ಡ್ರಗ್ ಸೇವನೆ ಮಾಡಿದ್ದ 19 ವರ್ಷದ ತರುಣನೋರ್ವ ಮಧ್ಯ ಆಗಸದಲ್ಲಿ ವಿಮಾನ ಸಂಚರಿಸುತ್ತಿದ್ದಾಗ ವಿಮಾನದ ಬಾಗಿಲು ತೆಗೆಯಲು ಯತ್ನಿಸಿದ್ದ, ಕೂಡಲೇ ಎಚ್ಚೆತ್ತ ವಿಮಾನ ಸಿಬ್ಬಂದಿ ಆತನನ್ನು ನಿಯಂತ್ರಿಸಿ ದೊಡ್ಡ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ.
ಸಿಯೋಲ್: ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಕರ ಅನಾಗರಿಕ ವರ್ತನೆಗಳು ಮತ್ತೆ ಮತ್ತೆ ಬೆಳಕಿಗೆ ಬರುತ್ತಿವೆ. ವಿಮಾನದ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸುವುದು, ಅವರನ್ನು ಎಳೆದಾಡುವುದು ಅವರ ಮೇಲೆ ಹಲ್ಲೆ ಮಾಡುವುದು, ಪಕ್ಕದ ಸೀಟಿನಲ್ಲಿ ಕುಳಿತಿದ್ದವರಿಗೂ ಏನಾದರೂ ಕಿರುಕುಳ ನೀಡುವುದು ವಿಮಾನದಲ್ಲಿ ಈಗ ಸಾಮಾನ್ಯ ಎನಿಸಿದೆ. ಅದೇ ರೀತಿ ಈಗ ಹೊಸದೊಂದು ಪ್ರಕರಣ ಬೆಳಕಿಗೆ ಬಂದಿದೆ. ಡ್ರಗ್ ಸೇವನೆ ಮಾಡಿದ್ದ 19 ವರ್ಷದ ತರುಣನೋರ್ವ ಮಧ್ಯ ಆಗಸದಲ್ಲಿ ವಿಮಾನ ಸಂಚರಿಸುತ್ತಿದ್ದಾಗ ವಿಮಾನದ ಬಾಗಿಲು ತೆಗೆಯಲು ಯತ್ನಿಸಿದ್ದ, ಕೂಡಲೇ ಎಚ್ಚೆತ್ತ ವಿಮಾನ ಸಿಬ್ಬಂದಿ ಆತನನ್ನು ನಿಯಂತ್ರಿಸಿ ದೊಡ್ಡ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ.
ದಕ್ಷಿಣ ಕೊರಿಯಾಗೆ (South Korea) ಸೇರಿದ್ದ ಜೆಜು ಏರ್‌ಲೈನ್ಸ್ (Jeju Airlines) ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ಪ್ರಯಾಣದ ಮಧ್ಯೆ ತನಗೆ ಎದೆಯ ಬಳಿ ಏನೋ ಸಿಲುಕಿದಂತೆ ಎನಿಸುತ್ತಿದೆ ಎಂದು ಹೇಳಿದ್ದಾನೆ. ಈ ವೇಳೆ ವಿಮಾನದ ಸಿಬ್ಬಂದಿ ಆತನನ್ನು ನಿರ್ಗಮನ ಬಾಗಿಲಿನ ಸಮೀಪವಿರುವ ವಿಮಾನದ ಮುಂದಿನ ಸಾಲಿಗೆ ಸ್ಥಳಾಂತರಿಸಿ ಅಲ್ಲಿ ಆತನ ಮೇಲ್ವಿಚಾರಣೆ ಮಾಡಬಹುದು ಎಂದು ಭಾವಿಸಿದ್ದಾರೆ. ಆದರೆ ಆತ ಅಲ್ಲಿ ಸುಮ್ಮನೆ ಕೂರದೆ ವಿಮಾನದ ಬಾಗಿಲನ್ನು ತೆಗೆಯಲು ಮುಂದಾಗಿದ್ದಾನೆ. ವಿಮಾನ ಪ್ರಯಾಣ ಆರಂಭವಾದ ಒಂದು ಗಂಟೆಯ ನಂತರ ಯುವಕ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದ ಎಂದು ವಿಮಾನದ ಸಿಬ್ಬಂದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದಕ್ಷಿಣ ಕೊರಿಯಾದ ಪ್ರಜೆಯಾದ ಈತ ಫಿಲಿಪೈನ್ಸ್‌ನಿಂದ (Philippines) ಸಿಯೋಲ್‌ಗೆ (Seoul) ತೆರಳಲು ಜೆಜು ಏರ್‌ಲೈನ್ಸ್ ವಿಮಾನವನ್ನು ಹತ್ತಿದ್ದ.
Bengaluru Airport: ವಿಮಾನ ಪ್ರಯಾಣಿಕನ ಬ್ಯಾಗ್‌ನಿಂದ 2 ಐಫೋನ್ ಕದ್ದ ಕೆಂಪೇಗೌಡ ಏರ್‌ಪೋರ್ಟ್ ಸಿಬ್ಬಂದಿ
ವಿಮಾನ ಬಾಗಿಲಿನ ಸಮೀಪದ ಸೀಟಿನಲ್ಲಿ ಕುಳಿತು ಅದನ್ನು ತೆರೆಯಲು ಯತ್ನಿಸಿದಾಗ ತಕ್ಷಣವೇ ಕಾರ್ಯಪ್ರವೃತರಾದ ವಿಮಾನದ ಸಿಬ್ಬಂದಿ ಅತನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಗಟ್ಟಿಯಾದ ಲಾಸ್ಸೋ ಹಗ್ಗವನ್ನು ಬಳಸಿ ಆತನನ್ನು ಸೀಟಿಗೆ ಕಟ್ಟಿ ಹಾಕಿದ್ದಾರೆ. ಘಟನೆಯಲ್ಲಿ ವಿಮಾನಕ್ಕಾಗಲಿ ಇತರ ಪ್ರಯಾಣಿಕರಿಗಾಗಲಿ ಯಾವುದೇ ಗಾಯಗಳಾಗಿಲ್ಲ ಎಂದು ಏರ್‌ಲೈನ್ಸ್ ಹೇಳಿದೆ. ನಂತರ ಜೂನ್ 19 ರಂದು ವಿಮಾನವು ಸಿಯೋಲ್‌ನ ಇಂಚಿಯಾನ್ ವಿಮಾನ ನಿಲ್ದಾಣದಲ್ಲಿ (Incheon Airport) ಲ್ಯಾಂಡ್ ಆದ ನಂತರ ಬೆಳಗ್ಗೆ 7.30 ಕ್ಕೆ ಆತನನ್ನು ವಿಮಾನ ಸಿಬ್ಬಂದಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಂತರ ಆತನಿಗೆ ಡ್ರಗ್ ಸೇವನೆ ಪರೀಕ್ಷೆ ಮಾಡಿದ್ದು, ಈ ವೇಳೆ ಡ್ರಗ್ ಪಾಸಿಟಿವ್ ಬಂದಿತ್ತು ಎಂದು ಏರ್‌ಲೈನ್ಸ್ ತಿಳಿಸಿದೆ.
ವಿಮಾನಯಾನ ಸುರಕ್ಷತಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆತನ ವಿರುದ್ಧ ಪೊಲೀಸರು ಅರೆಸ್ಟ್ ವಾರೆಂಟ್ ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವ್ಯಕ್ತಿ, ನನ್ನ ಮೇಲೆ ವಿಮಾನದಲ್ಲಿ ಹಲ್ಲೆ ನಡೆದಂತೆ ಭಾಸವಾಯ್ತು ಎಂದು ಹೇಳಿದ್ದಾನೆ. ಅಮೆರಿಕಾದಲ್ಲಿ ಕಳೆದ ತಿಂಗಳು ಇದೇ ರೀತಿಯ ಘಟನೆ ನಡೆದಿತ್ತು. ವಿಮಾನ ಟೇಕಾಫ್ ಆಗಲು ಕ್ಷಣಗಳಿರುವಾಗ ವಿಮಾನದಲ್ಲಿ ತುರ್ತು ನಿರ್ಗಮನದ ಬಾಗಿಲನ್ನು ಪ್ರಯಾಣಿಕನೋರ್ವ ತೆರೆದಿದ್ದ. ನಂತರ ವಿಮಾನದ ಸಿಬ್ಬಂದಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿ ಡೆಲ್ಟಾ ಏರ್‌ಲೈನ್ಸ್ ವಿಮಾನದಲ್ಲಿ ಸಿಯಾಟಲ್ ಕಡೆಗೆ ಹೋಗುತ್ತಿದ್ದ.