ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ರೂ, ಒಂದೂ ಬದುಕುಳಿಯಲಿಲ್ಲ!
ರಾಜಸ್ಥಾನದ ಕರೌಲಿಯಲ್ಲಿ ಮಹಿಳೆಯೊಬ್ಬಳು ಸೋಮವಾರ ಏಕಕಾಲಕ್ಕೆ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮದುವೆಯಾದ ಏಳು ವರ್ಷಗಳ ನಂತರ ಮೊದಲ ಬಾರಿಗೆ ತಾಯಿಯಾಗಿದ್ದ ರೇಷ್ಮಾ ಹೆಸರಿನ ಮಹಿಳೆಯ ಪತಿ, ಕೇರಳದಲ್ಲಿ ಮಾರ್ಬಲ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದಾರೆ. ಐದು ಮಕ್ಕಳ ತೂಕವು 300 ರಿಂದ 660 ಗ್ರಾಂ ಇದೆ. ಆ ಕಾರಣದಿಂದಾಗಿ ನವಜಾತ ಶಿಶುಗಳನ್ನು ಜೈಪುರಕ್ಕೆ ಕಳುಹಿಸಲಾಗಿತ್ತು, ಆದರೆ, ಇವುಗಳಲ್ಲಿ ಒಂದು ಮಗು ಕೂಡ ಬದುಕುಳಿಯಲಿಲ್ಲ.
ಕರೌಲಿ (ಜುಲೈ 16): ಹಿಂದಿಯಲ್ಲಿ ಪ್ರಖ್ಯಾತವಾದ ಮಾತೊಂದಿದೆ. "ಊಪರ್ ವಾಲಾ ಜಬ್ ಭಿ ದೇತಾ, ಚಪ್ಪರ್ ಪಾಡ್ ಕೆ ದೇತಾ ಹೇ' ಅಂತ. ಅದರ ಸಾಮಾನ್ಯ ಅರ್ಥ ಏನೆಂದರೆ, ದೇವರು ಏನಾದರೂ ಕೊಡಲು ಆರಂಭಿಸಿದರೆ, ಹೇರಳವಾಗಿ ಕೊಡ್ತಾನೆ ಅನ್ನೋದು. ಅದೇ ರೀತಿಯ ಪ್ರಕರಣವೊಂದು ರಾಜಸ್ಥಾನದಲ್ಲಿ ವರದಿಯಾಗಿದೆ. ದುರಂತ ಏನೆಂದರೆ, ದೇವರು ಕೊಟ್ಟಷ್ಟೇ ವೇಗದಲ್ಲಿ ಕಿತ್ತುಕೊಂಡು ಬಿಟ್ಟಿದ್ದಾನೆ. ಮದುವೆಯಾಗಿ ವರ್ಷಗಳೇ ಕಳೆದರು ಮಹಿಳೆ ಗರ್ಭಿಣಿಯಾಗಿರಲಿಲ್ಲ. ಬರೋಬ್ಬರಿ ಏಳು ವರ್ಷದ ಬಳಿಕ ಮೊದಲ ಬಾರಿಗೆ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬಳು ಸೋಮವಾರ, ಮಗುವಿಗೆ ಜನ್ಮ ನೀಡಿದ್ದು, ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಮಕ್ಕಳಿಗೆ ಮಹಾತಾಯಿ ಜನ್ಮವಿತ್ತಿದ್ದಾಳೆ. ರಾಜಸ್ಥಾನದ ಕರೌಲಿ ಜಿಲ್ಲೆಯ ಮಸಲ್‌ಪುರದ ಪಿಪ್ರಾನಿ ಗ್ರಾಮದ ನಿವಾಸಿ 25 ವರ್ಷದ ರೇಷ್ಮಾ ಐದು ಮಕ್ಕಳಿಗೆ ಜನ್ಮ ನೀಡಿದ ತಾಯಿ. ಕರೌಲಿಯ ಖಾಸಗಿ ಆಸ್ಪತ್ರೆಯಲ್ಲಿಯೇ ರೇಷ್ಮಾಗೆ ಹರಿಗೆಯಾಗಿದ್ದು, ಒಂದೇ ಬಾರಿಗೆ ಐದು ಮಕ್ಕಳು ಜನಿಸಿದ್ದು ಆಸ್ಪತ್ರೆ ಸಿಬ್ಬಂದಿಗೂ ಅಚ್ಚರಿ ಮೂಡಿಸಿದೆ. ಐದು ಮಕ್ಕಳಿಗೆ ಹೆರಿಗೆಯಾದ ಸುದ್ದಿ ತಕ್ಷಣವೇ ಆಸ್ಪತ್ರೆಯಾದ್ಯಂತ ಹರಡಿದ್ದು, ಆಸ್ಪತ್ರೆಯ ರೋಗಿಗಳು ಮತ್ತು ರೇಷ್ಮಾ ಅವರ ಕುಟುಂಬದವರು ಮಕ್ಕಳನ್ನು ನೋಡಲು ಕಾತುರರಾಗಿದ್ದರು. ರೇಷ್ಮಾ, ಇಬ್ಬರು ಗಂಡು ಹಾಗೂ ಮೂರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯೆ ಆಶಾ ಮೀನಾ ಹೇಳಿದ್ದರು.
ಆರೋಗ್ಯವಾಗಿದ್ದ ತಾಯಿ: ರೇಷ್ಮಾ 7 ತಿಂಗಳಿಗೆ ಎಲ್ಲಾ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿಯ ಆರೋಗ್ಯವಾಗಿದ್ದಾಳೆ. ಆದರೆ, ಹುಟ್ಟಿರುವ ಮಕ್ಕಳು ಬಹಳ ದುರ್ಬಲರಾಗಿದ್ದಾರೆ. ಅವರನ್ನು ಈ ಹಿಂದೆ ಕರೌಲಿಯ ಸರ್ಕಾರಿ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಘಟಕದಲ್ಲಿರುವ ಎಸ್‌ಎನ್‌ಸಿಯು ವಾರ್ಡ್‌ಗೆ ದಾಖಲಿಸಲಾಗಿತ್ತು. ಆದರೆ, ಮಕ್ಕಳು ತೀರಾ ಅಶಕ್ತರಾಗಿರುವ ಕಾರಣ ಅವರನ್ನು ಜೈಪುರದ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು. ಆದರೆ, ಉತ್ತಮ ಚಿಕಿತ್ಸೆಯ ಹೊರತಾಗಿಯೂ ಜೈಪುರದಲ್ಲಿ ಎಲ್ಲಾ ಐದೂ ಮಕ್ಕಳು ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ. ಸೋಮವಾರ ಬೆಳಗ್ಗೆ 8.30ಕ್ಕೆ ರೇಷ್ಮಾ ಅವರನ್ನು ದಾಖಲಿಸಲಾಗಿತ್ತು. ಬಳಿಕ ರೇಷ್ಮಾ 8.48ಕ್ಕೆ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಗರ್ಭಪಾತಕ್ಕೆ ಮಹಿಳೆಯನ್ನೇ ದೂರುವುದು ಯಾಕೆ, ಆಕೆ ಕಾರಣಳಲ್ಲ; ಅಧ್ಯಯನ
300 ರಿಂದ 600 ಗ್ರಾಂ ತೂಕದ ಮಕ್ಕಳು: ಐದು ಮಕ್ಕಳು 300 ರಿಂದ 660 ಗ್ರಾಂ ತೂಕ ಹೊಂದಿದ್ದಾರೆ ಎಂದು ಎಸ್‌ಎನ್‌ಸಿಯು ಘಟಕದ ಉಸ್ತುವಾರಿ ಡಾ.ಮಹೇಂದ್ರ ಮೀನಾ ತಿಳಿಸಿದ್ದಾರೆ. ತೀವ್ರ ನಿಗಾ ಅಗತ್ಯದ ಕಾರಣ ಅವರನ್ನು ಜೈಪುರಕ್ಕೆ ಕಳುಹಿಸಲಾಗಿತ್ತು. ರೇಷ್ಮಾ ಅವರ ಮೈದುನ ಗಬ್ರು ಪ್ರಕಾರ, ರೇಷ್ಮಾ ಅವರ ಪತಿ ಅಶ್ಕ್ ಅಲಿ ಕೇರಳದಲ್ಲಿ ಮಾರ್ಬಲ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದಾರೆ. ಅಶ್ಕ್ ಅಲಿ ಅಂದಾಜು 7 ವರ್ಷಗಳ ಹಿಂದೆ ರೇಷ್ಮಾ ಅವರನ್ನು ವಿವಾಹವಾಗಿದ್ದರು. ಆದರೆ ಮದುವೆಯಾಗಿ ಹಲವು ವರ್ಷಗಳಾದರೂ ಅವರಿಗೆ ಮಗುವಾಗಿರಲಿಲ್ಲ. ಇದರಿಂದಾಗಿ ಅವರು ಅನೇಕ ಕಡೆ ಚಿಕಿತ್ಸೆ ಪಡೆದರು. ಈಗ ಅಲ್ಲಾ ಇವರ ಜೋಳಿಗೆಗೆ ಐವರು ಮಕ್ಕಳನ್ನು ತುಂಬಿಸಿದ್ದಾನೆ ಎಂದು ಸಂಭ್ರಮಪಟ್ಟಿದ್ದರು.
ಫಸ್ಟ್ ಟೈಂ ಪೀರಿಯಡ್ಸ್ ಆಗಿದ್ದು ಯಾವಾಗ, ಆ 16 ದಿನಗಳ ಬಗ್ಗೆ ರಿವೀಲ್ ಮಾಡಿದ ಬಿಗ್ ಬಾಸ್ ವೈಷ್ಣವಿ!
ಸಂಭ್ರಮಕ್ಕೆ ಸಿದ್ಧವಾಗಿತ್ತು ಕುಟುಂಬ: ಐವರು ಮಕ್ಕಳು ಹುಟ್ಟಿದ ಖುಷಿಗೆ ಇಡೀ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ, ಜೈಪುರದಲ್ಲಿ ಐದು ಮಕ್ಕಳ ಪೈಕಿ ಒಂದು ಮಗು ಕೂಡ ಬದುಕಿಯಲಿಲ್ಲ. ಆದರೆ, ನಿಗದಿತ ಸಮಯಕ್ಕೂ ಮುನ್ನ ಆದ ಹೆರಿಗೆಯ ನಂತರವೂ ತಾಯಿ ಆರೋಗ್ಯವಾಗಿದ್ದರೂ ಮಕ್ಕಳು ದುರ್ಬಲರಾಗಿದ್ದರು. ವೈದ್ಯರ ಪ್ರಕಾರ, ಎಲ್ಲಾ ಮಕ್ಕಳ ಜನನದಲ್ಲಿ ಒಂದೂವರೆ ನಿಮಿಷಗಳ ವ್ಯತ್ಯಾಸವಿತ್ತು. 2 ಗಂಡು ಮತ್ತು 2 ಹೆಣ್ಣು ಮಗು ಚಿಕಿತ್ಸೆಗಾಗಿ ಜೈಪುರಕ್ಕೆ ಕರೆತರುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದರೆ, ಜೈಪುರ ಆಸ್ಪತ್ರೆಯವರೆಗೆ ಬದುಕುಳಿದಿದ್ದ ಹೆಣ್ಣು ಶಿಶು, ಆಸ್ಪತ್ರೆಯ ಚಿಕಿತ್ಸೆಯ ವೇಳೆ ಸಾವು ಕಂಡಿದೆ. ಒಂದೇ ಸಮಯದಲ್ಲಿ 4 ಅಥವಾ 5 ಮಕ್ಕಳಿಗೆ ಜನ್ಮ ನೀಡುವುದು ಲಕ್ಷಕ್ಕೊಬ್ಬರಿಗೆ ಆಗುತ್ತದೆ. ಆದರೆ, ಯಾವುದೇ ಮಕ್ಕಳು ಉಳಿಯದೇ ಇರುವುದಕ್ಕೆ ಬೇಸರವಿದೆ ಎಂದಿದ್ದಾರೆ.