ಪಹಲ್ಗಾಂ ನರಮೇಧದ ಮೂಲಕ ಭಾರತೀಯರ ತೀವ್ರ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಸೇನೆ ಮುಖ್ಯಸ್ಥ ಜ| ಅಸೀಂ ಮುನೀರ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಔತಣ ಬಡಿಸಿದ್ದಾರೆ.
ವಾಷಿಂಗ್ಟನ್ (ಜೂ.19): ಪಹಲ್ಗಾಂ ನರಮೇಧದ ಮೂಲಕ ಭಾರತೀಯರ ತೀವ್ರ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಸೇನೆ ಮುಖ್ಯಸ್ಥ ಜ| ಅಸೀಂ ಮುನೀರ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಔತಣ ಬಡಿಸಿದ್ದಾರೆ. ಇದು ಭಾರತದಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಅಮೆರಿಕ ಕಾಲಮಾನ ಬುಧವಾರ ಮಧ್ಯಾಹ್ನ 1 ಗಂಟೆಗೆ (ಭಾರತದ ಕಾಲಮಾನ ರಾತ್ರಿ 10.30ಕ್ಕೆ) ವೈಟ್‌ಹೌಸ್‌ನ ಕ್ಯಾಬಿನೆಟ್ ರೂಂನಲ್ಲಿ ಈ ಔತಣ ನಡೆಯಿತು. ಈ ಬಗ್ಗೆ ಹೇಳಿಕೆ ನೀಡಿದ ಶ್ವೇತಭವನದ ವಕ್ತಾರೆ ಅನ್ನಾ ಕೆಲ್ಲಿ 'ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಪರಮಾಣು ಸಂಘರ್ಷವನ್ನು ತಡೆಗಟ್ಟಿದ ಕೀರ್ತಿ ಟ್ರಂಪ್ ಅವರಿಗೆ ಸಲ್ಲುತ್ತದೆ.
ಹೀಗಾಗಿ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಮುನೀರ್ ಕರೆ ನೀಡಿದ್ದಾರೆ' ಎಂದರು. ಪಾಕಿಸ್ತಾನದಲ್ಲಿ ತನ್ನ ಅಣ್ವಸ್ತ್ರಗಳನ್ನು ಅಮೆರಿಕ ಬಚ್ಚಿಟ್ಟಿತ್ತು. ಇತ್ತೀಚಿನ ಆಪರೇಷನ್ ಸಿಂದೂರ ವೇಳೆ ಭಾರತವು ಪಾಕ್‌ನ ಆ ಅಣು ನೆಲೆಗಳ ಮೇಲೆ ದಾಳಿ ಮಾಡಿತ್ತು ಎನ್ನಲಾಗಿತ್ತು. ಈ ಬಗ್ಗೆ ಟ್ರಂಪ್ ಅವರು ಮುನೀರ್ ಬಳಿ ಭೋಜನಕೂಟದ ವೇಳೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಜೂ.14ರಂದು ನಡೆದ ಸೇನಾ ಪರೇಡ್‌ನಲ್ಲಿ ಭಾಗವಹಿಸಲು ಮುನೀರ್ ಅಮೆರಿಕಕ್ಕೆ ಹೋಗಿದ್ದರು. ತನ್ನ ಬದ್ಧ ವೈರಿಗೆ ನೀಡಲಾದ ಈ ಸಮ್ಮಾನವು, ಭಾರತದ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ಇದನ್ನು ತೀವ್ರವಾಗಿ ಟೀಕಿಸಿದ್ದು, ಇದು ಮೋದಿ ರಾಜತಾಂತ್ರಿಕತೆಯ ವೈಫಲ್ಯ ಎಂದಿದೆ.
ಅದಕ್ಕಿಂತ ದೊಡ್ಡದು ಬೇರೆ ಕಾದಿದೆ: ಇಸ್ರೇಲ್-ಇರಾನ್ ಯುದ್ಧದ ನಡುವೆಯೇ ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರ್ಧಕ್ಕೇ ಶೃಂಗ ತೊರೆದು ತವರಿಗೆ ವಾಪಸಾಗಿದ್ದಾರೆ. ಅಲ್ಲದೆ, ‘ಟೆಹ್ರಾನ್ ನಗರವನ್ನು ಜನರು ಕೂಡಲೇ ತೊರೆಯಬೇಕು. ಯುದ್ಧಕ್ಕೆ ಅಂತ್ಯ ಹಾಡಬೇಕಿದೆ. ಆದರೆ ಕದನ ವಿರಾಮದ ಮೂಲಕವಲ್ಲ. ನಾನು ಜಿ7 ಶೃಂಗದಿಂದ ಅರ್ಧಕ್ಕೇ ನಿರ್ಗಮಿಸುತ್ತಿರುವುದು ಕದನವಿರಾಮಕ್ಕಲ್ಲ. ಅದಕ್ಕಿಂತ ದೊಡ್ಡ ಕಾರಣವಿದೆ’ ಎಂದಿದ್ದಾರೆ. ಇದಲ್ಲದೆ, ಇದೇ ವೇಳೆ, ಇರಾನ್ ಸರ್ವೋಚ್ಚ ನಾಯಕ ಖಮೇನಿ ಅಡಗಿರುವ ಜಾಗ ಗೊತ್ತು. ಆದರೆ ಅವರನ್ನು ಸದ್ಯಕ್ಕೆ ಹತ್ಯೆ ಮಾಡುವ ಯಾವುದೇ ಉದ್ದೇಶವಿಲ್ಲ.
ಆದರೆ ಯುದ್ಧ ಬಿಟ್ಟು ಇರಾನ್ ಶರಣಾಗಬೇಕು’ಎಂದಿದ್ದಾರೆ. ಟ್ರಂಪ್ ಅವರ ಈ ಹೇಳಿಕೆ ಬಳಿಕ ಅಮೆರಿಕದ ಯುದ್ಧನೌಕೆಗಳು ಹಾಗೂ ಯುದ್ಧವಿಮಾನಗಳು ಮಧ್ಯಪ್ರಾಚ್ಯದತ್ತ ದೌಡಾಯಿಸುತ್ತಿವೆ ಎಂದು ವರದಿಗಳು ಹೇಳಿವೆ. ಅಮೆರಿಕದ ನೆರವು ಪಡೆದು ಇರಾನ್ ಮೇಲೆ ಇಸ್ರೇಲ್ ಬಹುದೊಡ್ಡ ದಾಳಿ ನಡೆಸಹುದು. ಬಳಿಕ ಯುದ್ಧ ಅಂತ್ಯವಾಗಬಹುದು ಎಂದು ಟ್ರಂಪ್ ಸುಳುಹು ನೀಡಿದ್ದಾರೆ ಖಮೇನಿ ಹತ್ಯೆಗೆ ಯತ್ನಿಸಿದ್ದ ಇಸ್ರೇಲ್‌ಗೆ ಟ್ರಂಪ್ ಇತ್ತೀಚೆಗೆ ತಡೆ ಒಡ್ಡಿದ ವಿಷಯ ಬಹಿರಂಗವಾಗಿತ್ತು ಹಾಗೂ ಯುದ್ಧದಲ್ಲಿ ಇರಾನ್ ಸೋಲಲಿದೆ ಎಂದು ಟ್ರಂಪ್ ಹೇಳಿದ್ದರು. ಇದಾದ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಮೇನಿ ಹತ್ಯೆ ಮೂಲಕ ಯುದ್ಧ ಅಂತ್ಯವಾಗಲಿದೆ ಎಂದಿದ್ದರು.
