ಯುದ್ಧೋನ್ಮಾದ ಬಿಟ್ಟು ಮೆತ್ತಗಾದ ಚೀನಾ| ಮಾತುಕತೆಯ ಮೂಲಕ ಗಡಿಯ ಸಮಸ್ಯೆ ಇತ್ಯರ್ಥಕ್ಕೆ ಒಲವು| ಗಡಿ ಪರಿಸ್ಥಿತಿ ನಿಯಂತ್ರಣದಲ್ಲಿದೆ: ಚೀನಾ ವಿದೇಶಾಂಗ ಇಲಾಖೆ

ಬೀಜಿಂಗ್(ಮೇ.28)‌: ಲಡಾಖ್‌ ಮತ್ತು ಸಿಕ್ಕಿಂ ಗಡಿಯಲ್ಲಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಯುದ್ಧೋನ್ಮಾದ ಪ್ರದರ್ಶಿಸಿದ್ದ ಚೀನಾ ಇದೀಗ ತನ್ನ ರಾಗ ಬದಲಿಸಿದೆ. ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದು, ಪರಿಸ್ಥಿತಿ ಇನ್ನೂ ಕೈ ಮೀರಿ ಹೋಗಿಲ್ಲ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಚೀನಾದ ವಿದೇಶಾಂಗ ಸಚಿವಾಲಯ ಬುಧವಾರ ಹೇಳಿಕೆ ನೀಡಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಯದ್ಧ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ತಮ್ಮ ಯೋಧರಿಗೆ ಆದೇಶಿಸಿದ ಬೆನ್ನಲ್ಲೇ, ಈ ಹೇಳಿಕೆ ಹೊರಬಿದ್ದಿದೆ.

ಈಗ ಭೂತಾನ್ ಜೊತೆಗೂ ಚೀನಾ ಗಡಿ ಜಗಳ

ಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ಸೇನೆ ಜಮಾವಣೆ, ಡ್ರೋನ್‌ ಕಣ್ಗಾವಲಿನ ತನ್ನ ನಿರ್ಧಾರದ ಹೊರತಾಗಿಯೂ, ಭಾರತ ತನ್ನ ಯೋಜನೆ ಮುಂದುವರೆಸುವ ಕಠಿಣ ನಿರ್ಧಾರ ಕೈಗೊಂಡ ಬೆನ್ನಲ್ಲೇ ಚೀನಾ ತಣ್ಣಗಾಗಿರುವುದು ಕಂಡುಬಂದಿದೆ.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯಾನ್‌, ‘ಗಡಿ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಉಭಯ ದೇಶಗಳು ಸರಿಯಾದ ಕಾರ್ಯವಿಧಾನಗಳು ಹಾಗೂ ಸಂವಹನ ಸಾಧನಗಳನ್ನು ಹೊಂದಿವೆ. ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಬಗೆ ಹರಿಸಿಕೊಳ್ಳಲು ನಾವು ಶಕ್ತರಾಗಿದ್ದೇವೆ. ಗಡಿಯಲ್ಲಿನ ಸೈನಿಕರು ಹಾಗೂ ರಾಯಭಾರಿಗಳ ಮಧ್ಯೆ ಸಂಧಾನ ನಡೆಸುವ ಆಯ್ಕೆ ನಮ್ಮ ಮುಂದಿದೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಚೀನಾದ ನಿಲುವು ಸ್ಪಷ್ಟವಾಗಿದೆ. ‘ಉಭಯ ದೇಶಗಳ ನಾಯಕರ ನಡುವಿನ ಮಾತುಕತೆಯ ವೇಳೆ ಸಮ್ಮತಿ ವ್ಯಕ್ತವಾದ ಸಂಗತಿಗಳನ್ನು ಹಾಗೂ ಎರಡು ದೇಶಗಳ ನಡುವಿನ ಒಪ್ಪಂದಗಳನ್ನು ನಾವು ಚಾಚೂ ತಪ್ಪದೇ ಪಾಲಿಸುತ್ತೇವೆ. ಇದೇ ವೇಳೆ ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಅದೇ ರೀತಿ ಗಡಿಯಲ್ಲಿ ಶಾಂತಿ ಹಾಗೂ ಸ್ಥಿರತೆ ನೆಲೆಸಬೇಕು ಎಂಬುದಾಗಿಯೂ ಬಯಸುತ್ತೇವೆ. ಸದ್ಯ ಗಡಿಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಹಾಗೂ ವಿಕೋಪಕ್ಕೆ ತಿರುಗಿಲ್ಲ’ ಎಂದು ಹೇಳಿದ್ದಾರೆ.

ಚೀನಾಗೆ ಸದ್ದಿಲ್ಲದೇ ಹೊಡೆತ ನೀಡಿದ ಹೀರೋ ಸೈಕಲ್

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ನಡುವಿನ ಎರಡು ಅನೌಪಚಾರಿಕ ಸಭೆಯ ವೇಳೆ ಉಭಯ ನಾಯಕರು ಗಡಿಯಲ್ಲಿ ಶಾಂತಿಯುತ ವಾತಾವರಣ ನೆಲೆಸುವಂತೆ ನೋಡಿಕೊಳ್ಳುವುದು ಹಾಗೂ ಸೇನೆಯ ಮಧ್ಯೆ ಆತ್ಮವಿಶ್ವಾಸ ತುಂಬುವ ಯತ್ನ ನಡೆಸುವಂತೆ ತಮ್ಮ ಸೇನೆಗೆ ಸೂಚಿಸಿದ್ದನ್ನು ಚೀನಾ ವಿದೇಶಾಂಗ ಸಚಿವ ಝಾವೋ ಲಿಜಿಯಾನ್‌ ಈ ಸಂದರ್ಭದಲ್ಲಿ ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಭಾರತದ ದೂಷಿಸಿದ ಚೀನಾ ಪತ್ರಿಕೆ:

ಇದೇ ವೇಳೆ ಗಡಿಯಲ್ಲಿ ಬಿಕ್ಕಟ್ಟು ಆಕಸ್ಮಿಕವಾಗಿ ಸೃಷ್ಟಿಯಾಗಿದ್ದಲ್ಲ. ಆದರೆ, ಚೀನಾದ ಭೂ ಪ್ರದೇಶವನ್ನು ವಶಪಡಿಸಿಕೊಳ್ಳಲು ಭಾರತದ ಉದ್ದೇಶ ಪೂರ್ವಕವಾಗಿ ಯತ್ನಿಸುತ್ತಿದೆ. ಇದರಿಂದ ಬಿಕ್ಕಟ್ಟು ಇನ್ನಷ್ಟುಜಾಸ್ತಿ ಆಗುವ ಅಪಾಯ ಇದೆ ಎಂದು ಆರೋಪಿಸಿ ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ಲೇಖನವೊಂದನ್ನು ಪ್ರಕಟಿಸಿದೆ.