ಇಲ್ಲಿ ಸಂಭವಿಸಿದ ವಿಮಾನ ಅಪಘಾತದ ಮೊಬೈಲ್‌ ದೃಶ್ಯವೊಂದು ಘಟನೆ ಸಂಭವಿಸಿದ್ದ ಕೆಲವು ನಿಮಿಷದಲ್ಲಿ ವೈರಲ್‌ ಆಗಿತ್ತು. ಇದನ್ನು ಚಿತ್ರಿಸಿದ್ದು ಗುಜರಾತಿ ಬಾಲಕ ಆರ್ಯನ್ ಅಸಾರಿ ಎಂದು ಗೊತ್ತಾಗಿದೆ.

ಅಹಮದಾಬಾದ್: ಇಲ್ಲಿ ಸಂಭವಿಸಿದ ವಿಮಾನ ಅಪಘಾತದ ಮೊಬೈಲ್‌ ದೃಶ್ಯವೊಂದು ಘಟನೆ ಸಂಭವಿಸಿದ್ದ ಕೆಲವು ನಿಮಿಷದಲ್ಲಿ ವೈರಲ್‌ ಆಗಿತ್ತು. ಇದನ್ನು ಚಿತ್ರಿಸಿದ್ದು ಗುಜರಾತಿ ಬಾಲಕ ಆರ್ಯನ್ ಅಸಾರಿ ಎಂದು ಗೊತ್ತಾಗಿದೆ.

ಮೂಲತಃ ಅರಾವಳಿ ಜಿಲ್ಲೆಯವನಾದ ಈ 17ರ ಬಾಲಕ, ತನ್ನ ಹಳ್ಳಿಯಿಂದ ಅಹಮದಾಬಾದ್‌ ಮೆಟ್ರೋದಲ್ಲಿ ಕೆಲಸ ಮಾಡುವ ತಂದೆಯ ಮನೆಗೆ 12ನೇ ಕ್ಲಾಸ್‌ ಪಠ್ಯ ಖರೀದಿಸಲು ಬಂದಿದ್ದ. ಈ ವೇಳೆ ಏರ್‌ಪೋರ್ಟ್‌ ಪಕ್ಕವೇ ಇರುವ ತಂದೆಯ ಮನೆಯ ಮಹಡಿ ಏರಿ ವಿಮಾನ ಏರಿಳಿವ ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿದ್ದ. ಆಗ ಅಚಾನಕ್ಕಾಗಿ ಏರ್‌ ಇಂಡಿಯಾ ವಿಮಾನ ಪತನವಾಗಿದ್ದು, ಮೊಬೈಲಲ್ಲಿ ಸೆರೆಯಾಗಿದೆ. ಬಳಿಕ ಈತನ ತಂದೆಯುವ ವಿಡಿಯೋ ವೈರಲ್ ಮಾಡಿದ್ದಾರೆ.

‘ನಾನು ವಿಮಾನ ಇಳಿಯುತ್ತಿದೆ ಎಂದು ಭಾವಿಸಿದ್ದೆ. ಅದು ಪತನವಾಗಿ ಧಗ್ಗನೆ ಬೆಂಕಿ ಹೊತ್ತಿತು. ಅದು ಭಯಾನಕವಾಗಿತ್ತು’ ಎಂದಿದ್ದಾನೆ ಆರ್ಯನ್‌.

ಮೃತ ಮಾಜಿ ಸಿಎಂ ರೂಪಾನಿ ಅಂತ್ಯಕ್ರಿಯೆ

ರಾಜಕೋಟ್‌: ಜೂ.12ರಂದು ಸಂಭವಿಸಿದ ಏರಿಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್‌ನ ಮಾಜಿ ಸಿಎಂ ವಿಜಯ್‌ ರೂಪಾನಿ (68) ಅವರ ಅಂತ್ಯಕ್ರಿಯೆ ಸೋಮವಾರ ಸರ್ಕಾರಿ ಗೌರವದೊಂದಿಗೆ ನಡೆಯಿತು.

 ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಆದಿಯಾಗಿ ಅನೇಕ ಗಣ್ಯರು, ಸಾರ್ವಜನಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಅಂತ್ಯಕ್ರಿಯೆಗೂ ಮುನ್ನ ಸಾರ್ವಜನಿಕರ ದರ್ಶನಕ್ಕೆ ಇಟ್ಟು, ಮೆರವಣಿಗೆ ನಡೆಸಲಾಯಿತು.ಅವಘಡದಲ್ಲಿ ರೂಪಾನಿ ಅವರ ದೇಹ ಗುರುತು ಸಿಗದಂತೆ ಸುಟ್ಟು ಕರಕಲಾಗಿದ್ದು, ಡಿಎನ್‌ಎ ಮಾದರಿ ಪರೀಕ್ಷೆ ನಡೆಸಿದ ಬಳಿಕ ಅವಶೇಷಗಳ ಪತ್ತೆ ಹಚ್ಚಲಾಗಿತ್ತು. ಅದನ್ನು ಪತ್ನಿ ಅಂಜಲಿ ರೂಪಾನಿ ಹಾಗೂ ಇತರೆ ಸಂಬಂಧಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಹಸ್ತಾಂತರಿಸಲಾಗಿತ್ತು.ರೂಪಾನಿ ಅವರು 2016ರ ಆಗಸ್ಟ್‌ನಿಂದ 2021ರ ಸೆಪ್ಟೆಂಬರ್‌ ವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು.

ಗುಜರಾತ್‌ ವಿಮಾನ ದುರಂತದ ಬೆನ್ನಲ್ಲೆ ಮತ್ತೊಂದು ಅನಾಹುತ ತಪ್ಪಿದೆ

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹಿಂಡನ್‌ ಏರ್ಪೋರ್ಟ್‌ನಿಂದ ಪಶ್ಚಿಮ ಬಂಗಾಳದ ಕೋಲ್ಕತಾಗೆ ತೆರಳಲಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆಗುವ ಕೊನೆಯ ಕ್ಷಣದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದೆ. ಹಾಗಾಗಿ ಗುಜರಾತ್‌ ವಿಮಾನ ದುರಂತದ ಬೆನ್ನಲ್ಲೆ ಮತ್ತೊಂದು ಅನಾಹುತ ತಪ್ಪಿದೆ.

ರನ್‌ ವೇಯಲ್ಲಿದ್ದ IX 1511 ಸಂಖ್ಯೆಯ ವಿಮಾನ ಇನ್ನೇನು ಟೇಕಾಫ್ ಆಗಬೇಕಿತ್ತು. ಆದರೆ ಅಂತಿಮ ಕ್ಷಣದಲ್ಲಿ ವಿಮಾನದ ಸಿಬ್ಬಂದಿ ದೋಷ ಪತ್ತೆ ಮಾಡಿದ್ದಾರೆ. ಹಾಗಾಗಿ ಸುಮಾರು 1 ಗಂಟೆ ಕಾಲ ಪ್ರಯಾಣ ವಿಳಂಬವಾಯಿತು. ‘ಹಿಂಡನ್-ಕೋಲ್ಕತಾ ವಿಮಾನದ ದೋಷದಿಂದಾಗಿ ಪ್ರಯಾಣ ವಿಳಂಬವಾಯಿತು.

'ಪ್ರಯಾಣಿಕರಿಗೆ ಬೇರೆ ಸಮಯ ನಿಗದಿ ಅಥವಾ ಟಿಕೆಟ್ ರದ್ದುಪಡಿಸಿದರೆ ಪೂರ್ತಿ ಹಣ ಮರುಪಾವತಿಸುವುದಾಗಿ ತಿಳಿಸಿದೆವು. ಅನನುಕೂಲತೆಗಾಗಿ ವಿಷಾದಿಸುತ್ತೇವೆ’ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.