ಕೊರೋನಾ ವಾರಿಯರ್ ತುಂಬು ಗರ್ಭಿಣಿ ಪತ್ನಿ ಬಿಚ್ಚಿಟ್ಟ ಕರಾಳ ಸತ್ಯ!
ಕೋವಿಡ್ 19- ಸಾಂಕ್ರಾಮಿಕ ಸಂಕಷ್ಟ ಕಾಲದ ಗರ್ಭಿಣಿಯೊಬ್ಬಳ ಆತಂಕ, ಒಂಟಿಯಾಗಿರಬೇಕಾದ ಅನಿವಾರ್ಯತೆ, ಮಗುವಿನ ಭವಿಷ್ಯದ ಕನಸುಗಳು, ತನ್ನ ವಿವಾಹ ಜೀವನದ ನೆನಪುಗಳು, ಕೊರೋನಾ ವಾರಿಯರ್ ಆಗಿರುವ ವೈದ್ಯಪತಿಯ ಕಾಳಜಿ- ಎಲ್ಲದರ ಒಟ್ಟಾರೆ ರೂಪವೇ ಮಿಸಸ್ ಡಾ.ಕುಲಕರ್ಣಿ.
ಒಂಬತ್ತು ತಿಂಗಳ ಹೆಂಡತಿ ಹಾಗೂ ಆಕೆಯ ಗರ್ಭದಲ್ಲಿರುವ ದಿನ ತುಂಬಿದ ಮಗುವಿನ ಮೇಲೆ ಪ್ರಾಣವನ್ನೇ ಇಟ್ಟುಕೊಂಡ ಡಾಕ್ಟರ್ ಕೋವಿಡ್ ರೋಗಿಗಳನ್ನು ನೋಡುವ ಡ್ಯೂಟಿಯಲ್ಲಿರುವುದರಿಂದ 15 ದಿನಗಳಿಂದ ಮನೆಯತ್ತ ಮುಖ ಮಾಡಿಲ್ಲ. ಲಾಕ್‌ಡೌನ್ ಕಾರಣಕ್ಕೆ ಅತ್ತೆಮಾವರಾಗಲೀ, ಅಪ್ಪಅಮ್ಮರಾಗಲೀ ಗರ್ಭಿಣಿ ಮಿಸಸ್ ಕುಲಕರ್ಣಿಯ ಜೊತೆಗಿರಲು ಬರಲು ಸಾಧ್ಯವಾಗಿಲ್ಲ.
ಮನೆಯಲ್ಲೊಬ್ಬಳೇ ಇರುವ ಮಿಸಸ್ ಕುಲಕರ್ಣಿ ತನ್ನ ಹೊಟ್ಟೆಯಲ್ಲಿರುವ ಕಂದನೊಡನೆ ಮಾತಾಡುತ್ತಾ ಪತಿ ಹಾಗೂ ಮಗುವಿನ ಕುರಿತ ತನ್ನ ನೆನಪು ಹಾಗೂ ಕನಸುಗಳನ್ನು ಬಿಚ್ಚಿಡುತ್ತಾ ಹೋಗುತ್ತಾಳೆ. ಆ ನೆನಪಲ್ಲಿ ಪತಿಯ ತುಂಬು ಪ್ರೀತಿಯಿದೆ, ತಡವಾಗಿ ವಿವಾಹವಾಗಿ, ವರ್ಷಗಳುರುಳಿದರೂ ಮಕ್ಕಳಾಗದೆ, ಎರಡು ಬಾರಿ ಗರ್ಭಪಾತವಾದ ಯಾತನೆಯಿದೆ... ಕಡೆಗೂ ಬಸಿರಾಗಿ ದಿನ ತುಂಬುತ್ತಿರುವ ಸಂತಸ, ಈ ಬಗ್ಗೆ ತನ್ನ ಪತಿಯ ವಿಶೇಷ ಸಂತೋಷ, ಕಾಳಜಿಯನ್ನೆಲ್ಲ ನೆನೆಯುತ್ತಿರುವಾಗಲೇ ಆಘಾತದ ಬರಸಿಡಿಲೊಂದು ಮಿಸಸ್ ಕುಲಕರ್ಣಿಗೆ ಬಂದೆರಗುತ್ತದೆ.
"
ಕೊರೋನಾ ವೈರಸ್, ಲಾಕ್‌ಡೌನ್ ಹಾಗೂ ಇದರಿಂದ ಗರ್ಭಿಣಿಯರು ಮತ್ತು ಕೋವಿಡ್ ವಾರಿಯರ್ಸ್ ಎದುರಿಸುತ್ತಿರುವ ಸಮಸ್ಯೆಗಳನ್ನು, ಮಾನಸಿಕ ಆತಂಕಗಳನ್ನು ಬಿಚ್ಚಿಡುವ ಈ ಶಾರ್ಟ್ ಫಿಲ್ಮ್ 'ಶ್ರೀಮತಿ ಡಾ. ಕುಲಕರ್ಣಿ' ಬ್ಲ್ಯಾಕ್‌ಟಿಕೆಟ್ ಸ್ಟುಡಿಯೋದ ಕ್ಲೋಸಪ್ ಸ್ಟೋರೀಸ್ ಸರಣಿಗೆ ಸೇರಿದೆ.
ಸುಂದರ್ ಬರೆದ ಕತೆಗೆ ಮಿಸಸ್ ಕುಲಕರ್ಣಿಯಾಗಿ ಶಿಲ್ಪಾ ರುದ್ರಪ್ಪ ಅಭಿನಯಿಸಿದ್ದು, ಈ ಶೂಟಿಂಗ್ ಸಂದರ್ಭದಲ್ಲಿ ಅವರು ನಿಜವಾಗಿಯೂ 9 ತಿಂಗಳ ಗರ್ಭಿಣಿಯಾಗಿದ್ದರೆಂಬುದು ವಿಶೇಷ. 8 ನಿಮಿಷಗಳ ಈ ವಿಡಿಯೋ ಪ್ರಸ್ತುತ ಸಂದರ್ಭಕ್ಕೆ ಹೊಂದಿಕೆಯಾಗಿರುವುದರಿಂದ ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿದೆ.
ಬದುಕೋದಿಕ್ಕೆ ಕಾಲು ಬೇಕಿಲ್ಲ, ಛಲ ಸಾಕು ಅನ್ನುವ ಮುನೀಬಾ ಮಜಾರಿ
ಐಫೋನ್‌ನಲ್ಲಿ ಚಿತ್ರೀಕರಣ
ಮನೆಯ ಕೋಣೆಯೊಂದರಲ್ಲಿ ಐಫೋನ್ ಎಕ್ಸ್ ಮೂಲಕ ಈ ಕಿರುಚಿತ್ರದ ಚಿತ್ರೀಕರಣ ನಡೆಸಲಾಗಿದೆ. 'ಕತೆಗೆ ಮುಖ್ಯವಾಗಿ ಅಗತ್ಯವಿದ್ದುದೆಂದರೆ ಗರ್ಭಿಣಿಯ ಹೊಟ್ಟೆ ಕಾಣಬೇಕೆಂಬುದು. ನಾನು ಕೊನೆಯ ಟ್ರೈಮಿಸ್ಟರ್‌ನಲ್ಲಿದ್ದ ಕಾರಣ ಉಸಿರಾಡಲು ಕಷ್ಟವಾಗುತ್ತಿತ್ತು, ಹೆಚ್ಚು ಹೆೊತ್ತು ನಿಲ್ಲಲಾಗುತ್ತಿರಲಿಲ್ಲ. ಆದರೆ, ಈ ಅನುಭವ ಬಹಳ ಕಲಿಸಿತು' ಎನ್ನುತ್ತಾರೆ ಶಿಲ್ಪಾ. ಕೋವಿಡ್ ವಾರಿಯರ್‌ಗಳಿಗೆ ಚಿತ್ರವನ್ನು ಸಮರ್ಪಿಸುವುದಾಗಿ ಹೇಳುತ್ತಾರೆ. ಇಂಥ ಸೂಕ್ಷ್ಮ ಸಂವೇದನೆಯ ಚಿತ್ರದ ಭಾಗವಾಗಿರುವುದಕ್ಕೆ ಶಿಲ್ಪಾಗೆ ಚಿತ್ರ ನಿರ್ದೇಶಕರಾದ ಬಿ ಸುರೇಶ್, ಸಂಗೀತ ನಿರ್ದೇಶಕ ವಿ ಮನೋಹರ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೋನಾವು ನಮ್ಮೆಲ್ಲರೂ ಭಯ ಹುಟ್ಟುಹಾಕಿದೆ. ಇಂಥ ಸಂದರ್ಭದಲ್ಲಿ ಮೊದಲ ಬಾರಿ ತಾಯಿಯಾಗಿರುವ ನಾನು ಡೆಲಿವರಿಗೂ ಮುನ್ನ ಹಾಗೂ ನಂತರದಲ್ಲಿ ಆತಂಕದಲ್ಲೇ ದಿನ ದೂಡಿದ್ದೇನೆ. ಆದರೆ, ಹೊಸ ಜೀವವನ್ನು ತರುವ ಖುಷಿಯೇ ಭರವಸೆ ತುಂಬಿತು ಎನ್ನುತ್ತಾರೆ ಶಿಲ್ಪಾ.
ನಾನು ಡುಮ್ಮಿ, ಏನೀವಾಗ? ಬಾಡಿ ಶೇಮ್ ಮಾಡೋರಿಗೆ ನಿತ್ಯಾ ಮೆನನ್ ಫುಲ್ ಕ್ ...
ಕೊರೋನಾವು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಕಷ್ಟ ತಂದಿದೆ. ಅದರಲ್ಲೂ ಗರ್ಭಿಣಿಯರ ಪಾಡೂ ಹೇಳತೀರದು. ಆಸ್ಪತ್ರೆಗೆ ಹೋಗಲೂ ಭಯ, ಹೋಗದಿದ್ದರೂ ನಡೆಯದು, ಮಗುವಿನ ಆರೋಗ್ಯದ ಕುರಿತು ವಿಪರೀತ ಆತಂಕ ಹುಟ್ಟುಹಾಕುವ ಕಾಲವಿದು. ಅಂಥದೊಂದು ಪ್ರಸ್ತುತದ ಸನ್ನಿವೇಶವನ್ನಿಟ್ಟುಕೊಂಡು ಬಂದ ಈ ಕತೆ ಸರಳ ಚಿತ್ರೀಕರಣವಾದರೂ ಬಹಳಷ್ಟನ್ನು ಹೇಳುತ್ತದೆ.