ಭಾರತ-ಪಾಕ್‌ ಸಂಘರ್ಷದ ಬಳಿಕ ರಫೇಲ್‌ ಯುದ್ಧ ವಿಮಾನಗಳ ಕುರಿತು ತಪ್ಪು ಅಭಿಪ್ರಾಯ ಹರಡುವ ಕೆಲಸಕ್ಕೆ ಚೀನಾ ಕೈಹಾಕಿದೆ. ಇದಕ್ಕಾಗಿ ತನ್ನ ರಾಯಭಾರ ಕಚೇರಿಗಳನ್ನೇ ಬಳಸಿಕೊಳ್ಳುತ್ತಿದೆ.

ಪ್ಯಾರಿಸ್‌: ಭಾರತ-ಪಾಕ್‌ ಸಂಘರ್ಷದ ಬಳಿಕ ರಫೇಲ್‌ ಯುದ್ಧ ವಿಮಾನಗಳ ಕುರಿತು ತಪ್ಪು ಅಭಿಪ್ರಾಯ ಹರಡುವ ಕೆಲಸಕ್ಕೆ ಚೀನಾ ಕೈಹಾಕಿದೆ. ಇದಕ್ಕಾಗಿ ತನ್ನ ರಾಯಭಾರ ಕಚೇರಿಗಳನ್ನೇ ಬಳಸಿಕೊಳ್ಳುತ್ತಿದೆ. ರಫೇಲ್‌ ಯುದ್ಧವಿಮಾನಗಳ ವರ್ಚಸ್ಸಿಗೆ ಕುಂದುಂಟುಮಾಡಿ, ಅದರ ಮಾರಾಟವನ್ನು ತಡೆಯುವುದೇ ಚೀನಾದ ಈ ಕಳ್ಳಾಟದ ಹಿಂದಿನ ಉದ್ದೇಶ ಎಂದು ಫ್ರಾನ್ಸ್ ಸೇನೆ ಮತ್ತು ಗುಪ್ತಚರ ಮೂಲಗಳು ತಿಳಿಸಿವೆ.

ಚೀನಾದ ರಾಯಭಾರ ಕಚೇರಿ ಮೂಲಕ ಫ್ರಾನ್ಸ್‌ನ ರಫೇಲ್‌ ಯುದ್ಧವಿಮಾನಗಳ ಮಾರಾಟ ತಡೆಯುವ ಯತ್ನ ಸದ್ದಿಲ್ಲದೆ ನಡೆಯುತ್ತಿದೆ. ರಫೇಲ್‌ ಖರೀದಿಗೆ ಆಸಕ್ತಿ ತೋರಿಸುವ ಹಾಗೂ ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ದೇಶಗಳ ಜತೆಗೆ ಚೀನಾ ಸಂಪರ್ಕ ಸಾಧಿಸುತ್ತಿದೆ. ರಫೇಲ್‌ ಕೈಬಿಟ್ಟು, ಚೀನಾ ನಿರ್ಮಿತ ಯುದ್ಧವಿಮಾನಗಳನ್ನು ಖರೀದಿಸುವಂತೆ ಓಲೈಸುತ್ತಿದೆ ಎಂದು ವರದಿ ಹೇಳಿದೆ.

ಪಾಕಿಸ್ತಾನ ಮತ್ತು ಚೀನಾವು ರಫೇಲ್‌ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆನ್‌ಲೈನ್‌ ಕ್ಯಾಂಪೇನ್‌ ಮಾಡುತ್ತಿದೆ. ಎಐ ಸೃಷ್ಟಿಸಿದ ಚಿತ್ರ, ವಿಡಿಯೋ ತೋರಿಸಿ ರಫೇಲ್‌ ಯುದ್ಧವಿಮಾನ ನಷ್ಟವಾಗಿದೆ ಎಂಬಂತೆ ತೋರಿಸಲಾಗುತ್ತಿದೆ. ಸುಮಾರು ಸಾವಿರಕ್ಕೂ ಹೆಚ್ಚು ಹೊಸ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂಬುದು ಬಹಿರಂಗವಾಗಿದೆ.

ಪಾಕ್‌-ಭಾರತ ನಡುವಿನ 4 ದಿನಗಳ ಸಂಘರ್ಷದ ಸಂದರ್ಭದಲ್ಲಿ ಚೀನಾ ನಿರ್ಮಿತ ಮಿಲಿಟರಿ ಹಾರ್ಡ್‌ವೇರ್‌ಗಳು, ಯುದ್ಧವಿಮಾನಗಳು ಮತ್ತು ಕ್ಷಿಪಣಿಗಳು ಹೇಗೆ ಕಾರ್ಯನಿರ್ವಹಿಸಿದವು? ಅದರಲ್ಲೂ ಮುಖ್ಯವಾಗಿ ರಫೇಲ್ ಯುದ್ಧವಿಮಾನಗಳ ವಿರುದ್ಧ ಅವು ಹೇಗೆ ಕಾರ್ಯನಿರ್ವಹಿಸಿದವು ಎಂಬ ಕುರಿತು ಮಾಹಿತಿ ಕಲೆಹಾಕಲು ರಕ್ಷಣಾ ತಜ್ಞರು ಯತ್ನಿಸುತ್ತಿದ್ದಾರೆ.

ಪಾಕಿಸ್ತಾನವು ಭಾರತದ 5 ರಫೇಲ್‌ ಯುದ್ಧವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಹೇಳಿಕೊಳ್ಳುತ್ತಿದೆ. ಭಾರತವು ಕೆಲ ವಿಮಾನಗಳು ನಾಶವಾಗಿದ್ದಾಗಿ ಹೇಳಿದ್ದರೂ ಎಷ್ಟೆಂಬುದನ್ನು ಸ್ಪಷ್ಟಪಡಿಸಿಲ್ಲ. ಫ್ರಾನ್ಸ್‌ನ ವಾಯುಸೇನೆ ಮುಖ್ಯಸ್ಥರ ಪ್ರಕಾರ ತಲಾ ಒಂದು ರಫೇಲ್‌, ಸುಖೋಯ್‌ ಮತ್ತು ಮಿರಾಜ್‌ 2000 ಯುದ್ಧವಿಮಾನವನ್ನು ಭಾರತ ಕಳೆದುಕೊಂಡಿದೆ.

  • ಭಾರತ-ಪಾಕ್‌ ಸಂಘರ್ಷದ ಬಳಿಕ ರಫೇಲ್‌ ಯುದ್ಧ ವಿಮಾನಗಳ ಕುರಿತು ತಪ್ಪು ಅಭಿಪ್ರಾಯ
  • ತಪ್ಪು ಅಭಿಪ್ರಾಯ ಹರಡುವ ಕೆಲಸಕ್ಕೆ ಕೈಹಾಕಿದ ಚೀನಾ
  • ರಫೇಲ್‌ ಯುದ್ಧವಿಮಾನಗಳ ವರ್ಚಸ್ಸಿಗೆ ಕುಂದುಂಟುಮಾಡಿ, ಅದರ ಮಾರಾಟವನ್ನು ತಡೆಯುವುದೇ ಚೀನಾದ ಈ ಕಳ್ಳಾಟದ ಹಿಂದಿನ ಉದ್ದೇಶ