ನಗರಗಳಲ್ಲಿ ಮನೆಕೆಲಸದವರ ಕೊರತೆ ಹೆಚ್ಚಾಗಿದೆ. ಅರ್ಬನ್ ಕಂಪನಿಯು 'ಇನ್‌ಸ್ಟಾ ಮೇಡ್ಸ್' ಎಂಬ ಹೊಸ ಸೇವೆಯನ್ನು ಆರಂಭಿಸಿದ್ದು, 15 ನಿಮಿಷಗಳಲ್ಲಿ ಕೆಲಸದವರನ್ನು ಬುಕ್ ಮಾಡಬಹುದು. ಪಾತ್ರೆ ತೊಳೆಯುವುದು, ಗುಡಿಸುವುದು, ಅಡುಗೆ ಮುಂತಾದ ಕೆಲಸಗಳಿಗೆ ಗಂಟೆಗೆ 49 ರೂಪಾಯಿ ದರ ನಿಗದಿಪಡಿಸಲಾಗಿದೆ. ಸದ್ಯಕ್ಕೆ ಮುಂಬೈನಲ್ಲಿ ಮಾತ್ರ ಈ ಸೇವೆ ಲಭ್ಯವಿದ್ದು, ಪ್ರತಿಕ್ರಿಯೆ ಆಧರಿಸಿ ವಿಸ್ತರಿಸಲಾಗುವುದು. ಆದರೆ, ಕೆಲಸದವರ ಸುರಕ್ಷತೆ ಮತ್ತು ಅಕ್ರಮ ವಲಸಿಗರ ಬಗ್ಗೆ ಆತಂಕಗಳು ವ್ಯಕ್ತವಾಗಿವೆ.
ಮನೆಯ ಕೆಲಸಕ್ಕೆ ಕೆಲಸದವರು ಸಿಗುತ್ತಿಲ್ಲ ಎಂದು ಇಂದು ಕೊರಗುತ್ತಿರುವವರು ಹಲವರು. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಪತಿ-ಪತ್ನಿ ಇಬ್ಬರೂ ದುಡಿಯಲು ಹೋಗುವ ಅನಿವಾರ್ಯತೆ. ಇಂಥ ಸಂದರ್ಭಗಳಲ್ಲಿ ಪಾತ್ರೆಗಳನ್ನು ತೊಳೆಯುವುದು, ಗುಡಿಸುವುದು ಮತ್ತು ಒರೆಸುವುದು, ಅಡುಗೆ ಮಾಡುವುದು ಇವೆಲ್ಲವೂ ಹಲವರಿಗೆ ದೊಡ್ಡ ತಲೆನೋವು. ಕೆಲವು ಮಹಿಳೆಯರು ಇವುಗಳನ್ನೆಲ್ಲಾ ಚೆನ್ನಾಗಿ ನಿಭಾಯಿಸಿದರೆ, ಹಲವರಿಗೆ ಇದು ಕಷ್ಟಸಾಧ್ಯ. ಅದರಲ್ಲಿಯೂ ದೊಡ್ಡ ಕುಟುಂಬ ಇದ್ದಾಗ, ದೊಡ್ಡ ಮನೆ ಇದ್ದಾಗ ಇಲ್ಲವೇ ಕೆಲಸದ ಒತ್ತಡ ಹೆಚ್ಚಿದ್ದಾಗ... ಹೀಗೆ ಏನೇನೋ ಕಾರಣಗಳಿಗೆ ಮನೆಕೆಲಸದವರು ಬೇಕಾಗಿರುತ್ತದೆ. ಆದರೆ ಇಂದು ಕೆಲಸದವರು ಸಿಗುವುದು ಅದೆಷ್ಟು ಕಷ್ಟ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇನ್ನು ಸಿಕ್ಕರೂ, ಅವರ ಪೂರ್ವಪರ ತಿಳಿಯದ ಹಿನ್ನೆಲೆಯಲ್ಲಿ ಅವರನ್ನು ನಂಬುವುದೂ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ಬರುವ ವರದಿಗಳನ್ನು ನೋಡಿದ ಮೇಲೆ ಯಾರನ್ನು ನಂಬುವುದು, ಯಾರನ್ನು ಬಿಡುವುದು ಎನ್ನುವ ಪರಿಸ್ಥಿತಿ.
ಇಂಥವರಿಗಾಗಿ ಗುಡ್ನ್ಯೂಸ್ ಕೊಟ್ಟಿದೆ ಗೃಹ ಸೇವೆಗಳನ್ನು ಒದಗಿಸುವ ಕಂಪನಿಯಾದ ಅರ್ಬನ್ ಕಂಪನಿ. ಇದು 'ಇನ್‌ಸ್ಟಾ ಮೇಡ್ಸ್' ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯು 15 ನಿಮಿಷಗಳಲ್ಲಿ ಮನೆಯ ಕೆಲಸದವರನ್ನು ಬುಕಿಂಗ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ. ಈ ಸೇವೆಯು ಪಾತ್ರೆಗಳನ್ನು ತೊಳೆಯುವುದು, ಗುಡಿಸುವುದು ಮತ್ತು ಒರೆಸುವುದು, ಆಹಾರ ತಯಾರಿಕೆ ಸೇರಿದಂತೆ ಹಲವು ಮನೆಯ ಕೆಲಸಗಳನ್ನು ಒಳಗೊಂಡಿದೆ. ಮನೆಯ ಕೆಲಸದವರಿಗೆ ಒಂದೊಂದು ಕೆಲಸಕ್ಕೆ ಏನಿಲ್ಲ ಎಂದರೂ ಒಂದರಿಂದ ಎರಡು ಸಾವಿರ ಚಾರ್ಜ್ ಮಾಡಲಾಗುತ್ತದೆ. ಪಟ್ಟಣ, ನಗರ ಪ್ರದೇಶಗಳಲ್ಲಿ ಇದರ ಬೆಲೆ ಇನ್ನೂ ಹೆಚ್ಚು. ಆದರೆ 'ಇನ್‌ಸ್ಟಾ ಮೇಡ್ಸ್'ನಲ್ಲಿ ಬುಕ್ ಮಾಡಿದರೆ, ಗಂಟೆಗೆ 49 ರೂಪಾಯಿಗಳಲ್ಲಿ ಸೇವೆಗೆ ಕೆಲಸದವರು ಸಿಗಲಿದ್ದಾರೆ ಎನ್ನಲಾಗಿದೆ.
ಛೇ... ಛೇ... 'ಮೇಡಂ' ಅಂದ್ರೆ ನಿಜ ಅರ್ಥ ಇದಾ? ಇನ್ನು ಮಹಿಳೆಯರನ್ನು ಹೀಗೆ ಕರೆಯೋದಾದ್ರೂ ಹೇಗೆ?
ಹಾಗೆಂದು ಸದ್ಯ ಎಲ್ಲಾ ನಗರ ಪ್ರದೇಶಗಳವರೂ ಖುಷಿ ಪಡಬೇಕೆಂದಿಲ್ಲ. ಏಕೆಂದರೆ ಸದ್ಯ ಇದನ್ನು ಮುಂಬೈನಲ್ಲಿ ಮಾತ್ರ ಪರೀಕ್ಷಾರ್ಥವಾಗಿ ಸೇವೆ ಒದಗಿಸಲಾಗುತ್ತಿದೆ. ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಆಧಾರದ ಮೇಲೆ ಇದನ್ನು ಎಲ್ಲೆಡೆಗಳಲ್ಲಿ ವಿಸ್ತರಿಸಲಾಗುವುದು. ಇಂಥ ಸೇವೆಗಳು ಚೆನ್ನಾಗಿ ವರ್ಕ್ ಆಯಿತು ಎಂದರೆ ದೇಶವ್ಯಾಪಿ ಬರಲು ಹೆಚ್ಚು ದಿನಗಳೇನೂ ಆಗುವುದಿಲ್ಲ ಬಿಡಿ. ಹಾಗೆಯೇ ಇನ್ನೊಂದು ವಿಷಯ. ಒಂದು ಗಂಟೆಯ ಕೆಲಸಕ್ಕೆ 49 ರೂಪಾಯಿ ಇರುವುದು ಆರಂಭಿಕ ಆಫರ್ ಮಾತ್ರ. ನಂತರದ ದಿನಗಳಲ್ಲಿ ಈ ಮೊತ್ತವನ್ನು ಮಾಮೂಲಿನಂತೆ ಏರಿಸಲಾಗುತ್ತದೆ. ಬೆಲೆ ಎಷ್ಟಿದ್ದರೂ ಪರವಾಗಿಲ್ಲ, ಮನೆ ಕೆಲಸ ಮಾಡಲು ಜನ ಸಿಕ್ಕರೆ ಸಾಕು ಎನ್ನುವವರಿಗೆ ಇದು ಹೇಳಿ ಮಾಡಿಸಿದ ಯೋಜನೆ. ಅದೇ ರೀತಿ ಈ ಕೆಲಸದವರು ಒಂದು ಕಂಪೆನಿಯ ಜವಾಬ್ದಾರಿ ಆಗಿರುವ ಹಿನ್ನೆಲೆಯಲ್ಲಿ, ಅವರ ಬಗ್ಗೆ ಮನೆಯ ಮಾಲೀಕರು ಭಯ ಪಡುವ ಅಗತ್ಯವೂ ಇದ್ದಂತೆ ಕಾಣಿಸುತ್ತಿಲ್ಲ.
ಅದೇನೇ ಇದ್ದರೂ, ಎಲ್ಲವುಗಳಂತೆ ಇಲ್ಲಿಯೂ ಕೆಲವೊಂದು ಸಮಸ್ಯೆಗಳು ಇದ್ದೇ ಇವೆ. ಇಲ್ಲಿ ಮನೆಯ ಕೆಲಸಕ್ಕೆ ಬರುವವರನ್ನು ಸೇವಕಿ ಎಂದು ಕಂಪೆನಿ ಬಳಸಿರುವುದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರೆ, ಮತ್ತೆ ಹಲವರು, ಇವರನ್ನು ಮನೆಯ ಕೆಲಸಕ್ಕೆ ಕರೆಸಿದರೆ, ಅವರನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳುವ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಮನೆಯ ಮಾಲೀಕರ ಸುರಕ್ಷತೆ ಒಂದೆಡೆಯಾದರೆ, ಈ ರೀತಿ ಕೆಲಸಕ್ಕೆ ಬರುವವರ ಸುರಕ್ಷತೆಯನ್ನು ಕಂಪೆನಿ ವಹಿಸಿಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಅದೇ ಮತ್ತೊಂದೆಡೆ, ಇದಾಗಲೇ ಬಾಂಗ್ಲಾ, ನೇಪಾಳ ಸೇರಿದಂತೆ ಕೆಲವು ಅಕ್ರಮ ವಲಸಿಗರು ಇಂಥ ಕೆಲಸಗಳಲ್ಲಿ ಸಾಕಷ್ಟು ನೈಪುಣ್ಯ ಹೊಂದಿರುವ ಕಾರಣ, ಇವರೇ ಹೆಚ್ಚು ಸಂಖ್ಯೆಯಲ್ಲಿ ಬಂದರೆ, ಆಪತ್ತು ಕಾದಿದ್ದೇ ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಇಉದ ಯಾವ ರೀತಿಯಲ್ಲಿ ಕೆಲಸ ಮಾಡುತ್ತದ ಎನ್ನುವುವದನ್ನು ನೋಡಬೇಕಿದೆ.
