Asianet Suvarna News Asianet Suvarna News

ಸಿಂಧೂ ತಾಯಿ ಕತೆ ಕೇಳಿ ನೀವು ಕಣ್ಣೀರಾಗದಿದ್ರೆ ಹೇಳಿ!

ಹಸುಗೂಸನ್ನು ಎತ್ತಿಕೊಂಡು ಸಿಂಧೂ ರೈಲಿನ ಕಂಬಿಗೆ ತಲೆಕೊಟ್ಟು ಮಲಗಿದ್ದಾಳೆ, ಇನ್ನೇನು ಕೆಲವೇ ಕ್ಷಣಗಳಲ್ಲಿ ಬರುವ ರೈಲು ಅವಳನ್ನು, ಮಗುವನ್ನೂ ಯಮಲೋಕಕ್ಕೆ ಅಟ್ಟಲಿದೆ. ಅಷ್ಟರಲ್ಲಿ ಅವಳಿಗೆ ಯಾರೋ ಜೋರಾಗಿ ಅಳುತ್ತಿರುವುದು ಕೇಳಿಸಿತು.

Sindhutai Sapkal of Maharashtra who becomes Mother of thousands of Orphans
Author
Bengaluru, First Published Jan 24, 2020, 3:52 PM IST
  • Facebook
  • Twitter
  • Whatsapp

'ನಾನು ಒಬ್ಬ ಹೆಣ್ಮಗಳ ಕತೆಯನ್ನು ಚುಟುಕಾಗಿ ಹೇಳ್ತೀನಿ..'

ರಾಧಾನಾಥ ಸ್ವಾಮಿ ಹೀಗಂದಾಗ ಎದುರು ಕೂತಿದ್ದ ನೂರಾರು ಶಿಷ್ಯಂದಿರು ತಲೆಯಾಡಿಸಿದರು. ಅಷ್ಟಕ್ಕೂ ಈ ರಾಧಾನಾಥ ಸ್ವಾಮಿ ಇಲ್ಲಿಯವರಲ್ಲ. ಇಂಗ್ಲೆಂಡ್‌ನವರು. ಆದರೆ ಆಧ್ಯಾತ್ಮದ ಹುಡುಕಾಟದಲ್ಲಿ ಮೂರ್ನಾಲ್ಕು ದಶಕಗಳ ಹಿಂದೆ ಭಾರತಕ್ಕೆ ಬಂದು ಇಲ್ಲೇ ನೆಲೆಸಿದ್ದಾರೆ. ತಮ್ಮ ಉಪನ್ಯಾಸಗಳ ಮೂಲಕ, ನಿಜ ಕತೆಗಳನ್ನು ಹೇಳುವ ಮೂಲಕ ಸಾವಿರಾರು ಜನರಲ್ಲಿ ಸ್ಪೂರ್ತಿ ತುಂಬುತ್ತಿದ್ದಾರೆ. ಅಂದು ರಾಧಾಸ್ವಾಮಿ ಹೇಳಲು ಹೊರಟಿದ್ದ ಕತೆ ಸಿಂಧೂತಾಯಿ ಸತ್ಪಾಲ್ ಅವರದ್ದು. ಸದಾ ಮುಗುಳ್ನಗುವ, ನಿರ್ಲಿಪ್ತ ಮುಖಮುದ್ರೆಯ ಈ ಸ್ವಾಮೀಜಿಯೂ ಅಂದು ಈಕೆಯ ಕತೆ ಹೇಳ್ತಾ ಹೇಳ್ತಾ ತಾವೂ ತುಸು ಭಾವುಕರಾದ ಹಾಗಿತ್ತು. ಅವರ ನಿರೂಪಣೆಯಲ್ಲಿ ಬಂದ ಸಿಂಧೂತಾಯಿ ಸತ್ಪಾಲ್ ಕತೆ ಹೀಗಿದೆ.

 

ಸಿಂಧೂ ತಾಯಿ ಹುಟ್ಟಿದ್ದು ಬಡತನವನ್ನೇ ಹಾಸಿ ಹೊದ್ದಂತಿದ್ದ ಕುಂಟುಂಬದಲ್ಲಿ. ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಅವಳ ಜನನವಾಯ್ತು. ಸ್ವಲ್ಪ ದೊಡ್ಡವಳಾದಾಗ ಶಾಲೆ ಹೋಗ್ತೀನಿ ಅಂದಳು. ಆದರೆ ಅವಳ ಬಡ ಕುಟುಂಬ ಎಮ್ಮೆ ಮೇಯಿಸುವ ಕೆಲಸ ಕೊಟ್ಟು ಅವಳನ್ನು ಸಾಗಹಾಕಿತು. ಅವಳಿಗೆ 8 ವರ್ಷ ವಯಸ್ಸಾದಾಗ ಮದುವೆ ಮಾಡಿದರು. ಅವಳು ಮದುವೆಯಾದ ಹುಡುಗನ ವಯಸ್ಸು 30 ವರ್ಷ. ಅವಳಿಗೆ 19 ವರ್ಷವಾದಾಗ ಮೂರು ಗಂಡುಮಕ್ಕಳ ತಾಯಿಯಾಗಿದ್ದಳು. ನಾಲ್ಕನೇ ಮಗು ಹೊಟ್ಟೆಯಲ್ಲಿತ್ತು.

 

ಅಮೇಜಾನ್ ಬಾಸ್ ಜೊತೆ ಭಾರತಕ್ಕೆ ಬಂದ ಆ ಸುಂದರಿ ಯಾರು?

 

ಆ ಹೊತ್ತಿಗೆ ಒಬ್ಬ ಕ್ರೂರ ವ್ಯಕ್ತಿ ಅವಳಿದ್ದ ಹಳ್ಳಿಯ ಹೆಣ್ಣು ಮಕ್ಕಳಿಗೆ ವಿಪರೀತ ಹಿಂಸೆ ಮಾಡುತ್ತಿದ್ದ. ಆ ಹೆಣ್ಣುಮಕ್ಕಳನ್ನು ಸಿಕ್ಕಾಪಟ್ಟೆ ದುಡಿಸುತ್ತಿದ್ದ. ಅವರಿಗೆ ಕೆಲಸಕ್ಕೆ ತಕ್ಕ ಹಣ ಕೊಡುತ್ತಿರಲಿಲ್ಲ. ಊರಿನ ಬಡ ಹೆಣ್ಣುಮಕ್ಕಳು ಈತನನ್ನು ಕಂಡರೆ ಹೆದರಿ ನಡುಗುತ್ತಿದ್ದರು. ಆದರೆ ಸಿಂಧೂತಾಯಿ ಧೈರ್ಯವಾಗಿ ಈ ವಿಷಯವನ್ನು ಊರಿನ ಕಲೆಕ್ಟರ್ ಬಳಿ ಹೇಳಿದಳು. ಪೊಲೀಸರು ಬಂದು ಆ ಕ್ರೂರಿಯನ್ನು ಕರೆದೊಯ್ದರು. ಆದರೆ ಆ ಮನುಷ್ಯ ಸಿಂಧೂ ಮೇಲೆ ಸಿಟ್ಟಿನಿಂದ ಉರಿಯುತ್ತಿದ್ದ. ಅವನು ಇವಳ ಗಂಡನಿಗೆ ಕಿವಿಯೂದಿದ, 'ನೀನೊಬ್ಬ ಮೂರ್ಖ. ನಿನ್ನ ಹೆಂಡತಿಗೆ ಊರಲ್ಲಿ ಅದೆಷ್ಟು ಜನರ ಜೊತೆಗೆ ಸಂಬಂಧವಿದೆ ಗೊತ್ತಾ? ಇನ್ನೊಂದು ವಿಷ್ಯ ಅಂದರೆ ಈಗ ಅವಳ ಹೊಟ್ಟೆಯಲ್ಲಿರುವ ಮಗು ನಿನ್ನದಲ್ಲ, ಅದು ನನ್ನದು. ನಾನೂ ಅವಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೆ. ಈಗ ನೀನು ಅವಳ ಹೊಟ್ಟೆಯಲ್ಲಿರುವ ಮಗುವನ್ನು, ಅವಳನ್ನು ಕೊಲ್ಲದಿದ್ದರೆ ನಾನು ಅವಳನ್ನು ಕೊಲ್ಲುತ್ತೀನಿ' ಅಂದ.

 

ಅವನ ಮಾತನ್ನು ನಂಬಿದ ಮೂರ್ಖ ಗಂಡ ಹೆಂಡತಿ ಹೊಟ್ಟೆಗೆ ಒದ್ದ. ಎದೆ, ಹೊಟ್ಟೆಗೆ ಬಿದ್ದ ಅಂಥಾ ಏಟಿನಿಂದ ಹತ್ತೊಂಬತ್ತರ ಹರೆಯದ ಹುಡುಗಿ ಪ್ರಜ್ಞಾಹೀನಳಾದಳು. ಅವಳು ಬಹುಶಃ ಸತ್ತಿರಬೇಕು ಅಂದುಕೊಂಡು ಆ ಗಂಡವನ್ನು ಹಸುಗಳಿದ್ದ ಕೊಟ್ಟಿಗೆಗೆ ಸಾಗಿಸಿ ಅಲ್ಲೇ ಎಸೆದ. ಹಸುಗಳ ತುಳಿತದಿಂದ ಅವಳು ಸತ್ತಳು ಅಂತ ಜನ ತಿಳಿದುಕೊಳ್ಳಲಿ ಅನ್ನೋದು ಅವನ ಯೋಚನೆಯಾಗಿತ್ತು. ಅಲ್ಲೇ ಅವಳಿಗೆ ಹೆರಿಗೆಯಾಯ್ತು. ಅವಳು ಸಾಕಿದ ಆ ಹಸುವೇ ಅವಳಿಗೆ ನೆರಳಾಗಿ ನಿಂತು ಅವಳ ರಕ್ಷಣೆ ಮಾಡಿತು.. ಅವಳ ಮಾವ ಅವಳು ಸತ್ತಿದ್ದಾಳೋ ಇಲ್ಲವೋ ಅಂತ ನೋಡಲು ಬಂದಾಗ ಹಸು ಅವರನ್ನು ಹತ್ತಿರಕ್ಕೂ ಬರಲು ಬಿಡಲಿಲ್ಲ. ಯಾವುದೋ ಒಂದು ಹೊತ್ತಿಗೆ ಎಚ್ಚರವಾಗಿ ಸಿಂಧೂ ಮಗುವಿನೊಂದಿಗೆ ಮನೆಯಿಂದ ಹೊರಬಿದ್ದಳು. ದಿಕ್ಕುದೆಸೆಯಿಲ್ಲದೇ ನಡೆಯತೊಡಗಿದಳು. ಹಸಿ ಬಾಣಂತಿ. ಹೊಟ್ಟೆ ಹಸಿಯುತ್ತಿತ್ತು. ಆದರೆ ಇವಳ ಗಮನ ಅದರಲ್ಲಿ ಇರಲಿಲ್ಲ. ಮುಂದೆ ಬರುವ ರೈಲಿಗೆ ತಲೆಕೊಟ್ಟು ಪ್ರಾಣ ಬಿಡಬೇಕು, ನನ್ನ ಮಗುವನ್ನು ಇಂಥಾ ಸ್ಥಿತಿಯಲ್ಲಿ ಬೆಳೆಸುವುದು ಬೇಡ. ಮಗುವಿನೊಂದಿಗೇ ಪ್ರಾಣ ಬಿಡೋಣ ಅಂದುಕೊಂಡಳು.

 

ನನಗೆ ನನ್ನ ಮೇಲೆ ನಂಬಿಕೆ ಬರುವ ಹಾಗೆ ಮಾಡಿ ಪ್ಲೀಸ್..

 

ಆ ಹಸುಗೂಸನ್ನು ಎತ್ತಿಕೊಂಡು ಸಿಂಧೂ ರೈಲಿನ ಕಂಬಿಗೆ ತಲೆಕೊಟ್ಟು ಮಲಗಿದ್ದಾಳೆ, ಇನ್ನೇನು ಕೆಲವೇ ಕ್ಷಣಗಳಲ್ಲಿ ಬರುವ ರೈಲು ಅವಳನ್ನು, ಮಗುವನ್ನೂ ಯಮಲೋಕಕ್ಕೆ ಅಟ್ಟಲಿದೆ. ಅಷ್ಟರಲ್ಲಿ ಅವಳಿಗೆ ಯಾರೋ ಜೋರಾಗಿ ಅಳುತ್ತಿರುವುದು ಕೇಳಿಸಿತು. ಆಕೆ ಕಂಬಿ ಬಿಟ್ಟು ಎದ್ದಳು. ದೂರದಲ್ಲಿ ಹಣ್ಣು ಹಣ್ಣು ಮುದುಕನೊಬ್ಬ ಹಸಿವಿನಿಂದ ಅಳುತ್ತಿದ್ದ. ಅದನ್ನು ಕಂಡು ಸಿಂಧೂವಿನ ತಾಯಿ ಕರುಳು ಚುರ್ರ್ ಎಂದಿತು, ಹತ್ತಿರದಲ್ಲೇ ಒಂದು ಸ್ಮಶಾನ ಇತ್ತು. ಸ್ಮಶಾನಕ್ಕೆ ಹೋಗಿ ಅಲ್ಲಿ ಹೆಣದ ಮೇಲೆ ಚೆಲ್ಲಿದ ಗೋಧಿಯನ್ನು ಒಟ್ಟು ಮಾಡಿ ಬೇಯಿಸಿ ಮುದುಕನ ಹೊಟ್ಟೆ ತುಂಬಿಸಿದಳು. ನಿಧಾನಕ್ಕೆ ಅವಳಿಗೆ ಆ ಮುದುಕ ಕೃಷ್ಣನಂತೆ ಕಾಣಿಸಿದ.

 

ಅವಳಿಗೆ ತನ್ನ ಬದುಕಿನ ಅರ್ಥ ಗೊತ್ತಾಯ್ತು. ಸುಮ್ಮನೆ ಸಾಯುವ ಬದಲು ಇಂಥಾ ನೆಲೆಯಿಲ್ಲದ ನಿರ್ಗತಿಕರಿಗೆ ತಾಯಿಯಾಗಲು ಬಯಸಿದಳು. ಸುತ್ತ ಮುತ್ತ ಇರುವ ಅನಾಥ ಮಕ್ಕಳನ್ನು ಗುರುತಿಸಿ ಅವರನ್ನು ಪೋಷಿಸಲಾರಂಭಿಸಿದಳು. ಅವಳಿಗೆ ಚೆನ್ನಾಗಿ ಹಾಡಲು ಗೊತ್ತಿತ್ತು. ಹಾಡು ಹಾಡಿ ಭಿಕ್ಷೆ ಎತ್ತಿ ಮಕ್ಕಳಿಗೆ ಆಹಾರ, ರಕ್ಷಣೆ ನೀಡತೊಡಗಿದಳು. ಅಂಥಾ ಮಕ್ಕಳ ಸಂಖ್ಯೆ ಏರತೊಡಗಿತು. ಅವಳ ಕೆಲಸಕ್ಕೆ ಉದಾರಿಗಳಿಂದ ಸಹಾಯವೂ ಒದಗಿಬಂತು. ಅವರು ಅವಳಿಗೊಂದು ಅನಾಥಾಶ್ರಮ ಕಟ್ಟಿಕೊಟ್ಟರು. ಎಷ್ಟೋ ವರ್ಷ ಕಳೆದ ಮೇಲೆ ಅವಳಿಗೆ ತಿಳಿಯಿತು. ಅವಳಿಗೀತ ಒಂದೂವರೆ ಸಾವಿರದಷ್ಟು ಮಕ್ಕಳಿದ್ದರು, ಸಾವಿರಕ್ಕೂ ಹೆಚ್ಚು ಮೊಮ್ಮಕ್ಕಳಿದ್ದರು. ಅವಳ ಬದುಕೀಗ ಸಂಪೂರ್ಣ ಬದಲಾಗಿತ್ತು. ಅವಳ ಎಲ್ಲ ಮಕ್ಕಳೂ ಸುಶಿಕ್ಷಿತರು. ಅವರಲ್ಲಿ ಹಲವರು ವೈದ್ಯರು, ಕೃಷಿಕರು, ಉದ್ಯೋಗಿಗಳೆಲ್ಲ ಇದ್ದಾರೆ. ಸಿಂಧೂ ಈಗ ಸಿಂಧೂತಾಯಿ ಆಗಿದ್ದಾರೆ. ರಾಷ್ಟ್ರಪತಿಗಳೇ ಈಕೆಯ ಸಾಧನೆಗೆ ಬೆರಗಾಗಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಂಧೂತಾಯಿಗೆ ಬಂದಿವೆ.

 

ಹೀಗಿರುವಾಗ ಒಂದು ಘಟನೆ ನಡೆಯಿತು. ಒಂದು ದಿನ ಸಿಂಧೂತಾಯಿ ಆಶ್ರಮದ ಮುಂದೆ ಒಬ್ಬ ಅನಾರೋಗ್ಯಪೀಡಿತ ವ್ಯಕ್ತಿ ಬಸವಳಿದು ನಿಂತಿದ್ದ. ಅವಳಲ್ಲಿ ದಯನೀಯವಾಗಿ ಆಶ್ರಯ ಬೇಡಿದ. ಆತ ಬೇರ್ಯಾರೂ ಅಲ್ಲ ಅವಳನ್ನು ಕೊಲ್ಲಲು ಮುಂದಾಗಿದ್ದ ಅವಳ ಗಂಡ. ಒಂದು ಕಂಡೀಶನ್ ಮೇಲೆ ಈಕೆ ಅವನನ್ನು ಆಶ್ರಮಕ್ಕೆ ಸೇರಿಸಿಕೊಂಡಳು. ಅವನೂ ಇಲ್ಲಿ ಉಳಿದ ಮಕ್ಕಳ ಜೊತೆಗೆ ಮಗುವಾಗಿಯೇ ಇರಬೇಕು. ಅವನೀಗ ಅವಳ ಗಂಡ ಅಲ್ಲ, ಅವಳು ಅವನ ಹೆಂಡತಿ ಅಲ್ಲ, ಅಮ್ಮ. ಅವನು ಅವಳ ಮಗು.

 

ಫೈನಲ್‌ ವಿಶಲ್‌ ಇನ್ನೂ ಹೊರಬಿದ್ದಿಲ್ಲ, ಆಗ್ಲೇ ಬೇಜಾರು ಯಾಕೆ?

 

..ಇಷ್ಟು ಹೇಳಿದ ಮೌನವಾದ ಸ್ವಾಮೀಜಿ ನಾನು ಸಿಂಧೂತಾಯಿಯನ್ನು ಪೂನಾದಲ್ಲಿ ಭೇಟಿಯಾದೆ ಅಂದರು. ಆಗ ಸಿಂಧೂತಾಯಿ ಜೊತೆಗೆ ಒಬ್ಬ ಮಹಿಳೆ ಇದ್ದರು. ಅವರ ಮುಖದಲ್ಲಿ ಸದಾ ನಗು ತುಂಬಿ ತುಳುಕುತ್ತಿತ್ತು. ಸ್ವಾಮೀಜಿ ಅಕ್ಕರೆಯಿಂದ ಅವಳು ಯಾರು ಅಂತ ಕೇಳಿದಾಗ ಸಿಂಧೂತಾಯಿ ನಗುತ್ತಾ ಹೇಳಿದರು, ಇವಳೇ ಆ ಹಸುಗಳ ಕೊಟ್ಟಿಗೆಯಲ್ಲಿ ಹುಟ್ಟಿದ ನನ್ನ ಮಗಳು. ಇವಳೀಗ ಮೆಡಿಕಲ್ ಡಾಕ್ಟರ್. ಆಶ್ರಮ ನೋಡಿಕೊಳ್ಳುವ ಜೊತೆಗೆ ಹುಷಾರಿಲ್ಲದವರ ಸೇವೆಯನ್ನೂ ಮಾಡುತ್ತಾಳೆ ಅಂದರು.

ಇದು ಸಿಂಧೂತಾಯಿ ಕಥೆ. ಇದು ನಿಮ್ಮಲ್ಲೂ ಸ್ಪೂರ್ತಿ ತುಂಬಲಿ.

Follow Us:
Download App:
  • android
  • ios