ಬಾಂಗ್ಲಾ ಪ್ರಧಾನಿ ರಾಜೀನಾಮೆ ಆಗ್ರಹಿಸಿ ವಿಪಕ್ಷದ ಬೃಹತ್ ಪ್ರತಿಭಟನೆ, ಹಿಂಸಾಚಾರಕ್ಕೆ ತಿರುಗಿದ ರ್‍ಯಾಲಿ!
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ರಾಜಧಾನಿಯಲ್ಲಿ ಬರೋಬ್ಬರಿ 1 ಲಕ್ಷ ಮಂದಿ ಈ ಪ್ರತಿಭಟೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಢಾಕ(ಅ.28) ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಬರೋಬ್ಬರಿ 1 ಲಕ್ಷ ಮಂದಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಬಾಂಗ್ಲಾದೇಶದ ಪ್ರಮುಖ ವಿಪಕ್ಷ ಜಮಾತ್ ಇ ಇಸ್ಲಾಮಿ ಪಕ್ಷ ಈ ಪ್ರತಿಭಟನೆ ಹಮ್ಮಿಕೊಂಡಿದೆ. ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ ತಕ್ಷಣವೇ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಪೊಲೀಸರ ಜೊತೆ ಯುದ್ಧಕ್ಕೆ ನಿಂತಿದ್ದು, ಪರಿಸ್ಥಿತಿ ವಿಕೋಪ ಹೋಗಲು ಕಾರಣವಾಗಿದೆ. ಇದೀಗ ಪ್ರತಿಭಟನಕಾರರನ್ನು ನಿಯಂತ್ರಿಸಲು ಹೆಚ್ಚುವರಿ ಪಡೆ ನಿಯೋಜಿಸಲಾಗಿದೆ.
ಕಳೆದ 15 ವರ್ಷದಿಂದ ಶೇಕ್ ಹಸಿನಾ ಬಾಂಗ್ಲಾದೇಶ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಬಾಂಗ್ಲಾದೇಶದಲ್ಲಿ ಹಣದುಬ್ಬರದಿಂದ ಜನಸಾಮಾನ್ಯರು ಪರಿಸ್ಥಿತಿ ಆತಂಕಕ್ಕೆ ತಳ್ಳಲ್ಪಟ್ಟಿದೆ. ಹಸೀನಾ ಆಡಳಿತದಲ್ಲಿ ಭ್ರಷ್ಟಾಚಾರ, ಮಾನವ ಹಕ್ಕಗಳ ಉಲ್ಲಂಘನೆ ಅತೀಯಾಗಿದೆ ಎಂದು ಆರೋಪಿಸಿ ಜಮಾತ್ ಇ ಇಸ್ಲಾಮಿ ಪಕ್ಷ ಪ್ರತಿಭಟನೆ ನಡೆಸುತ್ತಿದೆ. ಬಾಂಗ್ಲಾದೇಶದ ಮೂಲೆ ಮೂಲೆಯಿಂದ ವಿಪಕ್ಷದ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಬಾಂಗ್ಲಾದಲ್ಲಿ ಭೀಕರ ರೈಲು ಅಪಘಾತ, 15 ಸಾವು 100ಕ್ಕೂ ಹೆಚ್ಚು ಮಂದಿಗೆ ಗಾಯ!
ಪ್ರತಿಭಟನಾಕಾರರು ಬಾಂಗ್ಲಾದೇಶ ಪ್ರಧಾನಿ ಕಾರ್ಯಾಲಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನವನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಇತ್ತ ಪ್ರತಿಪಕ್ಷ ಪ್ರತಿಭಟನೆ ತೀವ್ರಗೊಳಿಸಿದೆ. ಇದೀಗ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮೂರೇ ತಿಂಗಳಿಗೆ ಬಾಂಗ್ಲಾದೇಶದಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ಪ್ರತಿಪಕ್ಷ ಮತಕ್ರೋಢಿಕರಣಕ್ಕೆ ಮುಂದಾಗಿದೆ. ಇದೇ ವೇಳೆ ನ್ಯಾಯಸಮ್ಮತ ಚುನಾವಣೆಗೆ ಆಗ್ರಹಗಳು ವ್ಯಕ್ತವಾಗಿದೆ. ಪ್ರತಿಭಟನಕಾರರು ರಸ್ತೆ, ರೈಲು ತಡೆ ನಡೆಸಿದ್ದಾರೆ. ಹಲವು ರಸ್ತೆಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಶೇಕ್ ಹಸೀನಾ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯ ಮಾಡಿದ್ದಾರೆ.
ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನಲ್ಲಿ ಮಾರಾಮಾರಿ, 6 ಮಂದಿಗೆ ಗಾಯ, ಟೂರ್ನಿ ರದ್ದು!
ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಕಾರಣ ಹಲವು ಪೊಲೀಸರು ಗಾಯಗೊಂಡಿದ್ದಾರೆ. 3000ಕ್ಕೂ ಹೆಚ್ಚು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಟ್ ಮುರಿದು ಒಳನುಗ್ಗಿದ್ದಾರೆ. ಈಗಾಗಲೇ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಹಸೀನಾ ತಕ್ಷಣವೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಪ್ರತಪಕ್ಷ ನಾಯಕ ಎಚ್ಚರಿಕೆ ನೀಡಿದ್ದಾರೆ.