ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ಸುಮಾರು 28,000 ವಲಸಿಗ ಟ್ರಕ್ ಚಾಲಕರ ಪರವಾನಗಿಯನ್ನು ರದ್ದುಗೊಳಿಸಿದೆ. ಈ ಕಠಿಣ ನಿರ್ಧಾರವು ಅಮೆರಿಕದ ಟ್ರಕ್ಕಿಂಗ್ ಉದ್ಯಮದಲ್ಲಿರುವ ಭಾರತೀಯ ಚಾಲಕರ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅವರ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ.

ಇತ್ತೀಚೆಗೆ ವಿದೇಶಿ ವಿದ್ಯಾರ್ಥಿಗಳ ಮೇಲೆ ವಿಸಾ ಶುಲ್ಕ ಹೆಚ್ಚಿಸಿ ಸುದ್ದಿಲ್ಲಿದ್ದ ಟ್ರಂಪ್ ಸರ್ಕಾರ ಇದೀಗ ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ಅಮೆರಿಕದಲ್ಲಿ ನೆಲೆಸಿರುವ ವಲಸಿಗ ಟ್ರಕ್ ಚಾಲಕರ ವಿರುದ್ಧ ಡೋನಾಲ್ಡ್ ಟ್ರಂಪ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಭಾರತದ ಮೇಲೆಯೂ ಪರಿಣಾಮ ಆಗಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.

ಬರೋಬ್ಬರಿ 28,000 ವಲಸಿಗ ಟ್ರಕ್ ಡ್ರೈವರ್‌ಗಳ ಲೈಸೆನ್ಸ್ ರದ್ದು!

ಅಮೆರಿಕದಲ್ಲಿರು ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿರುವ ಭಾರತ ಸೇರಿದಂತೆ ವಿದೇಶಿ ಚಾಲಕರ ಲೈಸೆನ್ಸ್ ರದ್ದು ಮಾಡಿದ್ದಾರೆ. ವರದಿ ಪ್ರಕಾರ ಸಮಾರು ಸುಮಾರು 28,000 ವಲಸಿಗ ಟ್ರಕ್ ಡ್ರೈವರ್‌ಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಟ್ರಂಪ್ ಸರ್ಕಾರದ ಈ ದಿಢೀರ್ ಕ್ರಮದಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ವಲಸಿಗ ಸಮುದಾಯದಲ್ಲಿ, ಅದರಲ್ಲೂ ವಿಶೇಷವಾಗಿ ಟ್ರಕ್ಕಿಂಗ್ ಉದ್ಯಮವನ್ನು ನಂಬಿ ಬದುಕುತ್ತಿರು ವಿದೇಶಿ ಚಾಲಕರಿಗೆ ಈ ನಿರ್ಧಾರ ಆಘಾತ ಉಂಟುಮಾಡಿದೆ.

ಕಳೆದ ವರ್ಷ 2025ರ ಆಗಸ್ಟ್ ತಿಂಗಳಿನಲ್ಲಿ ನಡೆದಿದೆ ಎನ್ನಲಾದ ಒಂದು ಅಪಘಾತದ ನಂತರ ಟ್ರಂಪ್ ಆಡಳಿತ ಈ ಕಠಿಣ ನಿರ್ಧಾರಕ್ಕೆ ಬರಲು ಕಾರಣ ಎನ್ನಲಾಗಿದೆ. ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಟ್ರಕ್ ಚಾಲಕರ ದಾಖಲೆಗಳ ಪರಿಶೀಲನೆ ಮತ್ತಷ್ಟು ಕಠಿಣಗೊಳಿಸಲಾಗಿದೆ. ಟ್ರಂಪ್ ಆಡಳಿತದ ಈ ನಿರ್ಧಾರದಿಂದಾಗಿ ಸಾವಿರಾರು ಚಾಲಕರ ಉದ್ಯೋಗದ ಮೇಲೆ ನೇರ ಪರಿಣಾಮ ಬೀರಿದೆ.

ಭಾರತೀಯ ಚಾಲಕರ ಕಥೆಯೇನು?

ಟ್ರಂಪ್ ಸರ್ಕಾರದ ಈ ನಿರ್ಧಾರವು ನಿರ್ದಿಷ್ಟವಾಗಿ ಯಾವ ದೇಶದ ವಲಸಿಗರನ್ನು ಗುರಿಯಾಗಿರಿಸಿಕೊಂಡು ಈ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲವಾದರೂ ಇದರಿಂದಾಗಿ ಭಾರತೀಯ ಟ್ರಕ್ ಚಾಲಕರ ಮೇಲೆಯೂ ಪರಿಣಾಮ ಬೀಳಲಿದ. ಭಾರತೀಯ ಚಾಲಕರು ಅಮೆರಿಕದಲ್ಲಿ ಸಾರಿಗೆ ಮತ್ತು ಟ್ರಕ್ಕಿಂಗ್ ಉದ್ಯಮದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ ಏಷ್ಯಾದ ಹಲವು ದೇಶಗಳ ವಲಸಿಗರು ದೊಡ್ಡ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಈ ಕ್ರಮವು ಭಾರತೀಯ ಚಾಲಕರ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಸದ್ಯ ಲೈಸೆನ್ಸ್ ರದ್ದಾಗಿರುವ 28,000 ಚಾಲಕರಲ್ಲಿ ಎಷ್ಟು ಮಂದಿ ಭಾರತೀಯ ಮೂಲದವರಿದ್ದಾರೆ ಎಂಬ ಬಗ್ಗೆ ಯಾವುದೇ ನಿಖರವಾದ ಅಂಕಿಅಂಶಗಳಿಲ್ಲ. ಆದರೆ ಡೊನಾಲ್ಡ್ ಟ್ರಂಪ್ ಅಮೆರಿಕ ಫಸ್ಟ್ ನೀತಿಯ ಪರಿಣಾಮ ಇಂಥ ಕ್ರಮಗಳು ಜಾರಿಯಾಗುತ್ತಲೇ ಇವೆ. ಒಟ್ಟಿನಲ್ಲಿ, ವಲಸಿಗರ ಕುರಿತ ಟ್ರಂಪ್ ಆಡಳಿತದ ಬಿಗಿ ನಿಲುವು ಮುಂದುವರಿದಿದ್ದು, ಈ ಲೈಸೆನ್ಸ್ ರದ್ದತಿ ಪ್ರಕರಣವು ಅದರ ಇತ್ತೀಚಿನ ನಿದರ್ಶನವಾಗಿದೆ. ಇದರ ಸಂಪೂರ್ಣ ಚಿತ್ರಣ ಮತ್ತು ವಿಶೇಷವಾಗಿ ಭಾರತೀಯರ ಮೇಲಾಗುವ ಪರಿಣಾಮಗಳು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿವೆ.