ಸಂಘರ್ಷಪೀಡಿತ ಬಾಂಗ್ಲಾದೇಶದಲ್ಲಿ ಮತಾಂಧರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಾರಣ ತೀವ್ರವಾಗಿ ಗಾಯಗೊಂಡಿದ್ದ ಹಿಂದೂ ವ್ಯಕ್ತಿ ಖೋಕೋನ್ ಚಂದ್ರ ದಾಸ್ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾರೆ.
ನವದೆಹಲಿ/ಢಾಕಾ: ಸಂಘರ್ಷಪೀಡಿತ ಬಾಂಗ್ಲಾದೇಶದಲ್ಲಿ ಮತಾಂಧರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಾರಣ ತೀವ್ರವಾಗಿ ಗಾಯಗೊಂಡಿದ್ದ ಹಿಂದೂ ವ್ಯಕ್ತಿ ಖೋಕೋನ್ ಚಂದ್ರ ದಾಸ್ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾರೆ.
ಕಳೆದ 3 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರಿಗೆ ಢಾಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ.ಈ ಮೂಲಕ ಕಳೆದ 2 ವಾರಗಳಲ್ಲಿ ಬಾಂಗ್ಲಾದಲ್ಲಿ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಹಿಂದೂಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಈ ಹಿಂದೆ ದೀಪು ಚಂದ್ರ ದಾಸ್, ಅಮೃತ್ ಮಂಡಲ್ ಹಾಗೂ ಬಜೇಂದ್ರ ಬಿಸ್ವಾಸ್ ಎಂಬುವವರನ್ನು ಮತಾಂಧರು ಹತ್ಯೆ ಮಾಡಿದ್ದರು.
ಏನಿದು ಪ್ರಕರಣ?:
ಬುಧವಾರ ಖೋಕೋನ್ ದಾಸ್ ತಮ್ಮ ಮೆಡಿಕಲ್ ಶಾಪ್ ಮುಚ್ಚಿ ಮನೆಗೆ ಹಿಂದಿರುಗುವಾಗ ಏಕಾಏಕಿ ಅಡ್ಡಗಟ್ಟಿದ ಕಿಡಿಗೇಡಿಗಳು ಅವರ ಮೇಲೆ ದಾಳಿ ನಡೆಸಿದ್ದರು. ಕೆಳಹೊಟ್ಟೆಗೆ ಚೂರಿ ಹಾಕಿ, ಮನಸೋ ಇಚ್ಛೆ ಥಳಿಸಿದ್ದಲ್ಲದೆ, ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ತಕ್ಷಣ ಸಮೀಪದ ನೀರಿನ ಕೊಳಕ್ಕೆ ಜಿಗಿದು ಖೋಕೋನ್ ಜೀವ ಉಳಿಸಿಕೊಂಡಿದ್ದರು. ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು.
ಪತ್ನಿ ಆಕ್ರಂದನ:
ಪತಿಯ ಮರಣದಿಂದ ಕಂಗೆಟ್ಟಿರುವ ಪತ್ನಿ ಸೀಮಾ ದಾಸ್, ‘ನಮಗೆ ಯಾವುದೇ ವಿಷಯದ ಬಗ್ಗೆ ಯಾರೊಂದಿಗೂ ವಿವಾದವಿಲ್ಲ. ನನ್ನ ಗಂಡನನ್ನು ಇದ್ದಕ್ಕಿದ್ದಂತೆ ಏಕೆ ಗುರಿಯಾಗಿಸಿಕೊಂಡರು ಎಂದು ಅರ್ಥವಾಗುತ್ತಿಲ್ಲ. ದಾಳಿ ಮಾಡಿದವರು ಮುಸ್ಲಿಮರು. ಬಾಂಗ್ಲಾ ಸರ್ಕಾರ ನಮ್ಮ ಕುಟುಂಬಕ್ಕೆ ಸಹಾಯ ಮಾಡಬೇಕು’ ಎಂದು ಕಣ್ಣೀರಾಗಿದ್ದಾರೆ. ಕಳೆದ ತಿಂಗಳು, ಭಾರತವಿರೋಧಿ ವಿದ್ಯಾರ್ಥಿ ನಾಯಕ ಉಸ್ಮಾನ್ ಹದಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅದರ ತರುವಾಯ ಬಾಂಗ್ಲಾದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಯುತ್ತಿದೆ.


