ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಬುಧಾಬಿ ಭೇಟಿಯ ವೇಳೆ ಅವರನ್ನು ಸಾಂಪ್ರದಾಯಿಕ ಅಲ್-ಅಯ್ಯಲಾ ನೃತ್ಯದ ಮೂಲಕ ಸ್ವಾಗತಿಸಲಾಯಿತು.ಈ ನೃತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ನ್ಯೂಯಾರ್ಕ್‌: ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಲ್ಫ್ ರಾಷ್ಟ್ರ ಅಬುಧಾಬಿಗೆ ಭೇಟಿ ನೀಡಿದ ವೇಳೆ ಅಲ್ಲಿ ಅವರನ್ನು ಅಲ್ಲಿನ ನೃತ್ಯಗಾರ್ತಿಯರು ಸಂಪ್ರದಾಯಿಕ ನೃತ್ಯವಾದ ಅಲ್‌ ಅಯ್ಯಲಾ ಡಾನ್ಸ್‌ನ ಮೂಲಕ ಸ್ವಾಗತಿಸಿದ್ದರು. ಹೀಗಾಗಿ ಈ ಡಾನ್ಸ್ ವಿಶ್ವದೆಲ್ಲೆಡೆಯ ಗಮನ ಸೆಳೆಯಿತು ಹಾಗಿದ್ರೆ ಈ ಆಲ್ ಅಯ್ಯಲಾ ಡಾನ್ಸ್ ಅಂದ್ರೆ ಹೇಗಿರುತ್ತೆ ಅದರ ಹಿನ್ನೆಲೆ ಏನು ಅಂತ ನೋಡೋಣ ಬನ್ನಿ.

ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಲ್ಲಿನ ಅಧ್ಯಕ್ಷರ ಅರಮನೆಯಾದ ಕಸ್ರ್ ಅಲ್ ವತನ್‌ನಲ್ಲಿ ಸಾಂಪ್ರದಾಯಿಕ ಅಲ್-ಅಯ್ಯಲಾ ನೃತ್ಯದೊಂದಿಗೆ ಅಲ್ಲಿ ಸ್ವಾಗತಿಸಲಾಯಿತು. ಟ್ರಂಪ್ ಅವರನ್ನು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಬಹಳ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಸಾಂಪ್ರದಾಯಿಕ ಉಡುಪಿನಲ್ಲಿ ಅಲ್ ಅಯ್ಯಲಾ ನೃತ್ಯ ಮಾಡುವ ಮೂಲಕ ಟ್ರಂಪ್ ಅವರನ್ನು ನೃತ್ಯಗಾತಿಯರು ಸ್ವಾಗತಿಸಿದರು. ಈ ನೃತ್ಯದ ಭಾಗವಾಗಿ ಮಹಿಳೆಯರು ಲಯಬದ್ಧವಾಗಿ ತಮ್ಮ ಕೂದಲನ್ನು ತಿರುಗಿಸುತ್ತಿದ್ದರೆ, ಪುರುಷರು ಡ್ರಮ್‌ಗಳ ಬಡಿತಕ್ಕೆ ಅನುಗುಣವಾಗಿ ಸಾಲುಗಳಲ್ಲಿ ನಡೆದು ಹೋದರು.

ಈ ಸಾಂಸ್ಕೃತಿಕ ಪ್ರದರ್ಶನದಲ್ಲಿ ಮಹಿಳೆಯರು ಬಿಳಿ ನಿಲುವಂಗಿಗಳನ್ನು ಧರಿಸಿ ತಮ್ಮ ಉದ್ದನೆಯ ಕೂದಲನ್ನು ಲಯಬದ್ಧವಾಗಿ ಒಂದೇ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಡ್ರಮ್ ಬೀಟ್‌ಗೆ ತಕ್ಕಂತೆ ತಿರುಗಿಸಿದರು. ಇತ್ತ ಕತ್ತಿಯಂತಹ ಪರಿಕರಗಳನ್ನು ಹಿಡಿದ ಪುರುಷರು ಯುದ್ಧದ ದೃಶ್ಯವನ್ನು ಅನುಕರಿಸಿದರು. ಇದು ಟ್ರಂಪ್ ಅವರ ವಿಶಾಲವಾದ ಪ್ರಾದೇಶಿಕ ಪ್ರವಾಸದ ಭಾಗವಾದ ಈ ಭೇಟಿಯಲ್ಲಿ ರಾಜತಾಂತ್ರಿಕತೆ ಮತ್ತು ರಾಷ್ಟ್ರೀಯ ಗುರುತಿನ ಆಧಾರಸ್ತಂಭವಾಗಿ ತನ್ನ ಪರಂಪರೆಯನ್ನು ಪ್ರದರ್ಶಿಸುವುದಕ್ಕೆ ಯುಎಇಯ ಒತ್ತು ನೀಡುವುದನ್ನು ಸೂಚಿಸಿತು.

ಅಲ್-ಅಯ್ಯಲಾ ಎಂದರೇನು?
ಅಲ್-ಅಯ್ಯಲಾ ಎಂಬುದು ಓಮನ್ ಸುಲ್ತಾನೇಟ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಅಭ್ಯಾಸ ಮಾಡುವ ಸಾಂಪ್ರದಾಯಿಕ ನೃತ್ಯ ಪ್ರದರ್ಶನವಾಗಿದೆ. 2014 ರಲ್ಲಿ ಯುನೆಸ್ಕೋದಿಂದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಗುರುತಿಸಲ್ಪಟ್ಟ ಅಲ್-ಅಯ್ಯಲಾವು ಪಠಣ ಕಾವ್ಯವಾಗಿದ್ದು, ಡ್ರಮ್ ಸಂಗೀತ ಮತ್ತು ನೃತ್ಯವನ್ನು ಒಳಗೊಂಡಿರುತ್ತದೆ, ಇದು ಯುದ್ಧದ ದೃಶ್ಯವನ್ನು ಅನುಕರಿಸುತ್ತದೆ. ಸುಮಾರು 20 ಪುರುಷರ ಎರಡು ಸಾಲುಗಳಲ್ಲಿ ಪರಸ್ಪರ ಎದುರಾಗಿ, ಈಟಿಗಳು ಅಥವಾ ಕತ್ತಿಗಳ ಸೂಚಕವಾಗಿ ತೆಳುವಾದ ಬಿದಿರಿನ ಕೋಲುಗಳನ್ನು ಕೈಯಲ್ಲಿ ಹಿಡಿದಿಡುತ್ತಿದ್ದಾರೆ. ಇತ್ತ ಸಂಗೀತಗಾರರು ಸಾಲುಗಳ ನಡುವೆ ದೊಡ್ಡ ಮತ್ತು ಸಣ್ಣ ಡ್ರಮ್‌ಗಳು, ತಂಬೂರಿಗಳನ್ನು ನುಡಿಸುತ್ತಾರೆ. ಇತ್ತ ಹೆಣ್ಣುಮಕ್ಕಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಮುಂಭಾಗದಲ್ಲಿ ನಿಂತು, ತಮ್ಮ ಉದ್ದನೆಯ ಕೂದಲನ್ನು ಅಕ್ಕಪಕ್ಕಕ್ಕೆ ತಿರುಗಿಸುತ್ತಾರೆ. 

ಅಲ್-ಅಯ್ಯಲಾ ನೃತ್ಯವನ್ನು ಯಾವಾಗ ಪ್ರದರ್ಶಿಸುತ್ತಾರೆ?

ಅಲ್-ಅಯ್ಯಲಾ ನೃತ್ಯವನ್ನು ಸಾಂಪ್ರದಾಯಿಕವಾಗಿ ಒಮಾನ್ ಮತ್ತು ಯುಎಇಯಲ್ಲಿ ಮದುವೆಗಳು, ರಾಷ್ಟ್ರೀಯ ರಜಾದಿನಗಳು ಮತ್ತು ಇತರ ಹಬ್ಬದ ಸಂದರ್ಭಗಳಲ್ಲಿ ಪ್ರದರ್ಶಿಸಲಾಗುತ್ತದೆ. ಇದು ರಾಷ್ಟ್ರೀಯ ಗುರುತು ಮತ್ತು ಏಕತೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ, ವೈವಿಧ್ಯಮಯ ಹಿನ್ನೆಲೆ ಮತ್ತು ಹಲವು ವಯೋಮಾನದ ಪ್ರದರ್ಶಕರನ್ನು ಇದು ಒಟ್ಟುಗೂಡಿಸುತ್ತದೆ. ಸಾಮಾನ್ಯವಾಗಿ ಪ್ರಮುಖ ಪ್ರದರ್ಶಕನು ಇತರ ಪ್ರದರ್ಶಕರಿಗೆ ತರಬೇತಿ ನೀಡುವ ಮತ್ತು ಈ ಸಾಂಸ್ಕೃತಿಕ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ರವಾನಿಸುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾನೆ.

ಡೊನಾಲ್ಡ್ ಟ್ರಂಪ್ ಯುಎಇ ಭೇಟಿ ಏಕೆ?
ಅಧ್ಯಕ್ಷ ಟ್ರಂಪ್ ಅವರ ಯುಎಇ ಭೇಟಿಯು ಅವರ ಮಧ್ಯಪ್ರಾಚ್ಯ ಪ್ರವಾಸದ ಭಾಗವಾಗಿದೆ, ಈ ಭೇಟಿಯ ಭಾಗವಾಗಿ ಅವರು ಸೌದಿ ಅರೇಬಿಯಾ ಮತ್ತು ಕತಾರ್‌ಗೆ ಭೇಟಿ ನೀಡಿದರು. ಅಮೆರಿಕ ಮತ್ತು ಸೌದಿ ಅರೇಬಿಯಾ ಸುಮಾರು 142 ಬಿಲಿಯನ್ ಡಾಲರ್‌ ಮೌಲ್ಯದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ ಸೌದಿ ಅರೇಬಿಯಾವು ಯುಎಸ್‌ನಲ್ಲಿ $600 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಜೊತೆಗೆ ಕೃತಕ ಬುದ್ಧಿಮತ್ತೆಯ ಮೇಲಿನ ತಮ್ಮ ಸಹಕಾರವನ್ನು ಬಲಪಡಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.

Scroll to load tweet…