ಮನೆಯ ಹಲ್ಲಿಗಳು ವಿಷಕಾರಿಯಲ್ಲ. ಕಚ್ಚಿದರೆ ಸಾವು ಬರದು, ಆದರೆ ಸೋಂಕು ತಗಲಬಹುದು. ಕಚ್ಚಿದ ಜಾಗ ತೊಳೆದು, ನಂಜುನಿರೋಧಕ ಹಚ್ಚಿ, ವೈದ್ಯರನ್ನು ಭೇಟಿ ಮಾಡಿ. ಆಹಾರದಲ್ಲಿ ಹಲ್ಲಿ ಬಿದ್ದರೆ ತಿನ್ನಬೇಡಿ, ಬ್ಯಾಕ್ಟೀರಿಯಾದಿಂದ ಅನಾರೋಗ್ಯ ಉಂಟಾಗಬಹುದು. ಮನೆ ಸ್ವಚ್ಛವಾಗಿಟ್ಟು, ಬಿರುಕು ಮುಚ್ಚಿ, ಕೀಟಗಳನ್ನು ನಿಯಂತ್ರಿಸಿ, ಹಲ್ಲಿಗಳನ್ನು ದೂರವಿಡಿ.
ಮನೆ ಗೋಡೆ ಮೇಲೆ ಹರಿದಾಡುವ ಹಲ್ಲಿ (Lizard) ನೋಡಿದ್ರೆ ಮೈ ಜುಮ್ ಎನ್ನುತ್ತೆ. ಅದು ಮನೆಗೆ ಬಂದ್ರೆ ಕೆಲವರಿಗೆ ನಿದ್ರೆ ಬರೋದಿಲ್ಲ. ಹಲ್ಲಿ ಕೊಳಕು ಅನ್ನೋದು ಒಂದು ಕಡೆಯಾದ್ರೆ ಅದು ಆಹಾರದೊಳಗೆ ಬಿದ್ರೆ ಅಥವಾ ಕಚ್ಚಿದ್ರೆ ವಿಷ, ಇದ್ರಿಂದ ಸಾವು ಬರುತ್ತೆ ಎನ್ನುವ ಭಯ. ಹಲ್ಲಿಗಳು ಕಚ್ಚಿದ್ರೆ ನಿಜವಾಗ್ಲೂ ಮನುಷ್ಯ ಸಾಯ್ತಾನಾ? ಅದಕ್ಕೆ ಉತ್ತರ ಇಲ್ಲಿದೆ.
ಸಾಮಾನ್ಯವಾಗಿ ಮನೆಗಳಲ್ಲಿ ಕಂಡುಬರುವ ಹಲ್ಲಿಗಳು ವಿಷಕಾರಿಯಲ್ಲ. ಅವುಗಳ ಚರ್ಮ (skin)ದಿಂದ ವಿಷ ಹೊರ ಬರೋದಿಲ್ಲ. ಕೆಲವು ಜಾತಿಯ ಹಲ್ಲಿಗಳು ವಿಷಕಾರಿಯಾಗಿದ್ದರೂ, ಅವು ಹೆಚ್ಚಾಗಿ ಕಾಡುಗಳಲ್ಲಿ ಕಂಡುಬರುತ್ವೆ. ಮನೆಯಲ್ಲಿರುವ ಹಲ್ಲಿಗಳು ಕೀಟಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ವೆ. ಅವುಗಳಿಂದ ಮನುಷ್ಯರಿಗೆ ಯಾವುದೇ ಅಪಾಯ ಇಲ್ಲ. ಮನೆಯಲ್ಲಿರುವ ಹಲ್ಲಿಗಳು ಕಚ್ಚೋದಿಲ್ಲ. ಒಂದ್ವೇಳೆ ಕಚ್ಚಿದ್ರೂ ಸಾವು ಸಂಭವಿಸುವುದಿಲ್ಲ. ಬದಲಾಗಿ ಸೋಂಕು ತಗಲುವ ಸಾಧ್ಯತೆ ಇದೆ. ಹಲ್ಲಿಗಳು ಪರಾವಲಂಬಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತಿನ್ನುತ್ತವೆ. ಇದ್ರಿಂದ ಅವು ಕಚ್ಚಿದ್ರೆ ಸೋಂಕುಂಟಾಗಬಹುದು. ಇದೇ ಕಾರಣಕ್ಕೆ ಅವುಗಳ ಮಲ ಆಹಾರಕ್ಕೆ ಸೇರದಂತೆ ನೋಡಿಕೊಳ್ಳಬೇಕು.
ಹಲ್ಲಿ ಕಚ್ಚಿದರೆ ಏನು ಮಾಡಬೇಕು? : ಒಂದ್ವೇಳೆ ನೀವು ಹಲ್ಲಿ ಕಡಿತಕ್ಕೆ ಒಳಗಾದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು. ಮೊದಲು ಶುದ್ಧ ನೀರಿನಿಂದ ಹಲ್ಲಿ ಕಚ್ಚಿದ ಜಾಗವನ್ನು ತೊಳೆಯಿರಿ. ನೀವು ನಂಜುನಿರೋಧಕ ಸೋಪಿನಿಂದ ಗಾಯವನ್ನು ತೊಳೆಯಬೇಕು. ಇದರ ನಂತರ, ಅದನ್ನು ಉತ್ತಮ ನಂಜುನಿರೋಧಕದಿಂದ ಸ್ವಚ್ಛಗೊಳಿಸಿ ಮತ್ತು ನಂಜುನಿರೋಧಕ ಕ್ರೀಮ್ ಅನ್ನು ಹಚ್ಚಿ. ಇದರಿಂದ ಸೋಂಕಿನ ಅಪಾಯ ಕಡಿಮೆಯಾಗುತ್ತದೆ. ಕಚ್ಚಿದ ನಂತ್ರ ತುಂಬಾ ನೋವು ಅಥವಾ ಊತ ಕಂಡುಬಂದರೆ ವೈದ್ಯರನ್ನುಸಂಪರ್ಕಿಸಿ.
ವಿಷ ಪರೀಕ್ಷೆ ಹೀಗೆ ಮಾಡಿ : ಮನೆಯಲ್ಲಿರುವ ಹಲ್ಲಿ ವಿಷಕಾರಿಯಲ್ಲ. ಹಾಗಂತ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಿಮಗೆ ಕಚ್ಚಿದ ಹಲ್ಲಿ ವಿಷ ಬಿಟ್ಟಿದೆಯೇ ಎಂಬುದನ್ನು ನೀವು ಸುಲಭವಾಗಿ ಪತ್ತೆ ಮಾಡಬಹುದು. ಹಲ್ಲಿ ಕಚ್ಚಿದ ಸ್ಥಳದಲ್ಲಿ ತೀವ್ರವಾದ ನೋವು ಇದ್ದರೆ, ಕಚ್ಚಿದ ಜಾಗದಲ್ಲಿ ಊತ ಕಾಣಿಸಿಕೊಂಡ್ರೆ, ಕೆಂಪಾಗಿದ್ದರೆ, ಕಚ್ಚಿದ ಪ್ರದೇಶದ ಸುತ್ತಲೂ ತುರಿಕೆಯಾಗ್ತಿದ್ದರೆ ಇದು ಸೋಂಕಿನ ಸಂಕೇತವಾಗಿರಬಹುದು. ಸೋಂಕಿನಿಂದ ನಿಮಗೆ ಜ್ವರ ಬರುವ ಸಾಧ್ಯತೆಯೂ ಇರುತ್ತದೆ. ಹಲ್ಲಿ ಕಚ್ಚಿದ ನಂತ್ರ ನಿಮಗೆ ವಾಕರಿಕೆ ಅಥವಾ ವಾಂತಿ ಕಾಣಿಸಿಕೊಂಡ್ರೆ ಅದು ಕೂಡ ವಿಷದ ಸಂಕೇತವಾಗಿದೆ. ಅಲರ್ಜಿ, ಉಸಿರಾಟದ ತೊಂದರೆ ಸಹ ವಿಷತ್ವದಿಂದ ಉಂಟಾಗಬಹುದು.
ಆಹಾರದಲ್ಲಿ ಹಲ್ಲಿ ಬಿದ್ದರೆ ಏನಾಗುತ್ತೆ? : ಆಹಾರದ ಮೇಲೆ ಹಲ್ಲಿ ಬಿದ್ದರೆ ಆಹಾರ ಕಲುಷಿತವಾಗುತ್ತದೆ. ಆ ಆಹಾರವನ್ನು ಅಪ್ಪಿತಪ್ಪಿಯೂ ತಿನ್ಬೇಡಿ. ಎಲ್ಲಾ ಹಲ್ಲಿಗಳ ಚರ್ಮದಲ್ಲಿ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಇರುತ್ತದೆ. ಇದು ಗಂಭೀರ ಅನಾರೋಗ್ಯವನ್ನು ಉಂಟುಮಾಡಬಹುದು. ತಲೆತಿರುಗುವಿಕೆ ಮತ್ತು ವಾಂತಿ ಉಂಟಾಗಬಹುದು. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಹಲ್ಲಿಗಳನ್ನು ಮನೆಯಿಂದ ದೂರವಿಡುವುದು ಹೇಗೆ? : ಮನೆಗೆ ಹಲ್ಲಿಗಳು ಬರಬಾರದು ಎಂದಾದ್ರೆ ನೀವು ಕೆಲವು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.
1.ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ : ಮನೆಯನ್ನು ಸ್ವಚ್ಛವಾಗಿಡಿ. ಆಹಾರ ಪದಾರ್ಥಗಳನ್ನು ಮುಚ್ಚಿಡಿ.
2.ಬಿರುಕುಗಳನ್ನು ಮುಚ್ಚಿ : ಗೋಡೆಗಳು ಮತ್ತು ಚಾವಣಿಯಲ್ಲಿನ ಬಿರುಕುಗಳನ್ನು ಮುಚ್ಚಿ.
3.ಕೀಟಗಳು ಇರದಂತೆ ನೋಡಿಕೊಳ್ಳಿ : ಮನೆಯಲ್ಲಿ ಕೀಟವಿದ್ರೆ ಅದನ್ನು ಕೊಂದು ತಿನ್ನಲು ಹಲ್ಲಿ ಬರುತ್ತದೆ. ನೀವು ಮನೆಯಲ್ಲಿ ಸಣ್ಣಪುಟ್ಟ ಕೀಟ ಬರದಂತೆ ನೋಡಿಕೊಳ್ಳಿ.


