ಹಫೀಜ್‌ ಸಯೀದ್‌, ಮಸೂದ್‌ ಅಜರ್‌ನಂಥ ಉಗ್ರರನ್ನು ವಿಶ್ವಾಸವೃದ್ಧಿಯ ಕ್ರಮವಾಗಿ ಭಾರತಕ್ಕೆ ಗಡೀಪಾರು ಮಾಡಲು ಪಾಕಿಸ್ತಾನಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ, ಈ ಪ್ರಕ್ರಿಯೆಯಲ್ಲಿ ಭಾರತ ಕೂಡ ಸಹಕಾರ ನೀಡಲು ಸಿದ್ಧವಾಗಿರಬೇಕು ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಅಚ್ಚರಿಯ ಹೇಳಿಕೆ

ಇಸ್ಲಾಮಾಬಾದ್‌: ಲಷ್ಕರ್‌ -ಎ-ತೊಯ್ಬಾ ಮುಖ್ಯಸ್ಥ ಹಫೀಜ್‌ ಸಯೀದ್‌, ಜೈಷ್- ಎ- ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ನಂಥ ಉಗ್ರರನ್ನು ವಿಶ್ವಾಸವೃದ್ಧಿಯ ಕ್ರಮವಾಗಿ ಭಾರತಕ್ಕೆ ಗಡೀಪಾರು ಮಾಡಲು ಪಾಕಿಸ್ತಾನಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ, ಈ ಪ್ರಕ್ರಿಯೆಯಲ್ಲಿ ಭಾರತ ಕೂಡ ಸಹಕಾರ ನೀಡಲು ಸಿದ್ಧವಾಗಿರಬೇಕು ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಅಚ್ಚರಿಯ ಹೇಳಿಕೆ ಹೇಳಿದ್ದಾರೆ.

ಜತೆಗೆ ಮಸೂದ್‌ ಅಜರ್‌ ಎಲ್ಲಿದ್ದಾನೆಂದು ಗೊತ್ತಿಲ್ಲ. ಆತ ಅಫ್ಘಾನಿಸ್ತಾನದಲ್ಲಿರಬಹುದು. ಭಾರತ ಪಾಕಿಸ್ತಾನದ ನೆಲದಲ್ಲಿದ್ದಾನೆಂದು ಸಾಕ್ಷಿ ನೀಡಿದರೆ ಅಜರ್‌ ವಿರುದ್ಧ ಕ್ರಮಕೈಗೊಳ್ಳಲು ಸಿದ್ಧ ಎಂದು ತಿಳಿಸಿದ್ದಾರೆ. ಈ ಮೂಲಕ ಭಯೋತ್ಪಾದಕರನ್ನು ಬೆಂಬಲಿಸುವ ವಿಚಾರದಲ್ಲಿ ಪಾಕಿಸ್ತಾನದ ರಾಜಕಾರಣಿಗಳು ಇದೀಗ ವಿಶ್ವದ ಮುಂದೆ ಹೊಸ ನಾಟಕ ಶುರುವಿಟ್ಟುಕೊಂಡಿದ್ದಾರೆ.

ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ಮುಖ್ಯಸ್ಥನೂ ಆಗಿರುವ ಬಿಲಾವಲ್‌ ಅವರು ಅಲ್‌ಜಝೀರಾ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹಫೀಜ್‌ ಸಯೀದ್‌, ಮಸೂದ್‌ ಅಜರ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನ ಸಿದ್ಧವಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಇಂಥ ಬೇಡಿಕೆಗೆ ಪಾಕಿಸ್ತಾನದಲ್ಲಿ ವಿರೋಧವಿದ್ದಂತಿಲ್ಲ ಎಂಬುದು ನಮ್ಮ ನಂಬಿಕೆ. ಹಫೀಜ್‌ ಸಯೀದ್, ಮಸೂದ್‌ ಅಜರ್‌ ವಿರುದ್ಧ ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಇವೆಲ್ಲ ಪಾಕ್‌ ನೆಲದ ಪ್ರಕರಣಗಳು. ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಪಡಿಸುವುದು ಕಷ್ಟ. ಇದಕ್ಕೆ ಭಾರತದಿಂದ ಅಗತ್ಯ ಸಹಕಾರ ಸಿಗದಿರುವುದೇ ಕಾರಣ ಎಂದು ಆರೋಪಿಸಿದ್ದಾರೆ.

ಅಂಥ ಪ್ರಕರಣಗಳಲ್ಲಿ ಕೋರ್ಟ್ ಮುಂದೆ ಸಾಕ್ಷಿ ಸಲ್ಲಿಸಬೇಕು. ಭಾರತದ ಜನ ನಮ್ಮಲ್ಲಿ ಬಂದು ಸಾಕ್ಷ್ಯ ಹೇಳಬೇಕು. ಈ ಪ್ರಕ್ರಿಯೆಯಲ್ಲಿ ಸಹಕಾರ ನೀಡಿದರೆ ಭಾರತವು ಕಳವಳ ವ್ಯಕ್ತಪಡಿಸಿರುವ ಯಾವುದೇ ವ್ಯಕ್ತಿಯನ್ನು ಗಡೀಪಾರು ಮಾಡಲು ಅಭ್ಯಂತಲ್ಲ ಎಂದರು.

ಇದೇ ವೇಳೆ ಮಸೂದ್ ಹಜರ್‌ ಎಲ್ಲಿದ್ದಾನೆಂಬುದೇ ಗೊತ್ತಿಲ್ಲ. ಆತ ಅಫ್ಘಾನಿಸ್ತಾನದಲ್ಲಿರಬಹುದು. ಆತ ಪಾಕ್‌ನಲ್ಲಿರುವುದಕ್ಕೆ ಸಾಕ್ಷಿ ಇದ್ದರೆ ನೀಡಲಿ, ಕ್ರಮಕೈಗೊಳ್ಳಲು ನಾವು ಸಿದ್ಧ ಎಂದ ಬಿಲಾವಲ್‌, ಹಫೀಸ್‌ ಸಯೀದ್‌ ಪಾಕ್‌ ಕಸ್ಟಡಿಯಲ್ಲಿದ್ದಾನೆ. ಆತ ಮುಕ್ತವಾಗಿ ಓಡಾಡಿಕೊಂಡಿಲ್ಲ ಎಂದು ಬೊಗಳೆ ಬಿಟ್ಟಿದ್ದಾರೆ.

  • - ಆದರೆ ತನಿಖೆಗೆ ಭಾರತದಿಂದ ಸಹಕಾರ ಸಿಗಬೇಕು
  • - ಪಾಕ್‌ನ ಪಿಪಿಪಿ ಪಾರ್ಟಿ ಮುಖ್ಯಸ್ಥ ಬಿಲಾವಲ್‌ ಹೇಳಿಕೆ
  • - ಮಸೂದ್‌ ಎಲ್ಲಿದ್ದಾನೆಂದೇ ಗೊತ್ತಿಲ್ಲ ಎಂದ ಬಿಲಾವಲ್‌
  • - ಉಗ್ರ ಹಫೀಜ್‌ ಸಯೀದ್‌ ಪಾಕ್‌ ಕಸ್ಟಡಿಯಲ್ಲಿದ್ದಾನೆ
  • - ಆತ ಮುಕ್ತವಾಗಿ ಓಡಾಡಿಕೊಂಡಿಲ್ಲವಂತೆ: ಮತ್ತೆ ಸುಳ್ಳು