Asianet Suvarna News Asianet Suvarna News

3 ಈಡಿಯಟ್ಸ್ ಸಿನಿಮಾ ಥರ ವಿಡಿಯೋ ನೋಡಿ ಹೆರಿಗೆ ಮಾಡಿಸಲು ಮುಂದಾದರು, ಮುಂದೆ ಆಗಿದ್ದೇನು?

ಬಾಲಿವುಡ್ ಬ್ಲಾಕ್‌ ಬಸ್ಟರ್‌ 3 ಈಡಿಯಟ್ಸ್ ಚಿತ್ರದಲ್ಲಿ ಒಂದು ಸೀನ್‌ ಬರುತ್ತೆ. ಕ್ರಿಟಿಕಲ್‌ ಸನ್ನಿವೇಶದಲ್ಲಿ ತುಂಬು ಗರ್ಭಿಣಿಗೆ ಹೆರಿಗೆ ನೋವು ಬಂದಾಗ ಡಾಕ್ಟರ್‌ಗೆ ವಿಡಿಯೋ ಕಾಲ್ ಮಾಡಿ ಹೆರಿಗೆ ಮಾಡಿಸಿದ ಪ್ರಕರಣವದು. ಬಿಹಾರದಲ್ಲಿ ಅಂಥದೇ ಒಂದು ಪ್ರಕರಣ ನಡೀತು. ಆದ್ರೆ...

Pregnant woman who underwent surgery by a nurse on a video call with a doctor dies during operation
Author
First Published Jun 7, 2023, 8:24 PM IST

ಬಾಲಿವುಡ್ ಬ್ಲಾಕ್‌ ಬಸ್ಟರ್‌ 3 ಈಡಿಯಟ್ಸ್ ಚಿತ್ರದಲ್ಲಿ ಒಂದು ಸೀನ್‌ ಬರುತ್ತೆ. ಕ್ರಿಟಿಕಲ್‌ ಸನ್ನಿವೇಶದಲ್ಲಿ ತುಂಬು ಗರ್ಭಿಣಿಗೆ ಹೆರಿಗೆ ನೋವು ಬರುತ್ತೆ. ಹೊರಗೆ ಹೋಗಲಾಗದ ಸ್ಥಿತಿ ನಿರ್ಮಾಣವಾಗಿರುತ್ತೆ. ಆಗ ವೀಡಿಯೋ ಕಾಲ್‌ ಮೂಲಕ ಡಾಕ್ಟರ್‌ ಹೆರಿಗೆ ಮಾಡೋದನ್ನು ತಿಳಿಸಿಕೊಡುತ್ತಾರೆ. ಅವರು ಹೇಳಿದಂತೆ ಮಾಡಿ, ತಾಯಿ ಮಗುವನ್ನು ಉಳಿಸುವಲ್ಲಿ ಅಮೀರ್‌ ಖಾನ್ ಆಂಡ್ ಟೀಮ್ ಯಶಸ್ವಿಯಾಗುತ್ತೆ. ಅಂಥದ್ದೇ ಒಂದು ಸಾಹಸ ಮಾಡಲು ಹೋಗಿ ದಾರುಣ ಅಂತ್ಯ ಕಂಡ ಪ್ರಕರಣವಿದು.

ಮಾಲ್ತಿ ದೇವಿ ಇನ್ನೂ 22 ವರ್ಷದ ಹೆಣ್ಣುಮಗಳು. ತುಂಬು ಗರ್ಭಿಣಿಯಾದ ಈಕೆಯನ್ನು ಹೆರಿಗೆಗಾಗಿ ಬಿಹಾರದ ಪುರ್ನಿಯಾ ಭಾಗದಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸ್ತಾರೆ. ಈ ಕಾಲದಲ್ಲಿ ಹೆರಿಗೆ ವೇಳೆ ಹೆಣ್ಣಿನ ಪ್ರಾಣಕ್ಕೆ ಸಮಸ್ಯೆ ಆಗುವ ಪ್ರಕರಣಗಳು ಬಹಳ ಕಡಿಮೆ. ಇದೇ ರೀಸನ್‌ಗೆ ಆ ಹೆಣ್ಣು ಮಗಳ ಮನೆಯವರೂ ಹೆಚ್ಚಿನ ಟೆನ್ಶನ್‌ನಲ್ಲಿದ್ದ ಹಾಗಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ತಮ್ಮ ನೆಮ್ಮದಿ ಸರ್ವನಾಶವಾಗುತ್ತೆ ಅನ್ನುವ ಕಲ್ಪನೆಯೂ ಅವರಿಗೆ ಇರಲಿಲ್ಲ.

ಮಾಲ್ತಿ ದೇವಿಗೆ ಹೆರಿಗೆ ನೋವು ಬರುವ ಹೊತ್ತಿಗೆ ಸೇವೆಯಲ್ಲಿರಬೇಕಿದ್ದ ಗೈನಕಾಲಜಿಸ್ಟ್ ಸೀಮಾ ಕುಮಾರಿ ಆ ಸಿಟಿ ಬಿಟ್ಟು ಆಚೆ ಹೋಗಿದ್ದರು. ಡಾಕ್ಟರ್‌ ಗೈರು ಹಾಜರಿಯಲ್ಲೇ ಗರ್ಭಿಣಿಯನ್ನ ಆಸ್ಪತ್ರೆಗೆ ಸೇರಿಸಿಕೊಂಡ ಸಿಬ್ಬಂದಿ ಮಾಡಬಾರದ ಕೆಲಸಕ್ಕೆ ಕೈ ಹಾಕಿದರು.

ಯಾವಾಗ ಮಾಲ್ತಿ ಹೆರಿಗೆ ನೋವು ಹೆಚ್ಚಾಗುತ್ತಾ ಹೋಯ್ತೋ ಆಗ ಆಸ್ಪತ್ರೆಯ ಸಿಬ್ಬಂದಿ ಡಾಕ್ಟರಿಗೆ ಕಾಲ್ ಮಾಡ್ತಾರೆ. ಕೇಸ್ ಯಾಕೋ ಕ್ರಿಟಿಕಲ್ ಆಗ್ತಿದೆ, ಆಪರೇಶನ್ ಮಾಡಬೇಕು ಅನ್ನೋ ಸ್ಥಿತಿ ನಿರ್ಮಾಣ ಆಗುತ್ತೆ. ಹಣದಾಸೆಗೆ ತಾವೇ ಆ ಆಪರೇಶನ್ ಮಾಡಲು ಆಸ್ಪತ್ರೆ ಸಿಬ್ಬಂದಿ ಮುಂದಾಗ್ತಾರೆ. ಇದಕ್ಕಾಗಿ ಒಬ್ಬ ನರ್ಸ್ ಅನ್ನೂ ಗೊತ್ತು ಮಾಡ್ತಾರೆ. ಡಾಕ್ಟರಿಗೆ ವೀಡಿಯೋ ಕಾಲ್ ಹಚ್ಚುತ್ತಾರೆ. ಡಾಕ್ಟರ್‌ ಹೇಳಿದ ಪ್ರಕಾರ ಆಪರೇಶನ್ ಶುರು ಮಾಡಿಯೇ ಬಿಡ್ತಾರೆ.

ಒಂದು ಹಂತದಲ್ಲಿ ಅರಿವಿಲ್ಲದೇ ಆಪರೇಶನ್ ಮಾಡ್ತಿದ್ದ ನರ್ಸ್ ಮುಖ್ಯ ರಕ್ತನಾಳವನ್ನೇ ಕತ್ತರಿಸಿ ಹಾಕ್ತಾಳೆ. ಮಕ್ಕಳನ್ನು ನೋಡಿ ತನ್ನ ನೋವನ್ನು ಮರೆಯಬೇಕಿದ್ದ ತಾಯಿ ಅಲ್ಲೇ ಕಣ್ಮುಚ್ಚುತ್ತಾಳೆ.

Women Health : ಮುಟ್ಟಿನ ಬದಲು 'ನಾನು ಡೌನ್' ಅನ್ನೋದೇಕೆ?

ಪುಣ್ಯಕ್ಕೆ ಈ ಆಪರೇಶನ್‌ನಲ್ಲಿ ಹುಟ್ಟಿದ ಅವಳಿ ಮಕ್ಕಳು ಯಾವ ಪ್ರಾಣಾಪಾಯವೂ ಇಲ್ಲದೇ ಪಾರಾಗ್ತಾರೆ. ಆದರೆ ತಾವು ಹುಟ್ಟಿದ ಕೂಡಲೇ ಕಣ್ಮುಚ್ಚಿದ ತಾಯಿಯಿಂದಾಗಿ ಅವರಿಗೆ ಜೀವನ ಪರ್ಯಂತ ಅಮ್ಮನ ಪ್ರೀತಿ ಇಲ್ಲವಾಗಿದೆ. ಅವಳಿ ಹಸುಗೂಸುಗಳು ತಬ್ಬಲಿಗಳಾಗಿವೆ. ಅಮ್ಮನ ಆರೈಕೆ ಇಲ್ಲದ ಈ ಮಕ್ಕಳ ಮುಂದಿನ ಸ್ಥಿತಿ ಏನು ಅಂತ ಗೊತ್ತಿಲ್ಲ.

ಈ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ಜನ ಆಸ್ಪತ್ರೆ ಮಂದಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಾಲ್ತಿ ಆಸ್ಪತ್ರೆಗೆ ಬರುವಾಗಲೇ ಆಕೆಗೆ ಹೆರಿಗೆ ನೋವು ಶುರುವಾಗಿತ್ತು. ಡಾಕ್ಟರ್‌ ಸಿಟಿಯಲ್ಲಿ ಇಲ್ಲ ಅಂತ ಗೊತ್ತಾದ ಮೇಲೂ ಆಸ್ಪತ್ರೆಯವರು ಅದ್ಯಾವ ಧೈರ್ಯದ ಮೇಲೆ ಅಡ್ಮಿಟ್ ಮಾಡಿಕೊಂಡರು. ಹಣದ ದುರಾಸೆ ಬಿಟ್ಟು ಕೊಂಚ ಮಾನವೀಯತೆಯಿಂದ ಯೋಚಿಸಿ ಈಕೆಯನ್ನು ಬೇರೆ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದರೆ ಈ ಅವಳಿ ಮಕ್ಕಳು ಅನಾಥರಾಗೋದು ತಪ್ಪುತ್ತಿತ್ತು. ಈಗ ಏನೇ ಗಲಾಟೆ ಎಬ್ಬಿಸಿದರೂ, ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ೨೨ ವರ್ಷದ ಆ ಹೆಣ್ಣುಮಗಳು ತಿರುಗಿ ಬರೋದಿಲ್ಲ. ಆ ಹಸುಗೂಸುಗಳು ಅಮ್ಮನ ಮಮತೆಯ ಸ್ಪರ್ಶವಿಲ್ಲದೇ ಬೆಳೆಯೋದು ಅನಿವಾರ್ಯ. ಬಹುಶಃ ಈ ಕಾಲದಲ್ಲಿ ಮಾನವೀಯತೆ ಹೇಗೆ ಕೊನೆಯುಸಿರೆಳೆಯುತ್ತಿದೆ ಅನ್ನೋದಕ್ಕೆ ಈ ಪ್ರಕರಣ ಒಂದು ಉದಾಹರಣೆಯಾಗಿ ನಿಲ್ಲುತ್ತೇನೋ.

Women Health : ಐವಿಎಫ್ ಮಾಡಿಸಿಕೊಂಡ್ರೆ ಹೆಣ್ಣನ್ನು ಕಾಡ್ಬಹುದು ಈ ಸಮಸ್ಯೆ
 

Follow Us:
Download App:
  • android
  • ios