ಬಾಂಗ್ಲಾದಲ್ಲಿ ಭೀಕರ ರೈಲು ಅಪಘಾತ, 15 ಸಾವು 100ಕ್ಕೂ ಹೆಚ್ಚು ಮಂದಿಗೆ ಗಾಯ!
ಬಾಂಗ್ಲಾದೇಶದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಸ್ಥಳದಲ್ಲೇ 15 ಮಂದಿ ಮೃತಪಟ್ಟಿದ್ದರೆ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ.
ಢಾಕಾ(ಅ.23) ಬಾಂಗ್ಲಾದೇಶ ರಾಜಧಾನಿಯಿಂದ 80 ಕಿಲೋಮೀಟರ್ ದೂರದ ಭೈರಬ್ ವಲಯದಲ್ಲಿ ಭೀಕರ ರೈಲು ದುರಂತ ಸಂಭವಿಸಿದೆ. ಪ್ರಯಾಣಿಕ ರೈಲು ಹಾಗೂ ಸರಕು ಸಾಗಾಣೆ ರೈಲು ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಹಲವು ಬೋಗಿಗಳು ನಜ್ಜು ಗುಜ್ಜಾಗಿದ್ದರೆ, ಮತ್ತೆ ಹಲವು ಬೋಗಿಗಳು ಹಳಿ ತಪ್ಪಿದೆ. ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು ಬೋಗಿಗಳಿಂದ ಪ್ರಯಾಣಿಕರ ರಕ್ಷಿಸುವ ಕೆಲಸ ಮುಂದುವರಿದಿದೆ. ಈಗಾಗಲೇ 15 ಪ್ರಯಾಣಿಕರ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. 100ಕ್ಕೂ ಹೆಚ್ಚು ಗಾಯಾಳಾಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು, ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯನಿರತವಾಗಿದೆ. ಸ್ಥಳೀಯರು ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರೈಲು ದುರಂತ ಇದು ಎಂದು ಹೇಳಲಾಗುತ್ತಿದೆ. ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರೈಲಿಗೆ ಸರಕು ಸಾಗಣೆ ರೈಲು ಡಿಕ್ಕಿಯಾಗಿದೆ. ಇಂದು(ಅ.23) ಸಂಜೆ ನಾಲ್ಕು ಗಂಟೆಗೆ ಅಪಘಾತ ಸಂಭವಿಸಿದೆ.