ಮೈ ಮುಖವೆಲ್ಲ ಸುಟ್ಟು ಬದುಕೋದೇ ಇಲ್ಲ ಅನ್ನೋ ಸ್ಥಿತಿಗೆ ಬಂದು ಬದುಕುಳಿದವರು ವಿನುತಾ ವಿಶ್ವನಾಥ್‌. ಆ ನೋವಿನ ಜೊತೆಗೆ ಬಾಲ್ಯದ ತುಂಟಾಟ, ಪ್ರೇಮ ಕತೆ, ಸೇಡಿನ ಉರಿ ಎಲ್ಲವನ್ನೂ ಒಳಗೊಂಡ ಅವರ ಆತ್ಮಕಥನ ‘ಹುಣ್ಸಮಕ್ಕಿ ಹುಳ’ ಇದೀಗ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಪ್ರಿಯಾ ಕೆರ್ವಾಶೆ

ಆತ್ಮಕಥೆ ಅಂದ್ರೆ ವಯಸ್ಸಾದ ಮೇಲೆ, ಇನ್ನೇನು ಬರೆಯುವ ಶಕ್ತಿ ಕ್ಷೀಣಿಸುತ್ತಾ ಬಂತು ಅನ್ನುವಾಗ ಬರೆಯೋದು ಎಂಬ ಮಾತಿದೆ. ಆದರೆ ನಿಮಗೆ ಇಷ್ಟುಚಿಕ್ಕ ವಯಸ್ಸಿಗೇ ಬರೆದರೆ ಆತ್ಮಕಥೆಯನ್ನೇ ಬರೆಯಬೇಕು ಅನಿಸಿದ ತೀವ್ರತೆಯ ಬಗ್ಗೆ ಹೇಳಬಹುದಾ?

ನನ್ನ ಥರ ಎಷ್ಟೋ ಜನ ಹೆಣ್ಮಕ್ಕಳಿದ್ದಾರೆ. ಅವರಲ್ಲಿ ಸಾಕಷ್ಟುಪ್ರತಿಭೆ ಇದ್ದರೂ ಕೀಳರಿಮೆ ಕೊರೆಯುತ್ತಾ ಇರುತ್ತೆ. ಕೆಲವೊಮ್ಮೆ ಅಕ್ಕಪಕ್ಕದವರು ನಮ್ಮಲ್ಲಿ ಕೀಳರಿಮೆ ಹುಟ್ಟುವ ಹಾಗೆ ಮಾಡುತ್ತಾರೆ. ಹೆತ್ತವರೂ ಮಗಳಲ್ಲಿ ಕೊರತೆ ಇದೆ, ಅವಳಿಗೆ ಬೇಗ ಮದುವೆ ಮಾಡಿ ಬಿಡಬೇಕು ಅನ್ನುವ ಒತ್ತಡಕ್ಕೆ ಸಿಲುಕುತ್ತಾರೆ. ಅವ್ಳನ್ನು ಹುಡುಗ ಒಪ್ಕೊಂಡ್ರೆ ಸಾಕು ಅನ್ನುವ ಮನಸ್ಥಿತಿ ಇರುತ್ತದೆ. ಮಕ್ಕಳ ಮನಸ್ಸಲ್ಲೂ ಇಂಥದ್ದನ್ನು ಹೆತ್ತವರು ಬಿತ್ತುತ್ತಾರೆ. ಇದರಿಂದ ಹೆಣ್ಮಕ್ಕಳು ಒಳಗೊಳಗೇ ಕುಸಿಯುತ್ತಾರೆ. ಅಂಥವರು ಕೀಳರಿಮೆಯಿಂದ ಹೊರ ಬರಬೇಕು, ಅವರ ನೋವನ್ನು ಧೈರ್ಯವಾಗಿ ಹೊರಹಾಕಬೇಕು ಅನ್ನುವುದು ನನ್ನ ಆಸೆ. ಆ ಕಾರಣಕ್ಕಾಗಿಯೇ ಈ ಪುಸ್ತಕ ಬರೆದಿರೋದು.

ಆತ್ಮಕತೆ ಬರುವ ಉದ್ದೇಶ ಇದು ಸರಿ, ಅದನ್ನು ಕಾರ್ಯಗತಗೊಳಿಸೋದಕ್ಕೆ ಇದೇ ಕರೆಕ್ಟ್ ಟೈಮ್‌ ಅನಿಸಿದ್ದು?

ನನ್ನ ಗಂಡನ ಒತ್ತಾಯ. ನಿನ್ನ ಮನಸ್ಸಲ್ಲಿರೋದನ್ನೆಲ್ಲ ಪುಸ್ತಕವಾಗಿ ಬರಿ, ಇದರಿಂದ ಉಳಿದ ಹೆಣ್ಮಕ್ಕಳಿಗೂ ಧೈರ್ಯ ಬರುತ್ತೆ ಅಂತ ಹೇಳ್ತಾ ಇರ್ತಾನೆ. ಹಾಗಾಗಿ ಬರೆಯೋದಕ್ಕೆ ಕೂತೆ. ಸುಮಾರು ನಾಲ್ಕು ತಿಂಗಳು ಕೂತು ಬರೆದೆ. ಬರೆಯೋದನ್ನು ಬರೆದೆ. ಆಮೇಲೆ ಏನು ಮಾಡೋದು ಅಂತ ಗೊತ್ತಾಗಲಿಲ್ಲ. ಆಪ್ತರಿಗೆ ಕಳುಹಿಸಿ ಅಭಿಪ್ರಾಯ ಕೇಳಿದೆ. ಒಂದಿಷ್ಟುಪ್ರಯತ್ನದ ಬಳಿಕ ಪ್ರಕಾಶಕರು ಸಿಕ್ಕಿ ಇದು ಪುಸ್ತಕವಾಗಿ ಹೊರಬಂತು.

ಬದುಕಿಲ್ಲದವರ ಬಗ್ಗೆ ಬರೆಯಬಹುದು. ಆದರೆ ಕಣ್ಣೆದುರೇ ಇರುವವರ ಬಗ್ಗೆ, ಇದ್ದದ್ದನ್ನ ಇದ್ದ ಹಾಗೆ ಬಗ್ಗೆ ಬರೆಯೋದು ಕಷ್ಟ. ನಿಮಗಿದು ಸವಾಲು ಅಂತ ಅನಿಸಿಲ್ವಾ?

ಮೊದಲು ಸಣ್ಣ ಅಧೈರ್ಯ ಇತ್ತು. ನಾನು ಹೀಗೆಲ್ಲ ಬರೆದರೆ ಅವರು ಗಲಾಟೆ ಮಾಡಿದ್ರೆ, ಕೇಸ್‌ ಹಾಕಿದ್ರೆ ಅನ್ನೋ ಭಯ. ಆದರೆ ಒಮ್ಮೆ ಬರೆಯಲು ಶುರು ಮಾಡಿದ ಮೇಲೆ ಅದೆಲ್ಲ ಹಾರಿಹೋಯ್ತು. ಸ್ಪಷ್ಟತೆ ಸಿಕ್ಕಿತು. ನನಗೆ ಅವರಿಂದ ನೋವಾಗಿದೆ, ಅದನ್ನಿಲ್ಲಿ ಹೇಳಿದ್ದೇನೆ. ನನ್ನ ಸಣ್ಣತನ, ಮೋಸ, ತಪ್ಪುಗಳನ್ನೂ ಅಷ್ಟೇ ನೇರವಾಗಿ ಹೇಳಿದ್ದೇನೆ. ಈ ಪುಸ್ತಕವನ್ನು ನಿರ್ಭೀತಿಯಿಂದ ನೇರವಾಗಿ ಬರೆಯುತ್ತಾ ಹೋದೆ ಅಂತ ಹೇಳಬಹುದು.

ಆತ್ಮಕತೆ ಬರೆಯುತ್ತಾ ಎಮೋಶನಲ್‌ ಬ್ಲಾಕ್‌ ಆದ ಸಂದರ್ಭ ಇತ್ತಾ?

ಬ್ಲಾಕ್‌ ಮಾಡಿದ್ದಿಲ್ಲ. ಆದರೆ ಕೆಲವೊಮ್ಮೆ ಬರೆಯುತ್ತ ಬರೆಯುತ್ತ ಕಣ್ಣಲ್ಲಿ ನೀರು ಬರುತ್ತಿತ್ತು. ನಾನು ಬಸ್‌ನಲ್ಲಿ ಹೋಗುವಾಗ ಮುಖ ಮುಚ್ಚಿಕೋ ಅಂದಿದ್ದು, ಕೆಲಸದ ಜಾಗದಲ್ಲಿ ಆದ ಅವಮಾನಗಳು ಇತ್ಯಾದಿ ನೋವು ತರುತ್ತಿದ್ದವು. ಆ ಕ್ಷಣ ನಾನ್ಯಾಕೆ ಸುಮ್ಮನಿದ್ದೆ, ಧೈರ್ಯವಾಗಿ ಎದುರಿಸಬಹುದಿತ್ತಲ್ವಾ ಅಂತ ಮನಸ್ಸಿಗೆ ಕಸಿವಿಸಿ ಆಗ್ತಿತ್ತು.

ಬರೆದ ನಂತರ ಸಿಕ್ಕ ಸಮಾಧಾನ?

ಒಂದು ನಿರಾಳತೆ ಸಿಕ್ಕಿದೆ. ಹೇಳಬೇಕು ಅಂದುಕೊಂಡಿದ್ದನ್ನು ಆತ್ಮವಂಚನೆಯಿಲ್ಲದೇ ಹೇಳಿದ ತೃಪ್ತಿ ಇದೆ.

ನೀವು ಆ ಹುಡುಗನ ಮೇಲೆ ಸೇಡು ತೀರಿಸಿಕೊಳ್ಳಲು ತಮಿಳುನಾಡಿನ ಮಾಟ ಮಾಡುವವರ ಹತ್ರ ಹೋದ ಘಟನೆ?

(ಜೋರು ನಗು) ನಂಗೆ ನಗು ತಡ್ಕೊಳಕ್ಕಾಗಲ್ಲ. ಆವಾಗ ಹೇಗೆಲ್ಲ ಯೋಚ್ನೆ ಮಾಡ್ತಾ ಇದ್ನಲ್ಲಾ, ಎಷ್ಟೆಲ್ಲ ದುಡ್ಡು ಸುರಿದು ವೇಸ್ಟ್‌ ಮಾಡಿಬಿಟ್ನಲ್ಲಾ ಅಂತ ಅನಿಸುತ್ತೆ. ಜೊತೆಗೆ ಈಗ ಎಷ್ಟುಸ್ಟ್ರಾಂಗ್‌ ಆಗಿದ್ದೀನಲ್ವಾ ಅಂತ ಹೆಮ್ಮೆನೂ ಆಗುತ್ತೆ.

ಆತ್ಮಕತೆ ಬರೆದ ಬಳಿಕ ಪ್ರತಿಕ್ರಿಯೆ ಹೇಗಿತ್ತು?

ಸಣ್ಣ ಘಟನೆ ನಡೆಯಿತು. ನಾನು ಜಯನಗರ ಪಾರ್ಕ್ ಹತ್ರ ಈ ಪುಸ್ತಕದ ಸ್ಟಾಲ್‌ ಹಾಕಿದ್ದೆ. ಸಂಜೆ ಏಳೂವರೆ ಹೊತ್ತಿಗೆ ಒಬ್ಬ ವಿದ್ಯಾರ್ಥಿನಿ ತನ್ನ ಗೆಳತಿಯರ ಜೊತೆಗೆ ಅಲ್ಲಿಗೆ ಬಂದಳು. ಅಕ್ಕ ಏನಿದು ಅಂತ ಕೇಳಿದ್ಲು. ನಾನು ಪುಸ್ತಕ ಅಂತ ಹೇಳಿದೆ. ಮತ್ತೆ ಮತ್ತೆ ಪುಸ್ತಕ ತಿರುಗಿಸಿ ನೋಡಿ ಹೋದ್ಲು. ಸ್ವಲ್ಪ ದೂರ ಹೋಗಿ ಆ ಮಕ್ಕಳ ಬ್ಯಾಗ್‌ನಲ್ಲಿದ್ದ ಹತ್ತು ರುಪಾಯಿ, ಇಪ್ಪತ್ತು ರುಪಾಯಿ, ಚಿಲ್ಲರೆ ಹಣವನ್ನೆಲ್ಲ ಸೇರಿಸಿ 130 ರುಪಾಯಿ ಮಾಡಿ ತಂದುಕೊಟ್ಟು, ನಂಗೊಂದು ಪುಸ್ತಕ ಕೊಡಕ್ಕಾ ಅಂದಳು. ಕುತೂಹಲ, ಅಚ್ಚರಿಯಿಂದಲೇ ಕೊಟ್ಟೆ. ಅವತ್ತು ರಾತ್ರಿ ಒಂಭತ್ತೂವರೆಗೆ ಅವಳ ಕಾಲ್‌. ಅಕ್ಕ, ಪೂರ್ತಿ ಪುಸ್ತಕ ಓದಿ ಮುಗಿಸಿದೆ. ತುಂಬಾ ಚೆನ್ನಾಗಿದೆ, ಖುಷಿ ಆಯ್ತು. ನನಗೂ ಈ ಥರ ಅನುಭವ ಆಗಿದೆ. ಆದ್ರೆ ಇದನ್ನೆಲ್ಲ ಹೇಳಿದ್ರೆ ಅವಮಾನ ಮಾಡ್ತಾರೆ ಅಂತ ಭಯ ಇತ್ತಕ್ಕಾ. ಪುಸ್ತಕ ಓದಿದ್ಮೇಲೆ ಧೈರ್ಯ ಬಂತು. ದೊಡ್ಡವಳಾದ್ಮೇಲೆ ನಾನೂ ಹೀಗೆಲ್ಲ ಪುಸ್ತಕ ಬರೀತೀನಿ ಅಂದಳು. ಇದು ನನಗೆ ಬಹಳ ತೃಪ್ತಿ ಕೊಟ್ಟಕ್ಷಣ. ಹೀಗೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಲೇ ಇವೆ.

‘ಹುಣ್‌್ಸಮಕ್ಕಿ ಹುಳ’ ಅನ್ನೋ ಟೈಟಲ್‌ ಹೊಳೆದದ್ದು ಹೇಗೆ?

ನನ್ನೂರು ಕುಂದಾಪುರದ ಹುಣ್‌್ಸಮಕ್ಕಿ. ಮೊದಲು ಇದನ್ನು ಹೇಳಿದ್ರೆ ಯಾರಿಗೂ ಗೊತ್ತಾಗ್ತಿರಲಿಲ್ಲ. ಅದಕ್ಕೆ ಊರು ಯಾವ್ದು ಅಂದರೆ ಕುಂದಾಪುರ ಅಂತ ಹೇಳಿ ಸುಮ್ಮನಾಗ್ತಿದೆ. ಈ ಟೈಟಲ್‌ ಹೊಳೆದಿದ್ದು ನನ್ನ ಗಂಡನ ಮೂಲಕ. ಅವ್ನು ಈಗ್ಲೂ ರೇಗಿಸ್ತಿರ್ತಾನೆ, ಹುಣ್‌್ಸಮಕ್ಕಿ ಹುಳ ಅಂತ. ಈಗ ಪುಸ್ತಕ ಬಂದಮೇಲೆ ಕೆಲವು ಸ್ನೇಹಿತರೂ ಆ ಹೆಸರಲ್ಲಿ ರೇಗಿಸೋದಕ್ಕೆ ಶುರು ಮಾಡಿದ್ದಾರೆ.

ಈ ಪುಸ್ತಕದಲ್ಲಿ ವಿನುತಾ ಎಷ್ಟುಪರ್ಸೆಂಟ್‌ ಸಿಗ್ತಾರೆ, ಅವರು ಹೇಳದೇ ಉಳಿಸಿದ್ದು ಎಷ್ಟುಪರ್ಸೆಂಟ್‌?

ನಾನು ಹೇಳಬೇಕು ಅಂದುಕೊಂಡಿರುವುದನ್ನೆಲ್ಲ ಹೇಳಿದ್ದೇನೆ. ಆ ಪ್ರಕಾರ ಸುಮಾರು ಶೇ.80 ವಿನುತಾ ಈ ಕೃತಿಯಲ್ಲಿದ್ದಾಳೆ. ಹೇಳದೇ ಉಳಿದಿರೋದು 20 ಪರ್ಸೆಂಟ್‌ ಅಷ್ಟೇ.

ಸಾಹಿತ್ಯ ಪ್ರೀತಿ ಜೊತೆ ರಂಗಭೂಮಿ ಒಡನಾಟವೂ ಇದೆಯಲ್ವಾ?

ಹೌದು, ಸಮುದಾಯ ಬೆಂಗಳೂರು ರಂಗತಂಡದಲ್ಲಿದ್ದೀನಿ. ನಾಟಕ, ಬೀದಿ ನಾಟಕಗಳನ್ನೆಲ್ಲ ಮಾಡ್ತಿರುತ್ತೇನೆ.

ನಿಮ್ಮ ಈ ಪುಸ್ತಕ ಸಿನಿಮಾವಾಗುತ್ತಂತೆ?

ಹೌದು, ನನ್ನ ಗಂಡ ಚೇತನ್‌ ಈ ಸಿನಿಮಾ ನಿರ್ದೇಶನ ಮಾಡುವ ಪ್ಲಾನ್‌ನಲ್ಲಿದ್ದಾರೆ. ನಿರ್ಮಾಪಕರು ಸಿಕ್ಕರೆ ಆ ಕೆಲಸಕ್ಕೆ ಚಾಲನೆ ಸಿಗುತ್ತೆ. ಸಿನಿಮಾದಲ್ಲೂ ನನ್ನ ಪಾತ್ರವನ್ನು ನಾನೇ ಮಾಡುತ್ತೇನೆ.