ಲಾಂಚ್ ಆಗಲು ಗಂಟೆಗಳಿರುವಾಗ ಸ್ಥಗಿತಗೊಂಡ ಸುನೀತಾ ವಿಲಿಯಮ್ಸ್ 3ನೇ ಗಗನಯಾತ್ರೆ
ಈಗಾಗಲೇ ಎರಡು ಬಾರಿ ಗಗನಯಾತ್ರೆ ನಡೆಸಿದ ಸುನೀತಾ ವಿಲಿಯಮ್ಸ್ ಇಂದು ಮತ್ತೆ ಮೂರನೇ ಬಾರಿ ಗಗನಯಾತ್ರೆ ಮಾಡುವುದಕ್ಕೆ ಸಮಯ ನಿಶ್ಚಯವಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಂದು ಮುಂಜಾನೆ ಭಾರತೀಯ ಕಾಲಮಾನ ಬೆಳಗ್ಗೆ 8.04ಕ್ಕೆ ನೌಕೆ ಉಡ್ಡಯನ ಕೈಗೊಳ್ಳಬೇಕಾಗಿತ್ತು
ಫ್ಲೋರಿಡಾ: ಈಗಾಗಲೇ ಎರಡು ಬಾರಿ ಗಗನಯಾತ್ರೆ ನಡೆಸಿದ ಸುನೀತಾ ವಿಲಿಯಮ್ಸ್ ಇಂದು ಮತ್ತೆ ಮೂರನೇ ಬಾರಿ ಗಗನಯಾತ್ರೆ ಮಾಡುವುದಕ್ಕೆ ಸಮಯ ನಿಶ್ಚಯವಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಂದು ಮುಂಜಾನೆ ಭಾರತೀಯ ಕಾಲಮಾನ ಬೆಳಗ್ಗೆ 8.04ಕ್ಕೆ ನೌಕೆ ಉಡ್ಡಯನ ಕೈಗೊಳ್ಳಬೇಕಾಗಿತ್ತು. ಆದರೆ ಸುನೀತಾ ವಿಲಿಯಮ್ಸ್ ತೆರಳಬೇಕಿದ್ದ ಗಗನಯಾನ ನೌಕೆ ಉಡ್ಡಾವಣೆಗೊಳ್ಳುವುದಕ್ಕೆ ಗಂಟೆಗಳಿರುವಾಗ ಈ ಯೋಜನೆ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. ಒಂದು ವೇಳೆ ಇಂದು ಮುಂಜಾನೆ ಸುನೀತಾ ವಿಲಿಯಮ್ಸ್ ತೆರಳಬೇಕಿದ್ದ ನೌಕೆ ಉಡ್ಡಾವಣೆಗೊಂಡಿದ್ದರೆ, 3ನೇ ಬಾರಿ ಗಗನಯಾತ್ರೆ ಕೈಗೊಂಡ ಮೊದಲ ಮಹಿಳೆ ಎಂಬ ಇತಿಹಾಸ ಸೃಷ್ಟಿಸುತ್ತಿದ್ದರು. ಇದರ ಜೊತೆಗೆ ಅಮೆರಿಕಾದ ಹೊಸ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗುತ್ತಿದ್ದರು.
ಸುನಿತಾ ವಿಲಿಯಮ್ಸ್ ಗಗನಯಾತ್ರೆ ಕೈಗೊಳ್ಳಬೇಕಿದ್ದ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊನೆಕ್ಷಣದಲ್ಲಿ ಈ ಯಾತ್ರೆ ಸ್ಥಗಿತಗೊಂಡಿದ್ದು, ಈ ಯಾತ್ರೆಗೆ ಹೊಸ ದಿನಾಂಕವನ್ನು ಮುಂದಿನ ದಿನಗಳಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಬಾಹ್ಯಾಕಾಶಕ್ಕೆ ಹಾರಲು ಬಯಸುವ ಅನೇಕ ಮಹಿಳೆಯರ ಪಾಲಿಗೆ ಸುನಿತಾ ವಿಲಿಯಮ್ಸ್ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅಮೆರಿಕಾದ ಹೊಚ್ಚ ಹೊಸ ಬಾಹ್ಯಕಾಶ ನೌಕೆಯಲ್ಲಿ ಅವರು ಇಂದು ನಭಕ್ಕೆ ಹಾರಾಬೇಕಿತ್ತು. ಆದರೆ ತಾಂತ್ರಿಕ ದೋಷದ ಕಾರಣದಿಂದ ಈ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆ.
ಭಾರತದ ಮಾನವಸಹಿತ ಗಗನಯಾತ್ರೆ: ಮಹಿಳೆಯರಿಗೆ ಏಕಿಲ್ಲ ಉಡ್ಡಯನ ಅವಕಾಶ?
ಇನ್ನೇನು ಲಾಂಚ್ ಆಗುವುದಕ್ಕೆ 90 ನಿಮಿಷಗಳ ಮೊದಲು, ಅಟ್ಲಾಸ್ ವಿ ರಾಕೆಟ್‌ನ ಉಡಾವಣೆಯನ್ನು ರದ್ದುಗೊಳಿಸಲಾಯಿತು. ಇದಕ್ಕೆ ಕಾರಣ ನೀಡಿರುವ ನಾಸಾ ಆಮ್ಲಜನಕ ಪರಿಹಾರ ಕವಾಟದಲ್ಲಿ ಹೆಸರಿಗೆ ಮಾತ್ರ ಎಂಬಂತಹ ಸ್ಥಿತಿಯಿದೆ ಎಂದು ಘೋಷಿಸಿತು, ಇದು ಮುಂದೂಡಿಕೆಗೆ ಕಾರಣವಾಯಿತು. ಹೀಗಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಟಾರ್‌ಲೈನರ್ ಅನ್ನು ಹಾರಿಸಬೇಕಿದ್ದ ಸುನಿತಾ ವಿಲಿಯಮ್ಸ್ ಮತ್ತು ನಾಸಾದ ಬ್ಯಾರಿ ವಿಲ್ಮೋರ್ ಅವರು ಬಾಹ್ಯಾಕಾಶ ನೌಕೆಯಿಂದ ಸುರಕ್ಷಿತವಾಗಿ ಹೊರಗೆ ಬಂದರು. ಇದು ಸುನೀತಾ ವಿಲಿಯಮ್ಸ್ ಅವರ ಪಾಲಿಗೆ 3ನೇ ಬಾಹ್ಯಾಕಾಶ ಯಾನ ಆಗಿದ್ದು, ಭಾರತ ಮೂಲದ ಸುನೀತಾ ವಿಲಿಯಮ್ಸ್ ಈಗಾಗಲೇ 322 ದಿನಗಳನ್ನು ಈ ಹಿಂದಿನ ಯಾತ್ರೆಗಳಲ್ಲಿ ಬಾಹ್ಯಾಕಾಶ ಕೇಂದ್ರಗಳಲ್ಲಿ ಕಳೆದಿದ್ದರು.
ಈ ಮೂಲಕ ಬಾಹ್ಯಾಕಾಶದಲ್ಲಿ ಅತೀ ಹೆಚ್ಚು ಸಮಯ ಕಳೆದ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಪೆಗ್ಗಿ ವಿಟ್ಸನ್ ಅವರ ದಾಖಲೆಯನ್ನು ಸುನಿತಾ ವಿಲಿಯಮ್ಸ್ ಮುರಿದಿದ್ದಾರೆ. 59 ವರ್ಷದ ಸುನಿತಾ ವಿಲಿಯಮ್ಸ್ ಡಿಸೆಂಬರ್ 9, 2006 ರಂದು ತಮ್ಮ ಮೊದಲ ಬಾಹ್ಯಾಕಾಶ ಯಾನವನ್ನು ಕೈಗೊಂಡಿದ್ದರು. 2006ರ ಡಿಸೆಂಬರ್‌ನಲ್ಲಿ ತೆರಳಿದ ಇವರು 2007ರ ಜೂನ್‌ವರೆಗೂ ಅಲ್ಲೇ ಇದ್ದರು. ಅಲ್ಲಿ 29 ಗಂಟೆಗಳು ಮತ್ತು 17 ನಿಮಿಷಗಳ ನಾಲ್ಕು ಬಾಹ್ಯಾಕಾಶ ನಡಿಗೆಗಳನ್ನು ಮಾಡುವ ಮೂಲಕ ಅತೀ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಇಂದು ಮತ್ತೊಮ್ಮೆ ಸುನೀತಾ ವಿಲಿಯಮ್ಸ್ ಗಗನಯಾತ್ರೆ: ಜೊತೆಗಿರಲಿದೆ ಗಣೇಶನ ವಿಗ್ರಹ, ಭಗವದ್ಗೀತೆ !
ಹೊಸ ನೌಕೆಯಲ್ಲಿ ಪ್ರಯಾಣಿಸುವ ಬಗ್ಗೆ ಸ್ವಲ್ಪ ನರ್ವಸ್ ಆಗಿರುವ ಬಗ್ಗೆಯೂ ಸುನಿತಾ ಒಪ್ಪಿಕೊಂಡಿದ್ದರು. ಆದರೂ ಬಾಹ್ಯಾಕಾಶ ನೌಕೆಯಲ್ಲಿ ಹಾರುವ ಬಗ್ಗೆ ತನಗೆ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ಇದರ ಜೊತೆಗೆ ಬೋಯಿಂಗ್‌ನ ಇಂಜಿನಿಯರ್‌ಗಳೊಂದಿಗೆ ಸೇರಿಕೊಂಡು ಸ್ಟಾರ್‌ಲೈನರ್ ಅನ್ನು ವಿನ್ಯಾಸಗೊಳಿಸಲು ಅವರು ಸಹಾಯ ಮಾಡಿದರು.