Women Retirement Plan: ಪುರುಷರಿಗಿಂತ ಹೆಚ್ಚು ಉಳಿಸೋದು ಹೆಣ್ಮಕ್ಕಳು!
ಒಬ್ಬರಿಬ್ಬರಲ್ಲ ಬಹುತೇಕ ಎಲ್ಲ ಮಹಿಳೆಯರ ಪಟ್ಟಿಯಲ್ಲಿ ಸೇವಿಂಗ್ ವಿಷ್ಯ ಕೊನೆಯಲ್ಲಿರುತ್ತದೆ. 25 ವರ್ಷ ವಯಸ್ಸಿನ ಮಹಿಳೆಯರು ನಿವೃತ್ತಿ ಬಗ್ಗೆ ಸ್ವಲ್ಪವೂ ಆಲೋಚನೆ ಮಾಡುವುದಿಲ್ಲ. ಆದ್ರೆ ಹಣ ಉಳಿತಾಯ ಬಹಳ ಮುಖ್ಯ. ಕೇವಲ ಆರ್ಥಿಕ ಕಾರಣಕ್ಕೆ ಮಾತ್ರವಲ್ಲ ಮಹಿಳೆ ಎಂಬ ಕಾರಣಕ್ಕೂ ಉಳಿತಾಯ ಮಾಡುವ ಅವಶ್ಯಕತೆಯಿದೆ.
ಈಗಿನ ಮಹಿಳೆ (Women )ಯರು ಬದಲಾಗುತ್ತಿದ್ದಾರೆ. ಓದು,ಉದ್ಯೋಗಕ್ಕೆ ಆದ್ಯತೆ ನೀಡುತ್ತಿದ್ದಾರೆ. ಪುರುಷರ ಸಮನಾಗಿ ದುಡಿಯುತ್ತಿದ್ದಾರೆ. ಇದೆಲ್ಲವೂ ನಿಜವಾದ್ರೂ ಮಹಿಳೆಯರು ಒಂದು ವಿಷ್ಯದಲ್ಲಿ ಇನ್ನೂ ಬದಲಾಗಿಲ್ಲ. ಅದು ಉಳಿತಾಯ (Savings). ಮಹಿಳೆಯ ಆದ್ಯತೆಯಲ್ಲಿ ಕೊನೆಯಲ್ಲಿರುವ ಸಂಗತಿ ಇದು. ಅಡುಗೆ ಮನೆಯ ಡಬ್ಬಗಳಲ್ಲಿ ಹಣ ಸಿಗುತ್ತಲ್ವಾ? ಇದು ಉಳಿತಾಯವಲ್ಲವ ಎಂದು ನೀವು ಕೇಳಬಹುದು. ಯಸ್. ಇದು ಉಳಿತಾಯವೇ. ಆದ್ರೆ ಈ ಉಳಿತಾಯ ಆಕೆ ನಿವೃತ್ತಿ ಜೀವನಕ್ಕೆ ಸಾಲುವುದಿಲ್ಲ. ಹಾಗಾಗಿ ಮಹಿಳೆ ಪುರುಷರಿಗಿಂತ ಹೆಚ್ಚು ಉಳಿತಾಯ ಮಾಡಬೇಕಾದ ಅನಿವಾರ್ಯತೆಯಿದೆ. ಒಳ್ಳೆ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಉದ್ಯೋಗ,ವ್ಯವಹಾರ ಶುರು ಮಾಡ್ತಿದ್ದಂತೆ ಸೇವಿಂಗ್ ಕೂಡ ಆರಂಭಿಸಬೇಕಿದೆ.
ತಂದೆ,ಕುಟುಂಬಸ್ಥರು ಅಥವಾ ಪತಿಯ ಆರ್ಥಿಕ ಸ್ಥಿತಿ (Financial position )ಉತ್ತಮವಾಗಿದೆ ಎಂಬ ಕಾರಣ ನೀಡಿ ಕೆಲ ಮಹಿಳೆಯರು ಉಳಿತಾಯಕ್ಕೆ ಮುಂದಾಗುವುದಿಲ್ಲ. ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ. ಪತಿ(husband )ಯ ನಿಧನ, ಸರಿಯಾದ ಸಮಯಕ್ಕೆ ಸಿಗದ ಕುಟುಂಬಸ್ಥರ ನೆರವು,ವಿಚ್ಛೇದನ ಹೀಗೆ ಅನೇಕ ಕಾರಣಗಳಿಗೆ ಮುಂದೆ ಆರ್ಥಿಕ ಸಮಸ್ಯೆ ಎದುರಾಗಬಹುದು. ಎಲ್ಲರಿಗೂ ಇಂಥ ಪರಿಸ್ಥಿತಿ ಬರದೆ ಇರಬಹುದು. ಆದ್ರೆ ಪರಿಸ್ಥಿತಿ ಬಂದ ಮೇಲೆ ಕಷ್ಟಪಡುವ ಬದಲು ಮುಂದಾಲೋಚನೆ ಬಹಳ ಮುಖ್ಯವಾಗುತ್ತದೆ.
ಮಹಿಳೆಯರ ಗಳಿಕೆ (earning) ಕಡಿಮೆ : ದೇಶದಲ್ಲಿ ಲಿಂಗತಾರತಮ್ಯ ಇನ್ನೂ ಇದೆ. ಇದು ಮಹಿಳೆಯರ ಸಂಬಳದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಪುರುಷರ ಸಮಾನವಾಗಿ ಮಹಿಳೆ ಕೆಲಸ ಮಾಡಿದರೂ, ಆಕೆಗೆ ಸಿಗುವ ಸಂಬಳ ಕಡಿಮೆ. ಪುರುಷರ ಸರಾಸರಿ ಆದಾಯ ಗಂಟೆಗೆ 231 ರೂಪಾಯಿಗಳಾಗಿದ್ದರೆ, ಮಹಿಳೆಯರಿಗೆ ಸರಾಸರಿ 184.4 ರೂಪಾಯಿ ಸಿಗುತ್ತದೆ. ಕಡಿಮೆ ಗಳಿಕೆಯಿರುವ ಕಾರಣ ಹೆಚ್ಚು ಉಳಿತಾಯ ಅನಿವಾರ್ಯ.
ಕಡಿಮೆ ದುಡಿಮೆಯ ಅವಧಿ : ಮಹಿಳೆಯರ ಸರಾಸರಿ ದುಡಿಮೆ, ವಯಸ್ಸು ಕಡಿಮೆ. ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ 7 ವರ್ಷ ಕಡಿಮೆ ಕೆಲಸ ಮಾಡುತ್ತಾರೆ. ಮದುವೆಯಾದ್ಮೇಲೆ ಅನೇಕರು ಕೆಲಸ ಬಿಟ್ಟರೆ ಮತ್ತೆ ಬಹುತೇಕರು ಮಕ್ಕಳಾದ್ಮೇಲೆ ಕೆಲಸ ಬಿಡ್ತಾರೆ. ಎಲ್ಲ ಸರಿಯಾದ್ಮೇಲೆ ಮತ್ತೊಮ್ಮೆ ಕೆಲಸಕ್ಕೆ ಸೇರಿದ್ರೆ ಮಹಿಳೆಯರಿಗೆ ಕಡಿಮೆ ಸಂಬಳ ಸಿಗುತ್ತದೆ.
ಸರಾಸರಿ ಆಯಸ್ಸು : ಮಹಿಳೆಯರ ಸರಾಸರಿ ವಯಸ್ಸು ಪುರುಷರಿಗಿಂತ ಹೆಚ್ಚು. ಪುರುಷರ ಸರಾಸರಿ ವಯಸ್ಸು 66.9 ವರ್ಷಗಳಾಗಿದ್ದರೆ ಮಹಿಳೆಯರದ್ದು 69.9 ವರ್ಷಗಳಾಗಿದೆ. ಅಂದ್ರೆ ಪುರುಷರಿಗಿಂತ ಮಹಿಳೆಯರ ಜೀವಿತಾವಧಿ ಹೆಚ್ಚಿರುವ ಕಾರಣ ನಿವೃತ್ತಿಗಾಗಿ ಹೆಚ್ಚು ಹಣ ಉಳಿಸುವ ಅಗತ್ಯವಿದೆ.
ಆರ್ಥಿಕ ವೃದ್ಧಿಗೆ ಮಹಿಳೆ ಏನು ಮಾಡಬೇಕು :
ಹೆಚ್ಚಿನ ಉಳಿತಾಯ : ಮಹಿಳೆಯರು ಪುರುಷರಿಗಿಂತ ಕನಿಷ್ಠ ಎರಡು ಪಟ್ಟು ಉಳಿತಾಯ ಮಾಡಬೇಕಾಗುತ್ತದೆ. ಮಾಸಿಕ ಆದಾಯದಲ್ಲಿ ಶೇಕಡಾ 10ರಷ್ಟು ಉಳಿತಾಯ ಮಾಡ್ತಿದ್ದರೆ ಅದನ್ನು ಶೇಕಡಾ 20ಕ್ಕೆ ಹೆಚ್ಚಿಸುವ ಅಗತ್ಯವಿದೆ. ಉಳಿತಾಯ ಮಾಡದೆ ಹೋದ ಮಹಿಳೆಯರು ಈಗಿನಿಂದಲೇ ಇದನ್ನು ಶುರು ಮಾಡಬೇಕಿದೆ. ಆರಂಭದಲ್ಲಿ ಕಷ್ಟವೆನಿಸಿದ್ರೂ ಮುಂದಿನ ಜೀವನಕ್ಕೆ ಇದು ನೆರವಾಗಲಿದೆ.
ಹೂಡಿಕೆಗೆ ಉತ್ತಮ ಮಾರ್ಗ: ಹೂಡಿಕೆ ಬಗ್ಗೆ ಮಹಿಳೆಯರು ತಿಳಿಬೇಕಾದ ಅಗತ್ಯವಿದೆ. ಹೂಡಿಕೆಗೆ ಸ್ಮಾರ್ಟ್ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಯಾವ ಯೋಜನೆ ದೀರ್ಘಾವಧಿಯಲ್ಲಿ ಲಾಭ ನೀಡಬಲ್ಲದು ಎಂಬುದನ್ನು ಸರಿಯಾಗಿ ತಿಳಿದು ಹೂಡಿಕೆ ಮಾಡಬೇಕು.
ಆರೋಗ್ಯ ವಿಮೆ : ಮಹಿಳೆಯರು ಆರೋಗ್ಯ ವಿಮೆಯನ್ನು ಅವಶ್ಯಕವಾಗಿ ತೆಗೆದುಕೊಳ್ಳಬೇಕು. ನಿವೃತ್ತಿಗೆ ನೀವು ಕೂಡಿಟ್ಟ ಹಣ ಅನಾರೋಗ್ಯದ ವೇಳೆ ಖರ್ಚಾಗಬಹುದು. ಆರೋಗ್ಯ ವಿಮೆ ಮಾಡಿದ್ದರೆ ನಿವೃತ್ತಿ ಹಣ ಹಾಗೆ ಉಳಿಯುತ್ತದೆ.
ಕೆಲಸ ಹಾಗೂ ಸಮಯ : ಭವಿಷ್ಯದ ಬಗ್ಗೆ ಆಲೋಚನೆ ಮಾಡುವ,ಹೂಡಿಕೆ ಮಾಡುವ ಮಹಿಳೆಯರು ಸಂಬಳದ ಬಗ್ಗೆ ಚರ್ಚೆ ನಡೆಸಬೇಕು. ನಿಮ್ಮ ಯೋಗ್ಯತೆಗೆ ತಕ್ಕಷ್ಟು ಸಂಬಳ ಸಿಗುವ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ ಕಾರಣಗಳನ್ನು ಬದಿಗಿಟ್ಟು ಕೈಲಾದಷ್ಟು ವರ್ಷ ದುಡಿಮೆಗೆ ಆದ್ಯತೆ ನೀಡಬೇಕು.