- ಡಾ.ವಿದ್ಯಾ ಭಟ್‌, ಫರ್ಟಿಲಿಟಿ ಸ್ಪೆಷಲಿಸ್ಟ್‌

ಯಾವುದು ನಾರ್ಮಲ್‌?

ಸಂತಾನೋತ್ಪತ್ತಿಯ ಹಾರ್ಮೋನ್‌ಗಳಿಗೆ ಸಂಬಂಧಿಸಿದಂತೆ ಜನನಾಂಗದಿಂದ ಬಿಳಿ ವಿಸರ್ಜನೆಯಾಗುವುದು ಸಾಮಾನ್ಯ ನೈಸರ್ಗಿಕ ಕ್ರಿಯೆ. ಇದು ಯೋನಿಯ ಅಂಗಾಂಶಗಳನ್ನು ತೇವ ಮತ್ತು ನಯವಾಗಿರುವಂತೆ ಮಾಡಲು ಸಹಾಯ ಮಾಡುತ್ತದೆ. ಅಂಡೋತ್ಪತ್ತಿ, ಲೈಂಗಿಕ ಪ್ರಚೋದನೆ, ಹಾರ್ಮೋನ್‌ಗಳಲ್ಲಾಗುವ ಅಸಮತೋಲನ, ಜನನ ನಿಯಂತ್ರಣಗಳ ಮಾತ್ರೆಗಳನ್ನು ಸೇವಿಸುವುದು, ಗರ್ಭಧಾರಣೆ, ಸೋಂಕು ಅಥವಾ ಲೈಂಗಿಕವಾಗಿ ಹರಡುವ ರೋಗಗಳಂತಹ ಕಾರಣಗಳಿಂದಲೂ ಈ ಬಿಳಿ ವಿಸರ್ಜನೆ ಆಗುವ ಸಾಧ್ಯತೆಗಳಿವೆ. ಇದಕ್ಕೆ ಗಾಬರಿ ಆಗಬೇಕಿಲ್ಲ. ಇದು ಸಮಸ್ಯಾತ್ಮಕ ಮಟ್ಟಕ್ಕೆ ಹೋದರೆ ಚಿಕಿತ್ಸೆಯಿಂದ ನಿವಾರಿಸಬಹುದು.

ಅಸಹಜ ಸ್ರಾವದ ಬಗ್ಗೆ ಎಚ್ಚರ

ಈ ವಿಸರ್ಜನೆಯು ಹಳದಿ ಅಥವಾ ಹಸಿರು ಬಣ್ಣದಿಂದ ಕೂಡಿದ್ದರೆ, ದುರ್ವಾಸನೆ ಬರುತ್ತಿದ್ದರೆ ಮತ್ತು ತುರಿಕೆ ಆಗುತ್ತಿದ್ದರೆ ಅದನ್ನು ಅಸಹಜ ಪ್ರಕ್ರಿಯೆ ಎಂದು ಹೇಳಲಾಗುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಅಗತ್ಯವಿರುತ್ತದೆ. ದೀರ್ಘಕಾಲದ ಗರ್ಭಕಂಠದ ಉರಿಯೂತ ಅಥವಾ ಯೋನಿಯೊಳಗೆ ತೆರೆದುಕೊಳ್ಳುವ ಗರ್ಭಾಶಯದ ಕೆಳ ತುದಿ ಕಾರಣಕ್ಕೆ ಬಿಳಿಸ್ರಾವವಾಗಬಹುದು. ಗರ್ಭಕಂಠದ ಕ್ಯಾನ್ಸರ್‌ ಇದ್ದರೆ ಬಿಳಿಸ್ರಾವದ ಜೊತೆಗೆ ರಕ್ತಸ್ರಾವವೂ ಆಗಬಹುದು, ಇದಕ್ಕೆ ತಕ್ಷಣ ಚಕಿತ್ಸೆ ಅತ್ಯಗತ್ಯ.

ನೀವು ಗರ್ಭಿಣಿಯರಾದಲ್ಲಿ, ವೆಜೈನಲ್ ಡಿಸ್ಚಾರ್ಜ್ ಕುರಿತ ಈ ವಿಷಯ ತಿಳಿಯಲೇಬೇಕು!

ಬಿಳಿ ಸೆರಗಿನ ಸಮಸ್ಯೆಗೆ ಗರ್ಭಕೋಶ ತೆಗೆಸದಿರಿ

ಗರ್ಭಕೋಶದ ಕ್ಯಾನ್ಸರ್‌ನಿಂದ ಬಿಳಿಸ್ರಾವವಾಗುತ್ತದೆ ಅನ್ನೋದು ಬಯಾಪ್ಸಿಯಲ್ಲಿ ಗೊತ್ತಾದಾಗ ಮಾತ್ರ ವೈದ್ಯರು ಗರ್ಭಕೋಶ ತೆಗೆದುಹಾಕುತ್ತಾರೆ. ಬೇರೆ ಯಾವ ಕಾರಣಕ್ಕೂ ಗರ್ಭಕೋಶ ತೆಗೆಸುವ ಅಗತ್ಯವಿಲ್ಲ. ಎಷ್ಟೋ ಕಡೆ ಈ ಬಗ್ಗೆ ತಿಳುವಳಿಕೆ ಇಲ್ಲ ಹೆಣ್ಣುಮಕ್ಕಳು ಬಿಳಿ ಸೆರಗಿನ ಕಾರಣಕ್ಕೆ ಗರ್ಭಕೋಶ ತೆಗೆಸಿ ತೊಂದರೆಗೆ ಒಳಗಾಗುತ್ತಾರೆ. ಈ ಥರ ಮಾಡಲೇಬಾರದು. ಬಿಳಿ ಸೆರಗು ಇದ್ದ ತಕ್ಷಣ ಅದು ಕ್ಯಾನ್ಸರ್‌ ಲಕ್ಷಣ ಅಂದುಕೊಳ್ಳುವುದೂ ಸರಿಯಲ್ಲ.