ಏರ್ ಇಂಡಿಯಾ ಅಪಘಾತದ ನಂತರ, ಅಧ್ಯಕ್ಷ ಎನ್ ಚಂದ್ರಶೇಖರನ್ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿ, ದುಃಖ ವ್ಯಕ್ತಪಡಿಸಿದರು ಮತ್ತು ಘಟನೆಯ ತನಿಖೆ ನಡೆಯುವವರೆಗೂ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಒತ್ತಾಯಿಸಿದರು.
ನವದೆಹಲಿ (ಜೂ.16): ಏರ್ ಇಂಡಿಯಾ ಅಧ್ಯಕ್ಷ ಎನ್ ಚಂದ್ರಶೇಖರನ್ ಸೋಮವಾರ ಏರ್ ಇಂಡಿಯಾ ಪ್ರಧಾನ ಕಚೇರಿ ಮತ್ತು ತರಬೇತಿ ಅಕಾಡೆಮಿಯಲ್ಲಿ ಉದ್ಯೋಗಿಗಳು ಮತ್ತು ಲೀಡರ್‌ಷಿಪ್ ಟೀಮ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಏರ್ ಇಂಡಿಯಾದ AI 171 ಅಹಮದಾಬಾದ್-ಲಂಡನ್ ವಿಮಾನದ ದುರಂತ ಅಪಘಾತದ ನಂತರ ಇದೇ ಮೊದಲ ಬಾರಿಗೆ ಏರ್ ಇಂಡಿಯಾ ಉದ್ಯೋಗಿಗಳ ಜೊತೆ ಮಾತನಾಡಿದ ಅವರು, ಏರ್ ಇಂಡಿಯಾ ಸಂಸ್ಥೆಯ ಒಳಗೆ ಇರುವ ನಿರಾಶೆಯ ಭಾವನೆಯನ್ನು ಒಪ್ಪಿಕೊಂಡಿದ್ದು ಮಾತ್ರವಲ್ಲದೆ, ಬಿಕ್ಕಟ್ಟಿನ ಸಮಯದಲ್ಲಿ ತಕ್ಷಣವೇ ಪ್ರತಿಕ್ರಿತೆ ನೀಡಿದ ಪ್ರಯತ್ನಗಳನ್ನು ಶ್ಲಾಘಿಸಿದರು.
"ನನ್ನ ವೃತ್ತಿಜೀವನದಲ್ಲಿ ನಾನು ಅನೇಕ ಬಿಕ್ಕಟ್ಟುಗಳನ್ನು ನೋಡಿದ್ದೇನೆ, ಆದರೆ ಇದು ಅತ್ಯಂತ ಹೃದಯವಿದ್ರಾವಕವಾದದ್ದು" ಎಂದು ಟಾಟಾ ಸನ್ಸ್ ಚೇರ್ಮನ್ ಕೂಡ ಆಗಿರುವ ಎನ್. ಚಂದ್ರಶೇಖರನ್ ಹೇಳಿದರು, ಅಪಘಾತ ಸ್ಥಳಕ್ಕೆ ತಮ್ಮ ಭೇಟಿ ಮತ್ತು ಏರ್ ಇಂಡಿಯಾ ನೌಕರರು ಹೇಳಿದಂತೆ ಕಂಡುಬಂದ ವಿನಾಶವನ್ನು ನೆನಪಿಸಿಕೊಂಡರು. ಮೃತ ಕುಟುಂಬಗಳ ನೋವನ್ನು ಅವರು ಒಪ್ಪಿಕೊಂಡರು ಮತ್ತು ಏರ್ ಇಂಡಿಯಾ ಸಂತ್ರಸ್ತರನ್ನು ಘಟನೆ ನಡೆದ ಕ್ಷಣದಿಂದ ತನ್ನ ವಿಸ್ತೃತ ಕುಟುಂಬದ ಭಾಗವೆಂದು ಪರಿಗಣಿಸುತ್ತದೆ ಎಂದು ದೃಢಪಡಿಸಿದರು.
ಟೀಕೆ ಮತ್ತು ಅನಿಶ್ಚಿತತೆಯ ನಡುವೆಯೂ ಬಲವಾಗಿ ನಿಲ್ಲುವ ಮಹತ್ವವನ್ನು ಚಂದ್ರಶೇಖರನ್ ಒತ್ತಿ ಹೇಳಿದರು. "ನೀವು ವಿಚಲಿತರಾದರೆ, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಪದವೆಂದರೆ ದೃಢನಿಶ್ಚಯ. ನಾವು ಗಟ್ಟಿತನವನ್ನು ತೋರಿಸಬೇಕು ಮತ್ತು ಸುರಕ್ಷಿತ ವಿಮಾನಯಾನ ಸಂಸ್ಥೆಯನ್ನು ನಿರ್ಮಿಸಲು ಈ ಕ್ಷಣವನ್ನು ಬಳಸಿಕೊಳ್ಳಬೇಕು" ಎಂದು ಹೇಳುತ್ತಾ ಅವರು ನೌಕರರನ್ನು ಗಮನ ಮತ್ತು ದೃಢನಿಶ್ಚಯದಿಂದ ಇರಿಸಲು ಒತ್ತಾಯಿಸಿದರು.
ವಿಮಾನಯಾನ ಕಾರ್ಯಾಚರಣೆಗಳ ಸಂಕೀರ್ಣತೆಯನ್ನು ಅಧ್ಯಕ್ಷರು ಪುನರುಚ್ಚರಿಸಿದರು ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ದುರಂತದ ತನಿಖೆಯ ವರದಿಗಾಗಿ ಕಾಯುವ ಅಗತ್ಯವನ್ನು ಒತ್ತಿ ಹೇಳಿದರು ಎಂದು ಏರ್ ಇಂಡಿಯಾ ನೌಕರರು ತಿಳಿಸಿದ್ದಾರೆ. "ಇದು ಶಾಂತವಾಗಿರಲು, ಧೈರ್ಯಶಾಲಿಯಾಗಿರಲು ಮತ್ತು ದೃಢನಿಶ್ಚಯದಿಂದಿರುವ ಸಮಯ" ಎಂದಿದ್ದಾರೆ. ಈ ದುರಂತದಿಂದ ವಿಮಾನಯಾನ ಸಂಸ್ಥೆಯು ಬಲವಾಗಿ ಹೊರಹೊಮ್ಮುತ್ತದೆ ಎಂದು ಹೇಳಿದರು.
ತುರ್ತು ಕಮಾಂಡ್ ಸೆಂಟರ್, ಇಂಟಿಗ್ರೇಟೆಡ್ ಆಪರೇಷನ್ಸ್ ಕಂಟ್ರೋಲ್ ಸೆಂಟರ್ ಮತ್ತು ಗ್ರಾಹಕ ಸೇವೆ ಮತ್ತು ಬೆಂಬಲ ಘಟಕಗಳಿಗೆ ಭೇಟಿ ನೀಡಿದ ಚಂದ್ರಶೇಖರನ್, ಏರ್ ಇಂಡಿಯಾ ಸಿಬ್ಬಂದಿಯ ತೆರೆಮರೆಯ ಪ್ರಯತ್ನಗಳನ್ನು ಶ್ಲಾಘಿಸಿದರು. "ನೀವು ಮಾಡುವ ಪ್ರತಿಯೊಂದು ಸಣ್ಣ ಕ್ರಿಯೆಯೂ ಪರಿಪೂರ್ಣತೆಯಿಂದ ಕಾರ್ಯಗತಗೊಳಿಸಿದರೆ, ವಿಮಾನಯಾನ ಸಂಸ್ಥೆಯ ದೊಡ್ಡ ಯಶಸ್ಸನ್ನು ನಿರ್ಮಿಸುತ್ತದೆ" ಎಂದು ಅವರು ಉದ್ಯೋಗಿಗಳಿಗೆ ನೆನಪಿಸಿದರು.
"ನಮ್ಮ ಕೆಲಸವೆಂದರೆ ಏರ್ ಇಂಡಿಯಾವನ್ನು ಅರ್ಹವಾದ ಸ್ಥಳಕ್ಕೆ ತಲುಪಿಸುವುದು - ಈ ದೇಶದ ಮತ್ತು ನಮ್ಮೊಂದಿಗೆ ಹಾರಾಟ ನಡೆಸುವ ಜನರ ವಿಶ್ವಾಸವನ್ನು ಗಳಿಸುವ ಸ್ಥಳಕ್ಕೆ ತಲುಪಿಸುವುದು. ನಮ್ಮ ಹಾದಿಯಲ್ಲಿ ಮುಂದುವರಿಯಬೇಕು" ಎಂದು ಅವರು ಹೇಳಿದರು.
