್‌ಗಳು ಇರಾನ್‌ನ ವಿದ್ಯುತ್‌ ಕೇಂದ್ರ ಎನಿಸಿದೆ. ಇನ್ನು ಕುಡಿಯುವ ನೀರು ಪೂರೈಸುವ ಘಟಕಗಳನ್ನು ಇದುವರೆಗೆ ಉದ್ದೇಶಪೂರ್ವಕವಾಗಿ ಮುಟ್ಟಿಲ್ಲ ಎಂದು ಟ್ರಂಪ್ ಉಲ್ಲೇಖಿಸಿದ್ದಾರೆ.

ಸೇಡು ತೀರಿಸಿಕೊಳ್ಳುವ ಮಾತು

ಕಳೆದ 47 ವರ್ಷಗಳ ಕಾಲ ಇರಾನ್ ನಡೆಸಿದ "ಭಯೋತ್ಪಾದನಾ ಆಳ್ವಿಕೆ"ಯಲ್ಲಿ ಹತರಾದ ಅಮೆರಿಕದ ಸೈನಿಕರು ಮತ್ತು ಇತರರ ಸಾವಿಗೆ "ಪ್ರತೀಕಾರ"ವಾಗಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ. ಕಳೆದ ವಾರವಷ್ಟೇ ಟ್ರಂಪ್, ಇರಾನ್‌ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು 10 ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ಹೇಳಿದ್ದರು. ಈ ಕಾಲಾವಕಾಶವು ಏಪ್ರಿಲ್ 6ರಂದು ಮುಕ್ತಾಯಗೊಳ್ಳಲಿದೆ.

ಒಂದೆಡೆ ಮಾತುಕತೆಯ ಬಗ್ಗೆ ಟ್ರಂಪ್ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಅಮೆರಿಕವು ಈ ಪ್ರದೇಶಕ್ಕೆ ಹೆಚ್ಚುವರಿ ಸೈನಿಕರನ್ನು ನಿಯೋಜಿಸುತ್ತಿದೆ. ಈ ಕ್ರಮವನ್ನು ಟೀಕಿಸಿರುವ ಇರಾನ್ ಸಂಸತ್ತಿನ ನಾಯಕರು, "ಅಮೆರಿಕ ಒಂದು ಕಡೆ ಮಾತುಕತೆಯ ನಾಟಕವಾಡುತ್ತಾ ಮತ್ತೊಂದೆಡೆ ಭೂಸೇನೆಯ ಮೂಲಕ ಆಕ್ರಮಣ ಮಾಡಲು ಸಿದ್ಧತೆ ನಡೆಸುತ್ತಿದೆ" ಎಂದು ಆರೋಪಿಸಿದ್ದಾರೆ. ಆದರೆ, ಅಮೆರಿಕದೊಂದಿಗೆ ಯಾವುದೇ ರೀತಿಯ ನೇರ ಮಾತುಕತೆಗಳು ನಡೆಯುತ್ತಿಲ್ಲ ಎಂದು ಇರಾನ್‌ನ ಹಿರಿಯ ನಾಯಕರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.