Bryan Johnson: ಸಾವನ್ನು ಗೆದ್ದು ಅಮರತ್ವ ಸಾಧಿಸುವ ಹಠಕ್ಕೆ ಬಿದ್ದಿರುವ ಅಮೆರಿಕದ ಬಿಲಿಯನೇರ್ ಬ್ರಯಾನ್ ಜಾನ್ಸನ್, ಈಗ ಪ್ರಯೋಗಾಲಯದಲ್ಲಿ ತಮ್ಮದೇ ಆದ 'ಬೇಬಿ ಕ್ಲೋನ್' ಸೃಷ್ಟಿಸಿರುವುದಾಗಿ ಘೋಷಿಸಿ ಜಗತ್ತನ್ನೇ ಬೆರಗುಗೊಳಿಸಿದ್ದಾರೆ. ವೃದ್ಧಾಪ್ಯವನ್ನು ಹಿಮ್ಮೆಟ್ಟಿಸಲು ಅವರು ಇಟ್ಟಿರುವ ಈ ವಿವಾದಾತ್ಮಕ ಹೆಜ್ಜೆಯ ಹಿಂದಿನ ಅಸಲಿ ಉದ್ದೇಶವೇನು ಎಂಬುದರ ವಿವರ ಇಲ್ಲಿದೆ.
ವೃದ್ಧಾಪ್ಯವನ್ನು ಗೆದ್ದು ಚಿರಂಜೀವಿಯಾಗಿ ಇರಬೇಕೆಂಬ ಹಠಕ್ಕೆ ಬಿದ್ದಿರುವ ಅಮೆರಿಕದ ಟೆಕ್ ಬಿಲಿಯನೇರ್ ಬ್ರಯಾನ್ ಜಾನ್ಸನ್ (Brian Johnson) (48), ಈಗ ಮತ್ತೊಂದು ವಿವಾದಾತ್ಮಕ ಹೆಜ್ಜೆ ಇಟ್ಟಿದ್ದಾರೆ. ಪ್ರಯೋಗಾಲಯದಲ್ಲಿ ತಮ್ಮದೇ ಆದ 'ಬೇಬಿ ಕ್ಲೋನ್' (Baby Clone) ಸೃಷ್ಟಿಸಿರುವುದಾಗಿ ಅವರು ಘೋಷಿಸಿದ್ದು, ವಿಜ್ಞಾನ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.
ರಿವರ್ಸ್ ಏಜಿಂಗ್ ಅಥವಾ ವಯಸ್ಸಾಗುವ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸುವ ವಿಶಿಷ್ಟ ಹವ್ಯಾಸ ಹೊಂದಿರುವ ಬ್ರಯಾನ್ ಜಾನ್ಸನ್, ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಬೇಬಿ ಬ್ರಯಾನ್(Baby Bryan) ಎಂದು ಕರೆಯಲ್ಪಡುವ ಈ ಪುಟ್ಟ ಕ್ಲೋನ್ (ತದ್ರೂಪಿ ಪ್ರತಿರೂಪ) ಪ್ರಸ್ತುತ ಪೆಟ್ರಿ ಡಿಶ್‌ನಲ್ಲಿ ಬೆಳೆಯುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಸದಾ ಯುವಕನಂತೆ ಇರಲು
ಜಾನ್ಸನ್ ವಿವರಿಸುವಂತೆ, ಅವರು ತಮ್ಮದೇ ದೇಹದ ರಕ್ತದ ಕಣಗಳನ್ನು ಸಂಗ್ರಹಿಸಿ, ಅತ್ಯಾಧುನಿಕ ವೈದ್ಯಕೀಯ ಪದ್ಧತಿಗಳ ಮೂಲಕ ಅವುಗಳನ್ನು ಭ್ರೂಣದ ಹಂತಕ್ಕೆ ಪರಿವರ್ತಿಸಿದ್ದಾರೆ. ಈ ಕ್ಲೋನ್ ಸೃಷ್ಟಿಯ ಹಿಂದೆ ದೊಡ್ಡ ಯೋಜನೆಯೇ ಇದೆ. ಈ ಕ್ಲೋನ್ ಮೂಲಕ ಭವಿಷ್ಯದಲ್ಲಿ ತಮಗೆ ಬೇಕಾದ ಹೊಸ ಅಂಗಾಂಗಗಳನ್ನು ಬೆಳೆಸಿಕೊಳ್ಳುವುದು, ಹೊಸ ಔಷಧಿಗಳನ್ನು ಅದರ ಮೇಲೆ ಪರೀಕ್ಷಿಸುವುದು ಮತ್ತು ಆ ಕ್ಲೋನ್‌ನಿಂದ ಯೌವನದ ಕಣಗಳನ್ನು ತಮ್ಮ ದೇಹಕ್ಕೆ ಸೇರಿಸಿಕೊಳ್ಳುವುದು ಇವರ ಮುಖ್ಯ ಉದ್ದೇಶ. ಸರಳವಾಗಿ ಹೇಳುವುದಾದರೆ, ತಮ್ಮನ್ನು ತಾವು ಸದಾ ಯುವಕನಂತೆ ಇರಿಸಿಕೊಳ್ಳಲು ಈ ಕ್ಲೋನ್ ಅನ್ನು ಬಳಸಿಕೊಳ್ಳಲು ಅವರು ಬಯಸಿದ್ದಾರೆ.
ಇತ್ತೀಚೆಗೆ ಬ್ರಯಾನ್ ಅವರಿಗೆ 'ಆಟೋ ಇಮ್ಯೂನ್ ಗ್ಯಾಸ್ಟ್ರೈಟಿಸ್' (AIG) ಎಂಬ ಅಪರೂಪದ ಹೊಟ್ಟೆಯ ಕಾಯಿಲೆ ಇರುವುದು ಪತ್ತೆಯಾಗಿದೆ. ಇದಕ್ಕೆ ಪ್ರಸ್ತುತ ಯಾವುದೇ ಖಚಿತ ಚಿಕಿತ್ಸೆ ಇಲ್ಲ. ಹಾಗಾಗಿ, ಕ್ಲೋನ್‌ನಿಂದ ಪಡೆದ ಯುವ ಕಣಗಳ ಮೂಲಕ ಈ ಕಾಯಿಲೆಯನ್ನು ಗುಣಪಡಿಸಿಕೊಳ್ಳುವ ಜೊತೆಗೆ ವೃದ್ಧಾಪ್ಯವನ್ನೂ ತಡೆಯಬಹುದು ಎಂಬುದು ಅವರ ನಂಬಿಕೆ. ಯೌವನವನ್ನು ಕಾಪಾಡಿಕೊಳ್ಳಲು ಜಾನ್ಸನ್ ವರ್ಷಕ್ಕೆ ಸುಮಾರು 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ.
ವಿಜ್ಞಾನ ಲೋಕದಲ್ಲಿದೆ ಭಿನ್ನಾಭಿಪ್ರಾಯ
ಜಾನ್ಸನ್ ಅವರ ಈ ಹಕ್ಕುಗಳ ಬಗ್ಗೆ ವಿಜ್ಞಾನ ಲೋಕದಲ್ಲಿ ಭಿನ್ನಾಭಿಪ್ರಾಯಗಳಿವೆ. ಬೆಂಬಲಿಗರು ಇದನ್ನು ವೈದ್ಯಕೀಯ ಕ್ರಾಂತಿ ಎನ್ನುತ್ತಿದ್ದರೆ, ವಿಮರ್ಶಕರು ಇದೊಂದು ಪ್ರಚಾರದ ತಂತ್ರ (Publicity Stunt) ಎಂದು ತಳ್ಳಿಹಾಕುತ್ತಿದ್ದಾರೆ. ಚಾರಿತ್ರಿಕವಾಗಿ ನೋಡಿದರೆ, 2002ರಲ್ಲಿ ಬ್ರಿಜಿಟ್ಟೆ ಬೊಯ್ಸೆಲಿಯರ್ ಎಂಬ ವಿಜ್ಞಾನಿ 'ಈವ್' ಎಂಬ ಹೆಸರಿನ ಕ್ಲೋನ್ ಮಗುವನ್ನು ಸೃಷ್ಟಿಸಿದ್ದಾಗಿ ಹೇಳಿಕೊಂಡಿದ್ದರು, ಆದರೆ ಅದು ಸುಳ್ಳೆಂದು ಸಾಬೀತಾಗಿತ್ತು. ತೈವಾನ್ ವಿಜ್ಞಾನಿಗಳ ಹಕ್ಕುಗಳೂ ಸಹ ವಿಫಲವಾಗಿದ್ದವು. ವಾಸ್ತವವಾಗಿ, ಇದುವರೆಗೆ ಜಗತ್ತಿನಲ್ಲಿ ಯಾವುದೇ ಮಾನವ ಕ್ಲೋನಿಂಗ್ ಯಶಸ್ವಿಯಾಗಿ ನಡೆದ ಅಧಿಕೃತ ದಾಖಲೆಗಳಿಲ್ಲ.
ಕಾನೂನುಬಾಹಿರ ಮತ್ತು ತಾಂತ್ರಿಕವಾಗಿ ಅಸಾಧ್ಯ
ಮಾನವ ಕ್ಲೋನಿಂಗ್ ಮೇಲೆ ವಿಶ್ವದಾದ್ಯಂತ ಕಠಿಣ ಕಾನೂನುಗಳಿವೆ. ಮನುಷ್ಯನ ಪ್ರತಿರೂಪ ಸೃಷ್ಟಿಸುವುದು ನೈತಿಕವಾಗಿ ತಪ್ಪು ಮತ್ತು ಮಾನವ ಘನತೆಗೆ ಧಕ್ಕೆ ಎಂದು ಪರಿಗಣಿಸಲಾಗುತ್ತದೆ. ಫ್ರಾನ್ಸ್, ಜರ್ಮನಿ, ರಷ್ಯಾ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳಲ್ಲಿ ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯುಕೆ ಮತ್ತು ಜಪಾನ್‌ನಲ್ಲಿ ಕೇವಲ ಚಿಕಿತ್ಸಕ ಉದ್ದೇಶದ (Therapeutic Cloning) ಸಂಶೋಧನೆಗೆ ಮಾತ್ರ ಕಟ್ಟುನಿಟ್ಟಿನ ಅನುಮತಿ ಇದೆ. ಅಮೆರಿಕದಲ್ಲೂ ಪೂರ್ಣ ಪ್ರಮಾಣದ ಮಾನವ ಕ್ಲೋನ್ ಸೃಷ್ಟಿಸುವುದು ಕಾನೂನುಬಾಹಿರ ಮತ್ತು ಪ್ರಸ್ತುತ ತಾಂತ್ರಿಕವಾಗಿ ಅಸಾಧ್ಯ ಎನ್ನಲಾಗುತ್ತಿದೆ. ಹೀಗಿರುವಾಗ ಬ್ರಯಾನ್ ಜಾನ್ಸನ್ ಅವರ ಈ 'ಬೇಬಿ ಕ್ಲೋನ್' ವಾದ ಎಷ್ಟು ಸತ್ಯ ಎಂಬುದು ಕಾಲವೇ ನಿರ್ಧರಿಸಬೇಕು.