ಶಾಲಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವ ಆದೇಶ ಪಾಲಿಸದ ರಾಜ್ಯಗಳ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಿರ್ದೇಶನಗಳನ್ನು ಪಾಲಿಸದಿದ್ದರೆ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಮುಟ್ಟಿನ ನೈರ್ಮಲ್ಯವು ಸಂವಿಧಾನದ 21ನೇ ವಿಧಿಯಡಿ ಮೂಲಭೂತ ಹಕ್ಕು ಎಂದು ಕೋರ್ಟ್ ಪುನರುಚ್ಚರಿಸಿದೆ.

ನವದೆಹಲಿ: ಮುಟ್ಟಿನ ನೈರ್ಮಲ್ಯವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿ, ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯಮತ್ತು ಸ್ಯಾನಿಟರಿ ನ್ಯಾಪ್ಕಿನ್‌ ಲಭ್ಯತೆಯನ್ನು ಖಚಿತಪಡಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ್ದ ಆದೇಶ ಕೇವಲ ಕಾಗದದ ಮೇಲೆ ಉಳಿದಿರುವುದಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ನಿರ್ದೇಶನಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಜೀವಿಸುವ ಹಕ್ಕು

ಮುಟ್ಟಿನ ನೈರ್ಮಲ್ಯವು ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕಿನ ಪ್ರಮುಖ ಭಾಗವಾಗಿದ್ದು, ಇದನ್ನು ನಿರ್ಲಕ್ಷಿಸುವುದು ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಲು, ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಕಾರಣವಾಗುತ್ತದೆ ಎಂದು ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ಸರ್ಕಾರಗಳು ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿ.14ಕ್ಕೆ ನಿಗದಿಪಡಿಸಿದೆ.

ಪ್ರತ್ಯೇಕ ಶೌಚಾಲಯ

ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್‌ ಮತ್ತು ಪ್ರತ್ಯೇಕ ಶೌಚಾಲಯಗಳನ್ನು ಕಲ್ಪಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಜನವರಿಯಲ್ಲಿ ಇದರ ವಿಚಾರಣೆ ನಡೆಸಿದ ಪೀಠ, ಮುಟ್ಟಿನ ನೈರ್ಮಲ್ಯವು ಸಂವಿಧಾನದ 21ನೇ ವಿಧಿಯಡಿ ನೀಡಲಾದ ಮೂಲಭೂತ ಎಂದು ಅಭಿಪ್ರಾಯಪಟ್ಟಿತ್ತು ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿತ್ತು.

56 ಜನರ ಬಲಿ ಪಡೆದ ಸ್ಫೋಟದ ಅಪರಾಧಿ ಗಲ್ಲಿಗೆ ಸುಪ್ರೀಂ ತಡೆ

2008ರಲ್ಲಿ ಗುಜರಾತಿನ ಅಹಮದಾಬಾದ್‌ನಲ್ಲಿ 56 ಜನರ ಬಲಿ ಪಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಇಂಡಿಯನ್‌ ಮುಜಾಹಿದ್ದೀನ್ ಸಂಘಟನೆಯ ಉಗ್ರನ ಮರಣದಂಡನೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಗುಜರಾತ್‌ ಹೈಕೋರ್ಟ್‌ ಜುಲೈ 7 ರಂದು ಪ್ರಕರಣದ ದೋಷಿ ಮೊಹಮ್ಮದ್ ತನ್ವೀರ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಮೊರೆ ಹೋಗಿದ್ದನು. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆಗೆ ಸಮ್ಮತಿಸಿದ್ದು, ಶಿಕ್ಷೆಗೆ ತಡೆ ನೀಡಿದೆ. ಜುಲೈ 7 ರಂದು ಗುಜರಾತ್‌ ಹೈಕೋರ್ಟ್‌ ಈ ಪ್ರಕರಣದಲ್ಲಿ 38 ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. 2008ರ ಜುಲೈ 21ರಂದು 70 ನಿಮಿಷದಲ್ಲಿ 21 ಸರಣಿ ಬಾಂಬ್‌ ಸ್ಫೋಟಗೊಂಡು 56 ಮಂದಿ ಸಾವನ್ನಪ್ಪಿ, 200 ಜನರು ಗಾಯಗೊಂಡಿದ್ದರು.