ಫ್ಲೋರಿಡಾಗೆ ತೆರಳುತ್ತಿದ್ದ ಸೌತ್‌ವೆಸ್ಟ್ ವಿಮಾನದಲ್ಲಿ, ಮುಸ್ಲಿಂ ಪ್ರಯಾಣಿಕರೊಬ್ಬರ ಫೋನ್‌ ರಿಂಗ್​ ಆಗಿದ್ದರಿಂದ ಆತಂಕ ಸೃಷ್ಟಿಯಾಯಿತು. ಈ ಘಟನೆಯಿಂದಾಗಿ ವಿಮಾನವನ್ನು ಅಟ್ಲಾಂಟಾದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಭದ್ರತಾ ತಪಾಸಣೆಯ ನಂತರ ಸತ್ಯಾಂಶ ಬಯಲಾಯಿತು.

ಮೊನ್ನೆ ಫ್ಲೋರಿಡಾಗೆ ತೆರಳುತ್ತಿದ್ದ ಸೌತ್‌ವೆಸ್ಟ್ ವಿಮಾನದಲ್ಲಿ ಪ್ರಯಾಣಿಕರು ಅತ್ಯಂತ ನೆಮ್ಮದಿಯಿಂದ ಪ್ರಯಾಣ ಮಾಡುತ್ತಿದ್ದರು. ಅವರವರ ಲೋಕದಲ್ಲಿ ಅವರು ಮುಳುಗಿದ್ದರು. ಆಗ ಪ್ರಯಾಣಿಕರಲ್ಲಿ ಒಬ್ಬರಾದ ಖಾನ್​ ಸಾಹೇಬ್ರ ಫೋನ್​ ರಿಂಗ್​ ಆಗಿದ್ದೇ ತಡ ವಿಮಾನವೇ ಗಡಗಡ ಅಂದೋಯ್ತು. ಎಚ್ಚರಿಕೆಯ ಗಂಟೆ ಮೊಳಗಿತು. ಪ್ರಯಾಣಿಕರು ಜೀವ ಭಯದಲ್ಲಿ ತತ್ತರಿಸಿ ಹೋದರು. ಇನ್ನೇನು ತಮ್ಮ ಆಯಸ್ಸು ಕೆಲವೇ ನಿಮಿಷ ಎಂದುಕೊಂಡರು. ವಿಮಾನ ಸಿಬ್ಬಂದಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತರು. ಇನ್ನೇನು ಅನಾಹುತ ಆಗಬಹುದು ಎಂದುಕೊಂಡ ಪೈಲೆಟ್​ ಸಂಬಂಧಿತ ಅಧಿಕಾರಿಗಳ ಸೂಚನೆಯ ಮೇರೆಗೆ ವಿಮಾನವನ್ನು ಅಟ್ಲಾಂಟಾಗೆ ತಿರುಗಿಸಲಾಯಿತು.

ತಮ್ಮವರನ್ನೆಲ್ಲಾ ಕೊನೆಯದಾಗಿ ನೆನೆದ ಪ್ರಯಾಣಿಕರು!

ಮಾರ್ಚ್ 6 ರಂದು ನ್ಯಾಶ್ವಿಲ್ಲೆಯಿಂದ ಹೊರಟು ಫ್ಲೋರಿಡಾದ ಫೋರ್ಟ್ ಲಾಡರ್‌ಡೇಲ್-ಹಾಲಿವುಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಸೌತ್‌ವೆಸ್ಟ್ ಏರ್‌ಲೈನ್ಸ್ ಫ್ಲೈಟ್ 2094 ನಲ್ಲಿ ಈ ಘಟನೆ ಸಂಭವಿಸಿದೆ. ಮುಸ್ಲಿಂ ವ್ಯಕ್ತಿಯೊಬ್ಬರ ಫೋನ್​ ರಿಂಗ್​ ಆಗುತ್ತಿದ್ದಂತೆಯೇ, ಇವೆಲ್ಲಾ ಘಟನೆಗಳು ಕ್ಷಣ ಮಾತ್ರದಲ್ಲಿ ನಡೆದು ಹೋಯಿತು. ಸಿಬ್ಬಂದಿ ತುರ್ತು ಸೂಚನೆಗಳನ್ನು ನೀಡುತ್ತಿದ್ದಂತೆ ವಿಮಾನ ತನ್ನ ದಿಕ್ಕನ್ನೇ ಬದಲಿಸಿ ಅಟ್ಲಾಂಟಾದಲ್ಲಿ ಲ್ಯಾಂಡ್​ ಆಯಿತು. ಅಲ್ಲಿಗೆ ಹೋಗುವವರೆಗೆ ತಮ್ಮ ಪ್ರಾಣವೇ ಇರುವುದಿಲ್ಲ ಎಂದುಕೊಂಡು ತಾವು ನಂಬಿರುವ ದೇವರನ್ನೆಲ್ಲಾ ನೆನಪಿಸಿಕೊಳ್ಳುತ್ತಾ, ತಮ್ಮ ಮನೆಯವರನ್ನೆಲ್ಲಾ ಕೊನೆಯ ಬಾರಿ ನೆನಪಿಸಿಕೊಂಡು ಕಣ್ಣೀರಾಗುತ್ತಿದ್ದರು ಪ್ರಯಾಣಿಕರು.

ಅಟ್ಲಾಂಟಾದಲ್ಲಿ ವಿಮಾನ ಇಳಿಯುತ್ತಿದ್ದಂತೆಯೇ, ಎಲ್ಲರೂ ಓಡೋಡಿ ಜೀವವನ್ನು ಉಳಿಸಿದ ದೇವರಿಗೆ ಧನ್ಯವಾದ ಸಲ್ಲಿಸುತ್ತಿದ್ದರು. ರಿಂಗ್​ ಆಗಿದ್ದ ವ್ಯಕ್ತಿಯ ಮಾತ್ರ ಬಹುಶಃ ಏನಾಯಿತು ಎಂದೇ ತಿಳಿದಿರಲಿಕ್ಕಿಲ್ಲ. ಕೊನೆಗೆ ಭದ್ರತಾ ಸಿಬ್ಬಂದಿ ಬಂದು ಪರಿಸ್ಥಿತಿ ಅವಲೋಕಿಸಿದಾಗ ಅಲ್ಲಿ ಆಗಿದ್ದೇ ಬೇರೆ!

ಅಷ್ಟಕ್ಕೂ ಆಗಿದ್ದೇನು?

ಮುಸ್ಲಿಂ ಪ್ರಯಾಣಿಕರೊಬ್ಬರು ಪ್ರಾರ್ಥನೆಗಾಗಿ ಫೋನ್​ನಲ್ಲಿ ಅಲಾರಂ ಇಟ್ಟುಕೊಂಡಿದ್ದರು. ಅವರ ಪ್ರಾರ್ಥನಾ ಸಮಯದಲ್ಲಿ ಅಲಾರಾಂ ಗಂಟೆ ಅದರದ್ದೇ ಆದ ರೀತಿಯಲ್ಲಿ ಬಾರಿಸಿತ್ತು ಅಷ್ಟೇ. ಆದರೆ, ಆ ಆಲಾರಾಂನಲ್ಲಿ ಬಂದ ದನಿಯನ್ನು ಕೇಳಿ ಬಾಂಬ್​ ಬ್ಲಾಸ್ಟ್​ ಆಗುತ್ತದೆ ಎಂದೇ ಆ ಕ್ಷಣದಲ್ಲಿ ಎಲ್ಲರೂ ಅಂದುಕೊಂಡು ಬಿಟ್ಟರು. ಅವರನ್ನು ಭಯೋತ್ಪಾದಕರು ಎಂದು ಸಹ ಪ್ರಯಾಣಿಕರು ಅಂದುಕೊಂಡು ಕೂಗಾಟ, ಚೀರಾಟ ಎಲ್ಲವೂ ಶುರುವಾಗಿ, ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.

ಸತ್ಯ ಬಹಿರಂಗ- ಆಗಿದ್ದೇ ಬೇರೆ!

ವಿಮಾನ ಟೇಕ್ ಆಫ್ ಆದ ಸುಮಾರು 30 ನಿಮಿಷಗಳ ನಂತರ, ಈ ಘಟನೆ ನಡೆಯಿತು. ಕೊನೆಗೆ ವಿಮಾನವನ್ನು ತಿರುಗಿಸಿ ಅಲ್ಲಿ ಪ್ರಯಾಣಿಕರನ್ನು ಇಳಿಸಲಾಯಿತು. ಅಷ್ಟರಲ್ಲಿಯೇ ಬಂದ ಭದ್ರತಾ ಸಿಬ್ಬಂದಿ, ಪ್ರಯಾಣಿಕರು ತಮ್ಮ ತಲೆಗಳನ್ನು ತಗ್ಗಿಸಲು ಮತ್ತು ಕೈಗಳನ್ನು ಮೇಲಕ್ಕೆತ್ತಲು ಘೋಷಿಸಿದರು. ಆ ಬಾಂಬ್​ ಇಟ್ಟುಕೊಂಡವರು ಯಾರು ಎನ್ನುವ ತಪಾಸಣೆ ಅಲ್ಲಿ ನಡೆಯಿತು. ಕೊನೆಗೆ ಇದು ಪ್ರಾರ್ಥನೆಯ ಅಲಾರಾಂ ಅಷ್ಟೇ ಎನ್ನುವುದು ತನಿಖೆಯಿಂದ ತಿಳಿದ ಬಳಿಕ, ಹೀಗೆ ತೊಂದರೆ ಸೃಷ್ಟಿಸಿದ್ದಕ್ಕೆ ಆ ವ್ಯಕ್ತಿಯನ್ನು ಕೆಳಕ್ಕೆ ಇಳಿಸಲಾಯಿತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಂತೂ ಪ್ರಯಾಣಿಕರು ಥ್ಯಾಂಕ್​ ಗಾಡ್​ ಎಂದು ಹೇಳಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು.