ಅಮೆರಿಕಾದಲ್ಲಿ ಎರಡು ತಲೆ ಮತ್ತು ನಾಲ್ಕು ಕಣ್ಣುಗಳಿರುವ ವಿಚಿತ್ರ ಹಲ್ಲಿಯೊಂದು ಜನಿಸಿದೆ. ಮನುಷ್ಯರ ಉಗುರಿಗಿಂತಲೂ ಚಿಕ್ಕದಾಗಿರುವ ಈ ಜೀವಿ, ಜನಿಸಿ ನಾಲ್ಕು ವಾರಗಳಾದರೂ ಜೀವಂತವಾಗಿದ್ದು, ಈ ಪವಾಡ ಜಗತ್ತಿನ ಗಮನ ಸೆಳೆದಿದೆ.
ಜೀವಿಯೊಂದು ಎರಡು ತಲೆಯೊಂದಿಗೆ ಜನಿಸಿದ್ರೆ ಅದು ಹೆಚ್ಚು ದಿನ ಬದುಕುಳಿಯಲ್ಲ ಎಂಬ ಮಾತಿದೆ. ಇತ್ತೀಚೆಗೆ ಹಸುವೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿತ್ತು. ಆದ್ರೆ ಕೆಲವೇ ಗಂಟೆಗಳಲ್ಲಿ ಕರು ಸಾವನ್ನಪ್ಪಿತ್ತು. ಇದೀಗ ಎರಡು ತಲೆ ಮತ್ತು ನಾಲ್ಕು ಕಣ್ಣುಗಳನ್ನು ಹೊಂದಿರುವ ಹಲ್ಲಿಯೊಂದು ಜನ್ಮ ತಾಳಿದ್ದು, ಇದು ಮನುಷ್ಯರ ಉಗುರಿಗಿಂತಲೂ ಚಿಕ್ಕದಾಗಿದೆ. ಆದ್ರೆ ಅಚ್ಚರಿ ವಿಷಯ ಅಂದ್ರೆ ಜನಿಸಿ ನಾಲ್ಕು ವಾರಗಳಾದ್ರೂ ಹಲ್ಲಿ ಜೀವಂತವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಹಲ್ಲಿ ಫೋಟೋ ವೈರಲ್ ಆಗುತ್ತಿದೆ.
ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ಸೈಮನ್ ಆಂಡ್ ಗಾರ್ಫಂಕೆಲ್ (Simon & Garfunkel gecko) ಹೆಸರಿನ ವಿಚಿತ್ರ ಹಲ್ಲಿ ಕಂಡು ಬಂದಿದೆ. ನಾಲ್ಕು ವಾರದ ಪುಟ್ಟ ಹಲ್ಲಿ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಹಲ್ಲಿಯನ್ನು ನೋಡಿದ ಜನರು, ಇದು ಪ್ರಕೃತಿಯ ಪವಾಡ, ಸೃಷ್ಟಿಯ ಚಮತ್ಕಾರ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
1.8 ಗ್ರಾಂ ತೂಕದ ಪುಟ್ಟ ಹಲ್ಲಿಗೆ ಎರಡು ತಲೆ
ಡೈಲಿ ಮೇಲ್ ವರದಿ ಪ್ರಕಾರ, ಜೂನ್ 29ರಂದು ಪೆನ್ಸಿಲ್ವೇನಿಯಾದ ರಾಕ್‌ಸ್ಟಾರ್ ಗೆಕೋಸ್ ಸಂತಾನೋತ್ಪತ್ತಿ ಕೇಂದ್ರದಲ್ಲಿ ಈ ಹಲ್ಲಿ ಇದೆ. ಮೊಟ್ಟೆಯಿಂದ ಹಲ್ಲಿ ಹೊರಬಂದಾಗ ಅಲ್ಲಿದ್ದ ತಜ್ಞರು ಸಹ ಒಂದು ಕ್ಷಣ ಶಾಕ್ ಆಗಿದ್ದರು . ಮಾನವನ ಬೆರಳಿನ ಉಗುರಿಗಿಂತ ಚಿಕ್ಕದಾಗಿರುವ ಹಲ್ಲಿಯ ತೂಕ 1.8 ಗ್ರಾಂ ಆಗಿದೆ. ಸಾಮಾನ್ಯ ಹಲ್ಲಿಗಳಂತೆ ಇದು ಜೀವಿಸುತ್ತಿದೆ. ಈ ರೀತಿಯ ಘಟನೆ ನಡೆದಿರೋದು ಎರಡನೇ ಬಾರಿ ಎಂದು ವರದಿಯಾಗಿದೆ.
ವೈಜ್ಞಾನಿಕ ಭಾಷೆಯಲ್ಲಿ ಇದಕ್ಕೆ ಏನಂತಾರೆ?
ಎರಡು ತಲೆಯ ಅಪರೂಪದ ಹಲ್ಲಿಯನ್ನು ವೈಜ್ಞಾನಿಕವಾಗಿ ಪಾಲಿಸೆಫಾಲಿ (Polycephaly) ಎಂದು ಕರೆಯಲಾಗುತ್ತದೆ. ಗರ್ಭದಲ್ಲಿರುವ ಒಂದೇ ಭ್ರೂಣ ವಿಭಜನೆಯಾಗಿ ಅವಳಿಯಾಗಲೂ ಪ್ರಾರಂಭಿಸಿದಾಗ ಈ ರೀತಿಯಾಗುತ್ತದೆ. ಕೆಲವೊಮ್ಮೆ ಭ್ರೂಣ ವಿಭಜನೆ ಪ್ರಕ್ರಿಯೆಗೊಳ್ಳದಿದ್ದಾಗ ಒಂದೇ ಜೀವಿಗೆ ಎರಡು ತಲೆ ರಚನೆಯಾಗುತ್ತದೆ. ಮನುಷ್ಯರಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಒಂದೇ ದೇಹದಲ್ಲಿ ಎರಡು ಮೆದುಳುಗಳಿರುವ ಜೀವಿಗಳನ್ನು ಉಳಿಸಿಕೊಳ್ಳೋದು ಅಥವ ಅವುಗಳು ಜೀವನ ನಡೆಸೋದು ಕಷ್ಟಕರ. ಎರಡು ಮೆದುಳುಗಳಿದ್ದಾಗ ದೇಹವನ್ನು ನಿಯಂತ್ರಿಸಲು ಕಷ್ಟ. ಉದಾಹರಣೆಗೆ ಎರಡು ತಲೆಯ ಹಾವುಗಳು ತಮ್ಮೊಳಗೆ ಹೋರಾಟ ನಡೆಸಿ ಸಾಯುತ್ತವೆ. ಎರಡು ಮೆದುಳುಗಳಿಂದ ಬೇರೆ ಬೇರೆ ಕಮಾಂಡ್‌ಗಳು ಬಂದಾಗ ದೇಹ ಅಥವ ಆಂತರಿಕ ಅಂಗಗಳಿಗೆ ಕಾರ್ಯನಿರ್ವಹಿಸಲು ಅಡೆತಡೆಯಾಗಿ ಬದುಕುಳಿಯುವ ಸಾಧ್ಯತೆ ವಿರಳ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: 23 ವರ್ಷಗಳ ಸೆರೆಮನೆಗೆ ಮುಕ್ತಿ: ದನಗಳ ಕೊಟ್ಟಿಗೆಯಲ್ಲಿ ಸರಪಳಿಯಿಂದ ಬಂಧಿಯಾಗಿದ್ದ ವ್ಯಕ್ತಿ ಕೊನೆಗೂ ಅಮ್ಮನ ಮಡಿಲಿಗೆ
10 ವರ್ಷ ಬದುಕುತ್ತಾ ಪುಟಾಣಿ ಹಲ್ಲಿ?
ಪುಟ್ಟ ಅತಿಥಿ ಮೇಲೆ ಯಾವುದೇ ಒತ್ತಡ ಹಾಕಲು ಬಯಸಲ್ಲ. ಹಲ್ಲಿಯ ಆಂತರಿಕ ಅಂಗಳ ಮಾಹಿತಿ ಪಡೆಯಲು ಮುಂದಿನ ದಿನಗಳಲ್ಲಿ ಎಕ್ಸ್ ರೇ ಮಾಡಬಹುದು. ಆದ್ರೆ ಹಲ್ಲಿ ಜೀವಕ್ಕೆ ಅಪಾಯವುಂಟಾಗುವ ಯಾವುದೇ ಕೆಲಸಗಳನ್ನು ಮಾಡಲ್ಲ. ಹಲ್ಲಿಗೆ ಬದುಕುಲು ಬೇಕಾದ ಸೂಕ್ತ ವಾತಾವರಣ ನಿರ್ಮಿಸಲಾಗುವುದು. ಈ ಜಾತಿಯ ಹಲ್ಲಿಗಳು ಸಾಮಾನ್ಯವಾಗಿ 10 ವರ್ಷಗಳ ಕಾಲ ಬದುಕುತ್ತವೆ. ಈ ಎರಡು ತಲೆಯ ಹಲ್ಲಿ ಎಷ್ಟು ದಿನ ಬದುಕುತ್ತೆ ಎಂಬುವುದು ಗೊತ್ತಿಲ್ಲ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಕೆಮಿಕಲ್ ಸೊಳ್ಳೆ ಸ್ಪ್ರೇ ಬದ್ಲು ಮನೆಯಲ್ಲಿಯೇ ತಯಾರಿಸಿ ಈ 6 ನ್ಯಾಚುರಲ್ ಸ್ಪ್ರೇ: ಸೊಳ್ಳೆಗೆ ಹೇಳಿ ಗುಡ್ಬೈ


