ಜ್ವಾಲಾಮುಖಿಗೂ ಮೊದಲು 14 ಗಂಟೆಯಲ್ಲಿ 800 ಬಾರಿ ಭೂಕಂಪನ: ಐಸ್‌ಲ್ಯಾಂಡ್‌ನಲ್ಲಿ ತುರ್ತುಪರಿಸ್ಥಿತಿ
ಐಸ್‌ಲ್ಯಾಂಡ್ ದೇಶದಲ್ಲಿ 14 ಗಂಟೆಗಳಲ್ಲಿ ಬರೋಬ್ಬರಿ 800 ಬಾರಿ ಭೂಕಂಪನ ಸಂಭವಿಸಿದ್ದು, ಇದರಿಂದ ಅಲ್ಲಿನ ಸರ್ಕಾರ ದೇಶದಲ್ಲಿ ಈಗ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
ಗ್ರಿಂಡ್‌ವಿಕ್: ಐಸ್‌ಲ್ಯಾಂಡ್ ದೇಶದಲ್ಲಿ 14 ಗಂಟೆಗಳಲ್ಲಿ ಬರೋಬ್ಬರಿ 800 ಬಾರಿ ಭೂಕಂಪನ ಸಂಭವಿಸಿದ್ದು, ಇದರಿಂದ ಅಲ್ಲಿನ ಸರ್ಕಾರ ದೇಶದಲ್ಲಿ ಈಗ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಗ್ರಿಂಡವಿಕ್‌ನ ಉತ್ತರಕ್ಕೆ 5.2 ತೀವ್ರತೆಯ ಪ್ರಬಲ ಕಂಪನ ಕಂಡು ಬಂದಿದೆ. ಜ್ವಾಲಾಮುಖಿ ಸ್ಫೋಟಕ್ಕೆ ಮೊದಲು ನೈಋತ್ಯ ಭಾಗದ ರೇಕ್ಜಾನೆಸ್ ಪರ್ಯಾಯ ದ್ವೀಪದಲ್ಲಿ ಈ ರೀತಿ ಸರಣಿ ಪ್ರಬಲ ಭೂಕಂಪನಗಳು ಸಂಭವಿಸಿವೆ. ಇದಾದ ನಂತರ ಐಸ್‌ಲ್ಯಾಂಡ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
ಗ್ರಿಂಡವಿಕ್‌ನ ಉತ್ತರದ ಸುಂಧ್‌ಜುಕಗಿಗರ್‌ನಲ್ಲಿ ತೀವ್ರವಾದ ಭೂಕಂಪ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿ ನಾಗರಿಕ ರಕ್ಷಣೆಗಾಗಿ ಐಸ್‌ಲ್ಯಾಂಡ್‌ನ ಪೊಲೀಸ್ ಮುಖ್ಯಸ್ಥರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ ಎಂದು ನಾಗರಿಕ ರಕ್ಷಣೆ ಮತ್ತು ತುರ್ತು ನಿರ್ವಹಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಈ ಭೂಕಂಪನಗಳು ನಿರೀಕ್ಷಿಸಿದ್ದಕ್ಕಿಂತ ದೊಡ್ಡದಾಗಬಹುದು ಹಾಗೂ ಸರಣಿ ಸ್ಫೋಟಕ್ಕೂ ಕಾರಣವಾಗಬಹುದು ಎಂದು ಆಡಳಿತವೂ ಎಚ್ಚರಿಕೆ ನೀಡಿದೆ.
ಜ್ವಾಲಾಮುಖಿಯ ಸ್ಫೋಟದಿಂದ ನಿರ್ಮಾಣವಾಯ್ತು ಹೊಸ ದ್ವೀಪ: ನೈಸರ್ಗಿಕ ಪ್ರಕ್ರಿಯೆಯ ವೀಡಿಯೋ ವೈರಲ್
ಐಸ್‌ಲ್ಯಾಂಡ್‌ನ ಹವಾಮಾನ ಇಲಾಖೆಯೂ ಇಲ್ಲಿ ಹಲವಾರು ದಿನಗಳ ಕಾಲ ಈ ಜ್ವಾಲಾಮುಖಿ ಸ್ಫೋಟ ಪ್ರಕ್ರಿಯೆ ಸಂಭವಿಸಬಹುದು ಎಂದು ಹೇಳಿದೆ. ಐಸ್‌ಲ್ಯಾಂಡ್‌ನ ಈ ಗ್ರಿಂಡ್‌ವಿಕ್ ಗ್ರಾಮವೂ ಅಂದಾಜು 4 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇದು ಶುಕ್ರವಾದ ಭೂಕಂಪನ ನಡೆದ ಸ್ಥಳಕ್ಕಿಂತ ಮೂರು ಕಿಲೋ ಮೀಟರ್ ದೂರದಲ್ಲಿದೆ. ಯಾವುದೇ ಸ್ಫೋಟ ಸಂಭವಿಸಿದಲ್ಲಿ ಜನರ ಸ್ಥಳಾಂತರಕ್ಕೆ ಆಡಳಿತ ಮುಂದಾಗಿದೆ.
ಜಾಗತಿಕ ಕಾಲಮಾನ 17.30 ರ ಸುಮಾರಿಗೆ ಐಸ್‌ಲ್ಯಾಂಡ್ ರಾಜಧಾನಿ ರೇಕ್ಜಾವಿಕ್‌ಗೆ ಸುಮಾರು 40 ಕಿಲೋ ಮೀಟರ್ ದೂರದಲ್ಲಿ ಎರಡು ಪ್ರಬಲ ಭೂಕಂಪನಗಳು ಸಂಭವಿಸಿದ್ದು, ಇದರಿಂದ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳೆಲ್ಲಾ ಕೆಳಗೆ ಬಿದ್ದಿದ್ದವು. ಭೂಕಂಪನದಿಂದ ಗ್ರಿಂಡ್‌ವಿಕ್‌ಗೆ ಉತ್ತರ ದಕ್ಷಿಣಕ್ಕೆ ಪ್ರಯಾಣಿಸುವ ಹೆದ್ದಾರಿ ಹಾನಿಗೀಡಾಗಿದ್ದು, ಅದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇದುವರೆಗೆ 24 ಸಾವಿರ ಕಂಪನಗಳು ದಾಖಲಾಗಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.
ಹುಟ್ಟುತ್ತಲೇ ದಾಖಲೆ ಬರೆದ ಪುಟ್ಟ ಭೀಮ: 6.5 ಕೇಜಿ ತೂಗಿದ ನವಜಾತ ಶಿಶು