ಲಾಕ್‍ಡೌನ್ ಪರಿಣಾಮವಾಗಿ ಎಲ್ಲರೂ ಮನೆಯಿಂದಲೇ ಆಫೀಸ್ ಕೆಲಸಗಳನ್ನು ಮಾಡಬೇಕಾಗಿರೋದು ಅನಿವಾರ್ಯ. ಹಾಗಂತ ಮನೆಯಲ್ಲಿದ್ದಾರೆ ಎನ್ನುವ ಕಾರಣಕ್ಕೆ ಕೆಲಸವೇನು ಕಡಿಮೆಯಾಗುತ್ತಾ? ಖಂಡಿತಾ ಇಲ್ಲ. ಆಫೀಸ್‍ನಲ್ಲಿ ಮಾಡುವಷ್ಟೇ ಕೆಲಸವನ್ನು ಮನೆಯಲ್ಲಿಯೂ ಮಾಡಬೇಕು. ಇನ್ನು ಮನೆಯಿಂದಲೇ ಆಫೀಸ್ ಕೆಲಸ ಮಾಡೋದು ಎನ್ನುವ ಕಾರಣಕ್ಕೆ ಮಹಿಳೆಗೆ ಮನೆಗೆಲಸದಿಂದ ವಿನಾಯ್ತಿ ಇದೆಯಾ? ಇಲ್ಲವೇ ಇಲ್ಲ. ಗಂಡಸರಿಗೆ ವರ್ಕ್ ಫ್ರಂ ಹೋಂ ಆರಾಮದಾಯಕ ಅನಿಸಬಹುದು,ಆದ್ರೆ ಮಹಿಳೆಗೆ? ನೀವೇ ಗಮನಿಸಿ ನೋಡಿ, ಪತಿ ಮತ್ತು ಪತ್ನಿ ಇಬ್ಬರೂ ಮನೆಯಿಂದಲೇ ಕೆಲಸ ಮಾಡುತ್ತಿರುತ್ತಾರೆ. ಪತಿ ಬೆಳಗ್ಗೆ ಶಿಸ್ತಾಗಿ ಪತ್ನಿ ತಂದಿಟ್ಟ ಕಾಫಿ-ತಿಂಡಿ ತಿಂದು ಲ್ಯಾಪ್‍ಟಾಪ್ ಹಿಡಿದು ರೂಮ್ ಲಾಕ್ ಮಾಡಿಕೊಂಡು ಕೆಲಸ ಮಾಡಲು ಪ್ರಾರಂಭಿಸಿದರೆ ಮತ್ತೆ ಡೋರ್ ಒಪನ್ ಮಾಡೋದು ಮಧ್ಯಾಹ್ನದ ಊಟಕ್ಕೆ. ಮಧ್ಯೆ ಅಗತ್ಯವಿದ್ರೆ ಮಾತ್ರ ಒಂದೆರಡು ಬಾರಿ ಮುಖದರ್ಶನ ನೀಡಬಹುದು. ಆದ್ರೆ ಪತ್ನಿ ಪಾಡು ಹೇಗಿರುತ್ತೆ ಗೊತ್ತಾ? ಯಾವ ಲಾಕ್‍ಡೌನ್ ಆದ್ರೂ ಅಡುಗೆ, ಮನೆ ಕ್ಲೀನಿಂಗ್ ಸೇರಿದಂತೆ ನಿತ್ಯದ ಕೆಲಸಗಳಿಗೆ ಬ್ರೇಕ್ ಇಲ್ಲ. ಜೊತೆಗೆ ಆಫೀಸ್‍ಗೆ ಸಂಬಂಧಿಸಿದ ಕೆಲಸಗಳನ್ನು ಅಂದೇ ಪೂರ್ಣಗೊಳಿಸಬೇಕು. ಈ ಮಧ್ಯೆ ಮಕ್ಕಳ ಕಿರಿಕಿರಿ. ಒಟ್ಟಾರೆ ಎಲ್ಲ ಸಂದರ್ಭಗಳಲ್ಲೂ ಮಹಿಳೆ ಪುರುಷರಿಗಿಂತ ಹೆಚ್ಚು ಕೆಲಸ ಮಾಡುತ್ತಾಳೆ ಎನ್ನುವುದು ಪರಮ ಸತ್ಯ. ಇದನ್ನು ಇತ್ತೀಚೆಗೆ ನಡೆದ ಹೊಸ ಅಧ್ಯಯನ ಕೂಡ ದೃಢಪಡಿಸಿದೆ.

ವರದಕ್ಷಿಣೆ ಅಪರಾಧ, ಅದಕ್ಕೇ ಉಡುಗೊರೆಯ ಹೆಸರಿಟ್ಟರೆ?

ಜವಾಬ್ದಾರಿಯುತ ನಾರಿ
ಮೆಕ್ ಕಿನ್ಸೆ ವರದಿ ಪ್ರಕಾರ ಆಧುನಿಕ ಮಹಿಳೆಯ ಜೀವನಶೈಲಿ ಬದಲಾಗಿರಬಹುದು,ಆಕೆ ಬದುಕು ಸುಧಾರಿಸಿರಬಹುದು,ಆದರೂ ಉದ್ಯೋಗ ಕ್ಷೇತ್ರದಲ್ಲಿ ಲಿಂಗ ತಾರತಮ್ಯ,ವೇತನ ತಾರತಮ್ಯ ಹಾಗೂ ಲೈಂಕಿಗ ಕಿರುಕುಳಗಳಿಗೆ ಇನ್ನೂ ಫುಲ್‍ಸ್ಟಾಪ್ ಬಿದ್ದಿಲ್ಲ. ಈ ಎಲ್ಲದರ ನಡುವೆ ಪುರುಷರಿಗೆ ಹೋಲಿಸಿದ್ರೆ ಮಹಿಳೆ ಹೆಚ್ಚು ಜವಾಬ್ದಾರಿಗಳನ್ನು ತನ್ನ ಹೆಗಲ ಮೇಲೇರಿಸಿಕೊಂಡಿದ್ದಾಳೆ ಎಂದಿದೆ ಈ ವರದಿ. ಮಹಿಳೆಗೆ ಉದ್ಯೋಗದಲ್ಲಿ ತನ್ನದೇ ಆದ ಜವಾಬ್ದಾರಿಗಳಿರುತ್ತವೆ. ವಹಿಸಿದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ರೆ ಮಾತ್ರ ಅವಳ ವೃತ್ತಿ ಬದುಕು ಮುಂದೆ ಸಾಗಲು ಸಾಧ್ಯ. ಜೊತೆಗೆ ಕುಟುಂಬ ನಿರ್ವಹಣೆಯ ಹೊಣೆ ಕೂಡ ಆಕೆಯ ಮೇಲಿದೆ. 

ಕುಟುಂಬದ ಹೊಣೆಗಾರಿಕೆ ತಗ್ಗಿಲ್ಲ
ಭಾರತೀಯ ಸಂಸ್ಕøತಿಯಲ್ಲಿ ತಾಯಿಗೆ ಮಹತ್ವದ ಸ್ಥಾನವಿದೆ. ಮಕ್ಕಳ ಭವಿಷ್ಯದ ಮುಖ್ಯ ನಿರ್ಮಾತೃ ಅಮ್ಮನೇ ಎಂದು ತಲಾತಲಾಂತರದಿಂದ ನಂಬಿಕೊಂಡು ಬಂದಿದ್ದೇವೆ. ಇದೇ ಕಾರಣಕ್ಕೆ ಇಂದಿಗೂ ಭಾರತದಲ್ಲಿ ಮಹಿಳೆ ಮಕ್ಕಳ ಪಾಲನೆ ಹಾಗೂ ಕುಟುಂಬದ ಹಿತಕ್ಕೇ ಮೊದಲ ಪ್ರಾಶಸ್ತ್ಯ ನೀಡುತ್ತಾಳೆ. ಉದ್ಯೋಗ ಹಾಗೂ ಕುಟುಂಬ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಹೇಳಿದರೆ ಖಂಡಿತವಾಗಿಯೂ ಆಕೆಯ ಆಯ್ಕೆ ಕುಟುಂಬವೇ ಆಗಿರುತ್ತದೆ. ಇನ್ನು ಉದ್ಯೋಗಸ್ಥೆ ಎಂಬ ಕಾರಣಕ್ಕೆ ಅಡುಗೆ, ಮಕ್ಕಳ ಪಾಲನೆ ಜವಾಬ್ದಾರಿಗಳನ್ನು ಪತಿ ಅಥವಾ ಕುಟುಂಬದ ಇತರ ಪುರುಷ ಸದಸ್ಯರು ಅವಳೊಂದಿಗೆ ಸಮನಾಗಿ ಹಂಚಿಕೊಳ್ಳುತ್ತಿಲ್ಲ ಎಂಬುದು ಕಟುಸತ್ಯ.

ಗರ್ಭಿಣಿಗೆ ಸುಖಾಸುಮ್ಮನೆ ಸಲಹೆ ಕೊಡೋ ಬದ್ಲು ಇಂಥ ಮಾತನಾಡಿ

ವರ್ಕ್ ಫ್ರಂ ಹೋಂ ಕಷ್ಟ ಕಷ್ಟ
ಪುರುಷರಿಗೆ ಹೋಲಿಸಿದ್ರೆ ಮಹಿಳೆಗೆ ಮನೆಯಲ್ಲಿ ಕುಳಿತು ಕೆಲಸ ಮಾಡೋದು ತುಂಬಾ ಕಷ್ಟ. ಅದ್ರಲ್ಲೂ ಮನೆಯಲ್ಲಿ ಸಹಾಯಕ್ಕೆ ಅಮ್ಮ, ಅತ್ತೆ ಯಾರೂ ಇಲ್ಲವೆಂದ್ರೆ ಆಕೆ ಪಾಡು ಕೇಳೋದೇ ಬೇಡ. ಈಗಂತೂ ಮಕ್ಕಳು ಬೇರೆ ಮನೆಯಲ್ಲಿರುವ ಕಾರಣ ಆಕೆಗೆ ಕೆಲಸದ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸೋದು ಕಷ್ಟದ ಕೆಲಸವೇ ಸರಿ. ಮಕ್ಕಳಿಗೆ ಒಂದಿಷ್ಟು ಆಟಿಕೆ ಅಥವಾ ಚಟುವಟಿಕೆ ನೀಡಿ ಅವರನ್ನು ಎಂಗೇಜ್ ಮಾಡಿ ಕೆಲಸಕ್ಕೆ ಕೂತುಕೊಂಡ್ರೆ ಸ್ವಲ್ಪ ಸಮಯದ ಬಳಿಕ ಅವರು ಒಂದಲ್ಲ ಒಂದು ಬೇಡಿಕೆ ಹಿಡಿದು ಅಮ್ಮನ ಬಳಿ ಬಂದೇಬರುತ್ತಾರೆ. ಹೀಗಾಗಿ ಆಫೀಸ್ ವರ್ಕ್ ಪ್ರೆಷರ್ ಜೊತೆಗೆ ಮಕ್ಕಳನ್ನು ಮ್ಯಾನೇಜ್ ಮಾಡೋದು ಸವಾಲಿನ ಕೆಲಸ. 

ಮಕ್ಕಳಿಗೆ ಮನಿ ಪಾಠ ಮನೆಯಲ್ಲೇ ಆಗಲಿ

ಮಹಿಳೆಗೇನೋ ರಿಯಾಯ್ತಿ ಇಲ್ಲ
ಮಹಿಳೆಗೆ ಕುಟುಂಬದ ಜವಾಬ್ದಾರಿಯೂ ಇದೆ ಎಂಬ ಕಾರಣಕ್ಕೆ ಯಾವ ಸಂಸ್ಥೆಯೂ ಆಕೆಗೆ ಕಡಿಮೆ ಕೆಲಸ ನೀಡೋದಿಲ್ಲ ಅಥವಾ ಕೆಲಸದ ಹೊರೆಯನ್ನು ತಗ್ಗಿಸೋದಿಲ್ಲ. ಆಕೆ ಅವಳ ಪಾಲಿನ ಕೆಲಸವನ್ನು ಮಾಡಿ ಮುಗಿಸಲೇಬೇಕು. ಹೀಗಾಗಿ ಎರಡೂ ಜವಾಬ್ದಾರಿಗಳನ್ನು ಸರಿತೂಗಿಸಿಕೊಂಡು ಹೋಗಲು ಮಹಿಳೆಗೆ ಕುಟುಂಬ ಸದಸ್ಯರ ಬೆಂಬಲ ಅಗತ್ಯ. ಆದ್ರೆ ಎಲ್ಲ ಉದ್ಯೋಗಸ್ಥ ಮಹಿಳೆಗೂ ಇಂಥ ಸರ್ಪೋಟ್ ಸಿಸ್ಟ್‍ಂ ಇರೋದಿಲ್ಲ.ಇದೇ ಕಾರಣಕ್ಕೆ ಅದೆಷ್ಟೇ ಸ್ಮಾರ್ಟ್ ವರ್ಕರ್ ಆಗಿದ್ರೂ, ಟ್ಯಾಲೆಂಟ್ ಇದ್ರೂ ಅನೇಕ ಮಹಿಳೆಯರು ಮಕ್ಕಳಾದ ಬಳಿಕ ಪೂರ್ಣಕಾಲಿಕ ಉದ್ಯೋಗಕ್ಕೆ ಗುಡ್ ಬೈ ಹೇಳಿ ಕಡಿಮೆ ವೇತನದ ಮನೆಯಲ್ಲೇ ಕುಳಿತು ಮಾಡಬಹುದಾದ ಕೆಲಸಗಳನ್ನು ಆರಿಸಿಕೊಳ್ಳುತ್ತಾರೆ ಎಂದು ಈ ಅಧ್ಯಯನ ಹೇಳಿದೆ. ಮಹಿಳೆ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸುಗಳಿರದಿದ್ದರೆ ಅದೆಷ್ಟೇ ಅಧ್ಯಯನ ನಡೆದ್ರೂ, ಸಮೀಕ್ಷೆ ನಡೆದ್ರೂ ಏನ್ ಪ್ರಯೋಜನ?