ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆ ಜವಾಬ್ದಾರಿ, ಕೆಲಸ ಎರಡೂ ಹೆಚ್ಚು. ಹಣಕಾಸಿನ ಜವಾಬ್ದಾರಿ ಕಡಿಮೆ ಎನ್ನಿಸಿದ್ರೂ ಉಳಿದೆಲ್ಲವನ್ನು ನೋಡಿಕೊಂಡು ಸೂಪರ್ ವುಮೆನ್ ಆಗ್ಬೇಕಾಗುತ್ತದೆ. ಎಲ್ಲದರ ಮಧ್ಯೆ ಆಕೆಯ ವೃತ್ತಿ ಜೀವನ ಕರಗಿ ಹೋಗುತ್ತದೆ.
ಮದುವೆ ಹೆಣ್ಣಿನ ಜೀವನದ ಒಂದು ಮಹತ್ವದ ಘಟ್ಟ. ಮದುವೆಯಾಗಿ ಮನೆಯನ್ನು ನಿಭಾಯಿಸಿದ ನಂತರವೇ ಆಕೆ ಒಬ್ಬ ಪರಿಪೂರ್ಣ ಮಹಿಳೆ ಎನಿಸಿಕೊಳ್ತಾಳೆ. ಅವಳು ಎಷ್ಟೇ ಓದಿರಲಿ, ಎಷ್ಟೇ ಉನ್ನತ ಹುದ್ದೆಯಲ್ಲಿ ಇದ್ದರೂ ಕೂಡ ಒಂದು ಮದುವೆ ಅವಳ ವೃತ್ತಿ ಜೀವನವನ್ನೂ ಬದಲಾಯಿಸುತ್ತದೆ. ಮಕ್ಕಳಾದ ನಂತರವಂತೂ ಅವಳಿಗೆ ತಾನು ಯಾವ ಕ್ಷೇತ್ರದಲ್ಲಿ ಮುಂದುವರೆಯಬೇಕು? ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎಂಬುದು ಬೆಟ್ಟದಂತಹ ಸವಾಲು.
ಬಹಳ ಮಂದಿ ಮದುವೆ (Marriage) ಮಾತುಕತೆಯ ಸಮಯದಲ್ಲೇ, ಹುಡುಗಿ ಮದುವೆಯ ನಂತರವೂ ನೌಕರಿ (Job) ಮಾಡ್ತಾಳಾ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. ನಮ್ಮ ಮನೆ (House) ಯಲ್ಲಿ ಯಾವುದಕ್ಕೂ ಕೊರತೆಯಿಲ್ಲ ಹಾಗಾಗಿ ನಮ್ಮ ಮನೆಗೆ ಸೊಸೆಯಾಗಿ ಬರುವವಳು ನೌಕರಿ ಮಾಡುವ ಅಗತ್ಯವಿಲ್ಲ ಎಂಬ ಮಾತನ್ನೇ ಹೆಚ್ಚಿನ ಮಂದಿ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಇಷ್ಟಕ್ಕೆ ವಿರುದ್ಧವಾಗಿ ತಾನು ಮಾಡುತ್ತಿರುವ ನೌಕರಿಯನ್ನು ಬಿಡಬೇಕಾಗುತ್ತದೆ. ನೌಕರಿ ಬಿಟ್ಟು ಮನೆ, ಮಕ್ಕಳ ಜವಾಬ್ದಾರಿಯನ್ನು ಹೊರಲು ತನ್ನನ್ನು ತಾನು ಅಣಿಮಾಡುತ್ತಾಳೆ. ನ್ಯಾಶನಲ್ ಫ್ಯಾಮಿಲಿ ಹೆಲ್ತ್ ಸರ್ವೆ (NFHS) ವರದಿಯ ಪ್ರಕಾರ ಭಾರತದಲ್ಲಿ ಶೇಕಡಾ 32 ರಷ್ಟು ವಿವಾಹಿತ ಮಹಿಳೆಯರು ಮಾತ್ರ ನೌಕರಿ ಮಾಡುತ್ತಿದ್ದಾರೆ. 2004-05 ಮತ್ತು 2011-12 ರ ನಡುವೆ ಸುಮಾರು 20 ಮಿಲಿಯನ್ ನಷ್ಟು ಭಾರತೀಯ ಮಹಿಳೆಯರು ತಮ್ಮ ನೌಕರಿಯನ್ನು ತೊರೆದಿದ್ದಾರೆ.
Women Finance: ಮಹಿಳೆಗೂ ಇರಲಿ ಬ್ಯಾಂಕಿಂಗ್ ಜ್ಞಾನ
ಮಹಿಳೆಯರು ಏಕೆ ನೌಕರಿ ಬಿಡ್ತಾರೆ? :
ಪತಿ ಹಾಗೂ ಕುಟುಂಬಸ್ಥರ ಸಂತೋಷದ ಜವಾಬ್ದಾರಿ : ಮದುವೆಯ ನಂತರ ಮಹಿಳೆಯರಿಗೆ ಗಂಡ ಮತ್ತು ಮನೆಯವರ ಮಾತನ್ನು ಕೇಳಬೇಕಾಗುತ್ತದೆ. ಪತಿ ಮನೆಯವರನ್ನು ಖುಷಿಯಿಂದ ಇಡುವುದು ಆಕೆ ಜವಾಬ್ದಾರಿಯಾಗಿರುತ್ತದೆ. ಎಲ್ಲರಿಗೂ ಸೈ ಎನಿಸಿಕೊಂಡು ಪರ್ಫೆಕ್ಟ್ ಸೊಸೆ, ಹೆಂಡತಿ, ಅಮ್ಮ, ಅತ್ತಿಗೆ ಹೀಗೆ ಎಲ್ಲ ಸ್ಥಾನದಲ್ಲಿ ನಿಂತು ಬಂದದ್ದನ್ನೆಲ್ಲ ನಿಭಾಯಿಸುವುದು ಒಬ್ಬ ವಿವಾಹಿತ ಮಹಿಳೆಗೆ ದೊಡ್ಡ ಸವಾಲಾಗಿರುತ್ತದೆ. ಈ ಎಲ್ಲ ಸವಾಲು, ಕರ್ತವ್ಯ, ಜವಾಬ್ದಾರಿಗಳ ಮಧ್ಯೆ ಆಕೆಯ ವೃತ್ತಿ ಕನಸು ಸೆಕೆಂಡರಿ ಆಗಿಬಿಡುತ್ತೆ.
ತಾಯಿಯಾದ್ಮೇಲೆ ಕೆಲಸ ಬಿಡ್ತಾರೆ ಕೆಲ ಮಹಿಳೆಯರು : ಕೆಲ ಮಹಿಳೆಯರು ಮದುವೆಯಾದ ನಂತರವೂ ಕುಟುಂಬದ ಸಹಕಾರದೊಂದಿಗೆ ತಮ್ಮ ಕೆಲಸವನ್ನು ಮುಂದುವರೆಸುತ್ತಾರೆ. ಮದುವೆಯಾದ ನಂತರ ಕೆಲವು ವರ್ಷಗಳ ಕಾಲ ಕೆಲಸ ನಿರ್ವಹಿಸಿದರೂ ನಂತರದ ದಿನಗಳಲ್ಲಿ ಆಕೆ ಕೆಲಸವನ್ನು ಬಿಡಬೇಕಾಗುತ್ತದೆ. ಏಕೆಂದರೆ ಉಳಿದ ಎಲ್ಲ ಜವಾಬ್ದಾರಿಗಳ ಜೊತೆಗೆ ತನ್ನ ಕುಟುಂಬಕ್ಕೆ ಒಂದು ಸಂತಾನ ನೀಡುವುದು ಕೂಡ ಅವಳಿಗೆ ಮುಖ್ಯವಾಗಿರುತ್ತದೆ. ತಾಯ್ತನ ಎಲ್ಲ ವಿವಾಹಿತ ಮಹಿಳೆಯರಿಗೂ ಒಂದು ಸಂತೋಷದ ಸಮಯ. ಆದರೆ ಒಬ್ಬ ನೌಕರಿಯಲ್ಲಿರುವ ಮಹಿಳೆಗೆ ತಾಯಿಯಾಗುವುದು ಕೂಡ ಗೊಂದಲವನ್ನು ಸೃಷ್ಟಿಸುತ್ತದೆ. ಏಕೆಂದರೆ ಮಗುವಾದ ನಂತರ ಮಹಿಳೆ ತನ್ನ ಮಗುವಿನ ಪಾಲನೆ ಪೋಷಣೆಗೋಸ್ಕರ ತನ್ನ ವೃತ್ತಿಯನ್ನು ಬಿಡಬೇಕಾಗುತ್ತದೆ. ಮಕ್ಕಳ ಪಾಲನೆಗಾಗಿಯೇ ಭಾರತದಲ್ಲಿ ಕೆಲಸ ಬಿಡುವ ಮಹಿಳೆಯರು ಸಂಖ್ಯೆ ಹೆಚ್ಚಿದೆ.
ಗಂಡನ ಜೊತೆ ಸಮಯ ಕಳೆಯುವುದು ಮುಖ್ಯ : ನೌಕರಿಯಲ್ಲಿರುವ ಮಹಿಳೆಯರಿಗೆ ಮನೆಕೆಲಸ, ಮಕ್ಕಳ ಕೆಲಸದಲ್ಲಿ ಸಮಯ ಸರಿದಿದ್ದು ತಿಳಿಯೋದಿಲ್ಲ. ಇದ್ರಿಂದ ಪತಿಗೆ ಸಮಯ ನೀಡಲು ಸಾಧ್ಯವಾಗೋದಿಲ್ಲ. ಇದು ಸಂಬಂಧವನ್ನು ಹಾಳು ಮಾಡುವ ಸಾಧ್ಯತೆಯಿರುತ್ತದೆ. ಇಂಥ ಕಾರಣಕ್ಕೆ ಕೂಡ ಕೆಲ ಮಹಿಳೆಯರು ಕೆಲಸ ಬಿಡ್ತಾರೆ.
ದಿನ ನೋಡಿ ತಲೆ ಸ್ನಾನ ಮಾಡಿ, ನಿಮ್ಮ ಕಾಲ ಬಳಿಯೇ ಬಿದ್ದಿರುತ್ತಾಳೆ ಲಕ್ಷ್ಮಿ!
ಮಹಿಳೆ ಕೆಲಸ ಮಾಡುವುದು ಈಗಿನ ದಿನಮಾನದಲ್ಲಿ ಅಗತ್ಯವಾಗಿದೆ. ಕೆಲ ಟಿಪ್ಸ್ ಫಾಲೋ ಮಾಡುವ ಮೂಲಕ ಆಕೆ ಕಚೇರಿ ಹಾಗೂ ಮನೆ ಎರಡನ್ನೂ ನಿಭಾಯಿಸಬಹುದು. ಮದುವೆಯ ನಂತರವೂ ನೀವು ಮನೆ ಮತ್ತು ಕೆಲಸ ಎರಡರನ್ನೂ ಮಾಡಲು ಇಷ್ಟಪಡುತ್ತೀರಿ ಎಂದಾದರೆ ಮನೆ ಕೆಲಸಕ್ಕೆ ಯಾರನ್ನಾದರೂ ನೇಮಿಸಿಕೊಳ್ಳಿ. ಮಕ್ಕಳನ್ನು ನೋಡಿಕೊಳ್ಳಲು ಯಾರನ್ನಾದರೂ ಇಟ್ಟುಕೊಳ್ಳಿ. ನಿಮ್ಮ ನಿತ್ಯದ ಕೆಲಸವನ್ನು ಸರಿಯಾಗಿ ಪ್ಲಾನ್ ಮಾಡಿ ಎರಡನ್ನೂ ಬ್ಯಾಲೆನ್ಸ್ ಮಾಡಿ. ಪತಿ ಜೊತೆ ಮಾತನಾಡಿ ನಿಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಿ. ತಂದೆ ತಾಯಿಯರ ಸಹಾಯ ಪಡೆಯಲು ಹಿಂಜರಿಯಬೇಡಿ.
