ಪಾಕ್ ಲೀಗ್ ಆತಿಥ್ಯಕ್ಕೆ ಯುಎಇ ನಿರಾಕರಿಸುವುದರ ಹಿಂದೆ ಜಯ್ ಶಾ ಪಾತ್ರ!
ಯುದ್ಧ ಪರಿಸ್ಥಿತಿಯಿಂದಾಗಿ ಪಾಕಿಸ್ತಾನ ತನ್ನ PSL ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ಯತ್ನಿಸಿತು, ಆದರೆ ಯುಎಇ ಆತಿಥ್ಯ ವಹಿಸಲು ನಿರಾಕರಿಸಿತು. ಈ ನಿರ್ಧಾರದ ಹಿಂದೆ ಬಿಸಿಸಿಐ ಮಾಜಿ ಕಾರ್ಯದರ್ಶಿ ಮತ್ತು ಐಸಿಸಿ ಮುಖ್ಯಸ್ಥ ಜಯ್ ಶಾ ಅವರ ಪ್ರಭಾವವಿದೆ ಎಂದು ವರದಿಯಾಗಿದೆ.

ದುಬೈ: ಯುದ್ಧ ಪರಿಸ್ಥಿತಿ ಕಾರಣಕ್ಕೆ ಶುಕ್ರವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಪಾಕ್ ಸೂಪರ್ ಲೀಗ್(ಪಿಎಸ್‌ಎಲ್) ಯುಎಇ ದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತು. ಆದರೆ ಆತಿಥ್ಯಕ್ಕೆ ಯುಎಇ ನಿರಾಕರಿಸಿದ್ದರಿಂದ ಟೂರ್ನಿಯನ್ನೇ ಮುಂದೂಡಲಾಗಿತ್ತು. ಇದರ ಹಿಂದೆ ಬಿಸಿಸಿಐ ಮಾಜಿ ಕಾರ್ಯದರ್ಶಿ, ಸದ್ಯ ಐಸಿಸಿ ಮುಖ್ಯಸ್ಥರಾಗಿರುವ ಜಯ್ ಶಾ ಪಾತ್ರವಿದೆ. ಇದನ್ನು ಸ್ವತಃ ಎಮಿರೇಟ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ. ಇಸಿಬಿ ಹಾಗೂ ಬಿಸಿಸಿಐ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಪಾಕ್ ಲೀಗ್‌ಗೆ ಆತಿಥ್ಯ ವಹಿಸಬಾರದು ಎಂದು ಜಯ್ ಶಾ ಇಸಿಬಿಗೆ ಮನವಿ ಮಾಡಿದ್ದಾರೆ. ಅದರಂತೆ ಇಸಿಬಿ, ಪಿಎಸ್‌ಎಲ್ ಪಂದ್ಯಗಳನ್ನು ಆಯೋಜಿಸುವ ನಿರ್ಧಾರ ಕೈಬಿಟ್ಟಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿಯವರು ಯುಎಇನಲ್ಲಿ 8 ಪಿಎಸ್ಎಲ್ ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು. ಆದರೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅವರ ಆವಶ್ಯಕತೆಯನ್ನು ನಿಷೇಧಿಸಿತ್ತು. ಇದರೊಂದಿಗೆ ಪಾಕಿಸ್ತಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಸಿಲುಕಿತ್ತು. ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪಿಸಿಬಿ ಪಿಎಸ್ಎಲ್‌ನ ಅಂತಿಮ ಹಂತದ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲು ಪಾಕ್ ಯತ್ನಿಸಿತ್ತು. ಆದರೆ ಇಸಿಬಿಯ ನಿರಾಕರಣೆಯಿಂದ ಪಾಕಿಸ್ತಾನ ಅನಿವಾರ್ಯವಾಗಿ ತನ್ನ ಲೀಗ್ ಅನ್ನು ಮುಂದೂಡಬೇಕಾಯಿತು.
ಈ ನಿರ್ಧಾರ ಹಿಂದೆ ಭಾರತದ ಕಾಣದ ಕೈಯ ಪ್ರಭಾವಶಾಲಿ ಹಸ್ತಕ್ಷೇಪವಿರಬಹುದು ಎಂಬ ಊಹೆ ಮಾಡಲಾಗಿತ್ತು. ಆದರೆ ಇತ್ತೀಚಿನ ಕ್ರಿಕ್‌ಬಜ್ ವರದಿ, ಈ ನಿರ್ಧಾರವನ್ನು ತಿರಸ್ಕರಿಸಲು ಬಿಸಿಸಿಐ ಮತ್ತು ಅದರ ಮಾಜಿ ಕಾರ್ಯದರ್ಶಿ ಹಾಗೂ ಪ್ರಸ್ತುತ ಐಸಿಸಿ ಅಧ್ಯಕ್ಷರಾದ ಜಯ್ ಶಾ ಅವರ ಪ್ರಭಾವ ಮಹತ್ತರವಾಗಿತ್ತು ಎಂಬುದನ್ನು ಬಹಿರಂಗಪಡಿಸಿದೆ.
ಜಯ್ ಶಾ ಅವರ ಪ್ರಭಾವ ಹೇಗೆ ಕಾರ್ಯನಿರ್ವಹಿಸಿತು?
ಕ್ರಿಕ್‌ಬಜ್ ಪ್ರಕಾರ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಯ್ ಶಾ ಅವರ ಬಲವಾದ ಸ್ಥಾನಮಾನ ಮತ್ತು ಯುಎಇ ಕ್ರಿಕೆಟ್ ಆಡಳಿತದೊಂದಿಗೆ ಅವರ ಸ್ನೇಹಪೂರ್ಣ ಸಂಬಂಧಗಳು, ಇಸಿಬಿಯ ನಿರ್ಧಾರಕ್ಕೆ ಪ್ರಮುಖ ಕಾರಣ. ಬಿಸಿಸಿಐ, ಐಪಿಎಲ್‌ನ ಕೆಲ ಋತುಗಳನ್ನು ಯುಎಇನಲ್ಲಿ ಯಶಸ್ವಿಯಾಗಿ ನಡೆಸಿದ್ದರೂ, ಟಿ20 ವಿಶ್ವಕಪ್ 2021 ಆಯೋಜಿಸಿದರೂ, ಇಬ್ಬರ ನಡುವೆ ಉತ್ತಮ ಸಂಬಂಧಗಳು ಮುಂದುವರೆದಿವೆ. ಇಸಿಬಿಯ ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಮುಬಾಶಿರ್ ಉಸ್ಮಾನಿ ಮೂಲತಃ ಮುಂಬೈನವರಾಗಿರುವುದು ಈ ಸಂಬಂಧಕ್ಕೆ ಇನ್ನೊಂದು ಪ್ರಮುಖ ಕಾರಣವಾಗಿದೆ. ಈ ಕುರಿತು ಇಸಿಬಿಯ ಹಿರಿಯ ಅಧಿಕಾರಿಯೊಬ್ಬರು "ನಾವು ಬಿಸಿಸಿಐ ಮತ್ತು ಜಯ್ ಭಾಯ್‌ಗೆ ಋಣಿಯಾಗಿದ್ದೇವೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿಯಾಗಿದೆ.
ಪಿಎಸ್ಎಲ್ ಮುಂದೂಡಿಕೆ ಬಳಿಕ ವಿದೇಶಿ ಆಟಗಾರರಲ್ಲಿ ಭಯ:
ಪಿಎಸ್ಎಲ್ ಮುಂದೂಡಿಕೆಯ ನಂತರ ದುಬೈಗೆ ಸ್ಥಳಾಂತರಗೊಂಡಿರುವ ಹಲವು ಆಟಗಾರರು ಇನ್ನೆಂದೂ ಪಾಕಿಸ್ತಾನಕ್ಕೆ ಹೋಗಲ್ಲ ಎಂದಿದ್ದಾರೆ. ಇದನ್ನು ಬಾಂಗ್ಲಾದೇಶದ ಲೆಗ್ ಸ್ಪಿನ್ನರ್, ಲಾಹೋರ್ ತಂಡದ ರಿಷದ್ ಹೊಸೈನ್ ಯುಎಇ ತಲುಪಿದ ನಂತರ ನಿಟ್ಟುಸಿರು ಬಿಡುವುದಾಗಿ ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಇದ್ದ ಕೆಲವೊಬ್ಬ ವಿದೇಶಿ ಆಟಗಾರರು ಕೂಡ ಭಯಭೀತರಾಗಿದ್ದರು. ಕ್ರಿಕ್‌ಬಜ್ ವರದಿ ಪ್ರಕಾರ, ಸ್ಯಾಮ್ ಬಿಲ್ಲಿಂಗ್ಸ್, ಡ್ಯಾರಿಲ್ ಮಿಚೆಲ್, ಕುಶಾಲ್ ಪೆರೆರಾ, ಡೇವಿಡ್ ವೈಸ್ ಮತ್ತು ಟಾಮ್ ಕರನ್ ಮುಂತಾದ ಆಟಗಾರರು ಆತಂಕಕ್ಕೆ ಒಳಗಾದವರು. "ಮಿಚೆಲ್ ನನಗೆ ಸ್ಪಷ್ಟವಾಗಿ ಈ ರೀತಿಯ ಪರಿಸ್ಥಿತಿಯಲ್ಲಿ ಮತ್ತೆ ಪಾಕಿಸ್ತಾನಕ್ಕೆ ಬಾರದೇ ಇರುತ್ತೇನೆ ಎಂದರು. ಅವರ ಮಾತುಗಳಲ್ಲಿ ಭಯ ಸ್ಪಷ್ಟವಾಗಿತ್ತು" ಎಂದು ರಿಷದ್ ಹೊಸೈನ್ ಹೇಳಿದ್ದಾರೆ.