ಇಸ್ರೇಲ್- ಇರಾನ್ ಸಮರಕ್ಕೆ ಈಗ ಅಮೆರಿಕದ ಮಧ್ಯಪ್ರವೇಶದ ಸುಳಿವು ಸಿಕ್ಕಿದೆ. ಯುದ್ಧ ಬಿಟ್ಟು ಬೇಷರತ್ ಶರಣಾಗಿ ಎಂಬ ಅಧ್ಯಕ್ಷ ಟ್ರಂಪ್ ಸೂಚನೆಯನ್ನು ಇರಾನ್‌ನ ಪರಮೋಚ್ಛ ಧಾರ್ಮಿಕ ನಾಯಕ ಖಮೇನಿ ತಳ್ಳಿಹಾಕಿದ್ದಾರೆ.
ಇಸ್ರೇಲ್- ಇರಾನ್ ಸಮರಕ್ಕೆ ಈಗ ಅಮೆರಿಕದ ಮಧ್ಯಪ್ರವೇಶದ ಸುಳಿವು ಸಿಕ್ಕಿದೆ. ಯುದ್ಧ ಬಿಟ್ಟು ಬೇಷರತ್ ಶರಣಾಗಿ ಎಂಬ ಅಧ್ಯಕ್ಷ ಟ್ರಂಪ್ ಸೂಚನೆಯನ್ನು ಇರಾನ್‌ನ ಪರಮೋಚ್ಛ ಧಾರ್ಮಿಕ ನಾಯಕ ಖಮೇನಿ ತಳ್ಳಿಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಟ್ರಂಪ್, ಮುಂದಿನ ವಾರ ಬಹುದೊಡ್ಡ ಬೆಳವಣಿಗೆ ಆಗಲಿದೆ.
ನಾನು ಏನು ಮಾಡ್ತೀನೋ ನನಗೇ ಗೊತ್ತಿಲ್ಲ. ಖಮೇನಿಗೆ ಗುಡ್‌ಲಕ್ ಎಂದಿದ್ದಾರೆ. ಖಮೇನಿ ಎಲ್ಲಿದ್ದಾರೆ ನಮಗೆ ಗೊತ್ತಿದೆ. ಆದರೆ ಸದ್ಯಕ್ಕೆ ಅವರನ್ನು ಹತ್ಯೆ ಮಾಡಲ್ಲ ಎಂದು ಹೇಳಿದ ಮಾರನೇ ದಿನವೇ ಟ್ರಂಪ್ ನೀಡಿದ ಈ ಹೇಳಿಕೆ, ಈ ಹಿಂದೆ ಇರಾಕ್ ಸರ್ವಾಧಿಕಾರಿ ಅಧ್ಯಕ್ಷ ಸದ್ದಾಂ ಹುಸೇನ್‌ಗೆ ಆದ ಗತಿಯೇ ಖಮೇನಿಗೂ ಆಗಲಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಮುಂದಿನ ವಾರ ನಾನೇನು ಮಾಡ್ತೀನೋ ನಂಗೆ ಗೊತ್ತಿಲ್ಲ: ತಮ್ಮ ಶರಣಾಗತಿ ಗುಡುಗಿಗೆ ಬೆಲೆ ಕೊಡದೇ ತಿರುಗೇಟು ನೀಡಿರುವ ಇರಾನ್ ವಿರುದ್ಧ ಮತ್ತೆ ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಮುಂದಿನ ವಾರ ದೊಡ್ಡ ಘಟನಾವಳಿ ನಡೆಯಲಿದೆ. ಆದರೆ ಅದೇನೆಂದು ನನಗೇ ಗೊತ್ತಿಲ್ಲ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಮೂಲಕ ಇರಾನ್ ವಿರುದ್ಧ ದಾಳಿ ಮಾಡುತ್ತಿರುವ ಇಸ್ರೇಲ್‌ಗೆ ತಾವೂ ಸಾಥ್ ನೀಡುವ ಸುಳುಹು ನೀಡಿದ್ದಾರೆ.
ಬುಧವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಳೆದ ವಾರ ಇರಾನ್‌ನವರು ಡೀಲ್‌ಗೆ ಬಂದಿದ್ದರು. ಆದರೆ ಕಾಲ ಮೀರಿ ಹೋಗಿದೆ ಎಂದು ವಾಪಸ್ ಕಳಿಸಿದೆ. ಆ ವಾರಕ್ಕೂ ಈ ವಾರಕ್ಕೂ ತುಂಬಾ ವ್ಯತ್ಯಾಸವಿದೆ. ಮುಂದಿನ ವಾರ ಇನ್ನೂ ದೊಡ್ಡದಾಗಿರಲಿದೆ. ಆ ಅವಧಿ ಒಂದು ವಾರಕ್ಕಿಂತಲೂ ಕಡಿಮೆ ಇರಬಹುದು. ಆದರೆ ನಾನು ಏನು ಮಾಡಲಿದ್ದೇನೆಂದು ಯಾರಿಗೂ ತಿಳಿದಿಲ್ಲ. ನಾನು ಮಾಡಬಹುದು ಅಥವಾ ಮಾಡದೆಯೂ ಇರಬಹುದು’ ಎಂದರು. ಇರಾನ್ ಸಂಪೂರ್ಣ ಈಗ ರಕ್ಷಣಾರಹಿತವಾಗಿದೆ. ಅದಕ್ಕೆ ಯಾವುದೇ ವಾಯುರಕ್ಷಣೆ ಇಲ್ಲ’ ಎಂದೂ ಟ್ರಂಪ್ ನುಡಿದರು.
ಹೆದರುವವರಿಗೆ ಹೆದರಿಸಿ, ನಮಗೆ ಅಲ್ಲ : ಬೇಷರತ್ತಾಗಿ ಶರಣಾಗಬೇಕು' ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸ್ಪಷ್ಟ ತಿರುಗೇಟು ನೀಡಿರುವ ಇರಾನಿ ಸರ್ವೋಚ್ಚ ನಾಯಕ ಅಯ ತೊಲ್ಲಾ ಅಲಿ ಖಮೇನಿ, 'ಇರಾನ್ ಶರಣಾಗುವುದಿಲ್ಲ' ಎಂದಿದ್ದಾರೆ ಮತ್ತು ಯಾವುದೇ ಅಮೆರಿಕನ್ ಮಿಲಿಟರಿ ಹಸ್ತಕ್ಷೇಪವು ಸರಿಪಡಿಸಲಾಗದ ಹಾನಿಯೊಂದಿಗೆ ಕೊನೆಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ಇಸ್ರೇಲ್ ಜೊತೆಗಿನ ಸಂಘ ರ್ಷದಲ್ಲಿ ಇರಾನ್ ಬೇಷರತ್ತಾಗಿ ಶರಣಾಗತಿ ಆಗಬೇಕು ಎಂದು ಟ್ರಂಪ್ ಹೇಳಿದ್ದರು.
ಇದರ ಬಗ್ಗೆ ಬುಧವಾರ ಸರ್ಕಾರಿ ಟೀವಿ ಮೂಲಕ ಖಮೇನಿ ಸಂದೇಶ ನೀಡಿದ್ದು, ಈ 'ಹೇರಿಕೆಯುದ್ಧ'ದ ವಿರುದ್ಧ ಇರಾನ್ ದೃಢವಾಗಿ ನಿಲ್ಲುತ್ತದೆ. ಈ ದಾಳಿಯಲ್ಲಿ ಇಸ್ರೇಲ್ ಜತೆ ಕೈಜೋಡಿಸಿದರೆ ಅಮೆರಿಕಕ್ಕೂ ಸರಿಪಡಿಸಲಾಗದ ಭಾರೀ ಹಾನಿ ಮಾಡುತ್ತೇವೆ' ಎಂದಿದ್ದಾರೆ. 'ಇರಾನ್, ಇರಾನ್ ರಾಷ್ಟ್ರ ಮತ್ತು ಅದರ ಇತಿಹಾಸವನ್ನು ತಿಳಿದಿರುವ ಬುದ್ದಿವಂತ ಜನರು ಈ ರಾಷ್ಟ್ರದೊಂದಿಗೆ ಎಂದಿಗೂ ಬೆದರಿಕೆ ಭಾಷೆಯಲ್ಲಿ ಮಾತನಾಡುವುದಿಲ್ಲ. ಏಕೆಂದರೆ ಇರಾನ್ ರಾಷ್ಟ್ರವು ಶರಣಾಗುವುದಿಲ್ಲ ಮತ್ತು ಯಾವುದೇ ಅಮೆರಿಕನ್ ಮಿಲಿಟರಿ ಹಸ್ತಕ್ಷೇಪವು ನಿಸ್ಸಂದೇಹವಾಗಿ ಸರಿಪಡಿಸಲಾಗದ ಹಾನಿಯೊಂದಿಗೆ ಇರುತ್ತದೆ ಎಂದು ಅಮೆರಿಕನ್ನರು ತಿಳಿದಿರಬೇಕು' ಎಂದು ಅವರು ಎಚ್ಚರಿಸಿದ್ದಾರೆ.
'ಇಸ್ರೇಲಿಗಳ ಕಡೆಗೆ ಕರುಣೆ ತೋರಿಸಬಾರದು' ಎಂದೂ ಹೇಳಿದ ಅವರು, 'ಅಮೆರಿಕ ಅಧ್ಯಕ್ಷರು ನಮಗೆ ಬೆದರಿಕೆ ಹಾಕುತ್ತಾರೆ. ತಮ್ಮ ಅಸಂಬದ್ಧ ವಾಕ್ಚಾತುರ್ಯದಿಂದ, ಅವರು ಇರಾನಿನ ಜನರು ತನಗೆ ಶರಣಾಗಬೇಕೆಂದು ಒತ್ತಾಯಿಸುತ್ತಾರೆ. ಬೆದರಿಕೆಗೆ ಹೆದರುವವರ ವಿರುದ್ಧ ಅವರು ಬೆದರಿಕೆ ಹಾಕಬೇಕು. ಇರಾನ್ ರಾಷ್ಟ್ರವು ಅಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಈ ವಿಷಯದಲ್ಲಿ ಅಮೆರಿಕ ಪ್ರವೇಶಿಸುವುದು ಅದಕ್ಕೇ 100% ಹಾನಿ ಮಾಡಲಿದೆ ಎಂದಿದ್ದಾರೆ. ಆದರೆ ಖಮೇನಿ ಖುದ್ದಾಗಿ ಕಾಣಿಸಿಕೊಂಡು ಈ ಹೇಳಿಕೆ ನೀಡಿಲ್ಲ. ಬದಲಾಗಿ ಅವರ ಸಂದೇಶವನ್ನು ಓದಲಾಗಿದೆ. ಅವರಿಗೆ ಇಸ್ರೇಲ್‌ನಿಂದ ಜೀವಬೆದರಿಕೆ ಇರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ನೆತನ್ಯಾಹು ಸಿಂಹದ ಗುಡುಗು: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜ.12ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೆರುಸಲೆಮ್‌ನ ಪಶ್ಚಿಮ ಗೋಡೆಯ ಮೇಲೆ ಕೈಬರಹದ ಟಿಪ್ಪಣಿ ಬರೆದಿದ್ದು ಸುದ್ದಿಯಾಗಿದೆ. ಜನರು ದೊಡ್ಡ ಸಿಂಹದಂತೆ ಎದ್ದೇಳುತ್ತಾರೆ. ನಾನು ಬೇಟೆಯನ್ನು ತಿಂದು ಕೊಲ್ಲಲ್ಪಟ್ಟವರ ರಕ್ತವನ್ನು ಕುಡಿಯುವವರೆಗೂ ಮಲಗುವುದಿಲ್ಲ' ಎಂದು ಆ ಬರಹದಲ್ಲಿದೆ. ಇದು ಇರಾನ್‌ಗೆ ನೀಡಿದ ಸಂದೇಶವಾಗಿದೆ ಎನ್ನಲಾಗಿದೆ.


