ನವದೆಹಲಿ(ಜು.06): ಭಾರತ, ನೇಪಾಳದ ನಂತರ ಈಗ ಭೂತಾನ್‌ನ ಭೂಭಾಗದ ಮೇಲೂ ಚೀನಾ ಕಣ್ಣು ಹಾಕಿದ್ದು, ಅರುಣಾಚಲ ಪ್ರದೇಶದ ಜೊತೆಗೆ ಗಡಿ ಹಂಚಿಕೊಂಡಿರುವ ಭೂತಾನ್‌ನ ಪೂರ್ವದ ಪ್ರದೇಶ ತನ್ನದು ಎಂದು ತಕರಾರು ಆರಂಭಿಸಿದೆ. ಆದರೆ ಪುಟ್ಟರಾಷ್ಟ್ರ ಭೂತಾನ್‌ ಇದಕ್ಕೆ ತೀಕ್ಷ$್ಣ ತಿರುಗೇಟು ನೀಡಿದೆ.

ಜೂನ್‌ 2, 3ರಂದು ನಡೆದ ಜಾಗತಿಕ ಪರಿಸರ ಮಂಡಳಿ ಸಭೆಯಲ್ಲಿ ಚೀನಾ ಮೊದಲ ಬಾರಿ ಭೂತಾನ್‌ನ ಜೊತೆಗೆ ಗಡಿ ವಿವಾದದ ಪ್ರಸ್ತಾಪ ಮುಂದಿಟ್ಟಿದೆ. ತನ್ನ ಪೂರ್ವಕ್ಕೆ ಭಾರತದ ಅರುಣಾಚಲ ಪ್ರದೇಶದ ಜೊತೆಗೆ ಗಡಿ ಹೊಂದಿರುವ ಸಕ್ತೆಂಗ್‌ ಎಂಬ ಅರಣ್ಯದಲ್ಲಿ ಭೂತಾನ್‌ ಅಭಯಾರಣ್ಯವೊಂದನ್ನು ನಿರ್ಮಿಸುತ್ತಿದೆ. ಆದರೆ, ಈ ಜಾಗ ‘ವಿವಾದಿತ ಪ್ರದೇಶ’ ಎಂದು ಆಕ್ಷೇಪಿಸಿರುವ ಚೀನಾ, ಸಕ್ತೆಂಗ್‌ ಅಭಯಾರಣ್ಯದ ಕಾಮಗಾರಿಗೆ ಬಂಡವಾಳ ಒದಗಿಸುವುದನ್ನು ನಿಲ್ಲಿಸಬೇಕು ಎಂದು ಭೂತಾನ್‌ ಸರ್ಕಾರಕ್ಕೆ ಹೇಳಿದೆ. ಕೂಡಲೇ ಇದಕ್ಕೆ ತಿರುಗೇಟು ನೀಡಿರುವ ಭೂತಾನ್‌, ‘ಸಕ್ತೆಂಗ್‌ ಅಭಯಾರಣ್ಯ ನಮ್ಮ ದೇಶದ ಸಾರ್ವಭೌಮ ಗಡಿಯೊಳಗಿರುವ ಅವಿಭಾಜ್ಯ ಅಂಗ. ಭೂತಾನ್‌-ಚೀನಾ ನಡುವೆ ಗಡಿಗೆ ಸಂಬಂಧಿಸಿದ ಮಾತುಕತೆಯ ವೇಳೆ ಯಾವತ್ತೂ ಇದನ್ನು ವಿವಾದಿತ ಪ್ರದೇಶವೆಂದು ಯಾರೂ ಹೇಳಿರಲಿಲ್ಲ’ ಎಂದಿದೆ.

ಭಾರತದ ವಿರುದ್ಧ ನೇಪಾಳವನ್ನು ಎತ್ತಿ ಕಟ್ಟುತ್ತಿದೆ ಕುತಂತ್ರಿ ಚೀನಾ

ಸಕ್ತೆಂಗ್‌ ಅರಣ್ಯ ಅರುಣಾಚಲದ ಗಡಿಯಲ್ಲಿರುವುದರಿಂದ ಈ ಜಾಗ ತನ್ನದು ಎಂದು ಹೇಳುವ ಮೂಲಕ ಚೀನಾ ಅಧಿಕಾರಿಗಳು ಭಾರತಕ್ಕೂ ಬಿಸಿ ಮುಟ್ಟಿಸಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲೇಹ್‌ಗೆ ತೆರಳಿ ಚೀನಾಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ.

ನೇಪಾಳದ ಒಂದಿಡೀ ಹಳ್ಳಿ ಚೀನಾಕ್ಕೆ ‘ಗಿಫ್ಟ್‌’! ಗಡಿ ಗುರುತಿನ ಕಂಬಗಳನ್ನೇ ಕಿತ್ತೆಸೆದ ಡ್ರ್ಯಾಗನ್

ಚೀನಾದ ಫೈವ್‌ ಫಿಂಗರ್‌ ಪ್ಲಾನ್‌!

60ರ ದಶಕದಲ್ಲಿ ಟಿಬೆಟ್‌ ಅನ್ನು ಆಕ್ರಮಿಸಿಕೊಂಡ ನಂತರ ಚೀನಾದ ಕಮ್ಯುನಿಸ್ಟ್‌ ನಾಯಕರು ಹಿಮಾಲಯದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಣೆಯ ಬಯಕೆಯ ಬಗ್ಗೆ ಮೊದಲ ಬಾರಿ ಹೇಳಿಕೊಂಡಿದ್ದರು. ಅದಕ್ಕೆ ಫೈವ್‌ ಫಿಂಗರ್‌ ಪ್ಲಾನ್‌ ಎನ್ನಲಾಗುತ್ತದೆ. ಟಿಬೆಟ್‌ ಅನ್ನು ಹಸ್ತ ಎಂದು ಪರಿಗಣಿಸಿದರೆ, ಲಡಾಖ್‌, ನೇಪಾಳ, ಭೂತಾನ್‌, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶವನ್ನು ಅದರ 5 ಬೆರಳು ಎಂದು ಚೀನಾ ಪರಿಗಣಿಸುತ್ತದೆ. ಹೀಗಾಗಿ ಈ ಎಲ್ಲ ಪ್ರದೇಶಗಳನ್ನೂ ತನ್ನದಾಗಿಸಿಕೊಳ್ಳಲು ಹೊರಟಿದೆ ಎಂದು ಇತ್ತೀಚೆಗಷ್ಟೇ ಟಿಬೆಟ್‌ನ ನಿರಾಶ್ರಿತ ಸರ್ಕಾರದ ಅಧ್ಯಕ್ಷ ಲೋಬ್ಸಾಂಗ್‌ ಸಾಂಗೇ ಹೇಳಿದ್ದರು.