ಶ್ವಾನದ ಅದ್ದೂರಿ ಹುಟ್ಟುಹಬ್ಬ: ಪಾರ್ಟಿಗೆ 5 ಲಕ್ಷ ವೆಚ್ಚ ಮಾಡಿದ ಮಹಿಳೆ
ಜಾರ್ಖಂಡ್ ಮೂಲದ ಮಹಿಳೆಯೊಬ್ಬರು ತಮ್ಮ ಮುದ್ದಿನ ಶ್ವಾನದ ಹುಟ್ಟುಹಬ್ಬಕ್ಕೆ 5 ಲಕ್ಷ ರೂಪಾಯಿ ಖರ್ಚು ಮಾಡಿ, 300 ಅತಿಥಿಗಳನ್ನು ಆಹ್ವಾನಿಸಿ, 40 ಸಾವಿರ ರೂಪಾಯಿಯ ಕೇಕ್ ಮಾಡಿಸಿದ್ದಾರೆ. ಈ ಅದ್ದೂರಿ ಹುಟ್ಟುಹಬ್ಬದ ಫೋಟೋ ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇತ್ತೀಚೆಗೆ ಶ್ವಾನಗಳು ಮನುಷ್ಯರಿಗಿಂತಲೂ ಸುಂದರವಾದ ಐಷಾರಾಮಿ ಜೀವನವನ್ನು ಅನುಭವಿಸುತ್ತಿವೆ. ಅನೇಕರು ತಮ್ಮ ಕುಟುಂಬದ ಒಬ್ಬ ಸದಸ್ಯನಂತೆ ಶ್ವಾನವನ್ನು ನೋಡುತ್ತಿದ್ದು, ಅವುಗಳನ್ನು ತಾವು ಹೋಗುವಲ್ಲೆಲ್ಲಾ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ತಮ್ಮ ಜೊತೆಗೆ ಅವುಗಳನ್ನು ಮಲಗಿಸಿಕೊಳ್ಳುತ್ತಾರೆ. ಮನುಷ್ಯರು ಹಾಗೂ ಶ್ವಾನಗಳ ನಡುವೆ ಎಷ್ಟೊಂದು ಬಾಂಡಿಂಗ್ ಇರುತ್ತದೆ ಎಂದರೆ ಶ್ವಾನವೆನಾದರೂ ಅಗಲಿ ಹೋದರೆ ಅದರ ಮಾಲೀಕನಿಗೆ ಅದನ್ನು ತಡೆದುಕೊಳ್ಳುವ ಶಕ್ತಿಯೂ ಇರುವುದಿಲ್ಲ, ಹಾಗೆಯೇ ಶ್ವಾನಗಳು ಅಷ್ಟೇ ತಮ್ಮ ಪ್ರೀತಿಯ ಮಾಲೀಕನಿಗೆ ಏನಾದರು ಹೆಚ್ಚು ಕಡಿಮೆ ಆದರೆ ಅವುಗಳು ಚಡಪಡಿಸುತ್ತವೆ. ಕೆಲ ದಿನಗಳ ಹಿಂದೆ ಯುವಕನೋರ್ವ ತನ್ನ ಪ್ರೀತಿಯ ಶ್ವಾನ ಸಾವನ್ನಪ್ಪಿದ್ದ ದುಃಖದಲ್ಲಿ ಆತನೂ ಸಾವಿಗೆ ಶರಣಾದ ಘಟನೆ ನಡೆದಿತ್ತು. ಹೀಗಿರುವಾಗ ಇಲ್ಲೊಂದು ಕಡೆ ಶ್ವಾನದ ಅದ್ದೂರಿ ಹುಟ್ಟುಹಬ್ಬದ ಆಚರಣೆಯ ವೀಡಿಯೋವೊಂದು ಸಾಕಷ್ಟು ಗಮನ ಸೆಳೆಯುತ್ತಿದೆ.
ಮನುಷ್ಯರೆನೋ ಸಾವಿರಾರು ರೂಪಾಯಿ ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸುವುದನ್ನು ನೀವು ನೋಡಿರುತ್ತೀರಿ. ಸ್ನೇಹಿತರು, ಬಂಧುಗಳನ್ನು ಕರೆಸಿ ಪಾರ್ಟಿ ಮಾಡುವುದನ್ನು ನೋಡಿರುತ್ತೀರಿ. ಹಾಗೆಯೇ ಶ್ವಾನಗಳಿಗೂ ಕೆಲವರು ಹುಟ್ಟುಹಬ್ಬವನ್ನು ಆಚರಿಸುವುದನ್ನು ನೀವು ಈ ಹಿಂದೆಯೂ ಕೇಳಿರಬಹುದು. ಆದರೆ ನಾವೀಗ ಹೇಳುವಷ್ಟು ದುಬಾರಿಯಾಗಿ ಶ್ವಾನದ ಹುಟ್ಟುಹಬ್ಬವನ್ನು ಆಚರಿಸಿದ ಘಟನೆ ಎಲ್ಲೂ ಕೇಳಿರಲು ಸಾಧ್ಯವಿಲ್ಲ, ಹೌದು ಜಾರ್ಖಂಡ್ ಮೂಲದ ಮಹಿಳೆಯೊಬ್ಬರು ತಮ್ಮ ಮುದ್ದಿನ ಶ್ವಾನವೊಂದರ ಹುಟ್ಟುಹಬ್ಬಕ್ಕೆ ಬರೋಬ್ಬರಿ 5 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ. ಬರೀ ಇಷ್ಟೇ ಅಲ್ಲ ಈ ಹುಟ್ಟುಹಬ್ಬದ ಪಾರ್ಟಿಗೆ 300 ಅತಿಥಿಗಳನ್ನು ಆಹ್ವಾನಿಸಿದ ಈ ಮಹಿಳೆ ಜೊತೆಗೆ ಸಮಾರಂಭದಲ್ಲಿ ಕತ್ತರಿಸಲು 40 ಸಾವಿರ ರೂಪಾಯಿಯ ಕೇಕನ್ನು ಮಾಡಿಸಿದ್ದಾರೆ. ನೋಡಿದ್ರಲ್ಲ, ಈ ನಾಯಿ ಈ ರೀತಿ ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಅದೆಷ್ಟು ಪುಣ್ಯ ಮಾಡಿರುತ್ತೋ ಏನೋ, ಅಂತು ಧಾಮ್ ಧೂಮ್ ಆಗಿ ಶ್ವಾನದ ಹುಟ್ಟುಹಬ್ಬ ಅದ್ದೂರಿಯಾಗಿ ನಡೆದಿದ್ದು, ಇದರ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲರೂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ ತಮ್ಮ ಸ್ನೇಹಿತರು ಬಂಧುಗಳಿಗೆ ಬರ್ತ್‌ಡೇ ಪಾರ್ಟಿಗಳನ್ನು ಆಯೋಜಿಸುತ್ತಾರೆ. ಆದರೆ ಶ್ವಾನಕ್ಕೆ ಈ ರೀತಿ ಅದ್ದೂರಿ ಪಾರ್ಟಿ ಮಾಡಿದ್ದನ್ನು ನೋಡಿದ ಜನ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಇಲ್ಲಿ 40 ಸಾವಿರ ಮೌಲ್ಯದ ಕೇಕನ್ನು ತಮ್ಮ ಪ್ರೀತಿಯ ಶ್ವಾನದ ಬರ್ತ್‌ಡೇಗಾಗಿ ಸಿದ್ಧಪಡಿಸಲಾಗಿತ್ತು. ಇದರ ಜೊತೆಗೆ ಪಾರ್ಟಿ ನಡೆದ ಸ್ಥಳವನ್ನು ಮಿರಿ ಮಿರಿ ಮಿಂಚುವ ಅಲಂಕಾರಿಕ ವಸ್ತುಗಳು ಹಾಗೂ ಲೈಟಿಂಗ್ಸ್‌ಗಳಿಂದ ಚೆನ್ನಾಗಿ ಶೃಂಗಾರ ಮಾಡಲಾಗಿತ್ತು. ಶ್ವಾನದ ಮೇಲೆ ಹೂವಿನ ಮಳೆಗೆರೆದು ಆರತಿ ಬೆಳಗಿ ಈ ಹುಟ್ಟುಹಬ್ಬವನ್ನು ಮತ್ತಷ್ಟು ಸ್ಮರಣೀಯವಾಗಿ ಮಾಡಲಾಯ್ತು. ಬಂದಿದ್ದ ಅತಿಥಿಗಳು ಶ್ವಾನದೊಂದಿಗೆ ಫೋಟೋ ತೆಗೆಸಿಕೊಂಡು ವೀಡಿಯೋ ಮಾಡಿ ಸಂಭ್ರಮಪಟ್ಟರು.