Asianet Suvarna News Asianet Suvarna News

50ನೇ ವಯಸ್ಸಿನಲ್ಲಿ ವೃತ್ತಿ ಶುರು ಮಾಡಿ ಲಕ್ಷ ಗಳಿಸ್ತಿದ್ದಾರೆ ಗೃಹಿಣಿ!

ಮನೆಯಲ್ಲಿ ಅಡುಗೆ ಮಾಡೋದು ಸಾಮಾನ್ಯ ಕೆಲಸ. ಆದ್ರೆ ಮನೆ ಅಡುಗೆಯನ್ನೇ ನಾಲ್ಕು ಜನಕ್ಕೆ ಹೇಳಿಕೊಡುವ ನಿರ್ಧಾರ ಮಾಡಿ, ತಾಳ್ಮೆಯಿಂದ ಕಾದು, ಯಶಸ್ವಿಯಾಗೋದು ಸುಲಭವಲ್ಲ. ಸಾಧನೆ, ಹಣ ಗಳಿಕೆ, ತಾಳ್ಮೆಗೆ ಈ ಮಹಿಳೆ ಉತ್ತಮ ನಿದರ್ಶನ.
 

Youtuber Nisha Madhulika Success Story roo
Author
First Published Aug 11, 2023, 3:20 PM IST

ಒಂದು ವಯಸ್ಸಿನ ನಂತ್ರ ಜನರು ಕೆಲಸ ಬಿಟ್ಟು ವಿಶ್ರಾಂತಿ ಪಡೆಯಲು ಮನಸ್ಸು ಮಾಡ್ತಾರೆ. ಆದ್ರೆ  ಭಾರತದ ಮಹಿಳೆಯೊಬ್ಬರು ಕೆಲಸ ಶುರು ಮಾಡಿ ಯಶಸ್ಸು ಸಾಧಿಸಿದ್ದಾರೆ.  ಅವರ ಪಾಕ ವಿಧಾನ ಈಗ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ಈಗಿನ ದಿನಗಳಲ್ಲಿ ಯುಟ್ಯೂಬ್ ಹಣ ಗಳಿಕೆಯ ಮುಖ್ಯ ಮೂಲವಾಗಿದೆ. ಜನರು ಯುಟ್ಯೂಬ್ ನಲ್ಲಿ ನಾನಾ ವಿಷ್ಯಗಳನ್ನು ಪೋಸ್ಟ್ ಮಾಡಿ ಹಣ ಗಳಿಸುತ್ತಿದ್ದಾರೆ. ತಮ್ಮ ಅಡುಗೆಯನ್ನು ಯುಟ್ಯೂಬ್ ಮೂಲಕ ಜನರಿಗೆ ತಿಳಿಸುವ ಮೂಲಕ  ಹೆಚ್ಚು ಹಣ ಗಳಿಸುವ ಟಾಪ್ ಐದು ಜನರಲ್ಲಿ ಒಬ್ಬರಾದ ನಿಶಾ ಮಧುಲಿಕಾ ನಡೆದು ಬಂದ ಹಾದಿ ಬಗ್ಗೆ ನಾವು ಹೇಳ್ತೇವೆ. ಒಂದು ಕಾಲದಲ್ಲಿ ಸಾಧಾರಣ ಗೃಹಿಣಿಯಾಗಿದ್ದ ಅವರು ಇಂದು ತಮ್ಮ ಪ್ರತಿಭೆಯ ಆಧಾರದ ಮೇಲೆ ಕೋಟಿಗಳ ಒಡತಿಯಾಗಿದ್ದಾರೆ.

NishaMadhulika.com ಶುರುವಾಗಿದ್ದು ಹೇಗೆ? : ಉತ್ತರ ಪ್ರದೇಶದಲ್ಲಿ ಜನಿಸಿದ ನಿಶಾ ಮಧುಲಿಕಾ (Nisha Madhulika) ವಿಜ್ಞಾನ ಪದವೀಧರೆ. ಆಕೆಯ ಪತಿ ವೆಬ್ ಡೆವಲಪ್ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆ. ಮೊದಲು ನಿಶಾ ಮಧುಲಿಕಾ ಕೆಲಸ ಮಾಡುತ್ತಿದ್ದರು. ಆದರೆ ಮನೆಯಿಂದ ಕಚೇರಿ  ಬಹಳ ದೂರ ಇದ್ದ ಕಾರಣ ಕೆಲಸ ಬಿಟ್ಟು, ಕೆಲಕಾಲ ಮಕ್ಕಳಿಗೆ ಟ್ಯೂಷನ್ ಕಲಿಸಿದ್ದರು. ಅದೂ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಅವರ ಮಕ್ಕಳಿಬ್ಬರೂ ತಮ್ಮ ಓದು ಮುಗಿದ ನಂತರ ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋದ್ಮೇಲೆ  ನಿಶಾರಿಗೆ ಸಮಯ ಕಳೆಯುವುದು ಕಷ್ಟವಾಯ್ತು. ಈ ಸಮಯದಲ್ಲಿ ನಿಶಾ ಎಮ್ಟಿನೆಸ್ಟ್ (EmptyNest)  ಸಿಂಡ್ರೋಮ್‌  ಗೆ ಬಲಿಯಾದರು. ಇದ್ರಿಂದ ಹೊರ ಬರಲು ಮುಂದಾದ ನಿಶಾ ತೆಗೆದುಕೊಂಡ ಮಹತ್ವದ ನಿರ್ಧಾರ ಅವರ ದಾರಿ ಬದಲಿಸಿತು. 

ಬದುಕಿಗೆ ಸ್ಫೂರ್ತಿ ನೀಡುವ ಸುಧಾಮೂರ್ತಿ ಜೀವನ ಪಾಠಗಳು

2007 ರಲ್ಲಿ, ಅವರು ಅಡುಗೆಯ ಬಗ್ಗೆ ಒಂದು ಲೇಖನವನ್ನು ಓದಿದ್ದರು. ಅದನ್ನು ಓದಿದ ನಂತರ ನಾನು ಇದಕ್ಕಿಂತ ಚೆನ್ನಾಗಿ ಬರೆಯಬಲ್ಲೆ ಎಂದು ನಿಶಾ ಭಾವಿಸಿದ್ರು. ಅಡುಗೆ ಮಾಡುವ ಬಗ್ಗೆ ಹೆಚ್ಚು ಒಲವನ್ನು ಹೊಂದಿದ್ದ ನಿಶಾ, ಹವ್ಯಾಸದ ಮೂಲಕ ಹಣ ಗಳಿಸುವ ಯೋಚನೆ ಮಾಡಿದರು. ಇದಾದ ನಂತರ ಪತಿಯ ಸಹಾಯದಿಂದ ಫುಡ್ ಬ್ಲಾಗ್ ಬರೆಯತೊಡಗಿದರು. ನಂತರ ನಿಶಾ ಮಗ ಅವರಿಗೆ nishamadhulika.com ಎಂಬ ವೆಬ್‌ಸೈಟ್ ಶುರು ಮಾಡಲು ನೆರವಾದ್ರು. ನಿಶಾ ವಿವರಣೆ  ಮತ್ತು ಸುಲಭವಾದ ಪಾಕವಿಧಾನ ಓದುಗರ ಸಂಖ್ಯೆ ನಿರಂತರವಾಗಿ ಹೆಚ್ಚಾಗಲು ಕಾರಣವಾಯಿತು. ಅದರ ನಂತರ ರೆಸಿಪಿ ವಿಡಿಯೋ ಮಾಡ್ತಿದ್ದ ನಿಶಾ ಅದನ್ನು ವೆಬ್ಸೈಟ್ ನಲ್ಲಿ ಹಂಚಿಕೊಳ್ಳಲು ಶುರು ಮಾಡಿದ್ರು. 

ಯಶಸ್ವಿ ಯುಟ್ಯೂಬ್ ಚಾನೆಲ್ : ವೆಬ್‌ಸೈಟ್‌ನಲ್ಲಿ ಯಶಸ್ವಿಯಾದ ನಂತರ, ನಿಶಾ ಮಧುಲಿಕಾ ಯೂಟ್ಯೂಬ್‌ನತ್ತ ಹೆಜ್ಜೆ ಹಾಕಿದರು. 2011 ರಲ್ಲಿ ಅವರು ನಿಶಾ ಮಧುಲಿಕಾ ಎಂಬ ಹೆಸರಿನಲ್ಲಿ ತಮ್ಮದೇ ಆದ ಚಾನಲ್ ಅನ್ನು ಪ್ರಾರಂಭಿಸಿದರು. ನಿಶಾ ವಿಡಿಯೋವನ್ನು ಜನರು ಇಷ್ಟಪಟ್ಟು ನೋಡ್ತಾರೆ. ಅವರ ಮೊದಲ ವೀಡಿಯೋ ರೋಸ್ ವಾಟರ್ ತಯಾರಿಕೆಯ ಕುರಿತಾಗಿತ್ತು.  ಸುಮಾರು 11 ವರ್ಷಗಳ ಹಿಂದೆ ಅವರು ಪೋಸ್ಟ್ ಮಾಡಿದ್ದ ಆ ವಿಡಿಯೋ 1.4 ಮಿಲಿಯನ್‌ಗಿಂತಲೂ ಹೆಚ್ಚು ವೀವ್ಸ್ ಪಡೆದಿದೆ. ಆರಂಭದಲ್ಲಿ ತಮ್ಮ ಅಡುಗೆ ಮನೆಯಲ್ಲೇ ವಿಡಿಯೋ ತಯಾರಿಸಿ ಪೋಸ್ಟ್ ಮಾಡ್ತಿದ್ದ ನಿಶಾ, ಹಣ ಗಳಿಕೆ ಶುರುವಾದಂತೆ ಮನೆ ಮೇಲೆ ಒಂದು ಸ್ಟುಡಿಯೋ ಸಿದ್ಧಪಡಿಸಿದ್ರು. ಈಗ ವಿಡಿಯೋ ಎಡಿಟಿಂಗ್  ಮತ್ತು ರೆಕಾರ್ಡಿಂಗ್ ಕೆಲಸಕ್ಕೆ ಕೆಲಸದವರನ್ನು ನೇಮಿಸಿಕೊಂಡಿದ್ದಾರೆ.

ಇಂಜಿನಿಯರ್‌ ಕೆಲಸ ಬಿಟ್ಟು ಸ್ಟಾರ್ಟಪ್‌ : ಬಿಇ ಪದವೀಧರನ ಕೈ ಹಿಡಿದ ಮಸಾಲೆ ಪುಡಿ !

ಇಷ್ಟು ಗಳಿಸ್ತಾರೆ ನಿಶಾ : ನಿಶಾ ಯೂಟ್ಯೂಬ್ ಚಾನೆಲ್‌ನಲ್ಲಿ 13.7ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರಿದ್ದಾರೆ. ಅವರು 1000 ಕ್ಕೂ ಹೆಚ್ಚು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ನಿಶಾ ತಿಂಗಳಿಗೆ ಸುಮಾರು 18 ರಿಂದ 20 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಹಲವು ಸುದ್ದಿ ವಾಹಿನಿಗಳು, ಟಿವಿ ಶೋಗಳಲ್ಲಿ ಅತಿಥಿಯಾಗಿಯೂ ಹೋಗ್ತಾರೆ. ಸಸ್ಯಹಾರ ಹಾಗೂ ಸರಳ ವಿಧಾನವೇ ಅವರನ್ನು ಇಷ್ಟು ಪ್ರಸಿದ್ಧಿಗೊಳಿಸಿದೆ. ತಮ್ಮ 50ನೇ ವಯಸ್ಸಿನಲ್ಲಿ ವೃತ್ತಿ ಆರಂಭಿಸಿದ ನಿಶಾ ಎಲ್ಲ ಯುವಕರಿಗೆ ಮಾದರಿ. ನಿರಂತರ ಪರಿಶ್ರಮ ಹಾಗೂ ಶ್ರದ್ಧೆ ಸಾಧನೆಗೆ ಬಹಳ ಮುಖ್ಯ ಎಂಬುದನ್ನು ನಿಶಾ ತೋರಿಸಿಕೊಟ್ಟಿದ್ದಾರೆ. 
 

Follow Us:
Download App:
  • android
  • ios