ಹಾರ್ವರ್ಡ್ ವಿಜ್ಞಾನಿ ಮೈಕೆಲ್ ಗಿಲ್ಲೆನ್ ಅವರ ಪ್ರಕಾರ, ಸ್ವರ್ಗವು ಭೌತಿಕ ವಿಶ್ವದಲ್ಲಿದ್ದು, ಕಾಸ್ಮಿಕ್ ಹಾರಿಜಾನ್‌ನ ಆಚೆ ಇದೆ. ಐನ್‌ಸ್ಟೈನ್ ಸಿದ್ಧಾಂತ ಮತ್ತು ಹಬಲ್ ನಿಯಮವನ್ನು ಉಲ್ಲೇಖಿಸಿ ಅವರು ತಮ್ಮ ವಾದವನ್ನು ಮಂಡಿಸಿದರೆ, ಇತರ ವಿಜ್ಞಾನಿಗಳು ಇದನ್ನು ತಳ್ಳಿಹಾಕಿದ್ದಾರೆ.
'ಇಲ್ಲೇ ಸ್ವರ್ಗ, ಇಲ್ಲೇ ನರಕ ಮೇಲೆ ಎಲ್ಲಾ ಸುಳ್ಳು' ಎನ್ನುವ ಹಾಡೇ ಇದೆ. ಈ ಭೂಮಿಯ ಮೇಲೆ ಬದುಕಿದ್ದಷ್ಟು ದಿನ ಸ್ವರ್ಗ, ನರಕ ನೋಡುತ್ತೇವೆ ಎನ್ನುವುದು ಈ ಮಾತಿನ ಅರ್ಥ. ಅಷ್ಟಕ್ಕೂ ಸತ್ತ ಮೇಲೆ ಮತ್ತೆ ಹುಟ್ಟಿ ಬಂತು ಸ್ವರ್ಗ, ನರಕದ ಅನುಭವ ಇದುವರೆಗೂ ಯಾರೂ ಹೇಳಿಲ್ಲದ ಕಾರಣ, ಎಲ್ಲವೂ ಊಹೆಗೆ ನಿಲುಕದ್ದೇ. ಒಬ್ಬೊಬ್ಬರದ್ದು ಒಂದೊಂದು ನಿಲುವು. ಆದರೆ ಇದೀಗ ವಿಜ್ಞಾನಿಯೊಬ್ಬರ ಅಧ್ಯಯನ ವರದಿ ಇಡೀ ಲೋಕವನ್ನೇ ಕುತೂಹಲಕ್ಕೆ ತಳ್ಳಿದೆ. ಅವರ ಪ್ರಕಾರ, ವಿಜ್ಞಾನಿ ಸ್ವರ್ಗವು ಭೌತಿಕ ವಿಶ್ವದಲ್ಲಿದೆ ಎನ್ನುವುದು. ಹಾರ್ವರ್ಡ್ ಯೂನಿವರ್ಸಿಟಿಯ ಭೌತಶಾಸ್ತ್ರ ಉಪನ್ಯಾಸಕ ಮತ್ತು ವಿಜ್ಞಾನ ಸಂವಹನಕಾರ ಮೈಕೆಲ್ ಗಿಲ್ಲೆನ್ ಅವರು ಕೈಗೊಂಡಿರುವ ಸಂಶೋಧನೆಯ ಪ್ರಕಾರ, ನಾವು ಸ್ವರ್ಗ ಎಂದು ಕರೆಯುವ ಈ ಸ್ಥಳವು ಕಾಸ್ಮಿಕ್ ಹಾರಿಜಾನ್‌ನ ಆಚೆ ಕುಳಿತಿದೆ ಎಂದಿದ್ದಾರೆ.
ಸ್ವರ್ಗ ನಿಜಕ್ಕೂ ಇದೆ
ಇದಕ್ಕೆ ಅವರು ಹಲವಾರು ಸಂಶೋಧನೆ ಮತ್ತು ಕಾರಣಗಳನ್ನು ನೀಡಿದ್ದಾರೆ. ಎಡ್ವಿನ್ ಹಬಲ್ ನಿಯಮದ ಪ್ರಕಾರ, ನಕ್ಷತ್ರಪುಂಜವು ಭೂಮಿಯಿಂದ ದೂರದಲ್ಲಿದ್ದಷ್ಟೂ ಅದು ನಮ್ಮಿಂದ ವೇಗವಾಗಿ ಚಲಿಸುತ್ತದೆ, ಬೆಳಕಿನ ವೇಗ ಮಾತ್ರ ಅದಕ್ಕೆ ಹೊಂದಿಕೆಯಾಗುವಷ್ಟು ವೇಗದಲ್ಲಿ ಗ್ಯಾಲೆಕ್ಸಿಗಳು ಪರಸ್ಪರ ದೂರ ಹೋಗುತ್ತಿವೆ ಎನ್ನುವುದಾದರೆ. ಇದನ್ನೇ ಗಮನದಲ್ಲಿ ಇರಿಸಿಕೊಂಡರೆ, ಸ್ವರ್ಗವು ಕಾಸ್ಮಿಕ್ ಹಾರಿಜಾನ್‌ನ ಇನ್ನೊಂದು ಬದಿಯಲ್ಲಿರಬಹುದು" ಎಂದಿದ್ದಾರೆ ಗಿಲ್ಲೆನ್. ಈ ಅಂತರವು ಭೂಮಿಯಿಂದ 439 ಶತಕೋಟಿ ಟ್ರಿಲಿಯನ್ ಕಿಲೋಮೀಟರ್ ದೂರದಲ್ಲಿದೆ ಎನ್ನುವುದು ಅವರ ವಾದ.
ಕಾಸ್ಮಿಕ್ ಹಾರಿಜಾನ್
ವೀಕ್ಷಿಸಬಹುದಾದ ಬ್ರಹ್ಮಾಂಡದ ಆಚೆಗೆ ನಾವು ನೋಡಲಾಗದ ಸ್ಥಳವು ಸ್ವರ್ಗವು ಇರುವ ಸ್ಥಳವಾಗಿದೆ ಎಂದು ಅವರು ಬರೆದಿದ್ದಾರೆ. ಈ ಸ್ಥಳವು ಕಾಸ್ಮಿಕ್ ಹಾರಿಜಾನ್ ಕೊನೆಗೊಳ್ಳುವ ಸ್ಥಳದಿಂದ ಪ್ರಾರಂಭವಾಗುತ್ತದೆ. ಗಿಲ್ಲೆನ್ ಇದನ್ನು ಹೇಳಲು ನಾಲ್ಕು ಕಾರಣಗಳನ್ನು ನೀಡುತ್ತಾರೆ. ಅವರು ಆಧುನಿಕ ವಿಶ್ವವಿಜ್ಞಾನವನ್ನು ಉಲ್ಲೇಖಿಸುತ್ತಾರೆ, ಅದು "ಕಾಸ್ಮಿಕ್ ದಿಗಂತದ ಆಚೆಗೆ ಇಡೀ ವಿಶ್ವವು ಅಸ್ತಿತ್ವದಲ್ಲಿದೆ. ಆದರೆ ಅದು ನಮ್ಮಿಂದ ಶಾಶ್ವತವಾಗಿ ಮರೆಮಾಡಲ್ಪಟ್ಟಿದೆ ಏಕೆಂದರೆ ನಾವು ಎಂದಿಗೂ ಕಾಸ್ಮಿಕ್ ದಿಗಂತವನ್ನು ತಲುಪಲು ಸಾಧ್ಯವಿಲ್ಲ ಎಂದಿದ್ದಾರೆ.
ಐನ್‌ಸ್ಟೈನ್ ಸಿದ್ಧಾಂತ
ಗಿಲ್ಲೆನ್ ಮಂಡಿಸುವ ಮತ್ತೊಂದು ವಾದವೆಂದರೆ ಐನ್‌ಸ್ಟೈನ್‌ನ ವಿಶೇಷ ಮತ್ತು ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತಗಳು. ಐನ್‌ಸ್ಟೈನ್ ಕಾಲವು ಕಾಸ್ಮಿಕ್ ಹಾರಿಜಾನ್‌ನಲ್ಲಿ ನಿಲ್ಲುತ್ತದೆ ಎಂದು ಹೇಳುತ್ತಾರೆ. ಇದರರ್ಥ ಈ ಹಂತದ ನಂತರ ಯಾವುದೇ ಭೂತ, ವರ್ತಮಾನ ಅಥವಾ ಭವಿಷ್ಯವಿಲ್ಲ, ಮತ್ತು ಸ್ವರ್ಗವು ಕಾಲಾತೀತತೆ ಇರುವ ಸ್ಥಳದಲ್ಲಿರಬಹುದು. ಆಧುನಿಕ ವಿಶ್ವವಿಜ್ಞಾನವು ಕಾಸ್ಮಿಕ್ ಹಾರಿಜಾನ್ "ವೀಕ್ಷಿಸಬಹುದಾದ ವಿಶ್ವದಲ್ಲಿ ಅತ್ಯಂತ ಹಳೆಯ ಆಕಾಶ ವಸ್ತುಗಳನ್ನು" ಹೊಂದಿದೆ ಎಂದು ಹೇಳುತ್ತದೆ ಎಂದು ಅವರು ವಾದಿಸುತ್ತಾರೆ.
ಅಲ್ಲಗಳೆದ ಕೆಲವರು
ಆದರೆ ಕೆಲವರು ಇದನ್ನು ಅಲ್ಲಗಳೆದಿದ್ದಾರೆ. ಇದು ವಿಜ್ಞಾನವಲ್ಲ, ತತ್ತ್ವಶಾಸ್ತ್ರದ ವಿಷಯ ಎಂದು ಭಾವಿಸುವ ಇತರ ವಿಜ್ಞಾನಿಗಳು ಅವರ ಸಿದ್ಧಾಂತವನ್ನು ತಳ್ಳಿಹಾಕಿದ್ದಾರೆ. ಕನೆಕ್ಟಿಕಟ್ ಕಾಲೇಜಿನಲ್ಲಿ ಖಗೋಳಶಾಸ್ತ್ರದ ಅಸೋಸಿಯೇಟ್ ಬೋಧನಾ ಪ್ರಾಧ್ಯಾಪಕರಾದ ಪಿಎಚ್‌ಡಿ ಅಲೆಕ್ಸ್ ಜಿಯಾನಿನಾಸ್ ಇದರ ವಿರುದ್ಧ ವಾದಿಸುತ್ತಾರೆ. ಅವರು ಪಾಪ್ಯುಲರ್ ಮೆಕ್ಯಾನಿಕ್ಸ್‌ಗೆ ಹೇಳಿದರು, "ಕಾಸ್ಮಿಕ್ ದಿಗಂತವು ಭೌತಿಕ ಸ್ಥಳವಲ್ಲ, ಆದರೆ ನಾವು ನೋಡಲು ಅಥವಾ ಸಂವಹನ ಮಾಡಲು ಸಾಧ್ಯವಾಗದ ಸೀಮಿತ ಗಡಿಯಾಗಿದೆ ಎಂದಿದ್ದಾರೆ. ನಾವು ಅದನ್ನು ಮೀರಿ ನೋಡಲು ಸಾಧ್ಯವಾಗದ ಕಾರಣ, ವಿಶ್ವವು ಅಲ್ಲಿಗೆ ಕೊನೆಗೊಳ್ಳುತ್ತದೆ ಎಂದರ್ಥವಲ್ಲ. ವಿಶ್ವವು ಸುಮಾರು 13.8 ಶತಕೋಟಿ ವರ್ಷಗಳಷ್ಟು ಹಳೆಯದಾಗಿದೆ ಮತ್ತು ಬೆಳಕು ಸೆಕೆಂಡಿಗೆ ಸುಮಾರು 300,000 ಕಿಲೋಮೀಟರ್ ವೇಗದಲ್ಲಿ ಚಲಿಸುವುದರಿಂದ, ಬೆಳಕು ಭೂಮಿಯನ್ನು ತಲುಪಲು ಸಾಕಷ್ಟು ಸಮಯವನ್ನು ಹೊಂದಿರುವ ಪ್ರದೇಶಗಳನ್ನು ಮಾತ್ರ ನೋಡಲು ಸಾಧ್ಯ. ಇತರ ಸ್ಥಳಗಳು ತುಂಬಾ ದೂರದಲ್ಲಿವೆ, ಅಲ್ಲಿಂದ ಬೆಳಕು ನಮ್ಮನ್ನು ಎಂದಿಗೂ ತಲುಪುವುದಿಲ್ಲ ಎನ್ನುವುದು ಅವರ ವಾದ.


