ಮುಟ್ಟಿನ ಸಮಯದಲ್ಲಿ ಯಾವಯಾವ್ದೋ ಪ್ಯಾಂಟೀಸ್ ಧರಿಸ್ಬೇಡಿ!
ಮುಟ್ಟಿನ ಬಗ್ಗೆ ಎಷ್ಟೇ ಜ್ಞಾನವಿದ್ರೂ ಸಾಲದು. ಯಾಕೆಂದ್ರೆ ಒಂದೊಂದು ತಿಂಗಳು ಒಂದೊಂದು ಸಮಸ್ಯೆ ಎದುರಾಗುತ್ತೆ. ಎಲ್ಲದಕ್ಕೂ ಮಹಿಳೆ ಸಿದ್ಧವಿರಬೇಕು. ಮುಂದೆ ಹೊಸ ಸಮಸ್ಯೆ ಬರದಂತೆ ಎಚ್ಚರಿಕೆ ಕೂಡ ವಹಿಸ್ಬೇಕು.
ಮಹಿಳೆ ಅಂದ್ಮೇಲೆ ಮುಟ್ಟಿನ ನೋವನ್ನು ತಿನ್ಲೇಬೇಕು. ತಿಂಗಳಲ್ಲಿ ಮೂರ್ನಾಲ್ಕು ದಿನ ಬ್ಲೀಡಿಂಗ್, ಹೊಟ್ಟೆ, ಕಿಬ್ಬೊಟ್ಟೆ, ಸೊಂಟ ನೋವು ಇರುತ್ತದೆ. ಇದಲ್ಲದೆ ಮಾನಸಿಕ ಕಿರಿಕಿರಿ ಕೂಡ ಸಾಮಾನ್ಯವಾಗಿ ಮಹಿಳೆಯನ್ನು ಕಾಡುತ್ತದೆ. ಮುಟ್ಟಿನ ಸಮಯದಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ಪ್ರತಿಯೊಬ್ಬ ಮಹಿಳೆ ನೀಡ್ಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಮುಟ್ಟಿನ ಬಗ್ಗೆ ಸರಿಯಾದ ಮಾಹಿತಿ ಮಕ್ಕಳಿಗೆ ಸಿಗ್ತಿರಲಿಲ್ಲ. ಮುಟ್ಟು ಅಂದ್ರೆ ಮನೆಯಿಂದ ಹೊರಗೆ ಇರೋದು ಎಂಬುದು ಮಾತ್ರ ತಿಳಿದಿತ್ತು. ತಾಯಂದಿರೂ ಇದ್ರಲ್ಲಿ ಅಷ್ಟು ಜ್ಞಾನ ಹೊಂದಿರದ ಕಾರಣ, ಮಕ್ಕಳಿಗೆ ಶುಚಿತ್ವದ ಬಗ್ಗೆ ಪಾಠ ಹೇಳುವ ಬದಲು ಮಡಿ – ಮೈಲಿಗೆ ಬಗ್ಗೆಯೇ ಹೆಚ್ಚಿಗೆ ಹೇಳ್ತಿದ್ದರು. ಸರಿಯಾಗಿ ನೈರ್ಮಲ್ಯ ಕಾಪಾಡಿಕೊಳ್ಳದ ಹೆಣ್ಣುಮಕ್ಕಳು ಯೋನಿಗೆ ಸಂಬಂಧಿಸಿದ ಸಮಸ್ಯೆ ಜೊತೆಗೆ ಚರ್ಮದ ಸೋಂಕಿನಿಂದ ಬಳಲುತ್ತಿದ್ದರು.
ಆದ್ರೀಗ ಹೆಣ್ಣು ಮಕ್ಕಳು ಮಾತ್ರವಲ್ಲ ಎಲ್ಲ ಮಹಿಳೆಯರು ಆರಾಮವಾಗಿ ಇದ್ರ ಬಗ್ಗೆ ತಿಳಿಯಬಹುದು. ಮುಟ್ಟಿ (Periods ) ನ ದಿನಗಳಲ್ಲಿ ಹೊಟ್ಟೆ ನೋವಿಗೆ ಯಾವೆಲ್ಲ ಮದ್ದಿದೆ ಎಂಬುದರಿಂದ ಹಿಡಿದು ಹೇಗೆ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎನ್ನುವವರೆಗೆ ಎಲ್ಲ ಮಾಹಿತಿ ಲಭ್ಯವಿರುತ್ತದೆ.
Women Health: ಪೀರಿಯಡ್ಸ್ ಹತ್ತಿರದಲ್ಲಿ ಸೆಕ್ಸ್ ನಿರಾಸಕ್ತಿಯೇ? ಕಾರಣ ಇದಿರಬಹುದು!
ಇಷ್ಟೆಲ್ಲ ಸೌಲಭ್ಯವಿದ್ರೂ ಮಹಿಳೆಯರು ನೋವಿ (Pain) ನ ಬಗ್ಗೆ ಹೆಚ್ಚು ಲಕ್ಷ್ಯ ವಹಿಸ್ತಾರೆಯೇ ಹೊರತು ಸ್ವಚ್ಛತೆ (Clean) ಬಗ್ಗೆ ಅಲ್ಲ. ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ನಿರ್ಲಕ್ಷ್ಯ ಮಾಡಿದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಟ್ಟಿನ ಸಂದರ್ಭದಲ್ಲಿ ಯಾವ ಪ್ಯಾಡ್ ಸೂಕ್ತ, ಹಾಗೆ ಅದನ್ನು ಹೇಗೆ ಧರಿಸಬೇಕು ಎನ್ನುವ ಬಗ್ಗೆ ಈಗಾಗಲೇ ಮಾಹಿತಿ ಸಿಕ್ಕಿದೆ. ಈಗ ಯಾವ ಪ್ಯಾಂಟಿ (Panty) ಧರಿಸ್ಬೇಕು ಎನ್ನುವ ಬಗ್ಗೆ ಮಾಹಿತಿ ನೀಡ್ತೇವೆ.
ಪ್ಯಾಂಟಿ ಫ್ಯಾಬ್ರಿಕ್ ಬಗ್ಗೆ ಗಮನಹರಿಸಿ : ಪಿರಿಯಡ್ಸ್ ವೇಳೆ ದೇಹದಲ್ಲಿ ಅನೇಕ ಬದಲಾವಣೆಯಾಗುತ್ತದೆ. ಚರ್ಮ ಕೂಡ ಸೂಕ್ಷ್ಮವಾಗಿರುತ್ತದೆ. ಚರ್ಮಕ್ಕೆ ಆರಾಮವೆನ್ನಿಸುವ ಪ್ಯಾಂಟಿ ಧರಿಸಬೇಕಾಗುತ್ತದೆ. ನೀವು ಪಿರಿಯಡ್ಸ್ ವೇಳೆ ಕಾಟನ್ ಫ್ಯಾಬ್ರಿಕ್ ಅಥವಾ ಹೊಸೈರಿ ಫ್ಯಾಬ್ರಿಕ್ ಪ್ಯಾಂಟಿಯನ್ನು ಧರಿಸಬೇಕು. ಇವೆರಡೂ ಸ್ಕಿನ್ ಫ್ರೆಂಡ್ಲಿ ಆಗಿರುತ್ತದೆ. ಹಗುರವಾಗಿರುವ ಕಾರಣ ನಿಮಗೆ ಹಿತವೆನ್ನಿಸುತ್ತದೆ. ನೀವು ಡಬಲ್ ಫ್ಯಾಬ್ರಿಕ್ ಪ್ಯಾಂಟಿ ಧರಿಸಿದ್ರೆ ಒಳ್ಳೆಯದು. ಇದು ರಕ್ತವನ್ನು ಹೊರಗೆ ಬಿಡದೆ ಅಲ್ಲಿಯೇ ಹಿಡಿದಿಡುತ್ತದೆ.
ಮೆನ್‌ಸ್ಟ್ರುವಲ್ ಕಪ್ ಬಳಸಿ ನೋಡಿ, ಪಿರಿಯಡ್ಸ್ ಕಿರಿಕಿರಿ ಅನ್ಸಲ್ಲ
ಸೂಕ್ತ ಸೈಜ್: ಪಿರಿಯಡ್ಸ್ ಸಮಯದಲ್ಲಿ ಪ್ಯಾಡ್ ಬಿಗಿಯಾಗಿ ಕುಳಿತುಕೊಳ್ಬೇಕು ಎನ್ನುವ ಕಾರಣಕ್ಕೆ ಕೆಲವರು ಅತಿ ಬಿಗಿಯಾದ ಪ್ಯಾಂಟಿ ಧರಿಸುತ್ತಾರೆ. ಇದು ತಪ್ಪು. ನೀವು ತುಂಬಾ ಬಿಗಿಯಾದ ಪ್ಯಾಂಟಿ ಧರಿಸಿದ್ರೆ ಅದು ತೊಂದರೆಯನ್ನುಂಟು ಮಾಡುತ್ತದೆ. ಸಡಿಲವಾದ ಪ್ಯಾಂಟಿ ಧರಿಸಿದ್ರೆ, ಪ್ಯಾಡನ್ನು ಸುಲಭವಾಗಿ ಹೊಂದಿಸಬಹುದು.
ಬಣ್ಣಕ್ಕೂ ನೀಡಿ ಆದ್ಯತೆ : ಮುಟ್ಟಿನ ಸಮಯದಲ್ಲಿ ನೀವು ಧರಿಸುವ ಪ್ಯಾಂಟಿಯ ಬಣ್ಣದ ಬಗ್ಗೆ ಕೂಡ ನೀವು ಗಮನಹರಿಸಬೇಕು. ಈ ಸಮಯದಲ್ಲಿ ಗಾಢ ಬಣ್ಣದ ಪ್ಯಾಂಟಿಗಳನ್ನು ಧರಿಸಬೇಕು. ತಿಳಿ ಬಣ್ಣದ ಪ್ಯಾಂಟಿಗಳನ್ನು ಆರಿಸಿದರೆ ರಕ್ತದ ಗುರುತು ಬಟ್ಟೆಯ ಮೇಲೆ ಸುಲಭವಾಗಿ ಅಂಟಿಕೊಳ್ಳುತ್ತದೆ. ಇದನ್ನು ಸ್ವಚ್ಛಗೊಳಿಸುವುದು ಕೂಡ ಕಷ್ಟವಾಗುತ್ತದೆ.
ಪ್ಯಾಂಟಿಯ ಎಲಾಸ್ಟಿಕ್ ಹೀಗಿರಲಿ : ಮುಟ್ಟಿನ ವೇಳೆ ಮೃದುವಾದ ಎಲಾಸ್ಟಿಕ್ ಇರುವ ಪ್ಯಾಂಟಿ ಧರಿಸಿ. ಹೆಚ್ಚು ದಪ್ಪದಾದ ಹಾಗೂ ಹೆಚ್ಚು ಫ್ಯಾಷನ್ ಅಥವಾ ವಿನ್ಯಾಸ ಹೊಂದಿರುವ ಪ್ಯಾಂಟಿ ಧರಿಸಬೇಡಿ. ದಪ್ಪದಾದ ಎಲಾಸ್ಟಿಕ್ ಹೊಂದಿರುವ ಪ್ಯಾಂಟಿ ಒಳಗೆ ನೀವು ಪ್ಯಾಡ್ ಹಾಕುವುದ್ರಿಂದ ಅದು ಭಾರವಾಗುತ್ತದೆ. ತೊಡೆಯ ಎರಡೂ ಸಂದುಗಳು ಕೊರೆಯುವ ಸಾಧ್ಯತೆಯಿರುತ್ತದೆ. ಬೇಸಿಗೆಯಲ್ಲಿ ಹೆಚ್ಚು ಬೆವರುವುದ್ರಿಂದ ಸಮಸ್ಯೆ ಹೆಚ್ಚಾಗುತ್ತದೆ. ಮುಟ್ಟಿನ ಸಮಯದಲ್ಲಿ ಚರ್ಮ ಮೃದುವಾಗಿರುವ ಕಾರಣ ಚರ್ಮ ಕೆಂಪಾಗುವುದು, ದುದ್ದು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.