ಟ್ರಂಪ್ ಆಡಳಿತ ಹಾರ್ವರ್ಡ್‌ಗೆ ವಿದೇಶಿ ವಿದ್ಯಾರ್ಥಿ ಪ್ರವೇಶ ನಿಷೇಧಿಸಿದೆ. ಈ ಕ್ರಮ ಭಾರತೀಯರು ಸೇರಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರಗೊಳಿಸಿದೆ. ಹಿಂಸಾಚಾರ, ಯಹೂದಿ ವಿರೋಧಿ ಧೋರಣೆ, ಚೀನಾ ಸಂಬಂಧ ಆರೋಪಗಳೇ ಕಾರಣ ಎನ್ನಲಾಗಿದೆ. ಹಾರ್ವರ್ಡ್ ಈ ಕ್ರಮ ಖಂಡಿಸಿ, ನ್ಯಾಯಾಲಯದ ಮೊರೆ ಹೋಗಿದೆ. ವಿದ್ಯಾರ್ಥಿಗಳಿಗೆ ಬೇರೆಡೆ ವರ್ಗಾವಣೆ ಅಥವಾ ಕಾನೂನು ಸ್ಥಾನಮಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಂತರ ಹಲವು ಮಹತ್ವದ ಹಾಗೂ ಆಘಾತಕಾರಿ ಕ್ರಮಗಳು ತೆಗೆದುಕೊಳ್ಳುತ್ತಿರುವುದು ಹೊಸದೇನಲ್ಲ. ಇದೀಗ ಪ್ರಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತಿಲ್ಲ ಎಂಬ ನಿಷೇಧ ಹಾಕಿದ್ದಾರೆ. ಈ ನಿರ್ಧಾರದಿಂದ ಹಾರ್ವರ್ಡ್‌ನಲ್ಲಿ ಈಗಾಗಲೇ ಓದುತ್ತಿರುವ ವಿದ್ಯಾರ್ಥಿಗಳು ಬೇರೆ ಕಾಲೇಜುಗಳಿಗೆ ವರ್ಗಾಯಿಸಬೇಕಾಗುತ್ತದೆ ಅಥವಾ ತಮ್ಮ ಕಾನೂನುಬದ್ಧ ಸ್ಥಾನಮಾನವನ್ನು ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ನಿರ್ಧಾರವು ಭಾರತೀಯರು ಸೇರಿದಂತೆ ಸಾವಿರಾರು ವಿದೇಶಿ ವಿದ್ಯಾರ್ಥಿಗಳನ್ನು ಅನಿಶ್ಚಿತತೆಯ ಸ್ಥಿತಿಯಲ್ಲಿರಿಸಿದೆ.
ಹಾರ್ವರ್ಡ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಪ್ರತಿ ವರ್ಷ 500 ರಿಂದ 800 ಭಾರತೀಯ ವಿದ್ಯಾರ್ಥಿಗಳು ಮತ್ತು ವಿದ್ವಾಂಸರು ವಿಶ್ವವಿದ್ಯಾಲಯದ ಭಾಗವಾಗಿದ್ದಾರೆ. ಪ್ರಸ್ತುತ ಭಾರತದಿಂದ 788 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ದಾಖಲಾತಿ ಪಡೆದುಕೊಂಡಿದ್ದಾರೆ. ಟ್ರಂಪ್ ನ ಈ ಕ್ರಮದಿಂದ ಹಾರ್ವರ್ಡ್ ವಿಶ್ವವಿದ್ಯಾಲಯದ ಮೇಲೆ ತೀವ್ರ ಪರಿಣಾಮ ಬೀರುವುದಂತೂ ಸುಳ್ಳಲ್ಲ. ಇಲ್ಲಿ ಪ್ರತೀ ವರ್ಷ ಸುಮಾರು 6,800 ವಿದೇಶಿ ವಿದ್ಯಾರ್ಥಿಗಳು ದಾಖಲಾಗುತ್ತಾರೆ, ಅವರಲ್ಲಿ ಹೆಚ್ಚಿನವರು ಪದವಿ ವಿದ್ಯಾಭ್ಯಾಸಕ್ಕಾಗಿ ಸೇರುತ್ತಾರೆ.
ಈ ನಿರ್ಧಾರಕ್ಕೆ ಕಾರಣವೇನು?
ಅಮೆರಿಕದ ಗೃಹ ಭದ್ರತಾ ಇಲಾಖೆ ಪ್ರಕಾರ, ಹಾರ್ವರ್ಡ್ ವಿಶ್ವವಿದ್ಯಾಲಯವು ಹಿಂಸಾಚಾರ, ಯಹೂದಿ ವಿರೋಧಿ ಧೋರಣೆ ಹಾಗೂ ಚೀನಾದ ಕಮ್ಯುನಿಸ್ಟ್ ಪಕ್ಷದ ಜೊತೆ ಸಂಬಂಧ ಹೊಂದಿದೆ ಎಂಬ ಆರೋಪಗಳಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಗೃಹ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೋಮ್ ಅವರು, "ವಿದೇಶಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದು ಒಂದು ಸೌಲಭ್ಯ, ಹಕ್ಕು ಅಲ್ಲ," ಎಂದು ಹೇಳಿದ್ದಾರೆ.
ಈ ಕ್ರಮದಿಂದ ಏನು ಪರಿಣಾಮ?
ಈ ನಿರ್ಧಾರದಿಂದಾಗಿ, ಹಾರ್ವರ್ಡ್‌ನಲ್ಲಿ ಈಗ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳು ಬೇರೆ ಕಾಲೇಜುಗಳಿಗೆ ಹೋಗಬೇಕಾಗುತ್ತದೆ. ಇಲ್ಲದಿದ್ದರೆ, ಅವರು ಅಮೆರಿಕದಲ್ಲಿರುವ ತಮ್ಮ ಕಾನೂನು ಬದ್ಧ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ. ಹಾರ್ವರ್ಡ್ ಈ ಕ್ರಮವನ್ನು ತೀವ್ರವಾಗಿ ಖಂಡಿಸಿ, “ಇದು ನಮ್ಮ ವಿಶ್ವವಿದ್ಯಾಲಯಕ್ಕೂ, ನಮ್ಮ ವಿದ್ಯಾರ್ಥಿಗಳ ಭವಿಷ್ಯಕ್ಕೂ ಗಂಭೀರ ಹಾನಿ ಮಾಡುತ್ತದೆ” ಎಂದು ಹೇಳಿದೆ. "ನಾವು ವಿವಿಧ ದೇಶಗಳಿಂದ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದರಿಂದ ವಿಶ್ವವಿದ್ಯಾಲಯದ ಶ್ರೇಷ್ಟತೆ ಹೆಚ್ಚಾಗುತ್ತದೆ. ಈ ನಿರ್ಧಾರ ಅತ್ಯಂತ ದುರ್ದೈವಕರವಾಗಿದೆ," ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಸಾವಿರಾರು ವಿದೇಶಿ ವಿದ್ಯಾರ್ಥಿಗಳ ಭವಿಷ್ಯ ಇದೀಗ ಮುಂದೆ ಏನು ಎಂಬ ಸ್ಥಿತಿಗೆ ತಲುಪಿದೆ. ಇವರಲ್ಲಿ ಭಾರತೀಯರು ಸೇರಿದಂತೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಸೇರಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಟ್ರಂಪ್ ಆಡಳಿತದ ನಡುವೆ ಜಗಳವು ಈ ವರ್ಷದ ಏಪ್ರಿಲ್‌ನಲ್ಲೇ ಆರಂಭವಾಯಿತು. ಈ ವಿವಾದಕ್ಕೆ ಕಾರಣವೆಂದರೆ, ಹಾರ್ವರ್ಡ್ ವಿಶ್ವವಿದ್ಯಾಲಯವು ಪ್ಯಾಲೆಸ್ಟೈನ್ ಪರ ಪ್ರತಿಭಟನೆಗಳನ್ನು ನಿಲ್ಲಿಸಲು ಹಾಗೂ "ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆ" (DEI) ನೀತಿಗಳನ್ನು ಕೈಬಿಡಲು ಸರ್ಕಾರ ಮಾಡಿದ ಬೇಡಿಕೆಯನ್ನು ನಿರಾಕರಿಸಿತ್ತು. ಈ ನಿರಾಕರಣೆ ಹಾರ್ವರ್ಡ್‌ಗೆ ಹೆಗ್ಗಳಿಕೆಯಾಗಿದ್ದು, ಸರ್ಕಾರದ ಬೇಡಿಕೆಗೆ ಒಪ್ಪದ ಮೊದಲ ಪ್ರತಿಷ್ಠಿತ ಕಾಲೇಜು ಎಂಬ ಹೆಗ್ಗಳಿಕೆ ಪಾತ್ರವಾಯ್ತು. ಆದರೆ ಇದರ ಪರಿಣಾಮವಾಗಿ, ಟ್ರಂಪ್ ಆಡಳಿತವು ಹಾರ್ವರ್ಡ್ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಅನುದಾನ ಕಡಿತ: ಸಂಶೋಧನೆಗೆ ಬಲವಾದ ಅಡ್ಡಿ
ಅಮೆರಿಕದ ಗೃಹ ಭದ್ರತಾ ಇಲಾಖೆ (DHS) ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆ (NIH) ಸೇರಿದಂತೆ ಹಲವಾರು ಫೆಡರಲ್ ಸಂಸ್ಥೆಗಳು ಹಾರ್ವರ್ಡ್‌ಗೆ ನೀಡುತ್ತಿರುವ ಹಣಕಾಸು ಅನುದಾನವನ್ನು ಕಡಿತಗೊಳಿಸಿವೆ. ಇದರ ಪರಿಣಾಮವಾಗಿ, ಹಾರ್ವರ್ಡ್‌ನ ಅಧ್ಯಾಪಕರು ನಡೆಸುತ್ತಿದ್ದ ಪ್ರಮುಖ ಸಂಶೋಧನಾ ಯೋಜನೆಗಳು ತೊಂದೆಗೆ ಸಿಲುಕಿವೆ.
ಕಾನೂನು ಹೋರಾಟ ಆರಂಭ
ಈ ಅನ್ಯಾಯದ ವಿರುದ್ಧ ಹೋರಾಡಲು ಹಾರ್ವರ್ಡ್ ವಿಶ್ವವಿದ್ಯಾಲಯ ನ್ಯಾಯಾಲಯದ ಮೊರೆ ಹೋಗಿದೆ. ಅನುದಾನ ಸ್ಥಗಿತವನ್ನು ಮತ್ತೆ ಪುನರಾರಂಭಿಸಲು, ಟ್ರಂಪ್ ಆಡಳಿತದ ವಿರುದ್ಧ ಕಾನೂನು ಕ್ರಮಕ್ಕೆ ಮೊಕದ್ದಮ್ಮೆ ಹೂಡಲಾಗಿದೆ.